50 ಕೋಟಿ ಯುವ ಜನತೆಗೆ ಕೌಶಲ್ಯ ತರಬೇತಿ: ಪಲ್ಲಂರಾಜು
ಗುಲ್ಬರ್ಗ: ದೇಶದ 50 ಕೋಟಿ ಯುವ ಜನತೆಯನ್ನು 2020ನೇ ಇಸ್ವಿಯ ಹೊತ್ತಿಗೆ ವೃತ್ತಿ ಕೌಶಲ್ಯ ತರಬೇತಿ ನೀಡಲು ಪ್ರಧಾನ ಮಂತ್ರಿಗಳು ಗುರಿ ಹೊಂದಿದ್ದಾರೆ. ಇದಕ್ಕಾಗಿ ದೇಶದ ಎಲ್ಲ ಐಟಿಐ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳನ್ನು ಅಭಿವೃದ್ಧಿಗೊಳಿಸುವುದರೊಂದಿಗೆ ಈ ಗುರಿ ಸಾಧನೆಗೆ ಗಮನ ಹರಿಸಬೇಕಾಗಿದೆ ಎಂದು ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಡಾ. ಎಂ.ಎಂ. ಪಲ್ಲಂರಾಜು ಹೇಳಿದರು.
ಗುಲ್ಬರ್ಗ-ಆಳಂದ ರಸ್ತೆಯ ಕಡಗಂಚಿಯಲ್ಲಿ ಶನಿವಾರ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕ್ಯಾಂಪಸ್ ಉದ್ಘಾಟಿಸಿ ಮಾತನಾಡಿ, ಕೇಂದ್ರ ಸರ್ಕಾರವು ಎಲ್ಲರಿಗೂ ಉನ್ನತ ಶಿಕ್ಷಣ ದೊರಕಿಸುವ ನಿಟ್ಟಿನಲ್ಲಿ 11ನೇ ಪಂಚವಾರ್ಷಿಕ ಯೋಜನೆಯಲ್ಲಿ ಕೇಂದ್ರ ಅನುದಾನಿತ 51 ನೂತನ ಸಂಸ್ಥೆಗಳನ್ನು ರೂಪಿಸಿದೆ. ಈ ಪೈಕಿ 7 ಐಐಟಿ, 15 ಕೇಂದ್ರೀಯ ವಿವಿಗಳಿವೆ. ಕೇಂದ್ರ ಸರ್ಕಾರವು ಉನ್ನತ ಶಿಕ್ಷಣಕ್ಕೆ ಹತ್ತನೇ ಪಂಚ ವಾರ್ಷಿಕ ಯೋಜನೆಗಿಂತ ಹನ್ನೊಂದು ಪಟ್ಟು ಹೆಚ್ಚಿನ ಹಣವನ್ನು ನೀಡುತ್ತಿದೆ. 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಶಿಕ್ಷಣದ ಎಲ್ಲ ಕ್ಷೇತ್ರಗಳಲ್ಲಿ ಗುಣಮಟ್ಟದ ಶಿಕ್ಷಣ ಅಳವಡಿಸಲಾಗುವುದು ಎಂದರು.
ಈ ಭಾಗದಲ್ಲಿ ಸಿಮೆಂಟ್ ಉದ್ಯಮ ಅಭಿವೃದ್ಧಿ ಹೊಂದಲು ವಿಫುಲ ಅವಕಾಶಗಳಿರುವುದರಿಂದ ಈ ಬಗ್ಗೆ ಸಂಶೋಧನೆ ಮಾಡುವುದು ಸೂಕ್ತ ಎಂದರು.
ಸರ್ವ ಸಹಕಾರ- ಸಿದ್ದರಾಮಯ್ಯ: ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ವಿವಿಧ ಶೈಕ್ಷಣಿಕ ಕೋರ್ಸುಗಳೊಂದಿಗೆ ವೃತ್ತಿ ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಜಂಟಿಯಾಗಿ ಕಾರ್ಯಕ್ರಮ ಹಮ್ಮಿಕೊಂಡಲ್ಲಿ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಬಹುದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ನುಡಿದರು.
371(ಜೆ) ಅಡಿ ನೇಮಕಾತಿ ಸಾಗಲಿ: ರೇಲ್ವೆ ಖಾತೆ ಸಚಿವ ಡಾ. ಖರ್ಗೆ ಮಾತನಾಡಿ, ಡಾ.ನಂಜುಂಡಪ್ಪ ಸಮಿತಿ ವರದಿಯನ್ವಯ ಇಂದು ಕೇಂದ್ರೀಯ ವಿವಿ ರೂಪುಗೊಂಡಿದೆ. 371(ಜೆ)ನೇ ಕಲಂ ತಿದ್ದುಪಡಿಯನ್ವಯ ರಾಜ್ಯ ಸರ್ಕಾರ ಹೈ.ಕ. ಭಾಗದಲ್ಲಿ ತ್ವರಿತಗತಿಯಲ್ಲಿ ಉದ್ಯೋಗ ನೇಮಕಾತಿಗೆ ಶಾರ್ಟ್ ನೋಟಿಸ್ ಮೂಲಕ ಕ್ರಮ ಕೈಗೊಳ್ಳಬೇಕೆಂದರು.
ಐಐಟಿ ಕೊರಗು ನೀಗಿಸಿ: ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಮಾತನಾಡಿ, ಜ್ಞಾನದ ರಾಜಧಾನಿಯಾಗಿರುವ ಕರ್ನಾಟಕದಲ್ಲಿ ಐಐಟಿ ಇಲ್ಲ ಎಂಬ ಕೂಗಿದೆ. ಹೈ.ಕ. ಪ್ರದೇಶಕ್ಕೆ ಐಐಟಿ ನೀಡಿ ಈ ಕೊರಗನ್ನು ನೀಗಿಸಬೇಕೆಂದು ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಲ್ಲಿ ಕೋರಿದರು.
ಗುಣಮಟ್ಟದ ಶಿಕ್ಷಣ- ಡಾ. ಅನಂತಮೂರ್ತಿ: ಸಮಾರಂಭದಲ್ಲಿ ಉಪಸ್ಥಿತರಿದ್ದ ಕೇಂದ್ರೀಯ ವಿವಿ ಕುಲಾಧಿಪತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿ ಮಾತನಾಡಿ, ಕೆಳವರ್ಗದವರ ಕಣ್ಣು, ಕೈಯಲ್ಲಿ ಕೌಶಲ್ಯವಿದ್ದರೆ, ಮೇಲ್ವರ್ಗದವರ ಮಿದುಳಲ್ಲಿ ಬುದ್ಧಿ ಇರುತ್ತದೆ. ಕೇಂದ್ರೀಯ ವಿವಿ ದೈಹಿಕ ಕೌಶಲ್ಯ, ತಲೆಯಲ್ಲಿನ ಬುದ್ಧಿ ಎರಡನ್ನೂ ಸಮೀಕರಿಸುವಂತಹ ಕೆಲಸಕ್ಕೆ ಮುಂದಾಗಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

