ದಿವ್ಯ ನಿರ್ಲಕ್ಷ್ಯ: ತಲೆನೋವಾಯ್ತು ವಿದ್ಯುತ್ ಸಮಸ್ಯೆ
ಹುಣಸಗಿ:ಹುಣಸಗಿಯ ಜೆಸ್ಕಾಂ ಶಾಖಾ ಕಚೇರಿಯ ವ್ಯಾಪ್ತಿಯಲ್ಲಿ ಕನಿಷ್ಠ 60 ಹಳ್ಳಿಗಳು ಮತ್ತು 2 ಸಾವಿರಕ್ಕೂ ಅಧಿಕ ರೈತರ ಪಂಪಸೆಟ್ಗಳನ್ನು ಒಳಗೊಂಡಿದ್ದು, ಸದ್ಯ ಅವರ ಸ್ಥಿತಿ ಪರದಾಡುವಂತಾಗಿದೆ.
ಹುಣಸಗಿಯಲ್ಲಿ 180ಕ್ಕೂ ಹೆಚ್ಚು ವಿದ್ಯುತ್ ಚಾಲಿತ ದೊಡ್ಡ-ಮಧ್ಯಮ-ಸಣ್ಣ ಕೈಗಾರಿಕೆಗಳು ಇವೆ. ಆದರೆ ಪ್ರತಿನಿತ್ಯ ಹುಣಸಗಿ ಪಟ್ಟಣಕ್ಕೆ ಬೇಕಾಗುವ ವಿದ್ಯುತ್ ದೊರೆಯದೆ ಇರುವ ಕಾರಣ ಕೈಗಾರಿಕೆ ವಲಯ ಸತ್ತು ಹೋಗಿ ಕಾರ್ಮೀಕರು ಬೀದಿ ಪಾಲಾಗುತ್ತಿದ್ದಾರೆ. ಇಲ್ಲಿಯ ಕೈಗಾರಿಕೋದ್ಯಮಿಗಳು ಯಾದಗಿರಿಯ ಜೆಸ್ಕಾಂ ಕಾರ್ಯಪಾಲಕ ಅಭಿಯಂತರರಿಗೆ ಈ ಬಗ್ಗೆ ಮಾತನಾಡಿದಾಗ ಸಮರ್ಪಕ ಭರವಸೆ ದೊರೆತಿಲ್ಲ ಎಂಬುದು ಇಲ್ಲಿಯ ವ್ಯಾಪಾರಸ್ಥರ ಮಾತು.
ಸುಮಾರು 2 ರಿಂದ 3 ಕೋಟಿಗಳ ಬಂಡವಾಳ ಹೂಡಿದರೂ ಕೂಡಾ ಜನಪ್ರತಿನಿಧಿಗಳ, ವಿದ್ಯುತ್ ಅಧಿಕಾರಿಗಳ ಅಸಹಕಾರದಿಂದ ಉದ್ದಿಮೆಗಳು ತೀವ್ರ ನಷ್ಟಕ್ಕೆ ಗುರಿಯಾಗುತ್ತಿವೆ. ಸ್ಥಳೀಯ ರಾಜಕೀಯ ಮುಖಂಡರು, ಅದು ಕೈಗಾರಿಕೋದ್ಯಮಿಗಳ ಹಣೆಬರಹ ಎಂದು ಸುಮ್ಮನೆ ಕುಳಿತಿರುವುದು ಅಸಹನೀಯ ಸಂಗತಿಯಾಗಿದೆ.
ಹುಣಸಗಿ ಸುತ್ತಮುತ್ತಲಿನ ಗ್ರಾಮ ಪಂಚಾಯತ್ಗಳಲ್ಲಿ ನಿಗದಿತ ವಿದ್ಯುತ್ ಬಿಲ್ ವಸೂಲಿ ಆಗುತ್ತಿದ್ದರೂ ಕೂಡಾ ಗ್ರಾಮೀಣ ಪ್ರದೇಶಕ್ಕೆ ಪ್ರತಿ ದಿನ ನಾಲ್ಕು ತಾಸು ಸರಿಯಾಗಿ ವಿದ್ಯುತ್ ದೊರೆಯುತ್ತಿಲ್ಲ. ಇದರಿಂದ ಕುಡಿಯುವ ನೀರು, ಹಿಟ್ಟಿನ ಗಿರಣಿ, ಕೃಷಿ ಪಂಪಸೆಟ್ಗಳಿಗೆ ತೊಂದರೆಯಾಗುತ್ತಿದೆ. ಇದರಿಂದ ಲಕ್ಷಾಂತರ ರೂಗಳ ಭತ್ತದ ಫಸಲು ನಾಶವಾಗುವ ಭೀತಿ ಎದುರಾಗಿದೆ. ಲೋಡ್ ಶೆಡ್ಡಿಂಗ್ ಸಮಯದಲ್ಲಿ ಇರುವ ಒಂದೇ ಲೈನ್ಗೆ ಎಲ್ಲರೂ ಮುಗಿ ಬೀಳುವ ಕಾರಣ ಇರುವ ಟಿಸಿಗಳು ಸುಟ್ಟು ಹೋಗುತ್ತಿವೆ. ಸುರಪುರದಿಂದ ಬರಬೇಕಾದಷ್ಟು ವಿದ್ಯುತ್ ಕೂಡಾ ಹರಿದು ಬರುತ್ತಿಲ್ಲ. ಇದಕ್ಕಾಗಿ ಪ್ರತಿಯೊಂದು ಹಳ್ಳಿಗಳಲ್ಲಿ ಲೈನ್ ಬದಲಿಸುವ ಕುರಿತು ಪರಸ್ಪರ ಜಗಳ ಆರಂಭವಾಗತೊಡಗಿದೆ.
ಹುಣಸಗಿ ವ್ಯಾಪ್ತಿಯಲ್ಲಿ ಅಂದಾಜು ಹದಿನೆಂಟು ಸಾವಿರ ವಿದ್ಯುತ್ ಬಳಸುವ ಗ್ರಾಹಕರಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದ್ದು, ಪ್ರತಿ ತಿಂಗಳು 22 ರಿಂದ 25 ಲಕ್ಷದವರೆಗೆ ಗ್ರಾಹಕರಿಂದ ಹಣ ಸಂಗ್ರಹವಾಗುತ್ತಿದೆ. ಈಗಾಗಲೆ ಕಾರ್ಯಾರಂಭ ಮಾಡಿರುವ ಕೊಡೇಕಲ್ ವಿದ್ಯುತ್ ಕೇಂದ್ರದಲ್ಲಿ ಯಾವುದೇ ಒತ್ತಡವಿಲ್ಲ. ಕೋಡೆಕಲ್-ಗೆದ್ದಲಮರಿ ವಿದ್ಯುತ್ ಸಂಪರ್ಕ ನೀಡುವ ಲೈನ್ ಅನ್ನು ಜೆಸ್ಕಾಂ ಯಾದಗಿರಿ ಅಧಿಕಾರಿಗಳು ತೀರಾ ವಿಳಂಬ ಮಾಡುತ್ತಿದ್ದಾರೆ.
ಕೇವಲ ಮೂರು ಕಿ. ಮೀ.ವರೆಗಿನ ಕಂಬ ಎಳೆದು ಸಂಪರ್ಕ ಜೋಡಿಸಲು ಎರಡು ವರ್ಷದಿಂದ ತಡಮಾಡುತ್ತಿರುವುದಕ್ಕೆ ಏನು ಕಾರಣ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಈ ವಿಷಯ ಕೇಳಿದರೆ ಸಂಬಂಧಿಸಿದ ಜಿಪಂ. ಸದಸ್ಯರಾಗಲಿ, ತಾಪಂ ಸದಸ್ಯರಾಗಲಿ ನಮಗೇನೂ ತಿಳಿಯದು ಎಂದು ಕೈ ಚೆಲ್ಲುತ್ತಾರೆ. ಗೆದ್ದಲಮರಿ-ರಾಯನಪಾಳಾ-ಹಣಮಸಾಗರ-ಕೋಡೆಕಲ್, ಲೈನ್ನ್ನು ಬೇಗನೆ ಜೋಡಿಸಿದರೆ ಹುಣಸಗಿ ವಿದ್ಯುತ್ ವಿತರಣಾ ಕೇಂದ್ರದ ಮೇಲಿನ ಒತ್ತಡ ಕಡಿಮೆಯಾಗುವುದು.
ಹಣ ಕಟ್ಟಿದರೂ ವಿದ್ಯುತ್ ಇಲ್ಲ: ಗ್ರಾಹಕರೇನೋ ಸರಿಯಾಗಿ ಹಣ ಪಾವತಿಸುತ್ತಾರೆ. ಇದು ಯಾಕೆ ಆಡಳಿತ ನಡೆಸುವ ಪ್ರಭುಗಳಿಗೆ ತಿಳಿಯುತ್ತಿಲ್ಲ. ನಿರ್ಮಾಣಗೊಳ್ಳುತ್ತಿರುವ 110 ಕೆವಿ ವಿದ್ಯುತ್ ವಿತರಣಾ ಕೇಂದ್ರ ಶೀಘ್ರ ಆರಂಭವಾಗಲಿದೆ ಎಂದು ಅಧಿಕಾರಿಗಳು-ಜನಪ್ರತಿನಿಧಿಗಳು ಜನರ ಮೂಗಿಗೆ ತುಪ್ಪ ಹಚ್ಚುತ್ತಲೇ ನಡೆದಿದ್ದಾರೆ. ಆದರೆ ಎಲ್ಲಿ ವಿಳಂಬವಾಗಿದೆ? ಎಷ್ಟು ವರ್ಷದಿಂದ ವಿಳಂಬವಾಗಿದೆ? ಸೇವೆಗೆ ಎಂದು ದೊರೆಯಬೇಕಿತ್ತು? ಎಂಬುದರ ಕಾಳಜಿ ಯಾರಿಗೂ ಇಲ್ಲ. ಹುಣಸಗಿ ಬೆಳೆಯಲು 110 ಕೇಂದ್ರದ ಬೇಗ ಆರಂಭವಾಗಬೇಕು ಎಂದು ಯಾರಿಗೂ ಅನಿಸದೆ ಇರುವುದು ವಿಷಾದನೀಯ.
ಯಾರು ಆಡಳಿತ ನಡೆಸಿದರೂ ಜಾಣ ಮೌನವಹಿಸುವುದು ಇಲ್ಲಿಯ ವೈಶಿಷ್ಟ್ಯ. ಇನ್ನು ವಿರೋಧ ಪಕ್ಷದಲ್ಲಿ ಇರುವವರು, ಯಾವುದೇ ಹೋರಾಟ ಮಾಡದಿರುವುದು ಅವರ ಜಾಣತನವೋ ನಮ್ಮ ದೌರ್ಭಾಗ್ಯವೋ ಗೊತ್ತಾಗುತ್ತಿಲ್ಲ.
ಈ ಮೊದಲು ಹುಣಸಗಿ ಪಟ್ಟಣಕ್ಕೆ ರಾಜನಕೋಳೂರು ಜಲ ವಿದ್ಯುತ್ ಘಟಕದಿಂದ, ಆಲ್ದಾಳ ಘಟಕದಿಂದ ಪ್ರತಿನಿತ್ಯ ವಿದ್ಯುತ್ ದೊರೆಯುತ್ತಿತ್ತು. ಕಾಲುವೆಯಲ್ಲಿ ನೀರು ಬಂದ್ ಆಗಿರುವ ಕಾರಣ ಜನರ ನೀರಿನ ಬೇಡಿಕೆ, ಬೇಸಿಗೆ ಕಾರಣ ವಿದ್ಯುತ್ ಬೇಡಿಕೆ ಕೂಡಾ ಹೆಚ್ಚಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಎಲೆಕ್ಷನ್ನಲ್ಲಿ ಫುಲ್ ಬ್ಯುಸಿ: ಸದ್ಯ ಭತ್ತಕ್ಕೆ ಕೊನೆ ಹಂತದ ನೀರು ಕಟ್ಟಲು ರೈತರು ತುದಿಗಾಲಲ್ಲಿ ನಿಂತಿರುವುದರಿಂದ ಯಾವಾಗ ಮೂರು ಫೇಸ್ ಕರೆಂಟ್ ಬರುವುದೋ ಆಗ ಎಲ್ಲಾ ರೈತರು ಒಮ್ಮೆಗೆ ಮೋಟಾರ್ ಚಾಲು ಮಾಡುವರು. ಇದರಿಂದ ಲೈನ್ ಟ್ರಿಪ್ ಆಗುವುದು ಹಾಗು ಕಳೆದ ನಲವತ್ತು ವರ್ಷಗಳಿಂದ ಇರುವ ಕೇಬಲ್ ಬದಲಿಸದೆ ಇರುವುದರಿಂದ ಲೈನ್ ತುಂಡಾಗಿ ಬೀಳುವುದು. ಅದನ್ನು ದುರಸ್ತಿ ಮಾಡುವುದರಲ್ಲಿ ಎರಡು ಮೂರು ಗಂಟೆ ಕಳೆಯುವುದು.
ಅಷ್ಟರಲ್ಲಿ ಆ ಭಾಗಕ್ಕೆ ಕೊಡುವ ವಿದ್ಯುತ್ ಸಮಯ ಮುಕ್ತಾಯವಾಗುವುದು. ಇದು ನಿತ್ಯದ ಗೋಳಾಗಿದೆ. ಇದಕ್ಕೆ ಪರಿಹಾರ ನೀಡಬೇಕಾದವರು ಚುನಾವಣೆಯಲ್ಲಿ ಬ್ಯುಸಿ. ಆಡಳಿತ ನಡೆಸುವ ಜನಪ್ರತಿನಿಧಿಗಳು ವಿದ್ಯುತ್ ಅಧಿಕಾರಿಗಳನ್ನು ಕರೆದು ಸರಿಪಡಿಸಲು ಆಗ್ರಹಿಸಿರುವುದಾಗಿ ತಿಳಿಸಿದ್ದಾರೆ.
ಇನ್ನು ವಿರೋಧ ಪಕ್ಷದವರು ಹಿಂದಿನ ವರ್ಷದಲ್ಲಿ ಚುನಾವಣೆ ಇದ್ದರೂ ಕೂಡಾ, ಬೇಸಿಗೆಯಲ್ಲಿ ನಾವು ಕರೆಂಟ್ ಕೊಟ್ಟಿದ್ದೆವು ಎಂಬುದನ್ನು ದಾಖಲೆ ಮುಖಾಂತರ ನೋಡಿ ಎಂದು ಸವಾಲು ಹಾಕುತ್ತಾರೆ. ಹೀಗಾದರೆ ಜನಸಾಮಾನ್ಯನ ಗೋಳು ದೇವರಿಗೆ ಪ್ರೀತಿ ಎನ್ನುವಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

