ಗುಲ್ಬರ್ಗಾ

ಬತ್ತಕ್ಕೆ 1,600 ಬೆಂಬಲ ಬೆಲೆ ನಿಗದಿ: ಜಿಲ್ಲಾಧಿಕಾರಿ

Published On :

ಯಾದಗಿರಿ: ಬೆಂಬಲ ಬೆಲೆ ಯೋಜನೆಯಡಿ 2013-14ನೇ ಸಾಲಿಗೆ ಪ್ರತಿ ಕ್ವಿಂಟಲ್ ಬತ್ತವನ್ನು ರು. 1600  ಬೆಲೆಯಲ್ಲಿ ಖರೀದಿಸಲಾಗುತ್ತಿದ್ದು, ಇದಕ್ಕಾಗಿ  ಜಿಲ್ಲೆಯ 3 ತಾಲೂಕುಗಳಲ್ಲಿ ಬತ್ತ ಖರೀದಿಸಲು ಖರೀದಿ ಕೇಂದ್ರಗಳನ್ನು ಶೀಘ್ರದಲ್ಲಿಯೇ ತೆರೆಯಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಬತ್ತ ಖರೀದಿ ಕುರಿತ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಬತ್ತ ಖರೀದಿಗಾಗಿ ಪ್ರತಿ ಕ್ವಿಂಟಾಲ್ ಬತ್ತ ಖರೀದಿಗೆ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ರು. 1,310 ನಿಗದಿ ಮಾಡಿದ್ದು, ಇದಕ್ಕೆ ರಾಜ್ಯ ಸರ್ಕಾರ ನೀಡುವ ರು. 290 ಪ್ರೋತ್ಸಾಹ ಧನ ಸೇರಿದಂತೆ ಒಟ್ಟು 1,600ನಂತೆ ಪ್ರತಿ ಕ್ವಿಂಟಲ್ ಬತ್ತವನ್ನು ಖರೀದಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಮುನ್ನೆಚ್ಚರಿಕೆ: ಖರೀದಿ ಕೇಂದ್ರಗಳಲ್ಲಿ ಖರೀದಿ ಏಜೆನ್ಸಿಯಾಗಿ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಕಾರ್ಯನಿರ್ವಹಿಸಲಿದೆ. ಮಧ್ಯವರ್ತಿಗಳು ಮತ್ತು ವರ್ತಕರು ರೈತರ ಹೆಸರಿನಲ್ಲಿ ಖರೀದಿ ಕೇಂದ್ರಗಳಿಗೆ ಬತ್ತ ತರುವುದನ್ನು ತಡೆಗಟ್ಟಲು ರೈತರು  ಬತ್ತ ಖರೀದಿ ಕೇಂದ್ರಗಳಲ್ಲಿ ತಮ್ಮ ಭಾವಚಿತ್ರವುಳ್ಳ ಗುರುತಿನ ಚೀಟಿ, ಅಗತ್ಯ ಪ್ರಮಾಣದ ಬತ್ತ ಬೆಳೆದ ಬಗ್ಗೆ ನಮೂದುಳ್ಳ ಇತ್ತೀಚಿನ ಆರ್‌ಟಿಸಿ ಪ್ರತಿ, ಜಮೀನು ಕುಟುಂಬದ ಹಿರಿಯರ ಹೆಸರಿನಲ್ಲಿ ಇದ್ದಲ್ಲಿ ಅಗತ್ಯ ವಂಶವೃಕ್ಷ ಪ್ರಮಾಣ ಪತ್ರ  ಮತ್ತು  ಮತ್ತು ಬ್ಯಾಂಕ್ ಖಾತೆಯೊಂದಿಗೆ ಹೋಗಿ ಸಹಕರಿಸಲು ತಿಳಿಸಿದ ಅವರು ಒಟ್ಟಾರೆ ರೈತರಿಗೆ ಅನಾನುಕೂಲ ಆಗದಂತೆ ಆಹಾರ ನಿಗಮದ ಅಧಿಕಾರಿಗಳು, ಕೃಷಿ ಇಲಾಖೆ ಅಧಿಕಾರಿಗಳು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು, ಎಪಿಎಂಸಿ ಅಧಿಕಾರಿಗಳು ಹಾಗೂ ಇತರೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರ ವಹಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಸಭೆಯಲ್ಲಿ ಶೇ.17ಕ್ಕಿಂತ ಕಡಿಮೆ ತೇವಾಂಶ ಇರುವ ಎಫ್‌ಎಕ್ಯೂ ಗುಣಮಟ್ಟದ ಬತ್ತವನ್ನು ಮಾತ್ರ ರೈತರು ಖರೀದಿ ಕೇಂದ್ರಗಳಿಗೆ 50ಕೆಜಿ ತೂಕದ ಚೀಲಗಳಲ್ಲಿ ಬತ್ತ ತರಲು ತಿಳಿಸಲಾಯಿತು. ಸಭೆಯಲ್ಲಿ  ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಮಹ್ಮದ್ ಬತ್ತ ಖರೀದಿ ಕುರಿತು ಸೂಕ್ತ ಮಾಹಿತಿ ನೀಡಿದರು. ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಖರೀದಿಗೆ ಸೂಚನೆ...
ರೈತರ ಬತ್ತ ಖರೀದಿಸಲು ಜಿಲ್ಲೆಯ ಯಾದಗಿರಿ, ಶಹಾಪುರ ಮತ್ತು ಸುರಪುರ ತಾಲೂಕುಗಳ ಎಪಿಎಂಸಿ ಆವರಣಗಳಲ್ಲಿ ಡಿ.2ರಿಂದ ಬತ್ತ ಖರೀದಿಗೆ ಖರೀದಿ ಕೇಂದ್ರಗಳ ವ್ಯವಸ್ಥೆ ಮಾಡಲಾಗುತ್ತಿದೆ. ರೈತರು 2014ರ ಮಾ.31ರವರೆಗೆ ಅಥವಾ ಮಾರುಕಟ್ಟೆ ದರ ಸ್ಥಿರಗೊಳ್ಳುವವರಿಗೆ ಬತ್ತವನ್ನು ಆಯಾ ಖರೀದಿ ಕೇಂದ್ರಗಳಲ್ಲಿ ನೀಡಬಹುದಾಗಿದೆ. ಬತ್ತ ಖರೀದಿಗೆ ವ್ಯವಸ್ಥೆಗಳನ್ನು ಮಾಡುವಂತೆ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಅದರಂತೆ ಬತ್ತದ ಗುಣಮಟ್ಟ ಪರಿಶೀಲನೆ ಮಾಡಲು ಕೃಷಿ ಇಲಾಖೆ ಗ್ರೇಡರ್‌ಳನ್ನು ನಿಯೋಜಿಸುವಂತೆ ಸೂಚಿಸಿ, ಸಂಬಂಧಪಟ್ಟವರಿಗೆ ಸೂಕ್ತ ತರಬೇತಿ ಸಹ ನೀಡಬೇಕು. ಹೆಚ್ಚಿನ ಕೇಂದ್ರಗಳನ್ನು ಸ್ಥಾಪಿಸಲು ಬೇಡಿಕೆ ಬಂದಲ್ಲಿ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಪಶುಸಂಗೋಪನಾ ಇಲಾಖೆ, ಇದಕ್ಕೆ ಪೂರಕ  ಇಲಾಖೆಗಳ ಸಿಬ್ಬಂದಿ ಬಳಕೆಗೆ ಸೂಚಿಸಿದರು. ಒಟ್ಟಾರೆ ಯಾವುದೇ ತೊಂದರೆಯಾಗದಂತೆ ಗಮನ ಹರಿಸಿ ಬತ್ತ  ಖರೀದಿಗೆ ಅಧಿಕಾರಿಗಳಿಗೆ ಸೂಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.