ಸುಂಟನೂರು ಗ್ರಾಮದಲ್ಲಿಸಾಂಸ್ಕೃತಿಕ ಉತ್ಸವ
ಗುಲ್ಬರ್ಗ: ಶಾಂತಲಿಂಗೇಶ್ವರ ವೀರಗಾಸೆ ಪುರವಂತಿಕೆ ಜನಪದ ಕಲಾಸಂಘ ಹಾಗೂ ಕನ್ನಡ ಸಂಸ್ಕೃತ ಇಲಾಖೆ ಆಶ್ರಮದಲ್ಲಿ ಸುಂಟನೂರ ಗ್ರಾಮದ ಬಸವಣಪ್ಪಾ ದೇವರ ಕಲ್ಯಾಣ ಮಂಟಪದಲ್ಲಿ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಉದ್ಘಾಟಿಸಿದ ಕಾಂಗ್ರೆಸ್ ಯುವ ಮುಖಂಡ ಶರಣಬಸಪ್ಪ ಜನಪದ ಕಲೆಗಳಾದ ಡೊಳ್ಳಿನ ಪದಗಳು, ಹಂತಿಪದಗಳು, ಸೊಬಗಿನ ಪದಗಳು ಮರೆಯಾಗುತ್ತಿದ್ದು, ನಾವು ಅವುಗಳನ್ನು ಉಳಿಸಿ ಬೆಳೆಸೋಣ ಎಂದು ಉತ್ಸವ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಬೀರಲಿಂಗೇಶ್ವರ ಕಲಾ ತಂಡದಿಂದ ಡೋಳ್ಳು ಕುಣಿತ, ಶಾಂತಯ್ಯಾ ಜಿ. ಹಿರೇಮಠ ಸಂಗಡಿಗರಿಂದ ಜನಪದ ಗೀತೆ, ಗೋವಿಂದಪ್ಪ ಜೊಳದ, ರಾಮಚಂದ್ರ, ವಿಶ್ವಕರ್ಮಾ ವಿಠ್ಠಲರಿಂದ ತತ್ವಪದ, ಪವಿತ್ರಾರಿಂದ ವಚನ ಗಾಯನ, ಗುಲ್ಬರ್ಗ ನಾಗಲಿಂಗಯ್ಯ ಸ್ಥಾವರಮಠ, ವೀರಣ್ಣ ಖಂಬದ ತಬಲಾ ನುಡಿಸಿದರು. ಮುಖ್ಯ ಅತಿಥಿಗಳಾಗಿ ಬಾಬುರಾವ ಬಿರಾದರ, ಸಂಗಯ್ಯಾಸ್ವಾಮಿ ಮಠಪತಿ, ಕಲ್ಯಾಣಪ್ಪ ಚಿಂಚೋಳಿ ಆಗಮಿಸಿದರು. ಬಾಬುರಾವ ಫುಲಾರ ನಿರೂಪಿಸಿದರು, ರೇವಣಯ್ಯಾ ಸ್ವಾಮಿ ವಂದಿಸಿದರು ಎಂದು ಅಧ್ಯಕ್ಷ ಮಲ್ಲಯ್ಯಾ ಸ್ವಾಮಿ ತಿಳಿಸಿದ್ದಾರೆ.
ಕೆರೆ ಭೋಸಗಾದಲ್ಲಿ ಎನ್ಎಸ್ಎಸ್ ಯೋಜನೆ
ಗುಲ್ಬರ್ಗ: ಮಹಾತ್ಮಾ ಜ್ಯೋತಿಬಾಫುಲೆ ಪದವಿ ಮಹಾವಿದ್ಯಾಲಯ ಆಶ್ರಯದಲ್ಲಿ ಕೆರೆ ಭೋಸಗಾ ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಶಿಬಿರಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಸಹಾಯಕ ಆಯುಕ್ತ ಚಂದ್ರಕಾಂತ ಪಾಟೀಲರು ವಿದ್ಯಾರ್ಥಿಗಳು ಜೀವನದಲ್ಲಿ ಶ್ರಮವಹಿಸಿ ದುಡಿಯುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ಮನುಷ್ಯ ದೈಹಿಕವಾಗಿ ಮಾನಸಿಕವಾಗಿ ಆರೋಗ್ಯಕರವಾಗಿರುತ್ತಾನೆಂದು ಶಿಬಿರ ಕುರಿತು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಶಂಕರ ಕೋಡ್ಲಾ ಶಿಬಿರಾರ್ಥಿಗಳು ಶಿಸ್ತಿನಿಂದ ಶ್ರಮದಾನ ಮಾಡಿರುವುದನ್ನು ಶ್ಲಾಘೀಸಿದರು. ಶಿಬಿರದ ವರದಿಯನ್ನು ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ. ಗುರುಲಿಂಗಪ್ಪ ಮೇಟಿ ವಾಚಿಸಿದರು.ಶಿವಲೀಲಾ, ಶಾಂತಾ ರಾಷ್ಟ್ರೀಯ ಸೇವಾ ಯೋಜನೆ ಗೀತೆ ಹಾಡಿದರು. ಪ್ರೊ. ಎನ್.ಟಿ. ಕಣ್ಣಿ ಸ್ವಾಗತಿಸಿದರು, ಗ್ರಂಥಪಾಲಕ ವೆಂಕಟರೆಡ್ಡಿ ವಂದಿಸಿದರು, ಕನ್ನಡ ಸಹಪ್ರಾಧ್ಯಾಪಕ ಎಸ್ಪಿ ಆತನೂರ ಕಾರ್ಯಕ್ರಮ ನಿರ್ವಹಿಸಿದರು. ಕೆರೆ ಭೋಸಗಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯಗುರು ಶಂಕರ ಬಿಲ್ಲಾಡ, ದೈಹಿಕ ನಿರ್ದೇಶಕ ಮಧುಸುದನ ರೆಡ್ಡಿ, ವಿದ್ಯಾರ್ಥಿಗಳು ಹಾಜರಿದ್ದರು.
30 ರೊಳಗೆ ತೆರಿಗೆ ಪಾವತಿಸಿ, ರಿಯಾಯ್ತಿ ಪಡೆಯಿರಿ
ಗುಲ್ಬರ್ಗ: ಗುಲ್ಬರ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಸ್ವತ್ತುಗಳ ಮಾಲೀಕರು, ಅನುಭೋಗದಾರರು ಚಾಲ್ತಿ ವರ್ಷದ ತೆರಿಗೆಯನ್ನು ಏಪ್ರಿಲ್ 30 ರೊಳಗಾಗಿ ಪಾವತಿಸಿದಲ್ಲಿ ಶೇ.5 ರಿಯಾಯ್ತಿ ನೀಡಲಾಗುತ್ತದೆ ಎಂದು ಗುಲ್ಬರ್ಗ ಮಹಾನಗರ ಪಾಲಿಕೆ ಆಯುಕ್ತ ಕಟ್ಟಿಮನಿ ತಿಳಿಸಿದ್ದಾರೆ. ಸ್ವತ್ತುಗಳ ಮಾಲೀಕರು, ಅನುಭೋಗದಾರರು ಮೇ 1ರಿಂದ ರಿಂದ ಜೂನ್ 30 ರವರೆಗೆ ದಂಡರಹಿತವಾಗಿ ತೆರಿಗೆಯನ್ನು ಪಾವತಿಸಲು ಅವಕಾಶ ನೀಡಲಾಗಿದೆ. ಸಾರ್ವಜನಿಕರು ಈಗಾಗಲೇ ತೆರಿಗೆ ಪಾವತಿಸುತ್ತಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಏಪ್ರಿಲ್ 1ರಿಂದ 13 ಬ್ಯಾಂಕುಗಳಲ್ಲಿ ಹಾಗೂ ಮೂರು ಗುಲ್ಬರ್ಗ ಒನ್ ಕೇಂದ್ರದಲ್ಲಿ ತೆರಿಗೆ ಪಾವತಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು ತೆರಿಗೆ ಪಾವತಿಸಬಹುದಾದ ಬ್ಯಾಂಕುಗಳ ಹಾಗೂ ಗುಲ್ಬರ್ಗ ಒನ್ ಕೇಂದ್ರಗಳ ಮಾಹಿತಿ ಇಂತಿದೆ. ಐಎನ್ಜಿ ವೈಶ್ಯಾ ಬ್ಯಾಂಕ್ ಸೂಪರ್ ಮಾರ್ಕೆಟ್, ಇಂಡಿಯನ್ ಬ್ಯಾಂಕ್ ಸುಪರ್ ಮಾರ್ಕೆಟ್, ಇಂಡಿಯನ್ ಬ್ಯಾಂಕ್ ದರ್ಗಾ ರೋಡ್, ಇಂಡಿಯನ್ ಬ್ಯಾಂಕ್, ಮಹಾನಗರ ಪಾಲಿಕೆ ಬ್ರ್ಯಾಂಚ್, ಎಸ್ಬಿಎಂಸುಪರ್ ಮಾರ್ಕೆಟ್, ಎಸ್ಬಿಎಂ ರಾಮ ಮಂದಿರ ಬ್ರ್ಯಾಂಚ್, ಆಕ್ಸಿಸ್ ಬ್ಯಾಂಕ್ ಸುಪರ್ ಮಾರ್ಕೆಟ್ ಬ್ರ್ಯಾಂಚ್ ಮತ್ತಿತರ ಬ್ಯಾಂಕುಗಳಲ್ಲಿ ಪಾವತಿಸಬಹುದಾಗಿದೆ.
ಯೂನಿಯನ್ ಬ್ಯಾಂಕ್ನ 3,769ನೇ ಶಾಖೆ ಉದ್ಘಾಟನೆ
ಶಹಾಪುರ: 1921ರಲ್ಲಿ ಯೂನಿಯನ್ ಬ್ಯಾಂಕಿನ ಪ್ರಧಾನ ಕಚೇರಿಯನ್ನು ಮಹಾತ್ಮಾ ಗಾಂಧೀಜಿಯವರು ಉದ್ಘಾಟಿಸಿ ಆಶೀರ್ವದಿಸಿದ ಸನ್ನಿವೇಶ ಸ್ಮರಿಸಬೇಕು ಎಂದು ಬ್ಯಾಂಕಿನ ವಿಭಾಗೀಯ ವ್ಯವಸ್ಥಾಪಕ ವಿ.ಹೆಚ್. ಕಾಮತ್ ಹೇಳಿದರು.ಅವರು ಪಟ್ಟಣದ ಸಿ.ಬಿ. ಕಮಾನ ಹತ್ತಿರವಿರುವ ವಸ್ತ್ರದ ಕಾಂಪ್ಲೆಕ್ಸ್ದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಇದು, ಈ ಬ್ಯಾಂಕಿನ 3769ನೇ ಶಾಖೆಯಾಗಿದೆ. ಈ ಬ್ಯಾಂಕು ನವೆಂಬರ್ 11, 1919ರಲ್ಲಿ ಸ್ಥಾಪನೆಯಾಗಿದೆ. 94 ವರ್ಷಗಳ ಕಾಲ ಸಾರ್ವಜನಿಕ ಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಈ ಬ್ಯಾಂಕಿನ ಪ್ರಧಾನ ಕಚೇರಿಯನ್ನು 1921ರಲ್ಲಿ ಮಹಾತ್ಮಾ ಗಾಂಧೀಜಿಯವರು ಉದ್ಘಾಟಿಸಿದ್ದರು. ದೇಶದಲ್ಲಿ 3500ಕ್ಕು ಶಾಖೆಗಳನ್ನು ಹೊಂದಿದ್ದು, ಎಲ್ಲಾ ಶಾಖೆಗಳು ಕೋರ್ ಬ್ಯಾಂಕಿಂಗ್ ವ್ಯವಸ್ಥೆಗೆ ಒಳಪಟ್ಟಿವೆ. 34 ದಶಲಕ್ಷ ಗ್ರಾಹಕರನ್ನು ಹೊಂದಿದೆ. ಈಗಿರುವ ಬ್ಯಾಂಕಿನ ಒಟ್ಟು ವ್ಯವಹಾರ 5,12,870 ಕೋಟಿ ರೂ. ಆಗಿದೆ. ಇದು ಕೂಡಾ ದೇಶದ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿಯೇ ದೊಡ್ಡದು. ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರೊಂದಿಗೆ ಬ್ಯಾಂಕಿನ ಶ್ರೇಯೋಭಿವೃದ್ಧಿಗಾಗಿ ಎಲ್ಲರೂ ಶ್ರಮಿಸೋಣ ಎಂದರು.
ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮದ್ಯ ವಶ; ಇನಾಂದರ್
ಗುಲ್ಬರ್ಗ: ಅಫಜಲ್ಪುರ ತಾಲೂಕಿನ ಮಂಗಳೂರ ಗ್ರಾಮದ ಪೀರಪ್ಪ ಭೀಮಣ್ಣ ಕಟ್ಟಿಮನಿ ಮನೆಯಲ್ಲಿ ಅಕ್ರಮವಾಗಿ ಕೂಡಿಟ್ಟ 432 ಲೀಟರ್ ಮದ್ಯ ಹಾಗೂ 226 ಲೀಟರ್ ಬೀರ್ ಜಪ್ತಿ ಮಾಡಲಾಗಿದೆ ಎಂದು ಅಬಕಾರಿ ಉಪ ಅಧೀಕ್ಷಕ ಜಗದೀಶ ಇನಾಂದಾರ್ ತಿಳಿಸಿದ್ದಾರೆ. ಖಚಿತ ಮಾಹಿತಿಯ ಆಧಾರದ ಮೇಲೆ ಅಬಕಾರಿ ಜಂಟಿ ಆಯುಕ್ತ ಪ್ರಭುಸ್ವಾಮಿ ಹಾಗೂ ಅಬಕಾರಿ ಉಪ ಆಯುಕ್ತ ಎಫ್.ಹೆಚ್. ಛಲವಾದಿ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷಕ ಜಗದೀಶ ಇನಾಂದಾರ,ಅಬಕಾರಿ ನಿರೀಕ್ಷಕ ಎ.ಎ. ಮುಜಾವರ ನೇತೃತ್ವದಲ್ಲಿ ಆಳಂದ ಅಬಕಾರಿ ಉಪ ನಿರೀಕ್ಷಕ ಕೇದಾರನಾಥ ಎಸ್.ಟಿ. ಹಾಗೂ ಮಲ್ಲಿಕಾರ್ಜುನ ಹನಗಂಡಿರವರ ತಂಡ ಆರೋಪಿಯನ್ನು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ. ದಾಳಿಯಲ್ಲಿ ಸಿಬ್ಬಂದಿ ಲಾಲಪ್ಪ, ಸುದರ್ಶನ, ಸದಾನಂದ, ಮಕ್ದೂಮ್ ಅನ್ಸಾರಿ ಜಿಲಾನಿ, ದಿನಕರ, ಮಡಿವಾಳಪ್ಪ ಕಾಳೆ ಭಾಗವಹಿಸಿದ್ದರು. ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರೋಜನಿ ಮಹಿಷಿ ವರದಿ ಅನುಷ್ಠಾನಗೊಳಿಸಿ
ಗುಲ್ಬರ್ಗ: ಉದ್ಯೋಗ ವಿಚಾರದಲ್ಲಿ ಸಲ್ಲಿಸಿರುವ ಡಾ. ಸರೋಜಿನಿ ಮಹಿಷಿ ವರದಿ ಕಡ್ಡಾಯವಾಗಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಅಫಜಲ್ಪುರ ತಾಲೂಕಿನ ದಂಡಾಧಿಕಾರಿಗಳ ಮೂಲಕ ವೀರ ಕನ್ನಡಿಗರ ಸೇನೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.ಉದ್ಯೋಗ ವಿಚಾರಕ್ಕೆ ಸಂಬಂಧ ಪಟ್ಟಂತೆ ಡಾ.ಸರೋಜನಿ ಮಹಿಷಿ ವರದಿ ಸರ್ಕಾರಕ್ಕೆ ಸಲ್ಲಿಸಿ ದಶಕಗಳೇ ಕಳೆದರೂ ಅದು ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿಲ್ಲ. ಒಟ್ಟು 58 ಶಿಫಾರಸ್ಸುಗಳನ್ನು ಕೈ ಬಿಟ್ಟಿರುವ ಉದ್ದೇಶವಾದರೂ ಏನೆಂದು ಸರ್ಕಾರ ಹೇಳಬೇಕು. ಕೇವಲ ಅನುಷ್ಠಾನದ ಮೇಲ್ವಿಚಾರಣೆಗಾಗಿ ಕೆಲ ಸಮಿತಿಗಳನ್ನು ರಚಿಸಿರುವುದು ಬಿಟ್ಟರೆ ಸರ್ಕಾರ ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಸತತ ದಶಕಗಳು ಉರುಳುತ್ತಿವೆಯೇ ಹೊರತು, ಯಾವುದೇ ಪ್ರಗತಿಯಾಗಿಲ್ಲ. ಈಗಲಾದರೂ ಸರ್ಕಾರ ಸರೋಜಿನಿ ಮಹಿಷಿ ವರದಿ ಅನುಷ್ಠಾನಗೊಳಿಸಿ ಕನ್ನಡಿಗರಿಗೆ ಉದ್ಯೋಗದಿಂದ ವಂಚಿಸಿದ ಬಹುರಾಷ್ಟ್ರೀಯ ಕಂಪನಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸೇನೆ ಒತ್ತಾಯಿಸಿದೆ. ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಎಚ್ಚರಿಸಬೇಕಾಗುತ್ತದೆ ಎಂದು ತಾಲೂಕು ಅಧ್ಯಕ್ಷ ಅರುಣಕುಮಾರ ಪಾಟೀಲ್ ತಿಳಿಸಿದ್ದಾರೆ.
ವಚನಗಳಲ್ಲಿ ಮಾನವೀಯ ಮೌಲ್ಯ: ಡಾ. ಸಬರದ
ಗುಲ್ಬರ್ಗ: ವಚನಕಾರರು ಮಾನವೀಯ ಮೌಲ್ಯಗಳಿಗೆ ಮಹತ್ವದ ಸ್ಥಾನ ನೀಡಿದ್ದಾರೆ ಎಂದು ಗುಲ್ಬರ್ಗ ವಿವಿ ಕನ್ನಡ ಪ್ರಾಧ್ಯಾಪಕ ಡಾ. ಬಸವರಾಜ ಸಬರದ ಹೇಳಿದರು. ಕಾಯಕಜೀವಿ ಲಿಂ. ಮಲ್ಕಣ್ಣಗೌಡ ಪೊಲೀಸ್ ಪಾಟೀಲ್ ಕಲ್ಲೂರ(ಕೆ) ಸ್ಮರಣಾರ್ಥ ನಗರದ ಎನ್.ವಿ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಮೌನೇಶ್ವರನ ವಚನದಲ್ಲಿ ಮೌಲ್ಯಗಳ ರಾಶಿ ಕುರಿತು ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಿಂದಗಿಯ ವಿಶ್ರಾಂತ ಪ್ರಾಧ್ಯಾಪಕ ಡಾ. ಎಂ.ಎಂ. ಪಡಶೆಟ್ಟಿ ಉಪನ್ಯಾಸ ನೀಡಿ, ಸಮಾಜದ ಎಲ್ಲಾ ವರ್ಗದ ಜನರಲ್ಲಿ ಭಾವೈಕ್ಯದ ಅರಿವು ಮೂಡಿಸಿ. ಹಿಂದೂ- ಮುಸ್ಲಿಂ ಕೂಡಿ ಬಾಳಲು ಕಲ್ಪಿಸಿಕೊಟ್ಟು, ಸಾಮಾನ್ಯ ಜನರನ್ನು ತಿದ್ದುವಲ್ಲಿ ಮೌನೇಶ್ವರ ಮಾಡಿದ ಪ್ರಯತ್ನ, ಸಾಧನೆ ಅಮೋಘವಾದುದು ಎಂದರು. ಶಿವರಾಜ ಅಂಡಗಿ, ರಾಜಶೇಖರ ಯಾಳಗಿ, ಮಹಾದೇವ ಬಡಾ, ಶಿವಾನಂದ ದ್ಯಾಮಗೊಂಡ, ಅಶೋಕ ಸಾಹು ಗೋಗಿ, ಅಯ್ಯಣ್ಣ ನಂದಿ, ಶಿವಪುತ್ರ ಹೂಗಾರ, ರವೀಂದ್ರ ಶಾಬಾದಿ, ನಾಗರಾಜ ಜಮದರಖಾನಿ ಇದ್ದರು. ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಮೋಹನ ಸೀತನೂರ, ನೂತನ ಉಪ ಮಹಾಪೌರ ಮಹೇಶ ಹೊಸೂರಕರ, ಮಹೇಶ ಜೋಶಿ, ಬಿ.ಎಂ. ಪಾಟೀಲ್ ಕಲ್ಲೂರ ಮಾತನಾಡಿದರು.
ಜಗಜೀವನರಾಂ ಪ್ರತಿಮೆ ಸ್ಥಾಪನೆಗೆ ಆಗ್ರಹ
ಚಿಂಚೋಳಿ: ಪಟ್ಟಣದಲ್ಲಿ ಡಾ. ಬಾಬು ಜಗಜೀವನರಾಂ ಪ್ರತಿಮೆ ಸ್ಥಾಪಿಸಬೇಕೆಂದು ಹಿರಿಯ ದಲಿತ ಮುಖಂಡ ಗೋಪಾಲರಾವ ಕಟ್ಟಿಮನಿ ಸರ್ಕಾರಕ್ಕೆ ಅಗ್ರಹಿಸಿದರು. ಪಟ್ಟಣದಲ್ಲಿ ತಾಲೂಕ ಮಾದಿಗ ಸಮಾಜ ವತಿಯಿಂದ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ- ಪ್ರಧಾನ ಮಂತ್ರಿ ಡಾ. ಬಾಬು ಜಗಜೀವನರಾಂ 107ನೇ ಜನ್ಮ ದಿನಾಚರಣೆ ಅಂಗವಾಗಿ ತಾಲೂಕ ಮಾದಿಗ ಸಮಾಜ ವತಿಯಿಂದ ಶನಿವಾರ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಯಾವುದೇ ಕಡೆ ಡಾ. ಬಾಬುಜೀವನರಾಂ ಪ್ರತಿಮೆ ಇಲ್ಲ. ಪಟ್ಟಣದಲ್ಲಿ ಬಹುದಿನಗಳಿಂದ ಪ್ರತಿಮೆ ಸ್ಥಾಪನೆ ಬಗ್ಗೆ ಪಪಂ ಮುಖ್ಯಾಧಿಕಾರಿಗಳಿಗೆ ಅನೇಕ ಸಲ ಮನವಿ ಪತ್ರ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲಿ ಪ್ರತಿಮೆ ಸ್ಥಾಪನೆ ಆಗದಿದ್ದರೆ ತಾಲೂಕಿನ ಜನಪ್ರತಿನಿಧಿಗೆ ಘೇರಾವ್ ಮಾಡಿ ಒತ್ತಾಯಿಸಲಾಗುವುದೆಂದು ಹೇಳಿದರು. ಪಪಂ ಸದಸ್ಯೆ ಫರ್ಜಾನಾಬೇಗಂ ಮಸೂದ್ ಸೌದಾಗರ ಹಸಿರು ಧ್ವಜಾರೋಹಣ ನೆರವೇರಿಸಿದರು. ಶಿವನಾಗಯ್ಯ ಸ್ವಾಮಿ ಡಾ. ಬಾಬು ಜಗಜೀವನರಾಂ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನರಸಪ್ಪಾ ಕಿವನೋರ, ತಾಲೂಕ ಮಾದಿಗ ಸಮಾಜ ಅಧ್ಯಕ್ಷ ಶಿವಕುಮಾರ ಸೇರಿಕಾರ, ಪ್ರದೀಪ ಮೇತ್ರಿ ಮತ್ತಿತರರಿದ್ದರು.
ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಲಹೆ
ಕೆಂಭಾವಿ: ಪ್ರತಿಯೊಬ್ಬ ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಮಾನಸಿಕ ನೆಮ್ಮದಿಯ ಜೊತೆಗೆ ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು ಎಂದು ಮಾಜಿ ಸೈನಿಕ ಮಲ್ಲಣ್ಣ ಮೇಟಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಸಮೀಪದ ಪರಸನಹಳ್ಳಿ ಗ್ರಾಮದ ಸದಾನಂದ ಬಾಬಾ ಮಹಾರಾಜರ ಆಶ್ರಮದಲ್ಲಿ ಕೆಂಭಾವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಏಳು ದಿನಗಳ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಂಜೀವರಾವ ಕುಲಕರ್ಣಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಅಡಿಯಲ್ಲಿ ದೇಶದ ಪದವಿ ಕಾಲೇಜುಗಳಲ್ಲಿ ಎರಡು ಕೋಟಿ ಸ್ವಯಂ ಸೇವಕರನ್ನು ತಯಾರು ಮಾಡಿ ಅವರಲ್ಲಿ ಮಾನವೀಯ ಮೌಲ್ಯಗಳನ್ನು ತುಂಬಬೇಕಗದೆ. ಸಹಕಾರ ಮನೋಭಾವನೆಯ ಜತೆಗೆ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಲು ವಿದ್ಯಾರ್ಥಿಗಳು ಮುಂದೆ ಬರಬೇಕು ಎಂದು ಹೇಳಿದರು. ಪ್ರಾಚಾರ್ಯ ಎಚ್.ಎಂ. ವಗ್ಗಾರ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಹಳ್ಳೆಪ್ಪಗೌಡ ಪೊಲೀಸ್ ಪಾಟೀಲ, ಮಲ್ಲಪ್ಪ ಪೂಜಾರಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಾಲೆ ತೊರೆದ ಮಕ್ಕಳು ಮುಖ್ಯವಾಹಿನಿಗೆ
ಕೆಂಭಾವಿ: ಸುರಪುರ ತಾಲೂಕಿನಲ್ಲಿ 6 ರಿಂದ 14 ವರ್ಷದ 3180 ಮಕ್ಕಳು ಶಾಲೆಯಿಂದ ಹೊರಗುಳಿದ ಹಿನ್ನೆಲೆಯಲ್ಲಿ ಏ.16ರಿಂದ ವಿಶೇಷ ಶಾಲೆಗಳನ್ನು ತೆಗೆದು ಈ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಉದ್ದೆಶಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ವಿ. ಕೆಂಪರಂಗಯ್ಯ ತಿಳಿಸಿದರು. ಅವರು ಗುರುವಾರ ಪಟ್ಟಣದಲ್ಲಿ ನಡೆಯುತ್ತಿರುವ ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ಕೊಟ್ಟು, ಸುದ್ದಿಗಾರರೊಂದಿಗೆ ಮಾತನಾಡಿ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸುವ ಕಾರ್ಯ ಈಗ ತಾಲೂಕಿನಾದ್ಯಂತ ಮುಗಿದಿದೆ. ಅದರಲ್ಲಿ ಇನಿಷ್ಟು ಮಕ್ಕಳು ಪತ್ತೆಯಾಗಿದ್ದು 25 ಮಕ್ಕಳಿಗೆ ಒಂದರಂತೆ 12 ಶಾಲೆಗಳನ್ನು ಅರಂಭಿಸಿ, ಅದರಲ್ಲಿ ಮೂರು ವಸತಿಸಹಿತ ಶಾಲೆಗಳನ್ನು ತೆರೆಯುವ ಉದ್ದೇಶ ಹೊಂದಲಾಗಿದೆ ಎಂದರು. ಕೆಂಭಾವಿ, ನಾರಾಯಣಪೂರ, ಕಕ್ಕೇರಾ ಗ್ರಾಮಗಳಲ್ಲಿ ವಸತಿಸಹಿತ ಶಾಲೆಗಳನ್ನು ನಡೆಸಲಾಗುವುದು. ಈ ಶಾಲೆಗಳಿಗೆ ಗುರುತಿಸಲಾದ ಮಕ್ಕಳನ್ನು ಕಡ್ಡಾಯವಾಗಿ ಮಕ್ಕಳನ್ನು ಪಾಲಕರು ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ ಕಡ್ಡಾಯವಾಗಿ ಶಾಲೆಗೆ ಕಳಿಸಬೇಕು. ಪ್ರತಿ ಮಗುವಿಗೆ ರು. 350 ರಂತೆ ಹಾಗೂ ವಸತಿಸಹಿತ ಇರುವ ಮಕ್ಕಳಿಗೆ ರು. 3300 ಖರ್ಚು ಮಾಡಲಾಗುವುದು ಎಂದು ಹೇಳಿದರು.
ವಿದ್ಯುತ್ ಬಿಲ್ ಪಾವತಿ ಕೇಂದ್ರ ಪ್ರಾರಂಭ
ಸುರಪುರ: ಇಲ್ಲಿಯ ಪಾಲಕಮ್ಮ ದೇವಿ ದೇವಸ್ಥಾನದ ಹತ್ತಿರದ ತಹಸೀಲ್ ರಸ್ತೆಯಲ್ಲಿ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ಸೋಮವಾರದಿಂದ ವಿದ್ಯುತ್ ಬಿಲ್ ಪಾವತಿ ಕೇಂದ್ರ ಪ್ರಾರಂಭಿಸಿದೆ. ಪೂಜೆ ಸಲ್ಲಿಸುವ ಮೂಲಕ ಪಾವತಿ ಕೇಂದ್ರವನ್ನು ಆರಂಭಿಸಲಾಯಿತು. ಜೆಸ್ಕಾಂ ಎಇಇ ಬಸವರಾಜ ಮಾತನಾಡಿ, ನಾಗರಿಕರ ಅನುಕೂಲಕ್ಕಾಗಿ ವಿದ್ಯುತ್ ಬಿಲ್ ಪಾವತಿ ಕೇಂದ್ರ ಸ್ಥಾಪಿಸಲಾಗಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಪುರಸಭೆ ಕಾರ್ಯಾಲಯದ ಮುಂದಿರುವ ಜೆಸ್ಕಾಂ ಕೇಂದ್ರದಲ್ಲಿ ಈ ಮುಂಚೆ ಬಿಲ್ ಪಾವತಿಸಲಾಗುತ್ತಿತ್ತು. ಈಗ ಆ ವ್ಯವಸ್ಥೆ ತೆಗೆಯಲಾಗಿದ್ದು ಗ್ರಾಹಕರು ಕೇವಲ ದೂರುಗಳನ್ನು ಮಾತ್ರ ದಾಖಲಿಸಬಹುದು. ಬಿಲ್ ಪಾವತಿ ಮಾತ್ರ ಈ ಕೇಂದ್ರದಲ್ಲಿ ಮಾಡಬೇಕು ಎಂದು ಸಲಹೆ ನೀಡಿದರು. ಎಇ ಮಹೇಶ, ಅಬ್ದುಲ್ ರಜಾಕ್, ಮಹೇಶ ದಿವಳಗುಡ್ಡ ಮತ್ತು ಜೆಸ್ಕಾಂ ಇಲಾಖೆಯ ಸಿಬ್ಬಂದಿ ಈ ಸಂರ್ದದಲ್ಲಿ ಉಪಸ್ಥಿತರಿದ್ದರು.
ವಿಶ್ವಾರಾಧ್ಯರು ಮನುಕುಲದ ಉದ್ಧಾರಕರು: ಗಂಗಾಧರ ಶ್ರೀ
ಯಾದಗಿರಿ:ವಿಶ್ವಾರಾಧ್ಯರು ನಾಡಿನಲ್ಲಿ ಜಾತಿ, ಮತ, ಪಂಥ ಭೇದವೆನ್ನದೇ ಇಡೀ ಮನುಕುಲವನ್ನು ಏಕಭಾವದಿಂದ ಕಂಡು ಉದ್ಧರಿಸಿದ ಮಹಾಪುರುಷರು ಎಂದು ಅಬ್ಬೆತುಮಕೂರು ಸಿದ್ಧಸಂಸ್ಥಾನದ ಗಂಗಾಧರ ಸ್ವಾಮೀಜಿಗಳು ಹೇಳಿದ್ದಾರೆ. ಸಿದ್ಧಸಂಸ್ಥಾನ ಮಠದಲ್ಲಿ ವಿಶ್ವಾರಾಧ್ಯರ 131ನೇ ತೊಟ್ಟಿಲೋತ್ಸವ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವಿಶ್ವಾರಾಧ್ಯರು ಜೇವರ್ಗಿಯ ಗಂವಾರದ ಹಿರೇಮಠದ ಕರುಳಕುಡಿಯಾಗಿ ಜನಿಸಿ ಕಾಶಿಯಲ್ಲಿ ಪಾಂಡಿತ್ಯವನ್ನು ಗಳಿಸಿ ನಾಡಿನ ತುಂಬೆಲ್ಲಾ ಸಂಚರಿಸಿ ಜನತೆಯ ಭವ-ಬದುಕಿನ ತೊಂದರೆಗಳನ್ನು ದೂರ ಮಾಡಿದರು ಎಂದು ಹೇಳಿದರು. ಅಬ್ಬೆತುಮಕೂರಿನ ಶರಣ ಸಕ್ರೆಪ್ಪಗೌಡರ್ ಭಕ್ತಿಭಾವಕ್ಕೆ ಒಲಿದು ಇಲ್ಲಿಗೆ ಆಗಮಿಸಿ ನೆಲೆಸಿ ಅಬ್ಬೆತುಮಕೂರನ್ನು ಅವಿಮುಕ್ತ ಕ್ಷೇತ್ರವನ್ನಾಗಿಸಿ ಪುಣ್ಯಾತ್ಮರಾಗಿದ್ದಾರೆ ಎಂದು ತಿಳಿಸಿದರು. ಮಠದಲ್ಲಿ ಬೆಳಗ್ಗೆ ವಿಶ್ವಾರಾಧ್ಯರ ಕರ್ತೃಗದ್ದುಗೆಗೆ ರುದ್ರಾಭಿಷೇಕ ನಡೆಯಿತು. ಸಂಜೆ ಪಲ್ಲಕ್ಕಿ ಉತ್ಸವ, ನಂತರ ತೊಟ್ಟಿಲೋತ್ಸವ ನಡೆಯಿತು. ಈಶಾನ್ಯ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಮಲ್ಲಿಕಾರ್ಜುನಯ್ಯ ಹಿರೇಮಠ, ಆಯುಷ್ ಅಧಿಕಾರಿ ಡಾ. ವಂದನಾ ಗಾಳಿ ಮತ್ತಿತರರಿದ್ದರು.
ನೀತಿ ಸಂಹಿತೆ ಉಲ್ಲಂಘನೆ: 1552 ಲೀ. ಮದ್ಯ ವಶ
ಗುಲ್ಬರ್ಗ: ಅಬಕಾರಿ ಮತ್ತು ಪೊಲೀಸ್ ಇಲಾಖೆಗಳಿಂದ ಏಪ್ರಿಲ್ 5ರವರೆಗೆ ಚುನಾವಣಾ ಮಾದರಿ ನೀತಿಸಂಹಿತೆ ಉಲ್ಲಂಘಿಸಿದ ಒಟ್ಟು 82 ಪ್ರಕರಣಗಳನ್ನು ದಾಖಲಿಸಲಾಗಿದ್ದು, 1552.87 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಹಾಗೂ 77 ಜನರ ವಿರುದ್ಧ ಎಫ್ಐಆರ್ ದೂರು ದಾಖಲಿಸಲಾಗಿದೆ. ಏಪ್ರಿಲ್ 5ರಂದು ಅಬಕಾರಿ ಇಲಾಖೆಯಿಂದ 3 ಪ್ರಕರಣ ದಾಖಲಿಸಿದ್ದು, 702 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಈವರೆಗೆ ದಾಖಲಿಸಿದ ಒಟ್ಟು 82 ಪ್ರಕರಣಗಳ ಪೈಕಿ ಅಬಕಾರಿ ಇಲಾಖೆಯಿಂದ ದಾಖಲಿಸಿದ 68 ಪ್ರಕರಣಗಳಿಂದ 1328.05 ಲೀ. ಮದ್ಯ ಹಾಗೂ 3.60 ಕೆ.ಜಿ. ಗಾಂಜಾ ಮತ್ತು ಎರಡು ದ್ವಿಚಕ್ರ ವಾಹನಗಳನ್ನು ಹಾಗೂ ಪೊಲೀಸ್ ಇಲಾಖೆಯಿಂದ ದಾಖಲಿಸಿದ 14 ಪ್ರಕರಣಗಳಿಂದ 222.82 ಲೀಟರ್ ಮದ್ಯ ಹಾಗೂ 1.5 ಕೆ.ಜಿ. ಸಿಎಚ್ ಪೌಡರ್ ವಶಪಡಿಸಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದ್ದಾರೆ.
ವಜ್ಜಲ ತಿಮ್ಮಪ್ಪಯ್ಯ ಶರಣರ ರಥೋತ್ಸವ
ಹುಣಸಗಿ: ಸಮೀಪದ ವಜ್ಜಲ ಗ್ರಾಮದ ಶಿವಶರಣ ತಿಮ್ಮಪ್ಪಯ್ಯ ಮುತ್ಯಾ ಅವರ ಜಾತ್ರಾ ಮಹೋತ್ಸವದ ಅಂಗವಾಗಿ ಸಡಗರ ಸಂಭ್ರಮದಿಂದ ರಥೋತ್ಸವ ನಡೆಯಿತು. ಬೆಳಗ್ಗೆ ಕರ್ತೃ ಗದ್ದುಗೆಗೆ ಪಂಚಾಮೃತ ಅಭೇಷೇಕ ಮಾಡಲಾಯಿತು. ಸುಪ್ರಭಾತದ ನಂತರ ಮೂರ್ತಿ ಮತ್ತು ಕಳಸದ ಗಂಗಾಸ್ನಾನ ಮಹಾಪೂಜೆ ಕಾರ್ಯಕ್ರಮ ನಡೆಯಿತು. ಸಂಜೆ ಕುಂಭೋತ್ಸವದ ನಂತರ ಸಣ್ಣಕೆಪ್ಪ ಮುತ್ಯಾ ಬಂಡೆಪ್ಪನಳ್ಳಿ, ಸಿದ್ರಾಮಪ್ಪ ಮುತ್ಯಾ ನಾವದಗಿ ಇವರ ನೇತೃತ್ವದಲ್ಲಿ ರಥೋತ್ಸವ ಜರುಗಿತು. ಐದು ದಿನಗಳವರೆಗೆ ದೇವಸ್ಥಾನ ಸಮಿತಿಯಿಂದ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಸಂಜೆ ನಡೆದ ರಥೋತ್ಸವದಲ್ಲಿ ಗ್ರಾಮದ ಮುಖಂಡರಾದ ಸಂಗನಗೌಡ ವಜ್ಜಲ್ ಸೇರಿದಂತೆ ಗ್ರಾಮದಭಕ್ತರು ಸೇರಿದಂತೆ ಚನ್ನೂರ, ಕಲ್ಲದೇವನಹಳ್ಳಿ, ಹುಣಸಗಿ, ಹೆಬ್ಬಾಳ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು. ಹುಣಸಗಿ ಸಬ್ಇನ್ಸ್ಪೆಕ್ಟರ್ ಮಂಜುನಾಥ ಸೂಕ್ತ ಪೊಲೀಸ್ ಬಂದೊಬಸ್ತ ಒದಗಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

