ಗುಲ್ಬರ್ಗಾ

ನವೆಂಬರ್‌ನಲ್ಲಿ ಕಲ್ಲಂಗಡಿ ಬೆಳೆದ್ರೆ ಕೈತುಂಬ ಹಣ

Published On :

ನೀರು ಬಸಿದು ಹೋಗುವ ಮರಳು ಮಿಶ್ರಿತ ಜೇಡಿ ಮಣ್ಣು ಉತ್ತಮ , ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರ ಸಲಹೆ
ಕನ್ನಡಪ್ರಭ ವಾರ್ತೆ  ಬೀದರ್  ನ.26
ತೋಟಗಾರಿಕೆ ಬೆಳೆಗಳತ್ತ ಆಸಕ್ತಿ ಹೊಂದಿರುವ ರೈತರು ನವೆಂಬರ್ ತಿಂಗಳಿಂದ ಫೆಬ್ರವರಿವರೆಗೆ ಕಲ್ಲಂಗಡಿ ಬೆಳೆದರೆ ಬೇಸಿಗೆ ಆರಂಭದಲ್ಲಿ ಹೆಚ್ಚಿನ ಆದಾಯ ಪಡೆಯಬಹುದು ಎಂದು ತೋಟಗಾರಿಕೆ ಇಲಾಖೆ ಸಲಹೆ ನೀಡಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಇಲಾಖೆ, ನವೆಂಬರ್ ತಿಂಗಳಲ್ಲಿ ಟೊಮೇಟೊ, ಬದನೆ, ಆಲೂಗಡ್ಡೆ, ಮೆಣಸಿನಕಾಯಿ, ಡೊಣ್ಣ ಮೆಣಸಿನಕಾಯಿ, ಎಲೆಕೋಸು, ಹೂಕೋಸು, ಗಡ್ಡೆಕೋಸು, ಗಜ್ಜರಿ, ಮೆಂತೆ, ಬೆಳ್ಳುಳ್ಳಿ ಬೆಳೆಗಳನ್ನು ಬೆಳೆಬಹುದಾದರೂ ಅವುಗಳ ಪೈಕಿ ಹೆಚ್ಚಿನ ಹಣ ಗಳಿಸಿಕೊಡುವ ಬೆಳೆ ಕಲ್ಲಂಗಡಿ ಎಂದು ತಿಳಿಸಿದೆ.
ನವೆಂಬರ್‌ನಿಂದ ಫೆಬ್ರವರಿ ಸೂಕ್ತ: ರಾಜ್ಯದ ಬಹುತೇಕ ಕಡೆ ಕಡಿಮೆ ನೀರು, ಹೆಚ್ಚು ಉಷ್ಣತೆ ಇರುವ ಪ್ರದೇಶಗಳಲ್ಲಿ ಅಧಿಕ ಪ್ರಮಾಣದಲ್ಲಿ ಇದನ್ನು ಬೆಳೆಯಲಾಗುತ್ತಿದೆ. ನೀರು ಬಸಿದು ಹೋಗುವ ಮರಳು ಮಿಶ್ರಿತ ಜೇಡಿ ಮಣ್ಣು ತುಂಬಾ ಉತ್ತಮ. ನದಿ ತೀರ ಪ್ರದೇಶದ ಭೂಪ್ರದೇಶದಲ್ಲಿ ಕಡಿಮೆ ಖರ್ಚಿನಲ್ಲಿ ಬೆಳೆದು ಪಡೆಯಬಹುದು. ಈ ಬೆಳೆಯನ್ನು ಎಲ್ಲ ಕಾಲದಲ್ಲಿ ಬೆಳೆಬಹುದಾದರೂ ನವೆಂಬರ್‌ದಿಂದ ಫೆಬ್ರವರಿ ತಿಂಗಳಲ್ಲಿ ಬೆಳೆದರೆ ಹಣ್ಣುಗಳು ಕೆಂಪು ಗುಲಾಬಿ ಬಣ್ಣದ ತಿರುಳು ಮತ್ತು ಹೆಚ್ಚು ರುಚಿಯಾಗಿರುತ್ತವೆ ಎಂದೂ ತಿಳಿಸಿದೆ.
ಶುಗರ್ ಬೇಬಿ, ಅರ್ಕಾ ಮಾಣಿಕ್ ಮತ್ತು ಅರ್ಕಾ ಜ್ಯೋತಿ ಹೈಬ್ರಿಡ್ ತಳಿಗಳು 6- 8 ಕಿಲೋ ತೂಕ ಬರುತ್ತವೆ. 100- 120 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಈ ತಳಿಗಳು ರೋಗಗಳಿಗೆ ನಿರೋಧಕ ಶಕ್ತಿ ಹೊಂದಿರುವುದಲ್ಲದೆ ಇವುಗಳನ್ನು ದೂರದ ಮಾರುಕಟ್ಟೆಗೆ ಸರಾಗವಾಗಿ ಕೆಡದಂತೆ ಸಾಗಿಸಬಹುದು.
ಬೇಕಾಗುವ ಸಾಮಗ್ರಿ: ಕಲ್ಲಂಗಡಿ ಬೀಜ ಹೆಕ್ಟೇರಿಗೆ 750- 1125 ಗ್ರಾಂ, ಕೊಟ್ಟಿಗೆ ಗೊಬ್ಬರ 25 ಚಕ್ಕಡಿ, ಅಮೋನಿಯಂ ಸಲ್ಫೇಟ್ 300 ಕಿಲೋ ಅಥವಾ ಯುರಿಯಾ 100 ಕಿಲೋ, ಸೂಪರ್ ಫಾಸ್ಪೇಟ್- 400 ಕಿಲೋ, ವಿಂಒಪಿ-150 ಕಿಲೋ ಮತ್ತು 10 ಕಿಲೋ ಬೋರಾಕ್ಸ್ ಬೇಕಾಗುತ್ತದೆ ಎಂದು ಇಲಾಖೆ ಅಧಿಕಾರಿಗಳು ರೈತರಿಗೆ ತಿಳಿಸಿದ್ದಾರೆ.
ಭೂಮಿಯನ್ನು ಹದಗೊಳಿಸಿ 2.5 ಮೀ. ಅಂತರದಲ್ಲಿ ನೇಗಿಲಿನಿಂದ ಸಾಲುಗಳನ್ನು ಮಾಡಿ ಶಿಫಾರಸ್ಸು ಮಾಡಿದ ಕೊಟ್ಟಿಗೆ, ರಸಾಯನಿಕ ಗೊಬ್ಬರ ಬೆರೆಸಿ ಸಾಲುಗಳಲ್ಲಿ ಹಾಕಿ ಮಣ್ಣಿನಲ್ಲಿ ಬೆರೆಸಬೇಕು. ನಂತರ 1 ಮೀ. ಅಂತರದಲ್ಲಿ 3- 4 ಬೀಜಗಳನ್ನು ಹರಿಗಳ ಮಗ್ಗುಲಲ್ಲಿ ತುದಿ ಮೇಲೆ ಮಾಡಿ ನಾಟಿ ಮಾಡಬೇಕು. ನಂತರ ನೀರು ಕೊಡಬೇಕು. ಬಿತ್ತಿದ ನಾಲ್ಕು ವಾರಗಳ ನಂತರ ಕಳೆ ತೆಗೆದು ಗಿಡಗಳ ಬುಡದಿಂದ ನಾಲ್ಕೈದು ಇಂಚು ದೂರದಲ್ಲಿ ಸುತ್ತಲೂ ಮೇಲ್ಗೊಬ್ಬರವಾಗಿ ಹೆಕ್ಟೇರಿಗೆ 100 ಕೆಜಿ ಯೂರಿಯಾ ಅಥವಾ ಅಮೋನಿಯಂ ಸಲ್ಫೇಟ್ 300 ಕೆಜಿ ಕೊಟ್ಟು ಮಣ್ಣಿನಿಂದ ಮುಚ್ಚಿ ನೀರು ಕೊಡಬೇಕು. ಮುಖ್ಯ 5-6 ಕಣ್ಣುಗಳು ಬಿಟ್ಟು ಕುಡಿ ಚಿವುಟಬೇಕು. ಅಂದರೆ ಹೆಚ್ಚು ಮಗ್ಗಲು ಕವಲುಗಳನ್ನು ಬಿಡುವು ಎಂದು ತಿಳಿಸಿದ್ದಾರೆ.
ಒಳ್ಳೆಯದಲ್ಲ: ಬಳ್ಳಿಯಲ್ಲಿ ಮೂರ್ನಾಲ್ಕು ಕಾಯಿ ಬಿಟ್ಟು ಉಳಿದ ಮಿಡಿಕಾಯಿಗಳನ್ನು ಕಡಿದು ತೆಗೆಯುವುದರಿಂದ ಉತ್ತಮ ಗಾತ್ರದ ಹಣ್ಣುಗಳನ್ನು ಪಡೆಯಬಹುದು. ಮಣ್ಣು ಹಾಗೂ ವಾತಾವರಣ ಆಧರಿಸಿ ಪ್ರತಿ 4- 6 ದಿನಕ್ಕೊಮ್ಮೆ ನೀರು ಪೂರೈಸಬೇಕು. ನದಿ ತೀರದಲ್ಲಿ ಬೆಳೆದ ಬೆಳೆಗೆ ನೀರಿನ ಅವಶ್ಯಕತೆಯೇ ಇರುವುದಿಲ್ಲ. ಒಂದು ವೇಳೆ ಬೆಳೆಗೆ ನೀರನ್ನು ಹೆಚ್ಚಿಗೆ ಕೊಟ್ಟರೆ ಹಣ್ಣುಗಳ ಮೇಲೆ ಸೀಳು ಕಂಡುಬರುತ್ತದೆ. ಅಲ್ಲದೇ ಬೋರಾನ್ ಪೋಷಕಾಂಶದ ಕೊರತೆಯಿಂದಲೂ ಹಣ್ಣು ಸೀಳುತ್ತವೆ ಎಂದು ಎಚ್ಚರಿಸಿದ್ದಾರೆ.
ಕೀಟ ರೋಗಗಳು ಕಂಡುಬಂದಲ್ಲಿ ಸಮೀಪದ ರೈತ ಸಂಪರ್ಕ ಕೇಂದ್ರ, ತಾಲೂಕು ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ ಸಲಹೆಗಳನ್ನು ಪಡೆದು ಉಪಚರಿಸಬೇಕು. ಗಂಧಕಯುಕ್ತ ಔಷಧಿಗಳನ್ನು ಉಪಯೋಗಿಸಬಾರದು. ಹೆಕ್ಟೇರಿಗೆ 2- 3 ಜೇನು ಪೆಟ್ಟಿಗೆಗಳನ್ನು ಇಡುವುದರಿಂದ ಕಲ್ಲಂಗಡಿ ಇಳುವರಿ ಹೆಚ್ಚಿಸಬಹುದು ಎಂದಿದ್ದಾರೆ.
ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ: ಕಲ್ಲಂಗಡಿ ಹಣ್ಣಿನ ತಳಮೈ ಬಿಳಿ- ಹಳದಿ ವರ್ಣಕ್ಕೆ ತಿರುಗಿದ ನಂತರ ಪ್ರತಿ ಹೆಕ್ಟೇರಿಗೆ ಸಾಮನ್ಯ ತಳಿಗಳಿಂದ ಸರಾಸರಿ 35- 50 ಟನ್, ಹೈಬ್ರಿಡ್ ತಳಿಗಳಿಂದ 70- 75 ಟನ್ ಇಳುವರಿ ಪಡೆಯಬಹುದು. ಹೆಕ್ಟೇರ್‌ಗೆ ಕನಿಷ್ಠ 50-75 ಸಾವಿರ ಆದಾಯ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಸಂಬಂಧಿತ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕು ತೋಟಗಾರಿಕೆ ಅಧಿಕಾರಿಗಳನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಲು ತೋಟಗಾರಿಕೆ ಉಪ ನಿರ್ದೇಶಕರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.