ಬದುಕು-ಬರೆಹ ಬೇರೆಯಾದ್ರೆ ಆತ್ಮವಂಚನೆ
ಕನ್ನಡಪ್ರಭ ವಾರ್ತೆ ಯಾದಗಿರಿ ನ.16
ಸಾಹಿತ್ಯ ಕ್ಷೇತ್ರದ ಮೇಲೆ ಜನರ ನಿರೀಕ್ಷೆ ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ಬದುಕು- ಬರೆಹ ಬೇರೆಯಾದರೆ ಅದು ಅತ್ಮವಂಚನೆ ಮಾಡಿಕೊಂಡಂತೆ ಎಂದು ಹಿರಿಯ ಸಾಹಿತಿ, ನಾಡೋಜ ಬರಗೂರು ರಾಮಚಂದ್ರಪ್ಪ ಹೇಳಿದರು.
ನಗರದಲ್ಲಿ ಶನಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಪ್ರಥಮ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಬರೆಹಗಾರನಿಗೂ ಸ್ವಾತಂತ್ರ್ಯವಿದೆ. ಓದುಗನಿಗೂ ಸ್ವಾತಂತ್ರ್ಯವಿದೆ. ಬರೆಹವನ್ನು ವಿರೋಧಿಸಿ, ಆದರೆ ಕೃತಿಕಾರರನ್ನು ಬಂಧಿಸುವ ಕ್ರಮ ಸರಿಯಲ್ಲ. ಆ ಕೃತಿಯ ಬಗ್ಗೆ ವಾಗ್ವಾದವಿರಲಿ ಎಂದರು.
ಕಣ್ಣು, ಕಿವಿ ಬದಲು ನಾಲಿಗೆ ಜಾಗೃತ- ಸರಿಯಲ್ಲ: ನಮ್ಮ ಅಂಗಾಗಗಳಲ್ಲಿ ಕಣ್ಣು ಮತ್ತು ಕಿವಿ ಜಾಗೃತವಾಗಿರಬೇಕು. ಆದರೆ ಇವತ್ತು ನಾಲಿಗೆ ಜಾಗೃತವಾಗಿದೆ. ಇದು ಪ್ರಜಾಪ್ರಭುತ್ವ ಸಂಸ್ಕೃತಿಗೆ ಲಕ್ಷಣ ತರುವಂಥದ್ದಲ್ಲ. ಇವತ್ತು ಸಾಹಿತ್ಯ ಬೆಳೆಸಬೇಕಾದ ನಾವುಗಳೇ ಕವಿಗಳನ್ನು ಕೊಲೆ ಮಾಡುವ ಹಂತಕ್ಕೆ ತಲುಪಿದ್ದು ಸಾಹಿತ್ಯ ಕ್ಷೇತ್ರಕ್ಕೆ ಶೋಭೆ ತರುವಂತಹುದಲ್ಲ ಎಂದು ಹೇಳಿದರು.
ನಮ್ಮ ಭಾಷೆ ಎಲ್ಲರನ್ನೂ ಪ್ರೀತಿಸುತ್ತಿದೆ. ಸಾಕಷ್ಟು ಜನರು ನಮ್ಮ ಭಾಷೆಯ ಮೇಲೆ ಆಳ್ವಿಕೆ ನಡೆಸಿದ್ದಾರೆ. ಆದರೂ ಎಲ್ಲರ ಆಳ್ವಿಕೆಯನ್ನು ಅರಗಿಸಿಕೊಳ್ಳುವ ಶಕ್ತಿ ನಮ್ಮ ಕನ್ನಡಕ್ಕಿದೆ. ಆದರೆ ಇವತ್ತು ರಾಜಕಾರಣಿಗಳು, ಧಾರ್ಮಿಕ ಸಂಸ್ಥೆಗಳು ಮತ್ತು ಸರ್ಕಾರ ಭಾಷೆಯನ್ನು ಜಾತಿಯಾಧಾರದ ಮೇಲೆ ಗುರುತಿಸುವುದು ಸರಿಯಲ್ಲ ಎಂದು ತಿಳಿಸಿದರು.
ಕನ್ನಡಿಗರಿಗೆ ಮೊದಲಾದ್ಯತೆ ಕೊಡಿ: ಕನ್ನಡ ಅಭಿವೃದ್ಧಿಯ ಬಗ್ಗೆ ಮಾತನಾಡುವ ಸರ್ಕಾರ ಕನ್ನಡ ಭಾಷಿಕರ ಬದಕನ್ನು ಹಸನ ಮಾಡಬೇಕು. ಸರ್ಕಾರ ತನ್ನ ನಿಲುವನ್ನು ಬದಲಿಸಿ ಪ್ರತಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಪ್ರಥಮ ಆದ್ಯತೆ ನೀಡಿದಾಗ ಮಾತ್ರ ಕನ್ನಡದ ಬಗ್ಗೆ ಜನತೆಯಲ್ಲಿ ವಿಶ್ವಾಸ ಹುಟ್ಟುತ್ತದೆ. ಅದಕ್ಕಾಗಿ ಸ್ಪಷ್ಟವಾದ ನೀತಿಯ್ನು ಸರ್ಕಾರ ರೂಪಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಗ್ರಾಮೀಣ ಜನರಿಂದ ಕನ್ನಡ ಉಳಿದಿದೆ. ಅಭಿವೃದ್ಧಿ ಭಾಷೆಯಲ್ಲಿ ಕನ್ನಡವೂ ಒಂದಾಗಿದೆ. ಈಗಲಾದರೂ ಸರ್ಕಾರ ಎಚ್ಚೆತ್ತು ಹೊಸ ತಂತ್ರಜ್ಞಾನದಲ್ಲೂ ಕನ್ನಡದ ಬಳಕೆಯನ್ನು ಮಾಡುವುದರ ಜೊತೆಗೆ ಶಿಕ್ಷಣದಲ್ಲಿ ಕನ್ನಡಕ್ಕೆ ಹೆಚ್ಚಿನ ಪ್ರಾಧಾನ್ಯತೆ ಕೊಡಬೇಕು ಎಂದು ಒತ್ತಾಯಿಸಿದರು.
ಸಾಹಿತ್ಯಿಕ ಜಿಲ್ಲೆಯಾಗಿಸೋಣ: ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ಪಂಚ ಕೃತಿಗಳನ್ನು ಬಿಡುಗಡೆ ಮಾಡಿ, ಯಾದಗಿರಿ ಚಿಕ್ಕ ಜಿಲ್ಲೆ ಎಂದು ಹೇಳಬೇಡಿ. ಪ್ರಥಮಾದ್ಯ ವಚನಕಾರ ದೇವರ ದಾಸಿಮಯ್ಯ ಮತ್ತು ಕ್ರಾಂತಿಕಾರಿ ಬಸವಣ್ಣನ ನೆಲೆಯಾಗಿದ್ದು ವಿಶ್ವಕ್ಕೆ ಕೊಡುಗೆ ನೀಡಿದ ಪ್ರದೇಶವಾಗಿದೆ. ನಾವೆಲ್ಲರೂ ಈ ಪ್ರದೇಶದ ಅಭಿವೃದ್ಧಿಗೆ ಕೈಜೋಡಿಸಿ ರಾಜ್ಯದಲ್ಲಿ ಸಾಹಿತ್ಯಿಕ ಜಿಲ್ಲೆಯನ್ನಾಗಿಸೋಣ ಎಂದು ಕರೆ ನೀಡಿದರು.
ಶಾಸಕ ಡಾ. ಮಾಲಕರೆಡ್ಡಿ ಮಾತನಾಡಿದರು. ರಾಜ್ಯ ಕಸಾಪ ಗೌರವ ಕಾರ್ಯದರ್ಶಿ ಸಂಗಮೇಶ ಬಾದೆವಾಡಿ ಆಶಯ ನುಡಿಯನ್ನು, ಗುರುಮಠಕಲ್ ಖಾಸಾಮಠದ ಶಾಂತವೀರ ಸ್ವಾಮೀಜಿ ಶುಭ ನುಡಿಯನ್ನು ಆಡಿದರು. ಸಮ್ಮೇಳನದ ಅಧ್ಯಕ್ಷ ಎ.ಕೃಷ್ಣಾ ಸುರಪುರ ಸಮ್ಮೇಳನ್ನು ಉದ್ದೇಶಿಸಿ ತಮ್ಮ ನುಡಿಗಳನ್ನು ಆಡಿದರು. ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಭವ್ಯ ಮೆರವಣಿಗೆ: ಇದಕ್ಕೂ ಮುನ್ನ ನಗರದ ಮುಖ್ಯ ಬೀದಿಯಲ್ಲಿ ಸಮ್ಮೇಳದ ಅಧ್ಯಕ್ಷರ ಭವ್ಯ ಮೆರವಣಿಗೆ ನಡೆಯಿತು. ವಿವಿದ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

