ಕಾಲುವೆ ತಡೆಗೋಡೆ ತೆರವು ಮಾಡಿದ್ರೆ ಜೋಕೆ!
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಹುಣಸಗಿ ಏ.20
ನಾರಾಯಣಪುರ ಎಡದಂಡೆ ನಾಲೆಯ ವಿತರಣಾ ಕಾಲುವೆಗಳಿಗೆ ನೀರು ಹರಿಸಲು ಮುಖ್ಯ ಕಾಲುವೆಯಲ್ಲಿ ಹಾಕಲಾಗಿದ್ದ ತಡೆಗೋಡೆ ತೆರವಿಗೆ ಕೆಬಿಜೆಎನ್ನೆಲ್ ಮುಂದಾಗಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಎಡದಂಡೆಯ 1ನೇ ಕಿ.ಮೀ.ನಿಂದ 12ನೇ ಕಿ.ಮೀ.ವರೆಗಿನ ವ್ಯಾಪ್ತಿಯಲ್ಲಿ ಐದು ವಿತರಣಾ ಕಾಲುವೆಗಳಿಗೆ ನೀರು ಹರಿಸಲು ಮೊದಲು ಅವೈಜ್ಞಾನಿಕವಾಗಿ ಮೇಲ್ಮಟ್ಟದಲ್ಲಿ ಗೇಟ್ಗಳನ್ನು ಅಳವಡಿಸಲಾಗಿತ್ತು. ನಂತರ ದಶಕದ ಹಿಂದೆ ಮುಖ್ಯ ಕಾಲುವೆಯಲ್ಲಿ ಸಣ್ಣ ಪ್ರಮಾಣದ ತಡೆಗೋಡೆ ನಿರ್ಮಿಸಿ ವಿತರಣಾ ಕಾಲುವೆಗಳಿಗೆ ನೀರು ಹರಿಸಲು ಅನುಕೂಲ ಮಾಡಿಕೊಡಲಾಗಿತ್ತು. ಇದೀಗ ಮತ್ತೆ ತಡೆಗೋಡೆ ತೆರವಿಗೆ ಅಧಿಕಾರಿಗಳು ಮುಂದಾಗಿದ್ದು, ಇದರಿಂದ ಹತ್ತಾರು ಗ್ರಾಮಗಳ ಜಮೀನು ನೀರಿನಿಂದ ವಂಚಿತವಾಗಲಿವೆ.
ಕಾಲುವೆಯ 1ರಿಂದ 12 ಕಿಮೀ ವ್ಯಾಪ್ತಿಯಲ್ಲಿ ಒಟ್ಟು 18 ವಿತರಣಾ ಕಾಲುವೆಗಳಿವೆ. ಇವುಗಳ ಮೂಲಕ 1.25 ಲಕ್ಷ ಎಕರೆಗೆ ನೀರಾವರಿ ಒದಗಿಸಲಾಗುತ್ತಿದೆ. ಇದರಲ್ಲಿ ವಿತರಣಾ ಕಾಲುವೆ ಸಂಖ್ಯೆ 1, 4, 5, 8, 12ನೇ ವಿತರಣಾ ಕಾಲುವೆ ಗೇಟ್ಗಳನ್ನು ಕಾಲುವೆ ತಳದಿಂದ ಮೇಲ್ಮಟ್ಟದಲ್ಲಿ ಅಳವಡಿಸಲಾಗಿದೆ. ಈ ಕಾಲುವೆಯಲ್ಲಿ 10 ಸಾವಿರ ಕ್ಯುಸೆಕ್ ನೀರು ಹರಿಸಿದಾಗ ಮಾತ್ರ ನೀರಿನ ಸಮಸ್ಯೆಯಿರಲಿಲ್ಲ.
ಮುಖ್ಯ ಕಾಲುವೆಯಲ್ಲಿ ನೀರಿನ ಮಟ್ಟ ಕುಸಿದ ಕಾರಣ ವಿತರಣಾ ಕಾಲುವೆಗಳಿಗೆ ನೀರು ಹರಿಸಲೆಂದೇ ಸುಮಾರು 10 ವರ್ಷಗಳ ಹಿಂದೆಯೇ ಸಣ್ಣ ಪ್ರಮಾಣದ ತಡೆಗೋಡೆ ಕಟ್ಟಲಾಗಿತ್ತು. ಇದರಿಂದ ಕಾಲುವೆ ಅಚ್ಚುಕಟ್ಟು ವ್ಯಾಪ್ತಿಗೆ ಸರಿಯಾದ ಪ್ರಮಾಣದಲ್ಲಿ ನೀರು ಸರಬರಾಜು ಆಗುತ್ತಿತ್ತು.
ಹತ್ತಾರು ಗ್ರಾಮಗಳಿಗೆ ತೊಂದರೆ: ಆದರೆ ಇತ್ತೀಚೆಗೆ ಕೃಷ್ಣಾ ಭಾಗ್ಯ ಜಲ ನಿಗಮದ ಹಿರಿಯ ಅಧಿಕಾರಿಗಳು ತಡೆಗೋಡೆ ತೆಗೆಯಲು ಹೇಳಿದ್ದಾರೆಂದು ತಿಳಿದು ಬಂದಿದೆ. ಒಂದು ವೇಳೆ ತೆರವು ಮಾಡಿದರೆ ಮೇಲ್ಮಟ್ಟದ ವಿತರಣಾ ಕಾಲುವೆಗಳ ಗ್ರಾಮಗಳಾದ ಕಾಮನಟಗಿ, ಕನಗಂಡನಹಳ್ಳಿ, ಕಕ್ಕೇರಿ, ಮಂಜಲಾಪುರ, ಅರಕೇರಾ(ಜೆ), ಯಡಹಳ್ಳಿ, ಕಚಕ್ನೂರು, ಬರದೇನಾಳ, ಜೋಗುಂಡಭಾವಿ ಗ್ರಾಮಗಳು ಕಾಲುವೆ ನೀರಿನಿಂದ ವಂಚಿತವಾಗಲಿವೆ.
ರೈತರು ಆಗ್ರಹಿಸಿದ್ದರು..: ಮುಖ್ಯಕಾಲುವೆ ಕೊನೆ ಭಾಗದ ಸಿಂದಗಿ, ಭೀಮರಾಯನಗುಡಿ ಭಾಗದ ಜಮೀನುಗಳಿಗೆ ನೀರಿನ ಬೇಡಿಕೆ ಇಲ್ಲದಿರುವಾಗ ಅಥವಾ ಮುಖ್ಯಕಾಲುವೆಯಲ್ಲಿ 4 ಸಾವಿರ ಕ್ಯುಸೆಕ್ಗಿಂತ ಕಡಿಮೆ ನೀರು ಹರಿದಾಗ ಈ ಗ್ರಾಮಗಳ ಜಮೀನಿಗೆ ನೀರು ಹರಿಯುವುದಿಲ್ಲ. ಇದೇ ಕಾರಣಕ್ಕಾಗಿ ಮುಖ್ಯ ಕಾಲುವೆಗೆ ತಡೆಗೋಡೆಯನ್ನು ರೈತರ ಆಗ್ರಹಕ್ಕೆ ಪರಿಹಾರವಾಗಿ ನಿರ್ಮಾಣ ಮಾಡಲಾಗಿತ್ತು. ಆದರೆ ಈಗ ಮತ್ತೆ ನೀರಾವರಿ ಹಿರಿಯ ಅಧಿಕಾರಿಗಳು ತಡೆಗೋಡೆ ತೆರವುಗೊಳಿಸಲು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಇದು ರೈತರ ಆತಂಕಕ್ಕೆ ಕಾರಣವಾಗಿದೆ.
ಹಾಗೊಂದು ವೇಳೆ ತಡೆಗೋಡೆ ತೆರವು ಮಾಡಲು ಮುಂದಾದರೆ, ಮೇಲ್ಮಟ್ಟದಲ್ಲಿ ಗೇಟ್ ಹೊಂದಿದ ಗ್ರಾಮಗಳ ರೈತರಿಗೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ನೀರು ಬಳಕೆದಾರ ಸಹಕಾರ ಸಂಘಗಳ ಒಕ್ಕೂಟದ ರಂಗಪ್ಪ ಢಂಗಿ, ನಿಂಗನಗೌಡ ಗುಳಬಾಳ ಇತರರು ನಿಗಮದ ಹಿರಿಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಭವಿಷ್ಯದಲ್ಲಿ ನಿಗಮವು ತಡೆಗೋಡೆ ತೆರವು ಕಾರ್ಯಾಚರಣೆಗೆ ಮುಂದಾದರೆ ತೀವ್ರ ಪ್ರತಿಭಟನೆ ಎದುರಿಸಬೇಕಾಗುವುದು ಎಂದೂ ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

