ಯೋಜನೆ ಅನುಷ್ಠಾನಕ್ಕೆ ವಾಗ್ವಾದ
ಸರ್ಕಾರಿ ಮಾರ್ಗಸೂಚಿ ಮನವರಿಕೆ ನಂತರ ಮೂಡಿದ ಒಮ್ಮತ
ಆಳಂದ: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯ ಮೂಲಕ ರಾಷ್ಟ್ರೀಯ ಉದ್ಯೋಗ ಖಾತ್ರಿ ಹಲವು ಕಾಮಗಾರಿ ಅನುಷ್ಠಾನ ಕುರಿತಂತೆ ತಾಲೂಕು ಮಟ್ಟದ ಅಧಿಕಾರಿಗಳ ನಡುವೆ ವಾಗ್ವಾದ ನಡೆದು ಬಳಿಕ ಒಮ್ಮತಕ್ಕೆ ಬಂದ ಘಟನೆ ನಡೆದಿದೆ.
ಯೋಜನೆ ಅನುಷ್ಠಾನಕ್ಕೆ ಸರ್ಕಾರ ಮುಂದಾದರೂ ಇಲ್ಲಿನ ಗ್ರಾಪಂಗಳಲ್ಲಿನ ಪಿಡಿಒ ಮತ್ತು ಎಂಜಿನಿಯರ್ ನಡುವೆ ಯೋಜನೆಯ ಅನುಷ್ಠಾನ ಕುರಿತು ಉಂಟಾಗಿದ್ದ ತಾಂತ್ರಿಕ ಮತ್ತು ಆಡಳಿತಾತ್ಮಕ ಮಂಜೂರಾತಿ ಗೊಂದಲವನ್ನು ಕರೆದ ಸಭೆಯಲ್ಲಿ ಇತ್ಯರ್ಥಪಡಿಸಲಾಯಿತು.
ಮನವರಿಕೆ: ಪಟ್ಟಣದ ತಾಪಂ ಸಭಾಂಗಣದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ ಶೃಂಗೇರಿ ಅಧ್ಯಕ್ಷತೆಯಲ್ಲಿ ಕರೆಯಲಾದ ಪಿಡಿಒ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಸರ್ಕಾರಿ ಮಾರ್ಗ ಸೂಚಿಯನ್ನು ಪರಸ್ಪರ ಮನವರಿಕೆ ಮಾಡಿಕೊಡಲಾಯಿತು.
ಇಒ ಲಕ್ಷ್ಮಣ, ಯೋಜನೆ ಅನುಷ್ಠಾನಗೊಳಿಸುವಂತೆ ಎರಡು ತಿಂಗಳಾದರೂ, ಈ ಕುರಿತು ಯಾವುದೇ ಪ್ರಕ್ರಿಯೆ ನಡೆದಿಲ್ಲ. ಏನು ಕಾರಣ? ಎಂದಾಗ ಕೆಲಕಾಲ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಪಂಚಾಯತ್ ರಾಜ್ ವಿಭಾಗದ ಎಂಜಿನಿಯರ್ಗಳ ನಡುವೆ ವಾಗ್ವಾದ ನಡೆಯಿತು.
ಎಲ್ಲ ಗ್ರಾಪಂಗಳಿಗೆ ವಿವಿಧ ಯೋಜನೆ ಅನುಷ್ಠಾನ ಕುರಿತು ಸರ್ಕಾರದ 9 ಕೈಪಿಡಿ ತಲುಪಿಸಿದ್ದು, ಆದರೆ ಇದುವರೆಗೂ ಶಾಲಾ ಆಟದ ಮೈದಾನ, ಕನಿಷ್ಠ 2 ಕೆರೆ ನಿರ್ಮಾಣ, ನಮ್ಮ ಹೊಲ, ನಮ್ಮ ದಾರಿ, ಶೌಚಾಲಯ ನಿರ್ಮಾಣ, ರೈತರ ಕಣ, ಸ್ಮಶಾನ ಅಭಿವೃದ್ಧಿ ಹೀಗೆ ಹಲವು ವಿಧದ ಕಾಮಗಾರಿಗಳ ಕುರಿತು ಸರ್ಕಾರದ ಮಾರ್ಗದರ್ಶನದಂತೆ ಕೆಲಸ ಮಾಡದಿದ್ದಲ್ಲಿ ಯಾರದು ತಪ್ಪು ಹೇಳಿ ಎಂದಾಗ ಗ್ರಾಪಂ ಅಧಿಕಾರಿಗಳು ತಲೆ ಕೆಳಗೆ ಮಾಡಿ ಕುಳಿತುಕೊಂಡಿದ್ದರು.
ಮಂಜೂರಾತಿ: ಬಳಿಕ ಎಂಜಿನಿಯರ್ ಅಂದಾಜು ಪಟ್ಟಿಮಾಡಿಕೊಟ್ಟರೆ ಆಡಳಿತಾತ್ಮಕ ಮಂಜೂರಾತಿ ಮಾಡಿಕೊಡುತ್ತೇವೆ ಎಂದು ಪಿಡಿಒ ಬಾಬುಗೌಡ, ಮನ್ಮಥ, ಮರಗಯ್ಯ ಕುಲಾಲ್ ಇನ್ನಿತರರು ಹೇಳುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಎಂಜಿನಿಯರ್ ಶಿವಲಿಂಗಪ್ಪ ಕಲಶೆಟ್ಟಿ, ಚನ್ನಬಸಪ್ಪ ಅವರು ಕೈಗೆತ್ತಿಕೊಳ್ಳುವ ಕಾಮಗಾರಿಯ ಅಂದಾಜು ಪಟ್ಟಿಕೊಟ್ಟರೆ ಎಸ್ಟಿಮೆಟ್ ಮಾಡುವುದಾಗಿ ಹೇಳಿದಾಗ ಇನ್ನುಳಿದ ಎಂಜಿನಿಯರ್ ವಿಜಯಕುಮಾರ್, ರಾಮಚಂದ್ರ ಇತರರು ಧ್ವನಿಗೂಡಿಸಿದರು. ಯಾವ ಕಾಮಗಾರಿ ಎಷ್ಟು ಹಣ ಮೀಸಲಿಡಬೇಕು ಎಂದು ಎಂಜಿನಿಯರ್ ಅವರು ದೃಢಪಡಿಸಬೇಕು ಎಂದರು. ಅಂದಾಜು ಮಾಡಿದರೆ, ಪರಿಶೀಲಿಸಿ ದೃಢಪಡಿಸಲಾಗುವುದು ಎಂದು ಎಂಜಿನಿಯರ್ಗಳು ಹೇಳಿದರು.
ಈ ನಡುವೆ ಇಒ ಲಕ್ಷ್ಮಣ ಶೃಂಗೇರಿ ಮತ್ತು ಜಿಪಂ ಎಇಇ ಅಬ್ದುಲ್ ಸಲಾಂ ಮಧ್ಯಪ್ರವೇಶಿಸಿ ಪರಸ್ಪರ ಹೊಂದಾಣಿಕೆಯಿಂದ ಯೋಜನೆ ಅನುಷ್ಠಾನಕ್ಕೆ ಸೂಚಿಸಿದ ಮೇಲೆ ಸಭೆ ಶಾಂತವಾಯಿತು.
ಆಹಾರ ಇಲಾಖೆಯ ದತ್ತಾತ್ರೆ, ಖಾತ್ರಿ ಅಧಿಕಾರಿ ರಮೇಶ ಬಾಬು, ವ್ಯವಸ್ಥಾಪಕ ಬಸವರಾಜ ಪಾಟೀಲ್, ನೋಡಲ್ ಅಧಿಕಾರಿ ಶಶಾಂಕ ಶಹಾ, ಕಮಲಾಬಾಯಿ ತಮನ್, ಪಿಡಿಒ ಸಾಯಬಣ್ಣ ವಡಗೇರಿ, ನಬೀಸಾಬ್, ಶ್ರೀಶೈಲ್ ಕೊಟ್ಟರಗಿ, ಶ್ಯಾಮರಾವ್ ಇತರ ಅಧಿಕಾರಿಗಳು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

