ಗುಳೆ ಹೋಗಿ ಇಳೆಗೆ ದೂರವಾದವರ ಸಾಮೂಹಿಕ ಅಂತ್ಯಸಂಸ್ಕಾರ
ಗುಲ್ಬರ್ಗ/ಹುಣಸಗಿ: ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹಲಕಿ ಕ್ರಾಸ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸುರಪುರ ತಾಲೂಕಿನ ವಿವಿಧ ತಾಂಡಾದ 22 ಜನರ ಸಾಮೂಹಿಕ ಅಂತಿಮ ಸಂಸ್ಕಾರ ಬಸವಸಾಗರ ಜಲಾಶಯ ಮುಂಭಾಗದಲ್ಲಿರುವ ಖಾಲಿ ಸ್ಥಳದಲ್ಲಿ ಶನಿವಾರ ರಾತ್ರಿ ನೆರವೇರಿತು. 8 ಮಕ್ಕಳ ಶವಗಳನ್ನು ಸಂಸ್ಕಾರ ಮಾಡಿದರೆ ಇನ್ನುಳಿದ ಶವಗಳಿಗೆ ಅಗ್ನಿಸ್ಪರ್ಷ ಮಾಡಲಾಯಿತು. ಈ ಸಂದರ್ಭದಲ್ಲಿ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತದೇಹಗಳನ್ನು ರಾತ್ರಿ 8 ಗಂಟೆಗೆ ಸಾರಿಗೆ ಸಂಸ್ಥೆ ಬಸ್ಗಳ ಮೂಲಕ ನಾರಾಯಣಪುರಕ್ಕೆ ತರಲಾಯಿತು. ಈ ಮೊದಲೇ ಮಾಜಿ ಸಚಿವ ರಾಜುಗೌಡ ನಿರ್ಣಯದಂತೆ ಹಾಗೂ ಮೃತರ ಬಂಧುಗಳ ಅಣತಿಯಂತೆ ಬಸವಸಾಗರ ಮುಂಭಾಗದಲ್ಲಿ ಸಾಮೂಹಿಕ ಅಂತ್ಯಸಂಸ್ಕಾರ ಮಾಡಲಾಯಿತು.
ಕುಸಿದ ಸಿಮೆಂಟ್ ಮೂಟೆಗಳಡಿ ಸಿಕ್ಕಿ ಮೂವರ ಸಾವು
ನಂಜನಗೂಡು: ರೇಲ್ವೆ ಕೆಳಸೇತುವೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಸಿಮೆಂಟ್ ಮೂಟೆಗಳು ಕುಸಿದು ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಚಿಕ್ಕಕವಲಂದೆ ಸಮೀಪ ಭಾನುವಾರ ಬೆಳಗ್ಗೆ ನಡೆದಿದೆ. ಕಾಮಗಾರಿ ಗುತ್ತಿಗೆದಾರ ರಾಮೇಗೌಡ ಎಂಬವರ ಸಹೋದರ ಶಿವಣ್ಣ, ಮಂಡ್ಯ ಜಿಲ್ಲೆಯ ತೂಬಿನಕೆರೆ ನಿವಾಸಿ ಜೆಸಿಬಿ ಚಾಲಕ ಮಹೇಶ್, ಕೊಳ್ಳೇಗಾಲದ ನಿವಾಸಿ ಕ್ಲೀನರ್ ಶಿವಣ್ಣ ಮೃತಪಟ್ಟವರು. ಗುತ್ತಿಗೆದಾರನ ಸಂಬಂಧಿ ಬಸವರಾಜು ಎಂಬಾತ ಅಪಾಯದಿಂದ ಪಾರಾಗಿದ್ದಾರೆ. ನಂಜನಗೂಡು - ಚಾಮರಾಜನಗರ ಹೆದ್ದಾರಿಯಲ್ಲಿರುವ ನೇರಳೆ ಗೇಟ್ನಿಂದ ಚಿಕ್ಕಕವಲಂದೆ ಗ್ರಾಮಕ್ಕೆ ತೆರಳಲು ಆ ಭಾಗದ ಜನರಿಗೆ ಅನುಕೂಲವಾಗಲು ನಂಜನಗೂಡು - ಚಾಮರಾಜನಗರ ರೇಲ್ವೆ ನಡುವಿನ ಹಳಿಗೆ ಕೆಳಸೇತುವೆ ನಿರ್ಮಾಣ ಕಾಮಗಾರಿಗೆ ಕಳೆದ ಸೋಮವಾರವಷ್ಟೇ ಚಾಲನೆ ನೀಡಲಾಗಿತ್ತು. ಕಾರ್ತಿಕ ಸೋಮವಾರವಾದ ನಾಳೆ ಕಾಂಕ್ರೀಟ್ ಹಾಕಲು 400 ಚೀಲ ಸಿಮೆಂಟ್ ಶೇಖರಣೆ ಮಾಡಲಾಗಿತ್ತು.
ಎಂಇಎಸ್ ನಿಷೇಧ ಕರವೇ ಆಗ್ರಹ
ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದಲ್ಲಿ ಶಾಂತಿ, ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುತ್ತಿರುವ 'ನಾಡದ್ರೋಹಿ' ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯನ್ನು ರಾಜ್ಯದಲ್ಲಿ ನಿಷೇಧಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಆಗ್ರಹಿಸಿದರು. ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕನ್ನಡ ನೆಲದಲ್ಲಿಯೇ ಆಶ್ರಯ ಪಡೆದು, ಸರ್ಕಾರದ ಎಲ್ಲ ಸೌಲಭ್ಯಗಳನ್ನು ಪಡೆದು ಎಂಇಎಸ್ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ. ಭಯೋತ್ಪಾದನೆ ಸಂಘಟನೆಯಂತೆಯೇ ಗಡಿಭಾಗದಲ್ಲಿ ಕನ್ನಡ ವಿರೋಧಿ ಕಾರ್ಯಚಟುವಟಿಕೆಗಳಲ್ಲಿ ತೊಡಗಿದೆ. ಸಂಯುಕ್ತ ಮಹಾರಾಷ್ಟ್ರ ಚೌಕ್ ಅನ್ನು ಮಹಾರಾಷ್ಟ್ರದಲ್ಲಿ ಕಟ್ಟಿಕೊಳ್ಳಿ. ಅದನ್ನು ಬಿಟ್ಟು ಕರ್ನಾಟಕದಲ್ಲಿ ಇಂಥ ವಿವಾದಾತ್ಮಕ ಫಲಕ ಹಾಕಿದರೆ ಕನ್ನಡಿಗರು ಎಂದಿಗೂ ಸಹಿಸುವುದಿಲ್ಲ ಎಂದರು. ಗಡಿಭಾಗದಲ್ಲಿ ಒಂದಿಲ್ಲೊಂದು ನೆಪ ಮಾಡಿಕೊಂಡು ಕನ್ನಡ-ಮರಾಠಿಗರ ಮಧ್ಯೆ ವಿಷ ಬೀಜ ಬಿತ್ತುತ್ತಿರುವ ಎಂಇಎಸ್ ನಾಯಕರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದರು.
ಅಂಗವಿಕಲರಿಗೆ 'ಸುಜ್ಞಾನ ನಿಧಿ'
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ರಾಜ್ಯದ ಅಂಗವಿಕಲ ಮಕ್ಕಳಿಗೆ 'ಸುಜ್ಞಾನ ನಿಧಿ' ಶಿಷ್ಯ ವೇತನ ಮಂಜೂರುಗೊಳಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ 11 ಜಿಲ್ಲೆಯ 59 ತಾಲೂಕಿನ ಒಟ್ಟು 13,064 ಮಕ್ಕಳಿಗೆ ಈವರೆಗೆ 11.50 ಕೋಟಿ ವಿತರಿಸಲಾಗಿದೆ. ರಾಜ್ಯದ ಕೆಲವೊಂದು ಅಂಗವಿಕಲ ಮಕ್ಕಳು ವಿದ್ಯಾರ್ಥಿ ವೇತನ ಬಯಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷ ಡಾ.ಡಿ. ವೀರೇಂದ್ರ ಹೆಗ್ಗಡೆಗೆ ಮನವಿ ಸಲ್ಲಿಸಿದ್ದರು. ಸ್ವಸಹಾಯ ಸಂಘಕ್ಕೆ ಸೇರಿದ ಫಲಾನುಭವಿ ಕುಟುಂಬಗಳ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣಕ್ಕೆ ವಿಶೇಷವಾಗಿ ಪರಿಗಣಿಸಿ ಡಾ.ಹೆಗ್ಗಡೆ 'ಸುಜ್ಞಾನ ನಿಧಿ' ಶಿಷ್ಯವೇತನ ಮಂಜೂರುಗೊಳಿಸಿದ್ದಾರೆ. ಕಿವಿ ಹಾಗೂ ಮಾತು ಬಾರದ, ಇತರರ ಆಶ್ರಯದಲ್ಲಿರುವ, ತೀರಾ ಬಡ ಕುಟುಂಬದ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು, ಪೂರ್ಣ ಪ್ರಮಾಣದ ಅಂಗವಿಕಲರು ವಿವಿಧ ತೊಂದರೆಯ 19 ವಿದ್ಯಾರ್ಥಿಗಳಿಗೆ ಡಿಪ್ಲೋಮಾ, ಎಂಬಿಎ, ಎಂಬಿಬಿಎಸ್, ಬಿಇ, ನರ್ಸಿಂಗ್, ಲ್ಯಾಬ್ ಟೆಕ್ನಿಷಿಯನ್ ಮುಂತಾದ ಉನ್ನತ ವಿದ್ಯಾಭ್ಯಾಸಕ್ಕಾಗಿ ಮುಂದಿನ ವಿದ್ಯಾಭ್ಯಾಸ ಪೂರ್ಣಗೊಳಿಸುವ ತನಕ 4.35 ಲಕ್ಷ 'ಸುಜ್ಞಾನ ನಿಧಿ' ವಿದ್ಯಾರ್ಥಿ ವೇತನ ನೀಡಲಾಗುತ್ತದೆ ಎಂದು ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಬಿ. ಜಯರಾಮ ನೆಲ್ಲಿತ್ತಾಯ ಮತ್ತು ಅನುಷ್ಠಾನ ಅಧಿಕಾರಿ ಗಣೇಶ್ ಭಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

