ರೈತಪರ ಬೇಡಿಕೆಗೆ ಆಗ್ರಹಿಸಿ ಕರವೇ ಪ್ರತಿಭಟನೆ
ಶಹಾಪುರ: ರೈತರು ಬೆಳೆದ ಹತ್ತಿ ತೊಗರಿ, ಬತ್ತದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡುವುದರ ಜತೆ ವೈಜ್ಞಾನಿಕ ಬೆಲೆ ನಿಗದಿ ಹಾಗೂ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕರವೇ ಪ್ರತಿಭಟನೆ ನಡೆಸಿತು.
ರಾಜ್ಯ ಹೆದ್ದಾರಿ ಮೇಲೆ ಅಕ್ರಮವಾಗಿ ಹತ್ತಿ ಖರೀದಿ ಮಾಡುತ್ತಿರುವವರ ಕೇಂದ್ರಗಳನ್ನು ಮುಟ್ಟುಗೋಲು ಹಾಕಿಕೊಂಡು ಅವರ ವಿರುದ್ಧ ಕ್ರಮಕೈಗೊಂಡು, ತಾಲೂಕಿನಲ್ಲಿ ಹತ್ತಿ, ಬತ್ತದ ಕೇಂದ್ರಗಳನ್ನು ಶೀಘ್ರದಲ್ಲಿಯೇ ಸ್ಥಾಪಿಸಬೇಕು. ಎಂದು ನಾನಾ ರೈತಪರ ಬೇಡಿಕೆಗಳ ಇಡೇರಿಕೆಗಾಗಿ ಒತ್ತಾಯಿಸಿ ತಾಲೂಕ ಕರವೇ ಸಂಘಟನೆ ವತಿಯಿಂದ ಶುಕ್ರವಾರ ಪಟ್ಟಣದ ಚರಬಸವ ಕಮಾನದಿಂದ ಕೃಷಿ ಮಾರುಕಟ್ಟೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಬೆಲೆ ಸಿಗುತ್ತಿಲ್ಲ: ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ಗೆ ಮನವಿ ಸಲ್ಲಿಸಿ ಮಾತನಾಡಿದ ತಾಲೂಕ ಕರವೇ ಅಧ್ಯಕ್ಷ ಭೀಮು ಶಖಾಪುರ, ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಒಮ್ಮೊಮ್ಮೆ ಬೆಲೆಯಿದ್ದರೂ ರೈತರಿಗೆ ನೇರವಾಗಿ ಲಾಭ ಸಿಗದೇ ದಲ್ಲಾಳಿಗಳ ಪಾಲಾಗುತ್ತಿದೆ ಎಂದರು. ಇನ್ನೂ ರಾಜ್ಯ ಹೆದ್ದಾರಿ ಯುದ್ದಕ್ಕೂ ನಾಯಿ ಕೊಡೆಗಳಂತೆ ಅಕ್ರಮವಾಗಿ ಹತ್ತಿ ಕೇಂದ್ರಗಳು ತಲೆ ಎತ್ತಿವೆ. ಇದರಿಂದ ಇಲಾಖೆಗೆ ಕೋಟಿಗಟ್ಟಲೇ ನಷ್ಟವಾಗುತ್ತಿದ್ದರೂ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಕೋಟಿಗಟ್ಟಲೇ ನಷ್ಟ: ಅಲ್ಲದೆ ಹೊರ ರಾಜ್ಯಗಳಿಂದ ಬಂದ ಲಾರಿಗಳಲ್ಲಿ ಹತ್ತಿ ಬತ್ತವನ್ನು ಅಕ್ರಮ ಸಾಗಾಣಿಕೆ ಮಾಡಿ ಸ್ಥಳೀಯ ಮಾರುಕಟ್ಟೆಗೆ ಕೋಟಿಗಟ್ಟಲೇ ನಷ್ಟ ಉಂಟು ಮಾಡುತ್ತಿದ್ದಾರೆ. ಅಂಥವರ ವಿರುದ್ಧವೂ ಮಾಲು ಸಹಿತ ವಾಹನ ಸೇರಿದಂತೆ ಮಾಲೀಕರಿಗೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು.
ಹತ್ತಿಗೂಡೂರ, ಖಾನಾಪುರ, ಚಾಮನಾಳ, ಮುಡಬೂಳ ಸೇರಿದಂತೆ ತಾಲೂಕಿನಿಂದ ಹೊರಹೋಗುವ ಸ್ಥಳಗಳಲ್ಲಿ ವಾಹನಗಳಿಗಾಗಿ ಚೆಕ್ ಪೋಸ್ಟ್ ನಿರ್ಮಾಣ ಮಾಡಿ ಕ್ರಮಕೈಗೊಳ್ಳಿ, ಎಪಿಎಂಸಿಯಲ್ಲಿ ಸಿಬ್ಬಂದಿ ಕೊರತೆ ಯಿದ್ದರೆ ಕೂಡಲೇ ಅರೆಕಾಲಿಕ ನೌಕರರನ್ನು ನೇಮಿಸಿಕೊಳ್ಳಬೇಕು. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಸರಿಪಡಿಸದೆ ಇಲಾಖೆ ಮೌನ ವಹಿಸಿದ್ದೂ, ಅಕ್ರಮದಲ್ಲಿ ಶಾಮೀಲಾಗಿದೆ ಎಂದು ಅನುಮಾನ ಬರುತ್ತಿದೆ ಎಂದರು.
ಇಲಾಖೆಗಳೇ ನೇರ ಹೊಣೆ: ಕೂಡಲೇ ಈ ಎಲ್ಲಾ ಬೇಡಿಕೆಗಳು ಅತಿ ಶೀಘ್ರದಲ್ಲಿ ಈಡೇರಬೇಕು. ಇಲ್ಲಾವಾದಲ್ಲಿ ಕರವೇ ಸ್ವತಃ ಕಾರ್ಯಾಚರಣೆಗೆ ಇಳಿಯಬೇಕಾಗುತ್ತದೆ. ಇದರಿಂದಾಗಿ ಕಾನೂನು ವ್ಯವಸ್ಥೆ ಹದಗೆಟ್ಟರೆ ಸಂಬಂಧಪಟ್ಟ ಇಲಾಖೆಗಳೇ ನೇರ ಹೊಣೆ ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್, ಶೀಘ್ರವೇ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಹೋತಪೇಟ ಕೈಲಾಸ ಆಶ್ರಮದ ಶಿವಲಿಂಗ ಶರಣರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ, ಗೌ. ಅಧ್ಯಕ್ಷ ಮಲ್ಲರೆಡ್ಡಿ ವಿಭೂತಿಹಳ್ಳಿ, ವೆಂಕಟೇಶ ನಾಯ್ಕೋಡಿ, ಸಿದ್ದು ಹೈಯಾಳ್ಕರ, ಚಾಂದಪಾಷಾ, ಸುಭಾಸ ಪೂಜಾರಿ, ಸವಿತಾ ಪೂಜಾರಿ, ಉತ್ತಮ್ಮ ಮಾನೆ, ಸಿದ್ದು ಪಟ್ಟೆದಾರ, ಮಹಾದೇವ, ರೇವಣಸಿದ್ದಯ್ಯ, ಮಲ್ಲು ಸಮುದ್ರ, ಕಾರ್ಯಕರ್ತರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

