ಲೆಕ್ಕಕ್ಕುಂಟು, ದಾನಕ್ಕಿಲ್ಲ ಹೊಸ ಮತದಾರರು
ಕ.ಪ್ರ. ವಾರ್ತೆ ಗುಲ್ಬರ್ಗ ಏ.16
ಜಿಲ್ಲೆ ಕಂಡ ಲೋಕಸಭೆ ಚುನಾವಣೆಗಳನ್ನೊಮ್ಮೆ ಅವಲೋಕಿಸಿದಾಗ ಪ್ರತಿ ಚುನಾವಣೆಯಲ್ಲಿಯೂ ಮತದಾರರ ಸಂಖ್ಯಾಬಲ ಹಿಗ್ಗಿದರೂ ಮತದಾನ ಪ್ರಮಾಣ ಮಾತ್ರ ಹೆಚ್ಚಾಗಿಲ್ಲ. ಹೀಗಾಗಿ ಯಾದಿಗೆ ಸೇರ್ಪಡೆಯಾಗುವ 'ಹೊಸ ಮತದಾರರು ಇಲ್ಲಿ ಲೆಕ್ಕಕ್ಕುಂಟು, ಮತದಾನಕ್ಕಿಲ್ಲ' ಎಂಬಂತಾಗಿದ್ದಾರೆಯೇ ಎಂಬ ಶಂಕೆ ಮೂಡುವಂತಾಗಿದೆ.
ಲೋಕಸಭೆ ಕ್ಷೇತ್ರಕ್ಕೆ 1952ರಲ್ಲಿ ನಡೆದ ಮೊದಲ ಚುನಾವಣೆಯಿಂದ ಇಲ್ಲಿಯವರೆಗೂ ಮತದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಾದರೂ ಮತದಾನ ಮಾತ್ರ ಶೇ.70ರ ಗಡಿ ತಲುಪಿಲ್ಲ. 1962 ರಲ್ಲಿ ನಡೆದ 3ನೇ ಲೋಕಸಭೆ ಚುನಾವಣೆ ಅವಧಿಯಲ್ಲಿ ಒಟ್ಟು ಮತದಾರರು 4,13,239ರಷ್ಟಿದ್ದರು. 2014ರಲ್ಲಿ ನಡೆಯುತ್ತಿರುವ 16ನೇ ಲೋಕಸಭೆ ಗುಲ್ಬರ್ಗ ಕ್ಷೇತ್ರದ 18ನೇ ಚುನಾವಣೆ(2 ಉಪ ಚುನಾವಣೆ)ಯಲ್ಲಿ ಮತದಾರರ ಸಂಖ್ಯೆ 17,21,166ಕ್ಕೆ ತಲುಪಿದೆ.
ಅಲ್ಲಿಂದ ಇಲ್ಲಿಯವರೆಗೂ ಒಟ್ಟು ಶೇ.316ರಷ್ಟು ಮತದಾರರ ಸಂಖ್ಯೆ ಹೆಚ್ಚಳವಾಗಿದೆ. ಪ್ರತಿ ಲೋಕಸಭೆ ಚುನಾವಣೆಯಲ್ಲೂ ಮತದಾರರ ಪೆಟ್ಟಿಗೆ ಹೊಸದಾಗಿ ಸೇರ್ಪಡೆಯಾಗುವವರ ಸಂಖ್ಯೆ ಹೆಚ್ಚುತ್ತಲೇ ಬಂದಿದೆ. ಆದರೆ ಮತ ಚಲಾವಣೆಯಾದ ಪ್ರಮಾಣವು 1962ರ ಚುನಾವಣೆಯಲ್ಲಿ ಶೇ.52.28ರಷ್ಟಿದ್ದರೆ, 2009ರ ಚುನಾವಣೆಯಲ್ಲಿ ಶೇ.45.20ರಷ್ಟು ಮತದಾನ ದಾಖಲಾಗಿದೆ.
1980ರಲ್ಲಿ ನಡೆದ ಗುಲ್ಬರ್ಗ ಲೋಕಸಭೆ ಕ್ಷೇತ್ರದ ಉಪ ಚುನಾವಣೆ ಸೇರಿ ಇಲ್ಲಿಯವರೆಗೂ ನಡೆದ ಒಟ್ಟು 17 ಬಾರಿ ನಡೆದ ಮತದಾನದಲ್ಲಿ ನಾಲ್ಕು ಬಾರಿ ಶೇ.40ಕ್ಕಿಂತಲೂ, ಆರು ಸಲ ಶೇ.50ಕ್ಕಿಂತಲೂ, ನಾಲ್ಕು ಸಲ ಶೇ.60ಕ್ಕಿಂತಲೂ ಹಾಗೂ ಮೂರು ಬಾರಿ ಶೇ.70ಕ್ಕಿಂತಲೂ ಕಡಿಮೆ ಮತದಾನ ಪ್ರಮಾಣ ದಾಖಲಾಗಿದೆ.
1999ರಲ್ಲಿ ಗುಲ್ಬರ್ಗ ಲೋಕಸಭೆ ಕ್ಷೇತ್ರಕ್ಕೆ ನಡೆದ 13ನೇ ಲೋಕಸಭೆ ಚುನಾವಣೆಯಲ್ಲಿ ಶೇ.64.45ರಷ್ಟು ಮತದಾನವಾಗಿರುವುದೇ ಗರಿಷ್ಠ ದಾಖಲೆ. 1980ರಲ್ಲಿ ಸಂಸದರಾಗಿ ಆಯ್ಕೆಯಾದ ಧರಂಸಿಂಗ್ ಅವರ ರಾಜಿನಾಮೆಯಿಂದಾಗಿ ಅದೇ ವರ್ಷ ನಡೆದ ಉಪ ಚುನಾವಣೆಯಲ್ಲಿ ಶೇ.35.31ರಷ್ಟು ಮತದಾನವಾಯಿತು. 1974ರಲ್ಲಿ ನಡೆದ 6ನೇ ಲೋಕಸಭೆ ಉಪ ಚುನಾವಣೆಯಲ್ಲೂ ಶೇ.35.38ರಷ್ಟು ಕಡಿಮೆ ಪ್ರಮಾಣದ ಮತದಾನವಾಗಿತ್ತು.
ಉಪ ಚುನಾವಣೆ ನಂತರ 1984ರಲ್ಲಿ 8ನೇ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸುವವರ ಪ್ರಮಾಣವು ಗಣನೀಯ ಹೆಚ್ಚಳವಾಯಿತು. ಉಪ ಚುನಾವಣೆಯಲ್ಲಾದ ಶೇಕಡಾವಾರು ಮತದಾನಕ್ಕೆ ಹೋಲಿಸಿದರೆ ಶೇ18.75ರಷ್ಟು ಹೆಚ್ಚಳ ಮತದಾನವಾಗಿ ಶೇ.54.06ಕ್ಕೆ ತಲುಪಿತು. ಲೋಕಸಭೆ ಚುನಾವಣೆಯನ್ನು ಅದರ ಹಿಂದಿನ ಅವಧಿಗೆ ನಡೆದಿದ್ದ ಚುನಾವಣೆಗೆ ಹೋಲಿಸಿದರೆ 1999ರಲ್ಲಿ ದಾಖಲಾದ ಮತದಾನವೇ ಗರಿಷ್ಠ ಪ್ರಮಾಣದಾಗಿದೆ.
1989ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಮತದಾರರ ಸಂಖ್ಯೆ ಒಮ್ಮೆಲೆ ಶೇ.34.77ರಷ್ಟು ಹೆಚ್ಚಳವಾಯಿತು. 1984ರಲ್ಲಿ 7,68,620ರಷ್ಟಿದ್ದ ಮತದಾರರ ಪ್ರಮಾಣವೂ 5 ವರ್ಷದ ನಂತರ 10,35,882ಕ್ಕೆ ತಲುಪಿತು. ಮತದಾನವು 1984ರಲ್ಲಿ ಶೇ.54.06ರಷ್ಠಾದರೆ 1989ರಲ್ಲಿ ಶೇ.61.59 ಆಯಿತು. ಆದರೆ ಮತದಾನ ಪ್ರಮಾಣವು ಕೇವಲ ಶೇ.7.53ರಷ್ಟು ಹೆಚ್ಚಳವಾಯಿತು.
2009ರಲ್ಲಿ ನಡೆದ 15ನೇ ಲೋಕಸಭೆ ಗುಲ್ಬರ್ಗ ಕ್ಷೇತ್ರದ 17ನೇ ಚುನಾವಣೆಯಲ್ಲಿ ಮತದಾರರ ಸಂಖ್ಯೆ 15,43,479ರಷ್ಟಿತ್ತು. ಮತದಾನವಾಗಿದ್ದು ಶೇ.49.20ರಷ್ಟು ಮಾತ್ರ. 2004ರಲ್ಲಾದ ಈ ಕ್ಷೇತ್ರದ 16ನೇ ಲೋಕಸಭೆ ಚುನಾವಣೆಯ ಮತದಾನಕ್ಕೆ ಹೋಲಿಸಿದರೆ 2009ರಲ್ಲಿ ಶೇ.8.37ರಷ್ಟು ಕಡಿಮೆ ಪ್ರಮಾಣದ ಮತದಾನವಾಗಿದೆ. ಪ್ರತಿವರ್ಷವು ಮತದಾರರು ಹೆಚ್ಚಳವಾಗುತ್ತಿದ್ದರೂ ಮತದಾನದ ಪ್ರಮಾಣ ಸಾಕಷ್ಟು ಏರಿಳಿತವಾಗುತ್ತಿರುವುದು ಗಮನಾರ್ಹ.
1989, 1998 ಮತ್ತು 1999ರಲ್ಲಾದ ಲೋಕಸಭೆ ಚುನಾವಣೆಗಳಲ್ಲಿ ಮಾತ್ರ ಕ್ರಮವಾಗಿ ಶೇ.61.59, ಶೇ.62.08 ಮತ್ತು ಶೇ.64.45ರಷ್ಟಾಗಿರುವ ಮತದಾನವು ಹೆಚ್ಚಿನ ಪ್ರಮಾಣದಾಗಿದೆ. 2004 ಮತ್ತು 2009ರಲ್ಲಾದ ಲೋಕಸಭೆ ಚುನಾವಣೆಯ ಎರಡು ಅವಧಿಯಲ್ಲಿ ಮತದಾನ ಕಡಿಮೆಯಾಗುತ್ತಾ ನಡೆದಿದೆ.
ಮತದಾರರನ್ನು ಮತಗಟ್ಟೆಗೆ ಕರೆತರಲು ಮತ ಜಾಗೃತಿಯ ಸ್ವೀಪ್ ಕಾರ್ಯಕ್ರಮ ಈ ಬಾರಿ ಜಿಲ್ಲೆಯಲ್ಲಿ ಒತ್ತುಕೊಟ್ಟು ನಡೆಸಲಾಗಿದೆ. ಈ ಬಾರಿಯಾದರೂ ಮತದಾನ ಪ್ರಮಾಣ ಶೇ.70ರ ಗಡಿ ದಾಟುವುದೇ ಕಾದು ನೋಡಬೇಕಷ್ಟೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

