ಗುಲ್ಬರ್ಗಾ

ಅಪ್ಪಂದಿರ ಪಾರ್ಲಿಮೆಂಟ್ ಪ್ರವೇಶಕ್ಕೆ SONಕಲ್ಪ

Published On :

ಶೇಷಮೂರ್ತಿ ಅವಧಾನಿ
ಕ.ಪ್ರ. ವಾರ್ತೆ    ಗುಲ್ಬರ್ಗ    ಏ.7
ಪುನರಾಯ್ಕೆ ಬಯಸಿ ಗುಲ್ಬರ್ಗ ಕಣದಲ್ಲಿರುವ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಬೀದರ್ ಅಖಾಡದಲ್ಲಿರುವ ಮಾಜಿ ಸಿಎಂ ಧರಂಸಿಂಗ್ ಅವರ ಸಂಸತ್ ಪ್ರವೇಶ ಸುಲಭವಾಗಿಸಲು ಈ ನಾಯಕರ ಮಕ್ಕಳಾದ, ಪ್ರಿಯಾಂಕ್ ಖರ್ಗೆ(ಚಿತ್ತಾಪುರ ಶಾಸಕ), ಹಾಗೂ ಡಾ. ಅಜಯ್ ಸಿಂಗ್(ಜೇವರ್ಗಿ ಶಾಸಕ) ಇಬ್ಬರೂ ಹಗಲಿರುಳು ಪ್ರಚಾರದಲ್ಲಿ ತೊಡಗಿದ್ದಾರೆ.
ಹೀಗಾಗಿ ಗುಲ್ಬರ್ಗ ಹಾಗೂ ಬೀದರ್ ಲೋಕಸಭಾ ಕ್ಷೇತ್ರಗಳಲ್ಲಿ ಅಪ್ಪಂದಿರ ಆಯ್ಕೆಗೆ ಮಕ್ಕಳಾದವರು ಹರಸಾಹಸಪಡುವಂತಾಗಿದೆ. ಸತತ 8 ಬಾರಿ ಅಸೆಂಬ್ಲಿ, 1 ಬಾರಿ ಸಂಸತ್ ಚುನಾವಣೆ ಎದುರಿಸಿ ಗೆದ್ದಿರುವ ಮಾಜಿ ಸಿಎಂ ಧರಂಸಿಂಗ್ ಇದೀಗ ಪುನರಾಯ್ಕೆ ಬಯಸಿ ಬೀದರ್‌ನಲ್ಲಿ ಲೋಕ ಸಮರದಲ್ಲಿ ಕಾಣಿಸಿಕೊಂಡಿದ್ದಾರೆ.
ಚುನಾವಣೆಯಲ್ಲಿ ಸತತ 9 ಬಾರಿ ಶಾಸಕರಾಗಿ, 1 ಬಾರಿ ಸಂಸತ್ ಸದಸ್ಯರಾಗಿ ಗೆದ್ದಿರುವ ಖರ್ಗೆ ಗುಲ್ಬರ್ಗ ಅಖಾಡದಲ್ಲಿ ಪುನರಾಯ್ಕೆ ಬಯಸಿ ಕಣದಲ್ಲಿರುವುದರಿಂದ ಈ ಕಣ ಸರ್ವರ ಗಮನ ಸೆಳೆಯುತ್ತಿದೆ.
ಪುತ್ರರ ಪಟ್ಟಾಭಿಷೇಕ ಯಶಸ್ವಿ: 2010ರಲ್ಲಿ ಗುಲ್ಬರ್ಗ(ದಕ್ಷಿಣ) ಕಂಡ ಅಸೆಂಬ್ಲಿ ಉಪ ಚುನಾವಣೆಯಲ್ಲಿ ಧರಂಸಿಂಗ್ ತಮ್ಮ ಪುತ್ರ ಡಾ. ಅಜಯ್ ಸಿಂಗ್‌ರನ್ನು ಕಣಕ್ಕಿಳಿಸಿದ್ದರಾದರೂ ಆಗ ಡಾ. ಅಜಯ್‌ಗೆ ವಿಜಯವಾಗಲಿಲ್ಲ. 2009ರಲ್ಲಿ ಚಿತ್ತಾಪುರ ಉಪ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ತಮ್ಮ ಪುತ್ರ ಪ್ರಿಯಾಂಕ್‌ರನ್ನು ಕಣಕ್ಕಿಳಿಸಿದ್ದರು. ಅಲ್ಲಿಯೂ ಸೋಲಾಗಿತ್ತು. ಇಬ್ಬರೂ ಚೊಚ್ಚಲ ಪ್ರಯತ್ನದಲ್ಲೇ ಸೋಲುಂಡಿದ್ದರೂ 2013ರ ಚುನಾವಣೆಯಲ್ಲಿ ಕಣಕ್ಕಿಳಿದು ಗೆದ್ದು ಬಂದವರು.
ಆಗ ಮಕ್ಕಳ ಗೆಲವಿಗೆ ತಂದೆಯರಿಬ್ಬರೂ ಬೆಂಬಲವಾಗಿ, ಬಲವಾಗಿ ನಿಂತಿದ್ದಲ್ಲದೆ ಮಕ್ಕಳಿಗೆ ರಾಜಕೀಯದಲ್ಲಿ ಪ್ರತಿಷ್ಠಾಪನೆ ಸಹ ಮಾಡಿ ಚಿಂತೆಯಿಂದ ದೂರವಾಗಿದ್ದರು. ಇದೀಗ ಖರ್ಗೆ ಹಾಗೂ ಧರಂ ಖುದ್ದು ಅಖಾಡಕ್ಕಿಳಿದಿದ್ದರಿಂದ ಶಾಸಕರಾದ ಇವರಿಬ್ಬರೂ ಘಟಾನುಘಟಿ ನಾಯಕರ ಮಕ್ಕಳೇ ಪಿತೃಗಳ ಗೆಲವಿಗೆ ಶ್ರಮಿಸುತ್ತಿದ್ದಾರೆ.
ಪಂಚಾಯ್ತಿ, ಬೂತ್ ಮಟ್ಟದಲ್ಲೂ ನಿಗಾ: ಪ್ರಿಯಾಂಕ್ ಖರ್ಗೆ ತಾವು ಶಾಸಕರಾಗಿರುವ ಚಿತ್ತಾಪುರ ಕ್ಷೇತ್ರದಲ್ಲಂತೂ ಪಂಚಾಯ್ತಿ, ಮತಗಟ್ಟೆವರೆಗೂ ನಿಗಾ ಇಡುತ್ತಿದ್ದಾರೆ. 'ಸಾಹೇಬರ ಚುನಾವಣೆ, ಸಾಧನೆಗಳೇ ಶ್ರೀರಕ್ಷೆ' ಎಂದು ತಮ್ಮ ತಂದೆಯವರ ಪರ ಪ್ರಚಾರಕ್ಕಿಳಿದಿರುವ ಪ್ರಿಯಾಂಕ್, ಈಗಾಗಲೇ ತಾವು ಪ್ರತಿನಿಧಿಸುವ ಕ್ಷೇತ್ರದಾದ್ಯಂತ 1 ಬಾರಿ ಸುತ್ತಾಡಿದ್ದಾರೆ. ಜೊತೆಗೆ ಗುಲ್ಬರ್ಗ ದಕ್ಷಿಣ, ಅಫಜಲ್ಪುರ ಸೇರಿದಂತೆ ಅಕ್ಕಪಕ್ಕದ ಕ್ಷೇತ್ರಗಳಲ್ಲೂ ಸಂಚರಿಸುತ್ತ ತಂದೆಯವರ ಪರ ವಕಾಲತು ಮಾಡುತ್ತಿದ್ದಾರೆ. ತಮ್ಮ ಚಿತ್ತಾಪುರ ಕ್ಷೇತ್ರದ ಜೊತೆಗೆ ಗುಲ್ಬರ್ಗ ಸಂಸತ್ ಕ್ಷೇತ್ರದಡಿಯಲ್ಲಿ ಬರುವ ಎಲ್ಲಾ 8 ಅಸೆಂಬ್ಲಿಗಳಲ್ಲಿ ಹರಡಿರುವ ಪ್ರಮುಖರು, ಹಿರಿಯರನ್ನೆಲ್ಲ ದೂರವಾಣಿ ಸಂಪರ್ಕಕ್ಕಿಟ್ಟುಕೊಂಡಿರುವ ಪ್ರಿಯಾಂಕ್ ಸತತ ಸಂಪರ್ಕದಲ್ಲಿದ್ದಾರೆ.
ಡಾ. ಅಜಯ್ ಓಡಾಟ: ಡಾ. ಅಜಯ್ ಸಿಂಗ್ ಜೇವರ್ಗಿ ಕ್ಷೇತ್ರ ಶಾಸಕರಾಗಿದ್ದರೂ ಸಹ ತಂದೆ ಧರಂಸಿಂಗ್ ಬೀದರ್ ಅಖಾಡದಲ್ಲಿದ್ದ ಕಾರಣ ಕ್ಷೇತ್ರಾಂತರ ಮಾಡುವುದು ಅನಿವಾರ್ಯವಾಗಿದೆ. ಆದಾಗ್ಯೂ ಜೇವರ್ಗಿ ಹಾಗೂ ಬೀದರ್ ಮಧ್ಯೆ ಸತತ ಓಡಾಡಿಕೊಂಡಿರುವ ಡಾ. ಅಜಯ್ ಹಗಲಿರುಳು ಚುನಾವಣೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಧರಂಸಿಂಗ್ ಹಾಗೂ ಖರ್ಗೆಯವರಿಗೆ ಈ ಬಾರಿ ಬಿಜೆಪಿಯೇ ನೇರ ಪ್ರತಿಸ್ಪರ್ಧಿ. ನಮೋ ಅಲೆ, ಬಿಜೆಪಿಯ ಪ್ರಚಾರದ ಅಬ್ಬರದಲ್ಲಿ ಶಾಸಕ ಪುತ್ರರು ಯಾವುದೇ ವಿಧದಲ್ಲಿ ತಮ್ಮ ಪ್ರಚಾರವೂ ಮುಕ್ಕಾಗದಂತೆ ಲಕ್ಷ ವಹಿಸುತ್ತಿದ್ದಾರೆ. ತಮ್ಮ ವಯೋವಾನದ ಯುವ ಕಾರ್ಯಕರ್ತರ ಪಡೆಯೊಂದಿಗೆ ಕ್ಷೇತ್ರ ಸಂಚಾರ ನಿರಂತರ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.