ಗುಲ್ಬರ್ಗಾ

7ಅಸೆಂಬ್ಲಿ ಕೈಯೊಳಗಿದ್ರೂ ಕಳವಳ, ತಪ್ಪಿಲ್ಲ ತಳಮಳ

Published On :

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಏ.1
ಗುಲ್ಬರ್ಗ ಲೋಕಸಭೆ(ಎಸ್ಸಿ ಮೀಸಲು) ಅಖಾಡದಲ್ಲಿನ ಸಮರ ಕುತೂಹಲಕಾರಿಯಾಗಿದೆ. 11ನೇ ಬಾರಿ ಚುನಾವಣೆ ಅಖಾಡದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ಮಾಜಿ ಮಂತ್ರಿ ರೇವು ನಾಯಕರನ್ನು ಕಣಕ್ಕಿಳಿಸಿದೆ. ಜೆಡಿಎಸ್‌ನಿಂದ ಹೋರಾಟಗಾರ ಡಿ.ಜಿ. ಸಾಗರ, ಬಿಎಸ್ಪಿಯಿಂದ ಮಹಾದೇವ ಧನ್ನಿ, ಆಪ್‌ನಿಂದ ಬಿ.ಟಿ. ಲಲಿತಾನಾಯಕ ಸ್ಪರ್ಧೆಯಲ್ಲಿದ್ದು ಯಾರಿಗುಂಟು, ಯಾರಿಗಿಲ್ಲ, ಲೋಕ ಸಮರದ ಬೇವು ಬೆಲ್ಲ.. ಎಂದು ಕೇಳುವಂತಾಗಿದೆ.
ಲೋಕಸಭೆ ವ್ಯಾಪ್ತಿಯ 8 ಅಸೆಂಬ್ಲಿ ಕ್ಷೇತ್ರಗಳಲ್ಲಿ 7 ತನ್ನ ವಶದಲ್ಲಿದ್ದರೂ ಕಾಂಗ್ರೆಸ್‌ಗೆ ಕಳವಳ ತಪ್ಪಿಲ್ಲ. ಇನ್ನು 8ರಲ್ಲಿ ಒಂದೇ ಒಂದರಲ್ಲಿ ಶಾಸಕರನ್ನು ಹೊಂದಿದ್ದರೂ ಪರವಾಗಿಲ್ಲ, ನರೇಂದ್ರ ಮೋದಿ ಗಾಳಿ ಇದೆಯಲ್ಲ ಎಂಬ ಬಿಜೆಪಿಗೂ ತಳಮಳ ತಪ್ಪಿಲ್ಲ. ಹೀಗಾಗಿ ಗುಲ್ಬರ್ಗ ಲೋಕ ಕದನ ರಾಜಕೀಯ, ಸಾಮಾಜಿಕ, ಜಾತಿ ಗಣಿತ... ಅನೇಕ ಕಾರಣಗಳಿಂದಾಗಿ ಕುತೂಹಲ ಮೂಡಿಸಿದೆ.  ಇಂಥವರೇ ಗೆಲ್ಲುತ್ತಾರೆ ಎಂದು ಯಾವ ಮಗ್ಗುಲದಿಂದಲೂ ಭವಿಷ್ಯ ನುಡಿಯಲಾಗದ ವಾತಾವರಣವಿದೆ. 9 ಅಸೆಂಬ್ಲಿ, 1 ಲೋಕ ಸಮರದಲ್ಲಿ ಸತತ ಜಯಭೇರಿ ಬಾರಿಸಿ 11ನೇ ಬಾರಿ ಅಖಾಡದಲ್ಲಿರುವ ಖರ್ಗೆ ಇಲ್ಲಿಂದ ಪುನರಾಯ್ಕೆ ಬಯಸಿದ್ದಾರೆ. ಇದಕ್ಕೆ ಪೂರಕವೆಂಬಂತೆ 8 ಅಸೆಂಬ್ಲಿ ಕ್ಷೇತ್ರಗಳ ಪೈಕಿ 7ರಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಈ ಬಾರಿಯೂ ನಮ್ಮದೇ 'ಕೈ' ಮೇಲು ಎನ್ನುವಂತಹ ವಾತಾವರಣ ಅನುಭವಿಸುತ್ತಿಲ್ಲ.
ಕೈ ಪಾಳಯದಲ್ಲಿ ಆಗಾಗ ಸ್ಫೋಟ: ಏನಕೇನ ಕಾರಣಗಳಿಂದ ಆಗಾಗ ಕೈ ಪಾಳಯದಲ್ಲಿ ಸ್ಫೋಟಗೊಳ್ಳುವ ಅಸಮಾಧಾನ, ಅದಕ್ಕೆ ಜಿಲ್ಲೆಯ ಅಫಜಲ್ಪುರ ಮೊದಲ್ಗೊಂಡು ಕೆಲ ಅಸೆಂಬ್ಲಿ ಕ್ಷೇತ್ರಗಳಿಂದ ದೊರಕುವ ಬಲ- ಬೆಂಬಲವನ್ನು ವಿಶ್ಲೇಷಿಸಿದಲ್ಲಿ ಕೈ ಇಲ್ಲಿ ಸಾಧನೆಗಳನ್ನು ಪಟ್ಟಿ ಮಾಡುತ್ತ, ಬೀಗುತ್ತ ಕೂತರಾಗದು. ಗೆಲ್ಲಲು ಹರಸಾಹಸ ಅನಿವಾರ್ಯ ಎಂಬಂತಾಗಿದೆ. ಇಲ್ಲಿರೋದು ಖರ್ಗೆ ಗಾಳಿ ಎಂದು ಕೈ ಕಾರ್ಯಕರ್ತರು ಹೇಳುತ್ತಿದ್ದರೂ ಇವರು ಇನ್ನೂ ಗ್ರಾಮೀಣ ಗುಲ್ಬರ್ಗದತ್ತ ಹೆಜ್ಜೆ ಹಾಕದೆ ಇರುವ ಸಂಗತಿ ಕೈ ಪಾಳಯಕ್ಕೆ ಸವಾಲೇ ಸರಿ.
ಕುಸ್ತಿ ಪಟುವಿನ ನಮೋ ಪಟ್ಟು: 2009ರಲ್ಲಿ ಖರ್ಗೆ ವಿರುದ್ಧವೇ ಸ್ಪರ್ಧಿಸಿ ಸೋಲುಂಡಿರುವ ರೇವು ನಾಯಕ ಈ ಬಾರಿ ಮತ್ತೆ ಸ್ಪರ್ಧಿಸಿದ್ದಾರೆ.
   ಈ ಬಾರಿ ನಮೋ ಗಾಳಿ ಎಂದು ಅಖಾಡದಲ್ಲಿ ಖರ್ಗೆ ಜೊತೆ ಕುಸ್ತಿಗೆ ಇಳಿದಿರುವ ರೇವು ನಾಯಕರಿಗೂ ಗೆಲ್ಲುವ ಕುದುರೆಯಾಗುವ ವಿಚಾರದಲ್ಲಿ ತಳಮಳ ತಪ್ಪಿಲ್ಲ ಎಂಬ ಮಾತುಗಳಿವೆ.
   2009ರಲ್ಲಿ ಬಿಜೆಪಿಯ 4 ಶಾಸಕರಿದ್ದರೂ ಗುಲ್ಬರ್ಗದಲ್ಲಿ ಕಮಲ ಅರಳಲಿಲ್ಲ. ಈ ಬಾರಿ ಗುಲ್ಬರ್ಗ(ದ) ಹೊರತುಪಡಿಸಿ ಎಲ್ಲಿಯೂ ಶಾಸಕರಿಲ್ಲ ಎಂಬ ಮಾತುಗಳು ಕಾರ್ಯಕರ್ತರ ವಲಯದಲ್ಲೇ ಚರ್ಚಿತವಾಗುತ್ತಿವೆ. ಇನ್ನು ಕೆಜೆಪಿ, ಬಿಎಸ್ಸಾರ್ ಪಕ್ಷಗಳು ಬಿಜೆಪಿಯಲ್ಲಿ ವಿಲೀನವಾದರೂ ಜಿಲ್ಲೆಯಲ್ಲಿ ಆ ಪ್ರಕ್ರಿಯೆ ಪೂರ್ಣಪ್ರಮಾಣದಲ್ಲಿ ನಡೆದಂತೆ ಕಾಣುತ್ತಿಲ್ಲ. ಮೂರು ಪಕ್ಷಗಳ ನಾಯಕರ ನಡುವಿನ ಶೀತಲಸಮರ, ಪರಸ್ಪರ ಪ್ರತಿಷ್ಠೆ ಮೆರೆಯುವ ಬುದ್ಧಿಯೇ ನಮೋ ಅಲೆಯಲ್ಲಿಯೂ ಬಿಜೆಪಿ ಇಲ್ಲಿ ಗೆಲವಿಗಾಗಿ ಹಗಲು ರಾತ್ರಿ ಕಸರತ್ತು ಮಾಡುವಂತಾಗಿದೆ.
  ಇನ್ನು ಕಣದಲ್ಲಿರುವ ಜೆಡಿಎಸ್‌ನ ಡಿ.ಜಿ. ಸಾಗರ್, ಎಎಪಿಯ ಲಲಿತಾ ನಾಯಕ, ಬಿಎಸ್ಪಿಯ ಮಹಾದೇವ ಧನ್ನಿ ಇವರು ಅದೆಷ್ಟು ಮತಗಳನ್ನು ಪಡೆಯುವರೋ ಎಂಬ ಚರ್ಚೆಯೂ ಸಾಗಿದೆ. ಈ ನಾಯಕರು ಯಾರ ಮತಬುಟ್ಟಿಗೆ ಕೈ ಹಾಕುವರೋ ಎಂಬ ಜಿಜ್ಞಾಸೆಯೂ ಶುರುವಾಗಿದೆ.
  ಇವೆಲ್ಲ ಸಂಗತಿಗಳ ಹಿನ್ನೆಲೆಯಲ್ಲಿ ಗುಲ್ಬರ್ಗ ಲೋಕ ಸಮರದ ರಣಾಂಗಣ ಯಾರಿಗೆ ಪ್ಲಸ್, ಯಾರಿಗೆ ಮೈನಸ್ ಎಂಬ ಚರ್ಚೆಗಳು ಸಾಗಿವೆ.
ಕಾಂಗ್ರೆಸ್ ಕೋಟೆ: ಕ್ಷೇತ್ರ ಕಂಡ 16 ಚುನಾವಣೆಗಳಲ್ಲಿ 1996ರಲ್ಲಿ ಖಮರುಲ್ ಇಸ್ಲಾಂ ಜೆಡಿಎಸ್‌ನಿಂದ ಹಾಗೂ 1998ರಲ್ಲಿ ಬಸವರಾಜ ಪಾಟೀಲ್ ಸೇಡಂ ಬಿಜೆಪಿಯಿಂದ ವಿಜಯ ಸಾಧಿಸಿದ್ದು ಹೊರತುಪಡಿಸಿದರೆ ಇಲ್ಲಿ ಗೆದ್ದವರೆಲ್ಲರೂ ಕಾಂಗ್ರೆಸ್ ಅಭ್ಯರ್ಥಿಗಳೇ. ಹೀಗಾಗಿ ಗುಲ್ಬರ್ಗ ಕಾಂಗ್ರೆಸ್‌ನ ಭದ್ರಕೋಟೆ ಎಂಬುದು ಇತಿಹಾಸದ ದಾಖಲೆ. ವರ್ತಮಾನದಲ್ಲಿ ಪೈಪೋಟಿ ಅಧಿಕವಾಗಿದೆ. ಗುಲ್ಬರ್ಗ ಕೋಟೆ ಅದ್ಯಾರ ವಶವಾಗುವುದೋ ಎಂಬುದೇ ಕುತೂಹಲ.
ಮೂವರು ಮಂತ್ರಿ
ಗುಲ್ಬರ್ಗ ಲೋಕಸಭಾ ವ್ಯಾಪ್ತಿಯ 8 ಅಸೆಂಬ್ಲಿಗಳ ಪೈಕಿ 7ರಲ್ಲಿ ಕಾಂಗ್ರೆಸ್ ಶಾಸಕರೇ ಇದ್ದಾರೆ. ಇವರಲ್ಲಿ ಸೇಡಂನ ಡಾ.  ಶರಣಪ್ರಕಾಶ್ ಪಾಟೀಲ್, ಗುಲ್ಬರ್ಗ(ಉ)ದ ಖಮರುಲ್ ಇಸ್ಲಾಂ ಹಾಗೂ ಗುರುಮಠಕಲ್‌ನ ಬಾಬೂರಾವ ಚಿಂಚನ್ಸೂರ್ ಮಂತ್ರಿಗಳು ಎಂಬುದು ಗಮನಾರ್ಹ. ಮೂವರು ಮಂತ್ರಿಗಳಿರುವ 7 “Oæç’ ಶಾಸಕರ ಪಡೆ ಲೋಕ ಸಮರದಲ್ಲಿ ಅದ್ಯಾವ ವಿಧದಲ್ಲಿ ಪ್ರಭಾವ ಬೀರುವುದೋ ಎಂಬುದೇ ಈಗಿನ ಅಚ್ಚರಿ ಎನ್ನುತ್ತಿದ್ದಾರೆ ಕಾರ್ಯಕರ್ತರು.
ಗುಲ್ಬರ್ಗ ಕ್ಷೇತ್ರ ಹಿನ್ನೋಟ
ಇದುವರೆಗೂ ಯಾರೆಲ್ಲಾ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.. ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ 1957, 1962 ಹಾಗೂ 1967 ಸತತ ಮಹದೇವಪ್ಪ ಯಶವಂತ್ರಾವ್ ರಾಂಪೂರೆ ಕಾಂಗ್ರೆಸ್‌ನಿಂದ ಗೆದ್ದವರು. 1971- ಧರಂರಾವ್ ಶರಣಪ್ಪ ಅಫಜಲ್ಪುರ(ಕಾಂಗ್ರೆಸ್), 1977- ಸಿದ್ರಾಮ ರೆಡ್ಡಿ(ಕಾಂಗ್ರೆಸ್), 1980- ಧರಂಸಿಂಗ್(ಕಾಂಗ್ರೆಸ್), ಉಪಚುನಾವಣೆ- ಸಿಎಂ ಸ್ಟೀಫನ್(ಕಾಂಗ್ರೆಸ್), 1984- ವೀರೇಂದ್ರ ಪಾಟೀಲ್(ಕಾಂಗ್ರೆಸ್), 1989- ಬಿ.ಜಿ. ಜವಳಿ(ಕಾಂಗ್ರೆಸ್), 1991- ಬಿ.ಜಿ. ಜವಳಿ(ಕಾಂಗ್ರೆಸ್) 1996- ಖಮರ್ ಉಲ್ ಇಸ್ಲಾಂ(ಜೆಡಿಎಸ್) 1998- ಬಸವರಾಜ ಪಾಟೀಲ ಸೇಡಂ(ಬಿಜೆಪಿ), 1999- ಇಕ್ಬಾಲ್ ಅಹಮದ್ ಸರಡಗಿ(ಕಾಂಗ್ರೆಸ್), 2004- ಇಕ್ಬಾಲ್ ಅಹಮದ್ ಸರಡಗಿ(ಕಾಂಗ್ರೆಸ್), 2009- ಮಲ್ಲಿಕಾರ್ಜುನ ಖರ್ಗೆ(ಕಾಂಗ್ರೆಸ್)
8 ವಿಧಾನಸಭಾ ಪ್ರತಿನಿಧಿಗಳು
1. ಅಫಜಲ್ಪುರ- ಮಾಲಿಕಯ್ಯ ಗುತ್ತೇದಾರ್(ಕಾಂಗ್ರೆಸ್)
2. ಜೇವರ್ಗಿ- ಅಜಯ್‌ಸಿಂಗ್(ಕಾಂಗ್ರೆಸ್)
3. ಗುರಮಠಕಲ್- ಬಾಬುರಾವ್ ಚಿಂಚನಸೂರು(ಕಾಂಗ್ರೆಸ್)
4. ಚಿತ್ತಾಪುರ - ಪ್ರಿಯಾಂಕ್ ಖರ್ಗೆ(ಕಾಂಗ್ರೆಸ್)
5. ಸೇಡಂ - ಶರಣಪ್ರಕಾಶ ಪಾಟೀಲ್(ಕಾಂಗ್ರೆಸ್)
6. ಗುಲ್ಬರ್ಗ(ಗ್ರಾ)- ರಾಮಕೃಷ್ಣ ಜಿ.(ಕಾಂಗ್ರೆಸ್)
7. ಗುಲ್ಬರ್ಗ(ಉ)- ಖಮರುಲ್ ಇಸ್ಲಾಂ(ಕಾಂಗ್ರೆಸ್)
8. ಗುಲ್ಬರ್ಗ(ದ)- ದತ್ತಾತ್ರೇಯ ಪಾಟೀಲ್ ರೇವೂರ(ಬಿಜೆಪಿ)


-ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.