ಗುಲ್ಬರ್ಗಾ

ರೈತರ ವಂಚಿಸಿದ ರಾಜಕಾರಣಿಗಳಿಗೆ ಧಿಕ್ಕಾರ!

Published On :

ಶೇಷಮೂರ್ತಿ ಅವಧಾನಿ
ಕ.ಪ್ರ. ವಾರ್ತೆ   ಗುಲ್ಬರ್ಗ   ಏ.16
ಕಳೆದ 5 ದಶಕಗಳಿಂದ ನೀರಿನಂತೆ ಹಣ ಹರಿದರೂ ಬಿಸಿಲೂರು ಗುಲ್ಬರ್ಗದ ಬೆಣ್ಣೆತೊರಾ, ಅಮರ್ಜಾ ಮತ್ತು ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆಗಳು ಪೂರ್ಣಗೊಳ್ಳದೆ ತೆವಳುತ್ತಲೇ ಸಾಗುತ್ತಿವೆ. ಈ ಪ್ರದೇಶ ವಿಧಾನಮಂಡಲದ ಉಭಯ ಸದನಗಳಲ್ಲಿ, ದೇಶದ ಸಂಸತ್ತಿನಲ್ಲಿ ಈ ಪ್ರದೇಶ ಪ್ರತಿನಿಧಿಸಿರುವವರ ರೈತರ ಪರ ಕಾಳಜಿಗೆ ಹಿಡಿದ ಕನ್ನಡಿ.
ಈ ಭಾಗದ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಈ ಯೋಜನೆಗಳು ಪೂರ್ಣಗೊಳ್ಳುವುದೆಂದೋ, ತಮ್ಮ ಹೊಲ-ಗದ್ದೆಗಳು ಹಸಿಯಾಗುವುದೆಂದೋ ಎಂಬ ನಿರಾಶೆ ಮೂಡಿದೆ. ಬರಗಾಲ ಈ ನೆಲದ ಕಾಯಂ ಅತಿಥಿ, ನೀರಾವರಿ ಯೋಜನೆಗಳು ಇಲ್ಲಿ ಅದೆಷ್ಟು ಜರೂರು ಅಂದ್ರೆ ಒಟ್ಟು ಜನಸಂಖ್ಯೆಯ ಶೇ.70ರಷ್ಟಿರುವ ರೈತಾಪಿಗಳಿನ್ನೂ ಮಳೆ ಆಧಾರಿತ ಬೇಸಾಯದಲ್ಲೇ ಮುಳುಗಿದ್ದಾರೆ.
ಮಳೆ ಅನಿಶ್ಚಿತತೆ ಅವರನ್ನು ಪ್ರತಿವರ್ಷ ಮುಳುಗಿಸುತ್ತಲೇ ಇದೆ, ಹೀಗಾಗಿ ನೇಗಿಲಯೋಗಿ ಕಷ್ಟದಲ್ಲಿದ್ದಾನೆ. ದುರಂತವೆಂದರೆ 1960-70ರ ದಶಕದಲ್ಲಿಯೇ ಇವೆಲ್ಲ ಯೋಜನೆಗಳು ಶುರುವಾಗಿದ್ದರೂ ಇನ್ನೂ ಪೂರ್ಣಗೊಂಡಿಲ್ಲ.
ಅಪೂರ್ಣ ಯೋಜನೆಗಳ ಸುವರ್ಣ ಸಂಭ್ರಮ: ವರ್ಷ 50 ತುಂಬುತ್ತ ಬಂದರೂ ಯೋಜನೆಗಳೆಲ್ಲವೂ ಅಪೂರ್ಣವಾಗಿಯೇ ಉಳಿದುಕೊಂಡಿವೆ. ಹೀಗಾಗಿ ಜನತೆ ಕುಂಟುತ್ತಿರುವ ಈ ಯೋಜನೆಗಳ ಹಿನ್ನೆಲೆಯಲ್ಲಿ ಅಪೂರ್ಣ ನೀರಾವರಿ ಯೋಜನೆಗಳ ಸುವರ್ಣ ಸಂಭ್ರಮ ಆಚರಿಸಬಹುದು ಎಂದು ಜಿಲ್ಲೆಯ ನೀರಾವರಿಗೆ ಒದಗಿರುವ ದುರ್ಗತಿಯನ್ನು ಲೇವಡಿ ಮಾಡುವಂತಾಗಿದೆ.
ಜಿಲ್ಲೆಯಲ್ಲಿ 1960-70ರ ದಶಕದಲ್ಲಿ ಬರಗಾಲ ಬಿದ್ದಾಗ ನೀರಿನ ಅಭಾವ ಹೋಗಲಾಡಿಸಲು ಅಮರ್ಜಾ, ಬೆಣ್ಣೆತೊರಾ ಹಾಗೂ ಕೆಳದಂಡೆ ಮುಲ್ಲಾಮಾರಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗಿತ್ತು.
ಈ ಯೋಜನೆಗಳು ಸಮಯಕ್ಕೆ ಸರಿಯಾಗಿ ಜಾರಿಗೊಂಡಲ್ಲಿ ನೂರಾರು ಹಳ್ಳಿಗಳ ಬಾಯಾರಿಕೆ ನೀಗಿಸುವುದರ ಜೊತೆಗೆ 1 ಲಕ್ಷ ಎಕರೆ ನೀರಾವರಿಗೊಳಪಡುತ್ತಿತ್ತು. ಇದುವರೆಗೂ ಬಹುಕೋಟಿ ಹಣ ಈ ಮೂರು ಯೋಜನೆಗಳ ಮೇಲೆ ವೆಚ್ಚವಾಗಿದೆ. ಆದರೆ ಇಂದಿಗೂ ಬರೋಬ್ಬರಿ 1 ಎಕರೆ ರೈತರ ಹೊಲಕ್ಕೆ ಸರಿಯಾಗಿ ನೀರು ಒದಗಿಸಲಾಗಿಲ್ಲ ಎಂಬುದೇ ಈ ಯೋಜನೆಗಳ ವಲಯದಲ್ಲಿ 5 ದಶಕಗಳಲ್ಲಿ ಸಾಧಿಸಲಾಗಿರುವ ದೊಡ್ಡ ಸಾಧನೆಯಾಗಿ ಹೊರಹೊಮ್ಮಿದ್ದು ದುರಂತ.
ಕಳಪೆ ಕಾಮಗಾರಿ, ರಾಜಕೀಯ ಇಚ್ಚಾಶಕ್ತಿ ಕೊರತೆ, ಸ್ಥಳೀಯ ಜನಪ್ರತಿನಿಧಿಗಳ ಬೇಕಾಬಿಟ್ಟಿತನ, ರಾಜ್ಯ ಸರ್ಕಾರದ ಅನಾದರಗಳೇ ಮೊದಲಾದಂತಹ ಸಂಗತಿಗಳಿಂದಾಗಿ ತೆವಳುತ್ತ ಸಾಗಿರುವ ಈ ಮೂರು ಯೋಜನೆಗಳು ಎಂದೂ ಮುಗಿಯದ ನೀರಾವರಿ ಯೋಜನೆಗಳಾಗಿ ಜಿಲ್ಲೆಯ ರೈತರನ್ನು ತಿಕ್ಕಿಮುಕ್ಕಲಾರಂಭಿಸಿವೆ.
1972ರಲ್ಲಿ ರೂಪ ಪಡೆದಿದ್ದ ಬೆಣ್ಣೆತೊರಾ, ಅಮರ್ಜಾ ಹಾಗೂ ಕೆಳದಂಡೆ ಮುಲ್ಲಾಮಾರಿ ಅಂದಾಜು ವೆಚ್ಚ ಕೇವಲ 22 ಕೋಟಿ. ಆದರೀಗ ಈ ವೆಚ್ಚ 914.31 ಕೋಟಿಗೆ ಹೆಚ್ಚಿದೆ. ಈ ಪರಿಯಲ್ಲಿ ಹಣ ಖರ್ಚು ಮಾಡಿ ಈ ಮೂರು ಯೋಜನೆಗಳನ್ನು ಪೂರ್ಣಗೊಳಿಸುವುದೇ ರಾಜ್ಯ ಸರ್ಕಾರಕ್ಕೆ ಸವಾಲಾಗಿದೆ.
ಸರ್ಕಾರಕ್ಕೇ ಸವಾಲ್: ಬರಗಾಲ ಪೀಡಿತ ಹಾಗೂ ಹಿಂದುಳಿದ ಗುಲ್ಬರ್ಗ ಜಿಲ್ಲೆಯಲ್ಲಿ ಒಂದು ವೇಳೆ ಈ ಮೂರು ಯೋಜನೆಗಳು ಸಮಯಕ್ಕೆ ಸರಿಯಾಗಿ ಅನುಷ್ಠಾನಗೊಂಡಿದ್ದಲ್ಲಿ ಬಡ ರೈತರ ಹೊಲ-ಗದ್ದೆಗಳಲ್ಲಿ ಹಸಿರು ಕ್ರಾಂತಿಯಾಗುತ್ತಿತ್ತು. ಜಿಲ್ಲೆಯ ಸಾಮಾಜಿಕ, ಆರ್ಥಿಕ ನೋಟವೇ ಬೇರೆಯಾಗುತ್ತಿತ್ತು.
ಆದರೇನು ಮಾಡುವುದು, ಈ ಮೂರೂ ಯೋಜನೆಗಳು ಬರಗಾಲ ಪೀಡಿತ ನೆಲಯ ಬಡ ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿವೆ. ಭ್ರಷ್ಟಾಚಾರ, ಜನಪ್ರತಿನಿಧಿಗಳ ಮೂಗು ತೂರಿಸುವಿಕೆಯಿಂದಾಗಿ ಈ ಯೋಜನೆಗಳು ಎಂದಿಗೂ ಪೂರ್ಣಗೊಳ್ಳದಂತಹ ದುರವಸ್ಥೆ ತಲುಪಿರುವುದು ಈ ನೆಲದ ರೈತರ ಪಾಲಿನ ಬಹುದೊಡ್ಡ ದುರಂತ.
ಈ ಭಾಗದವರೇ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವಗಿರಿಯಲ್ಲಿದ್ದರೂ ಈ ಯೋಜನೆಗಳನ್ನು ಮಾಡಿ ಮುಗಿಸುವ ನಿಟ್ಟಿನಲ್ಲಿ ಆಸಕ್ತಿ ತೋರದೆ ಮೌನವಾಗಿದ್ದುದರ ಕೆಟ್ಟ ಪರಿಣಾಮವೇ ಇಂದಿನ ರೈತರ ಗೋಳು ಎನ್ನಬಹುದೇನೋ...?
ಕಾಲುವೆ ಸರಿಪಡಿಸಿದರೆ ಅಣೆಕಟ್ಟೆಯಲ್ಲಿ ಬಿರುಕು ಕಾಣುವ, ಅಣೆಕಟ್ಟೆ ದುರಸ್ತಿ ಕಂಡರೆ ಹೊಲಗಾಲುವೆ ಹರಿದು ಹೋಗುತ್ತಿರುವ ಈ ಮೂರು ಯೋಜನೆಗಳು ಅದ್ಯಾವಾಗ ಪೂರ್ಣಗೊಂಡು ಬರದ ನಾಡಿನ ರೈತರ ಭಾಗ್ಯದ ಬಾಗಿಲು ತೆರೆಯುವುದೋ, ನಮ್ಮ ಜನನಾಯಕರಿಗೆ ರೈತರಿಗೂ ಹಸನಾದ ಬದುಕು ನೀಡಬೇಕು ಎಂಬ ಜ್ಞಾನೋದಯ ಅದ್ಯಾವಾಗ ಆಗುವುದೋ, ದೇವರೇ ಬಲ್ಲ.


'ಭೀಮಾ' ಮೇಲೇಳುತ್ತಲೇ ಇಲ್ಲ
ಬರಗಾಲ ಪೀಡತ ಅಫಜಲ್ಪುರ ತಾಲೂಕಿನ ಭೀಮಾ ಏತ ನೀರಾವರಿ ಯೋಜನೆ ಪೂರ್ಣಗೊಂಡಲ್ಲಿ 60 ಸಾವಿರ ಎಕರೆ ಭೂಮಿ ನೀರಾವರಿಗೊಳಪಡುತ್ತದೆ. 265 ಕೋಟಿ ವೆಚ್ಚದ ಈ ಯೋಜನೆ ನೆಲ ಬಿಟ್ಟು ಮೇಲೇಳುತ್ತಲೇ ಇಲ್ಲ. ಈ ಯೋಜನೆ ಪೂರ್ಣಗೊಳಿಸಲು ಇನ್ನೂ 322 ಕೋಟಿ ಹಣದ ಅಗತ್ಯವಿದೆ ಎಂದು ಇತ್ತೀಚೆಗಷ್ಟೇ ಅಂದಾಜು ಮಾಡಲಾಗಿದೆ. ಈ ಯೋಜನೆಯಲ್ಲಿಯೂ ಹಗರಣಗಳ ಸದ್ದಾಗುತ್ತಿದೆ. ಹೀಗಾಗಿ ಇನ್ನೆಷ್ಟು ಕೋಟಿ ಹಣ ಈ ಯೋಜನೆಯಡಿಯಲ್ಲಿ ಗುಳುಂ ಆಗುವುದೋ ಭಗವಂತನೇ ಬಲ್ಲ!



ಬೆಣ್ಣೆತೊರಾ ಸುತ್ತಮುತ್ತ
ಚಿತ್ತಾಪುರ ತಾಲೂಕಿನ 49,978 ಎಕರೆಗೆ ನೀರೊದಗಿಸುವ ಬೆಣ್ಣೆತೊರಾ ಯೋಜನೆಯ ಅಂದಾಜು ವೆಚ್ಚ ಆರಂಭದಲ್ಲಿ ಕೇವಲ 8.31 ಕೋಟಿ. ಈಗಾಗಲೇ ಈ ಯೋಜನೆ ಮೇಲೆ 376.23 ಕೋಟಿ ವೆಚ್ಚ ಮಾಡಲಾಗಿದೆ. ಯೋಜನೆ ಪೂರ್ಣಗೊಳಿಸಲು ಇನ್ನೂ 40 ಕೋಟಿ ಬೇಕು.
ಅಮರ್ಜಾ ಯೋಜನೆ
ಆಳಂದ ತಾಲೂಕಿನ 21,990 ಎಕರೆ ನೀರಾವರಿ ಸೌಕರ್ಯ ಒದಗಿಸುವ ಅಮರ್ಜಾದ ಅಂದಾಜು ಮೊತ್ತ ಆರಂಭದಲ್ಲಿ 5.75 ಕೋಟಿಯಾಗಿತ್ತು. ಆದರೀಗ ಈ ಯೋಜನೆ ಮೇಲೆ ಈಗಾಗಲೇ 213.63 ಕೋಟಿ ವಿನಿಯೋಗಿಸಲಾಗಿದೆ. ಯೋಜನೆ ಪೂರ್ಣಗೊಳ್ಳಲು ಇನ್ನೂ 64 ಕೋಟಿ ಅಗತ್ಯವಿದೆ.
ಕೆಳದಂಡೆ ಮುಲ್ಲಾಮಾರಿ
ಚಿಂಚೋಳಿ ತಾಲೂಕಿನ ಬರ ಪೀಡಿತ 23,993 ಎಕರೆಗೆ ನೀರೊದಗಿಸುವ ಸಾಮರ್ಥ್ಯದ ಕೆಳದಂಡೆ ಮುಲ್ಲಾಮಾರಿ ಯೋಜನೆಯ ಅಂದಾಜು ವೆಚ್ಚ 7.40 ಕೋಟಿಯಾಗಿತ್ತು. ಈಗ ಯೋಜನೆಯ ಮೇಲೆ ಅದಾಗಲೇ 200.45 ಕೋಟಿ ವೆಚ್ಚವಾಗಿದೆ. ಪೂರ್ಣಗೊಳ್ಳಲು ಇನ್ನೂ 20 ಕೋಟಿಯಷ್ಟಾದರೂ ಹಣ ಬೇಕು.


ಹರಿದು ಬಂದ ಪ್ರತಿಕ್ರಿಯೆ

ಎಚ್ಕೆಡಿಬಿಗೆ 1000 ಕೋಟಿಗೂ ಹೆಚ್ಚು ಹಣ ಬಂದರೂ ಮೂಲ ಸೌಕರ್ಯ ಯಾಕೆ ಕಲ್ಪಿಸಲಿಲ್ಲ. ಜನನಾಯಕರ ಧೋರಣೆಗಳು ಎಂತಹವು, ಜನಸಾಮಾನ್ಯರ ಅಭಿಮತ ಏನು ಎಂಬಿತ್ಯಾದಿ ವಿಷಯಗಳ ಮೇಲೆ 'ಕನ್ನಡಪ್ರಭ' ಹೈ-ಕ ಹೈರಾಣದ ನೋಟಗಳನ್ನೆಲ್ಲ ಚಿತ್ರಿಸಿ ಕೊಟ್ಟಿದೆ. ಲೋಕ ಸಮರದ ಈ ಸಂದರ್ಭದಲ್ಲಿ ಜನಮನದಲ್ಲಿ ಹೊಸ ಚರ್ಚೆಗೆ ಹೂರಣ ಒದಗಿಸಿದಂತಾಗಿದೆ. ಹಿಂದುಳಿದವರ ಬದುಕು- ಬವಣೆಯ ವಾಸ್ತವ ಚಿತ್ರಣ ತೆರೆದಿಡುವ ಪ್ರಯತ್ನವನ್ನು ಪತ್ರಿಕೆ ಮಾಡಿದೆ. ಜನರು ತಮ್ಮ ನಿಲುವು ರೂಪಿಸಿಕೊಳ್ಳಲು ಇದು ಪೂರಕ.
ಚ ಭಾಸ್ಕರರಾವ್ ಮಾಡಬೂಳ, ಹೋರಾಟಗಾರರು- ಚಿಂತಕರು, ಶಹಾಪುರ


ಅಭಿವೃದ್ಧಿಗೆಂದು ಹೈ- ಕ ಜಿಲ್ಲೆಗಳಿಗೆ ಬಹುಕೋಟಿ ರುಪಾಯಿ ಬಂದರೂ ಅದು ಹೋಯಿತೆಲ್ಲಿ, ಕಾಣೆಯಾಯಿತು ಯಾಕೆ ಈ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಮೂಡಿಬಂದ ವರದಿಗಳು ಹೈ.ಕ. ಹಿಂದುಳಿದಿರುವಿಕೆ ರೋಗಕ್ಕೆ ಕನ್ನಡಿ ಹಿಡಿದಿವೆ. ಜನನಾಯಕರಂತೂ 117 ಹಳ್ಳಿಗಳಿಗೆ ಬಸ್ಸಿಲ್ಲ ಎಂಬ ವಿಚಾರ ಓದಿ ನಾಚಿಕೆಪಟ್ಟುಕೊಳ್ಳಬೇಕಷ್ಟೆ. ಹೈ- ಕ ಹೈರಾಣ... ಕ್ಕೆ 'ಕನ್ನಡಪ್ರಭ' ಕನ್ನಡಿ ಹಿಡಿದಿದೆ. ಜನನಾಯಕರು ಇನ್ನಾದರೂ ಜನಪರವಾಗಲಿ.
ಚ ಶಿವರಾಜ ಅಂಡಗಿ, ಗುಲ್ಬರ್ಗ


ಮೂಲ ಸೌಕರ್ಯ ವಿಚಾರದಲ್ಲಿ ಗುಲ್ಬರ್ಗ, ಯಾದಗಿರಿ ಸೇರಿದಂತೆ ಹೈ.ಕ. 6 ಜಿಲ್ಲೆಗಳು ತುಂಬ ಹಿಂದುಳಿದಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಅಭಿವೃದ್ಧಿ ಮಾಡಿದ್ದೇವೆ ಎನ್ನುವ ಬೊಗಳೆದಾಸಯ್ಯರ(ರಾಜಕಾರಣಿಗಳ) ಬಂಡವಾಳ ಬಹಿರಂಗ ಮಾಡಿದ ವರದಿಗಳು ಅರ್ಥಪೂರ್ಣ. ರಾಜಕೀಯದಲ್ಲಿದ್ದವರು 'ಕನ್ನಡಪ್ರಭ'ವನ್ನು ಒಮ್ಮೆ ಓದಿ ಆತ್ಮಾವಲೋಕನಕ್ಕೆ ಮುಂದಾಗಬೇಕಷ್ಟೆ. ದೊಡ್ಡ ಮಾತುಗಳನ್ನಾಡುವುದಕ್ಕಿಂತ ಜನರಿಗೆ ಅಗತ್ಯವಿರುವ ಸಣ್ಣಪುಟ್ಟ ಮೂಲ ಸೌಕರ್ಯ ವಿಚಾರದಲ್ಲಿಯೂ ನಾಯಕರು ಕಾಳಜಿ ತೋರಲಿ.
ಚ ಗುರುರಾಜ ಚಂಡ್ರಕಿ, ಚಂಡ್ರಕಿ ಗ್ರಾಮ, ಯಾದಗಿರಿ ಜಿಲ್ಲೆ


ರೇಲ್ವೆ ಯೋಜನೆ ಜಾರಿಗೆ ಚಳವಳಿಗಳು ನಡೆಯುತ್ತಿಲ್ಲ. ರಾಜಕೀಯ ನಾಯಕರಲ್ಲಿ ನಾಯಕತ್ವದ ಗುಣದ ಕೊರತೆ ಮತ್ತು ಜನರಲ್ಲಿ ಅಭಿವೃದ್ಧಿ ಬೇಕೆಂಬ ಮನೋಭಾವದ ಅಭಾವದಿಂದಾಗಿ ಉದ್ದೇಶಿತ ಯೋಜನೆಗಳು ಕಾರ್ಯಗತಗೊಳ್ಳುವುದು ತೀರಾ ವಿಳಂಬವಾಗುತ್ತಿದೆ. ಮುನಿರಾಬಾದ್- ಮಹೆಬೂಬ್ ನಗರ ರೈಲು ಮಾರ್ಗ ನಿರ್ಮಾಣದ ವಿಚಾರ ಪ್ರಚಾರಕ್ಕೆ ಬಳಕೆಯಾಗುತ್ತಿದೆಯೇ ವಿನಾ ರಾಜಕೀಯ ಕ್ಷೇತ್ರದಲ್ಲಿ ಚರ್ಚೆಗೆ ವಿಚಾರವಾಗುತ್ತಿಲ್ಲ ಎಂಬ ಕೊರಗಿದೆ.
ಚ ರಾಘವೇಂದ್ರ ಕುಷ್ಟಗಿ,ಹೈ.ಕ. ಹೋರಾಟಗಾರ, ರಾಯಚೂರು


ರಾಯಚೂರು ಮತ್ತು ಕೊಪ್ಪಳ ಭಾಗದ ಸಂಸದರು ಉದ್ದೇಶಿತ ರೇಲ್ವೆ ಯೋಜನೆಯ ಜಾರಿ ನಿಟ್ಟಿನಲ್ಲಿ ಬೀರುತ್ತಿರುವ ಪ್ರಭಾವ ಯಾತಕ್ಕೂ ಸಾಲದು. ಸಾಮಾಜಿಕವಾಗಿ ಹೋರಾಟದ ಅವಶ್ಯಕವಿದೆ. ಎರಡೂ ಕ್ಷೇತ್ರಗಳ ವ್ಯಾಪ್ತಿಯ ಜನತೆ ಮತ್ತು ಸಂಸದರು ಒಗ್ಗೂಡಿ, ಬೃಹತ್ ಹೋರಾಟ ರೂಪಿಸಿದರೆ ಮಾತ್ರ ಯೋಜನೆ ಕಾರ್ಯಗತವಾಗುವ ಸಾಧ್ಯತೆ ಹೆಚ್ಚು.
ಚ ಹನುಮನಗೌಡ ಬೆಳಗುರ್ಕಿ, ರೈತ ಮುಖಂಡರು, ರಾಯಚೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.