20 ನಿಮಿಷ 20 ಸುದ್ದಿ
ತಿರುಮಲಾಪುರ ಅಭಿವೃದ್ಧಿಗೆ 1.73 ಕೋಟಿ: ಜಾಧವ್
ಚಿಂಚೋಳಿ: ತಾಲೂಕಿನ ತಿರುಮಲಾಪುರಕ್ಕೆ ರಸ್ತೆ ಅಭಿವೃದ್ಧಿಗೊಳಿಸಲು ಸರ್ಕಾರದಿಂದ ಈಗಾಗಲೇ 1.73 ಕೋಟಿ ಮಂಜೂರುಗೊಳಿಸಲಾಗಿದೆ ಎಂದು ಶಾಸಕ ಡಾ. ಉಮೇಶ ಜಾಧವ್ ಹೇಳಿದರು. ತಾಲೂಕಿನ ತಿರುಮಲಾಪುರ ಗ್ರಾಮಕ್ಕೆ ಶನಿವಾರ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಮಾಲೋಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂದ್ರಂಪಳ್ಳಿ ನೀರಾವರಿ ಯೋಜನೆಯ ಕಾಡಾ ದಿಂದ ಕೊಳ್ಳುರು-ಪಟಪಳ್ಳಿ-ಎಂಪಳ್ಳಿ-ಶಿಕಾರ ಮೋತಕಪಳ್ಳಿ-ನಾಗಾಇದಲಾಯಿ ಗ್ರಾಮಗಳಿಗೆ ಉತ್ತಮ ರಸ್ತೆ ನಿರ್ಮಾಣಕ್ಕೆ 1.73 ಕೋಟಿ ನೀಡಲಾಗಿದೆ. ಟೆಂಡರ್ ಸಹ ಕರೆಯಲಾಗಿದ್ದು ಸದ್ಯದಲ್ಲಿಯೇ ಕಾಮಗಾರಿ ಪ್ರಾರಂಭಿಸಬೇಕಾಗಿದೆ. ತಿರುಮಲಾಪುರ ಗ್ರಾಮಕ್ಕೆ ಬೇಕಾಗುವ ಮೂಲ ಸೌಕರ್ಯಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದೆಂದು ಗ್ರಾಮಸ್ಥರಿಗೆ ಭರವಸೆ ನೀಡಲಾಗಿದೆ ಎಂದು ಶಾಸಕರು ತಿಳಿಸಿದರು. ಕೆಲವೇ ದಿನಗಳಲ್ಲಿ ತಾಲೂಕಿನಲ್ಲಿ ಕಾಂಗ್ರೆಸ್ ಸರ್ಕಾರದಿಂದ 10 ತಿಂಗಳಲ್ಲಿ ಅಭಿವೃದ್ಧಿಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ವಿರೋಧ ಪಕ್ಷಗಳ ಮುಖಂಡರಿಗೆ ತಿಳಿಸಲಾಗುವುದೆಂದು ಜಾಧವ್ ತಿರುಗೇಟು ನೀಡಿದ್ದಾರೆ. ಬಸವರಾಜ ಮಲಿ, ಬಾರಿ. ಲಕ್ಷ್ಮಣ ಆವಂಟಿ, ರಮೇಶ ಇದ್ದರು.
ಜಾಧವ್ ಅಭಿವೃದ್ಧಿ ಕಾರ್ಯ
ಬಹಿರಂಗ ಮಾಡಲಿ: ವಲ್ಯಾಪುರೆ
ಚಿಂಚೋಳಿ: ತಾಲೂಕಿನ ನಾಗಾಇದಲಾಯಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ತಿರುಮಲಾಪುರ ಗ್ರಾಮದಲ್ಲಿ ಶಾಸಕ ಡಾ. ಉಮೇಶ ಜಾಧವ್ 10 ತಿಂಗಳಲ್ಲಿ ಕೈಕೊಂಡ ಅಭಿವೃದ್ಧಿ ಕೆಲಸಗಳ ಬಗ್ಗೆ ಬಹಿರಂಗಗೊಳಿಸಬೇಕೆಂದು ಮಾಜಿ ಸಚಿವ, ಬಿಜೆಪಿ ಮುಖಂಡ ಸುನಿಲ್ ವಲ್ಯಾಪುರೆ ಒತ್ತಾಯಿಸಿದ್ದಾರೆ. ತಾಲೂಕಿನ ತಿರುಮಲಾಪುರ ಗ್ರಾಮಕ್ಕೆ ಬಿಜೆಪಿ ಸರ್ಕಾರದಿಂದ ಕಳೆದ 5 ವರ್ಷಗಳಲ್ಲಿ ಬಡ ರೈತರಿಗೆ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊಳವೆ, ಸಿಮೆಂಟ್ ರಸ್ತೆ ನಿರ್ಮಾಣ, ಏತ ನೀರಾವರಿ, ಹನುಮಾನ ದೇವಾಲಯಕ್ಕೆ ಜೀರ್ಣೋದ್ಧಾರ, ಕೆಳಮಟ್ಟದ ಸೇತುವ ನಿರ್ಮಾಣ ಸೇರಿದಂತೆ ಹಲವು ಮೂಲ ಸೌಕರ್ಯಗಳನ್ನು ನೀಡುವುದಕ್ಕಾಗಿ ಶಾಸಕರ ಅನುದಾನಕ್ಕೆ ಸರ್ಕಾರ ಇನ್ನಿತರ ಯೋಜನೆಗಳಿಂದ ಒಟ್ಟು 28.52 ಲಕ್ಷ ನೀಡಲಾಗಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ನಿಂದ ಕಳೆದ 10 ತಿಂಗಳಲ್ಲಿ ಒಂದು ಅಭಿವೃದ್ಧಿ ಕೆಲಸಗಳು ಮಂಜೂರುಗೊಳಿಸಿಲ್ಲವೆಂದು ತಿರುಮಲಾಪುರ ಗ್ರಾಮಸ್ಥರು ಬೀದರ್ ಲೋಕಸಭೆ ಚುನಾವಣೆಗೆ ಬಹಿಷ್ಕಾರ ಹಾಕಿದ್ದರು ಎಂದು ಮಾಜಿ ಸಚಿವ ಸುನೀಲ್ ವಲ್ಯಾಪುರೆ ತಿಳಿಸಿದ್ದಾರೆ. ಇದರ ಬಗ್ಗೆ ಶಾಸಕ ಡಾ. ಉಮೇಶ ಜಾಧವ್ ಆತ್ಮಾವಲೋಕನ ಮಾಡಿಕೊಳ್ಳಬೇಕು ಮತ್ತು ಹಿಂದುಳಿದ ತಾಲೂಕವನ್ನು ಅಭಿವೃದ್ಧಿಪಡಿಸುವತ್ತ ಹೆಚ್ಚಿನ ಗಮನ ಹರಿಸಬೇಕೆಂದು ವಲ್ಯಾಪುರೆ ಆಗ್ರಹಪಡಿಸಿದ್ದಾರೆ.
ಯಾದಗಿರಿ: ಗಾಳಿ-ಮಳೆಗೆ ಬತ್ತದ ಬೆಳೆ ಹಾನಿ
ಯಾದಗಿರಿ: ಗುರುವಾರ ಸಂಜೆ ಬೀಸಿದ ರಭಸದ ಗಾಳಿ, ಮಳೆಗೆ ಸಮೀಪದ ಭೀಮಾನದಿ ತೀರದ ಅನೇಕ ರೈತರು ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತ ನೆಲಕಚ್ಚಿದೆ. ಕೊಯ್ಲಿಗೆ ಬಂದ ಬತ್ತದ ಬೆಳೆಗೆ ಹಾನಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ. ಈ ಬಿರುಗಾಳಿ ಸಹಿತ ಮಳೆಗೆ, ಕೊಯ್ಲಿಗೆ ಬಂದಿರುವ ಭತ್ತದ ಬೆಲೆ ಪೂರ್ಣ ನೆಲಕಚ್ಚಿದೆ. ತೆನೆ ಹೊತ್ತು ನಿಂತಿದ್ದ ಭತ್ತದ ಬೆಳೆ ಹಾನಿಯಾಗಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ರೈತರು ಹೇಳುತ್ತಿದ್ದಾರೆ. ಮೂರು-ನಾಲ್ಕು ದಿನ ಕಳೆದರೆ ಕೊಯ್ಲು ಮಾಡಿ, ರಾಶಿಯ ಸಿದ್ದತೆಯಲ್ಲಿ ರೈತರಿದ್ದರು. ಆದರೆ ಗುರುವಾರ ಬೀಸಿದ ಗಾಳಿ, ಮಳೆಗೆ ಬೆಳೆ ಮಣ್ಣು ಪಾಲಾಗಿದೆ ಎಂದು ರೈತರ ಅಳಲು ತೋಡಿಕೊಳ್ಳುತ್ತಿದ್ದಾರೆ. ಯಾದಗಿರಿ-ಶಹಾಪುರ ರಾಜ್ಯ ಹೆದ್ದಾರಿಯ ಗುರಸುಣಿಗಿ ಕ್ರಾಸ್ನಿಂದ ಯಾದಗಿರಿವರೆಗೆ ಹೆದ್ದಾರಿ ತುಂಬಾ ಮುಳ್ಳು ಬೇಲಿ ಬಿದ್ದಿತ್ತು. ಇದ್ದರಿಂದ ಹೆದ್ದಾರಿ ಮೇಲೆ ಸಂಚರಿಸುವ ವಾಹನಗಳಿಗೆ ಆಡಚಣೆ ಉಂಟಾಯಿತು.
ಶುಭ ಶುಕ್ರವಾರ: ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆ
ಯಾದಗಿರಿ: ಕ್ರೈಸ್ತ ಬಾಂಧವರು ಚರ್ಚ್ಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸುವ ಮೂಲಕ ಶುಭ ಶುಕ್ರವಾರವನ್ನು ಆಚರಿಸಿದರು. ಏಸುಕ್ರಿಸ್ತನನ್ನು ಶಿಲುಬೆಗೇರಿಸಿದ ದಿನವನ್ನು ಶುಕ್ರವಾರ ಆಚರಣೆ ಮಾಡಲಾಯಿತು. ಇಲ್ಲಿನ ಅಂಬೇಡ್ಕರ್ ನಗರದಲ್ಲಿರುವ ಮೆಥೋಡಿಸ್ಟ್ ಚರ್ಚ್ ಮತ್ತು ಕ್ಯಾಥೋಲಿಕ್ ಚರ್ಚ್ಗಳಲ್ಲಿ ಕ್ರಿಶ್ಚಿಯಿನ್ ಸಮುದಾಯದವರು ಈ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಏಸುಕ್ರಿಸ್ತನನ್ನು ಹಿಂಸಿಸಿ, ಅವಮಾನಿಸಿ, ಕೈಕಾಲುಗಳಿಗೆ ಮೊಳೆ ಜಡಿದು ಶಾಂತಿದೂತನ್ನು ಶಿಲುಬೆಗೇರಿಸಿದ ದಿನವನ್ನು ಕ್ರೈಸ್ತ ಬಾಂಧವರು ಶುಭ ಶುಕ್ರವಾರವೆಂದು ಆಚರಣೆ ಮಾಡುವುದು ವಾಡಿಕೆಯಾಗಿದೆ. ಈ ದಿನವನ್ನು ಕ್ರೈಸ್ತರು ಬೆಳಗಿನಿಂದ ಸಂಜೆಯವರೆಗೂ ಉಪವಾಸವಿರುತ್ತಾರೆ. ಪ್ರಾರ್ಥನೆ ಸಲ್ಲಿಸಿದ ಬಳಿಕವೇ ಅವರು ಅಹಾರ ಸೇವಿಸುತ್ತಾರೆ. ಬಹುತೇಕ ಕ್ರೈಸ್ತ ಬಾಂಧವರು ನಗರದ ಚರ್ಚ್ಗಳಿಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು. ಹೀಗಾಗಿ ಆ ಪ್ರದೇಶಗಳಲ್ಲಿ ಜನದಟ್ಟಣೆ ಹೆಚ್ಚಾಗಿರುವುದು ಕಂಡುಬಂದಿತು. ಏಸುವಿಗೆ ವಿಶೇಷ ಪೂಜೆಗಳನ್ನು ಸಲ್ಲಿಸುವ ಮೂಲಕ ಕ್ರೈಸ್ತ ಬಾಂಧವರು ಭಕ್ತಿ ಸಮರ್ಪಣೆ ಮಾಡಿದರು.
ಬೀದಿ ನಾಯಿ ಹಾವಳಿ ತಡೆಗೆ ಆಗ್ರಹ
ಯಾದಗಿರಿ: ಶಹಾಪುರ ತಾಲ್ಲೂಕಿನ ದೋರನಹಳ್ಳಿ ಗ್ರಾಮಸ್ಥರು ಬೀದಿನಾಯಿಗಳ ಭಯದ ನೆರಳಿನಲ್ಲಿ ಓಡಾಡುವಂತಾಗಿದೆ. ಈ ಪಿಡುಗಿಗೆ ಕೂಡಲೇ ಕಡಿವಾಣ ಹಾಕಬೇಕು ಎಂದು ಗ್ರಾಮದ ನಿವಾಸಿಗಳು ಆಗ್ರಹಿಸಿದ್ದಾರೆ.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಎಲ್ಲೆಂದರಲ್ಲಿ ನಾಯಿಗಳ ಹಾವಳಿಯಿಂದ ಓಡಾಡಲು ತೊಂದರೆಯಾಗುತ್ತಿದೆ. ನಾಯಿಗಳ ಹಾವಳಿ ನಿಯಂತ್ರಿಸಬೇಕಾದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ವಲ್ಪವೂ ಸ್ವಂದಿಸುತ್ತಿಲ್ಲ ಎಂಬುದು ಜನರ ಅಳಲು. ಹಗಲು ರಾತ್ರಿ ಬೀದಿಗಳಲ್ಲಿ ಓಡಾಡುವುದು ಸಮಸ್ಯೆಯಾಗಿದೆ. ವೃದ್ಧರು-ಮಕ್ಕಳು ನಾಯಿಗಳ ಹಾವಳಿಯಿಂದ ರಸ್ತೆಯಲ್ಲಿ ತೊಂದರೆ ಆನುಭವಿಸುತ್ತಿದ್ದಾರೆ. ನಾಯಿಗಳ ಭೀತಿಯಲ್ಲಿಯೇ ಜನರು ಓಡಾಡುತ್ತಿದ್ದಾರೆ. ಕೂಡಲೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಗ್ರಾಪಂ ನಿಷ್ಕಾಳಜಿ ವಹಿಸಿದರೆ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಗುಲ್ಬರ್ಗ: ಪಾರ್ವತಿಗೆ ಕೂಡಿ ಬಂದ ಕಂಕಣಬಲ
ಗುಲ್ಬರ್ಗ: ನಗರದ ಆಳಂದ ರಸ್ತೆಯಲ್ಲಿರುವ ರಾಜ್ಯ ಮಹಿಳಾ ನಿಲಯದ ಪಾರ್ವತಿ ಅವರ ವಿವಾಹ ಜೇವರ್ಗಿಯ ಆನಂದರಾವ ಕುಲಕರ್ಣಿ ಅವರೊಂದಿಗೆ ಏ.21ರಂದು ಬೆಳಗ್ಗೆ 11.30 ಗಂಟೆಗೆ ಮಹಿಳಾ ನಿಲಯದಲ್ಲಿ ನಡೆಯಲಿದೆ. ಯಾದಗಿರಿ ಜಿಲ್ಲೆಯ ಸೈದಾಪುರ ಗ್ರಾಮದ ಈರನಾಥ್ ಅವರ ಮಗಳು ಪಾರ್ವತಿ 19 ವರ್ಷದವಳಿದ್ದು, 2011ರ ಸೆ.26ರಂದು ಮಹಿಳಾ ನಿಲಯದಲ್ಲಿ ದಾಖಲಾಗಿದ್ದಳು. ಯಾವುದೇ ಶಿಕ್ಷಣ ಪಡೆಯದ ಪಾರ್ವತಿಯ ನಡತೆ ಸಂಸ್ಥೆಯಲ್ಲಿ ಉತ್ತಮವಾಗಿದೆ. ಜೇವರ್ಗಿಯ ಹಣಮಂತರಾವ ಕುಲಕರ್ಣಿ ಅವರ ಮಗ ಆನಂದರಾವ ಕುಲಕರ್ಣಿ 32 ವರ್ಷ ವಯೋವುತಿ ಹೊಂದಿದ್ದು, ಎಸ್ಎಸ್ಎಲ್ಸಿಯವರೆಗೆ ವಿದ್ಯಾಭ್ಯಾಸ ಮಾಡಿ ಹೊಲಿಗೆ ವೃತ್ತಿಯಲ್ಲಿ ನಿರತರಾಗಿದ್ದಾರೆ. ವಾರ್ಷಿಕ 96,000 ಆದಾಯ ಪಡೆಯುತ್ತಿದ್ದಾರೆ. ಪಾರ್ವತಿಯು ಸ್ವಇಚ್ಛೆಯಿಂದ ಕುಲಕರ್ಣಿಯನ್ನು ಮದುವೆಯಾಗುವುದಾಗಿ ಒಪ್ಪಿಕೊಂಡಿದ್ದರಿಂದ ಅವಳ ಮುಂದಿನ ಭವಿಷ್ಯ ಹಾಗೂ ಪುನರ್ವಸತಿ ಹಿತದೃಷ್ಟಿಯಿಂದ ಈ ಮದುವೆ ನಿಶ್ಚಯಿಸಲಾಗಿದೆ ಎಂದು ರಾಜ್ಯ ಮಹಿಳಾ ನಿಲಯದ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುಲ್ಬರ್ಗ ನಗರದಲ್ಲಿ ನಾಳೆ ವಿದ್ಯುತ್ ವ್ಯತ್ಯಯ
ಗುಲ್ಬರ್ಗ: 110 ಕೆ.ವಿ. ಯುನಿರ್ವಸಿಟಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಹೊಸ ಗೇರ್ ಅಳವಡಿಸುವ ತುರ್ತು ಕೆಲಸ ಕೈಗೊಂಡ ಪ್ರಯುಕ್ತ ಏ.21ರಂದು ಬೆ.10ರಿಂದ ಸಂಜೆ 7ರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಜೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಗಣೇಶ ನಗರ ಫೀಡರ್- ಸಿದ್ದೇಶ್ವರ ನಗರ, ವೀರೇಂದ್ರ ಪಾಟೀಲ್ ಜಿಡಿಎ 1, 2, 3, ಮತ್ತು 4ನೇ ಹಂತ, ಬಾರೆ ಹಿಲ್ಸ್, ಬಂದೇನವಾಜ್ ಕಾಲೋನಿ, ಉಸ್ಮಾನಿಯ ಕಾಲೋನಿ, ಎಂ.ಬಿ. ನಗರ, ಅಂದೋಲಾ ಆಸ್ಪತ್ರೆ, ಜಾಗೃತಿ ಕಾಲೋನಿ, ಗಣೇಶ ನಗರ, ಆದರ್ಶ ನಗರ, ಮನಸೂಬದಾರ ಲೇಔಟ್. ಸಿದ್ದೇಶ್ವರ ಫೀಡರ್- ಸಮಾಧಾನ ಹೋಟೆಲ್, ಬಿಲಗುಂದಿ ಲೇಔಟ್, ಬಡೇಪುರ, ಗುಬ್ಬಿ ಕಾಲೋನಿ, ಸುಂದರ ನಗರ, ಬಾಪು ನಗರ, ಸಂತ್ರಾಸವಾಡಿ, ಜಿಡಿಎ, ಓಂ ನಗರ, ಸ್ವಸ್ತಿಕ್ ನಗರ, ಕೆಎಚ್ಬಿ ಕಾಲೋನಿ 3ನೇ ಹಂತ, ಪ್ರಗತಿ ಕಾಲೋನಿ, ಲುಕ್ಮೆನ್ ಕಾಲೇಜ, ಆರ್ಟಿಒ ಕಚೇರಿ ಹಿಂದುಗಡೆ, ಭರತನಗರ ತಾಂಡಾ, ಪಾರ್ಲೆ ಐಸ್ ಫ್ಯಾಕ್ಟರಿ, ಬಾಪುಗೌಡ ದರ್ಶನಾಪುರ ಲೇಔಟ್ನ ಸಾರ್ವಜನಿಕರು ಸಹಕರಿಸಬೇಕೆಂದು ಕೋರಲಾಗಿದೆ.
ಅಂಬೇಡ್ಕರ್ ತತ್ವಾದರ್ಶ ಆದರಣೀಯ: ಬನ್ನಿಕಟ್ಟಿ
ಚಿತ್ತಾಪುರ: ಅಂಬೇಡ್ಕರ್ ಶ್ರೀಮಂತರು, ಬಡವರು ಎನ್ನದೆ ಎಲ್ಲರೂ ಸಮಾಜದಲ್ಲಿ ಸಮಾನವಾಗಿ ಬದಕಲು ತಮ್ಮ ಜೀವನವನ್ನೇ ಮುಡುಪಾಗಿಟ್ಟು ಸಂವಿಧಾನ ಜಾರಿಗೆ ಹಗಲಿರುಳು ಶ್ರಮಿಸಿದರು ಎಂದು ಬಿಇಒ ಶಿವಶರಣಪ್ಪ ಬನ್ನಿಕಟ್ಟಿ ಹೇಳಿದರು. ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಅಂಬೇಡ್ಕರ್ 123ನೇ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮಾಡಬೂಳ ಠಾಣಿ ಪಿಎಸ್ಐ ಚಂದ್ರಶೇಖರ ತಗಡಿ, ವಿಜಯಕುಮಾರ ಲೋಡ್ಡೆನೋರ, ಶಿವಣ್ಣ ಸಾತನೂರಕರ, ರಾಜಣ್ಣ ಹುಂಡೇಕಾರ, ಜೆಸ್ಕಾಂ ಜೆಇ ಸೂರ್ಯಕಾಂತ ಕಟ್ಟಿಮನಿ ಶಿವರಾಜ ನಾಟೀಕಾರ ಇದ್ದರು. ನಿವೃತ್ತ ಶಿಕ್ಷಕ ವೆಂಕಪ್ಪ ಕಲ್ಮರಿ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಬೆಣ್ಣೂರಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ ವೈಶಾಲಿ ಸಿಂಧು ಸ್ವಾಗತ ಗೀತೆ ಹಾಡಿದರು. ನಾಗರಾಜ ಓಂಕಾರ ನಿರೂಪಿಸಿದರು. ಮಲ್ಲಪ್ಪ ಮರಗೋಳ ವಂದಿಸಿದರು.
ಹೊರಗುತ್ತಿಗೆ ನೌಕರರ ವೇತನ ಪಾವತಿಸಿ: ಮನವಿ
ಗುಲ್ಬರ್ಗ: ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರ ರಾಣಿ ಚನ್ನಮ್ಮ ವಸತಿ ನಿಲಯಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ವೇತನ ಪಾವತಿಸಲು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಕರ್ನಾಟಕ ರಾಜ್ಯ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ ಮನವಿ ಮಾಡಿದೆ. ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚನ್ನಮ್ಮ ವಸತಿ ನಿಲಯಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಕಳೆದ ಮೂರು ನಾಲ್ಕು ತಿಂಗಳಿಂದ ವೇತನ ಪಾವತಿಸಿಲ್ಲ. ಪ್ರಾಚಾರ್ಯ ಈ ನೌಕರರ ವೇತನದ ಬಿಲ್ಗಳನ್ನು ಮಾಡಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಕಾರ್ಯಾಲಯಕ್ಕೆ ಕೊಟ್ಟು ತಿಂಗಳಾದರೂ ಸಹಿ ಆಗಿಲ್ಲ. ಹೀಗಾಗಿ ನೌಕರರು ವೇತನ ಸಿಗದೇ ಕಷ್ಟದಲ್ಲಿ ಜೀವನ ಸಾಗಿಸುತಿದ್ದಾರೆ. ಬಾಕಿ ಇರುವ ವೇತನ ಪಾವತ್ತಿಸುವ ಜೊತೆಯಲ್ಲಿ ಕಳೆದ 6 ವರ್ಷಗಳಿಂದ ವೇತನದಲ್ಲಿ ಕಡಿತಗೊಂಡ ಇಪಿಎಫ್ ಹಣ ಜಮಾ ಮಾಡಿದ ಬಗ್ಗೆ ಪ್ರತಿ ನೌಕರರಿಗೆ ಮಾಹಿತಿ ಕೊಡಬೇಕೆಂದು ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಕೋರಿದ್ದಾರೆ. ಆಳಂದ ತಾಲೂಕ ಕಾರ್ಯದರ್ಸಿ ಮೋಹನ ಕಟ್ಟಿಮನಿ, ತಾಲೂಕಾಧ್ಯಕ್ಷ ಬಾಬುಸಿಂದಗಿ, ಮಹಾಂತ ಅವರಳ್ಳಿ, ಭಾಗಣ್ಣ ದೇವನೂರ ಇದ್ದರು.
23ರಿಂದ ದಿಗ್ಗಾಂವ ಶಂಭುಲಿಂಗೇಶ್ವರ ಜಾತ್ರೆ
ಚಿತ್ತಾಪುರ: ತಾಲೂಕಿನ ದಿಗ್ಗಾಂವ ಗ್ರಾಮದ ಶಂಭುಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಕಾರ್ಯಕ್ರಮ ಏ.23ರಿಂದ 25ರ ವರೆಗೆ ನಡೆಯಲಿದೆ. ದಿಗ್ಗಾಂವ ಪಂಚಗೃಹ ಹೀರೇಮಠದ ಪೀಠಾಧಿಪತಿ ಸಿದ್ಧವೀರ ಶಿವಾಚಾರ್ಯರು, ಮಲ್ಲಯ್ಯ ಸ್ವಾಮಿ ಸ್ಥಾವರಮಠ ಸಾನ್ನಿಧ್ಯದಲ್ಲಿ ಕಾರ್ಯಕ್ರಮಗಳು ಜರುಗಲಿವೆ. ಬುಧವಾರ ಸಾಯಂಕಾಲ 5 ಗಂಟೆಗೆ ಮಾಲಿಗೌಡರ ಮನೆಯಿಂದ ನಂದಿಕೋಲು, ವಿಶ್ವಕರ್ಮ ಮನೆಯಿಂದ ಪಲ್ಲಕ್ಕಿ ಉತ್ಸವ, ಪುರವಂತರೊಂದಿಗೆ ಪೂರ್ಣ ರಾತ್ರಿ ದೇವಾಲಯ ಸುತ್ತುವಿಕೆ. ಬೆಳಗ್ಗೆ 7 ಗಂಟೆಗೆ ಅಗ್ನಿ ತುಳಿಯುವಿಕೆ ಕಾರ್ಯಕ್ರಮ, ಗುರುವಾರ ಸಾಯಂಕಾಲ 4 ಗಂಟೆಗೆ ಮಾಲಿಗೌಡರ ಮನೆಯಿಂದ ಕುಂಭಮೇಳ, ಪೊಲೀಸ್ಗೌಡರ ಮನೆಯಿಂದ ತೇರಿನ ಕಳಸ, ಅಣ್ಣೆಪ್ಪ ಗೌಡರ ಮನೆಯಿಂದ ಮಾರ್ಯೆಮರ್ತಪ ದೀವಟಿಗೆಯೊಂದಿಗೆ ದೇವಾಲಯಕ್ಕೆ ತಲುಪುವುದು. ಸಾಯಂಕಾಲ 6 ಗಂಟೆಗೆ ರಥೋತ್ಸವ, ರಾತ್ರಿ 8.30 ಗಂಟೆಗೆ ಶ್ರೀಗಳ ಆಶೀರ್ವಚನ, ಚಿಂಚನಸೂರನ ದೇವಿಂದ್ರಪ್ಪ ಸಜ್ಜನ, ಜಮಖಂಡಿಯ ಶಾಮಲಾಬಾಯಿ ಅವರಿಂದ ಗೀಗೀ ಪದ, ಭಜನೆ ಜರುಗುವುದು. ಶುಕ್ರವಾರ ಕುಸ್ತಿ ಕಾರ್ಯಕ್ರಮಗಳು ನಡೆಯುವವು ಎಂದು ದೇವಸ್ಥಾನ ಸಮಿತಿಯು ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

