ಕೈ ಗೆಲವಿಗೆ ಕಲಂ 371 ಅಸ್ತ್ರ ಊರುಗೋಲಾದೀತೆ?
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಫೆ.1
ಕರ್ನಾಟಕ ಅಸೆಂಬ್ಲಿಯಲ್ಲಾಯ್ತು, ಇದೀಗ ಲೋಕಸಭೆ ಚುನಾವಣೆಯಲ್ಲಿಯೂ ಕಲಂ 371 ಬಳಸಿ ಹೈ-ಕ ಮೊದಲ್ಗೊಂಡು ಕರ್ನಾಟಕದಲ್ಲಿ ಕಮಾಲ್ ಮಾಡುವ ಇರಾದೆ ಕಾಂಗ್ರೆಸ್ ಪಕ್ಷ ಹೊಂದಿದೆ ಎಂಬುದಕ್ಕೆ ಫೆ.1ರ ಗುಲ್ಬರ್ಗ ಸೋನಿಯಾ ಬೃಹತ್ ಬಹಿರಂಗ ಸಭೆ ಕನ್ನಡಿ ಹಿಡಿಯಿತು.
ಮೊದಲೆಲ್ಲಾ ಚುನಾವಣೆಗಳಲ್ಲಿ ಎಲ್ಲ ಪಕ್ಷಗಳ ಪ್ರಚಾರದ ಸರಕಾಗಿರುತ್ತಿದ್ದ ಸಂವಿಧಾನದ ಕಲಂ 371(ಜೆ) ಬೇಡಿಕೆ ಈಡೇರಿದೆ. ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದಿಂದ ತಿರಸ್ಕೃತಗೊಂಡಿದ್ದ ಬೇಡಿಕೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಪುರಸ್ಕರಿಸಿದೆ ಎಂದು ಇದೀಗ ಕಲಂ 371(ಜೆ) ಅನುಷ್ಠಾನದ ಸಂದರ್ಭವನ್ನೇ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿರುವ ಕಾಂಗ್ರೆಸ್ ಪಕ್ಷ ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಮುಂದಾಗಿರುವುದರ ಫಲವೇ ಗುಲ್ಬರ್ಗ ಸಮಾವೇಶ ಎನ್ನಲಾಗುತ್ತಿದೆ.
ಬಳಸಿಕೊಳ್ಳುವ ತವಕ: ಕಲಂ 371 ಮಸೂದೆ ಲೋಕಸಭೆಯಲ್ಲಿ ಮಂಡನೆಯಾಯ್ತು ಎಂದು 2013ರ ಅಸೆಂಬ್ಲಿ ಚುನಾವಣೆಯಲ್ಲೇ ಹೈ-ಕ ಸೀಮೆಯಲ್ಲಿ ಜನಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಕೈ ಪಕ್ಷಕ್ಕೆ ಕಲಂ 371(ಜೆ) ಪರಿಪೂರ್ಣವಾಗಿ ಅನುಷ್ಠಾನಗೊಂಡಿರುವ ಸಂದರ್ಭವನ್ನೇ ಲೋಕಸಭೆ ಚುನಾವಣೆಯಲ್ಲಿಯೂ ರಾಜಕೀಯವಾಗಿ ತನಗನುಕೂಲವಾಗುವಂತೆ ಬಳಸಿಕೊಳ್ಳುವ ತವಕ. ಈ ಮಾತಿಗೆ ಸಾಕ್ಷಿಯಾಗಿ ನಿಂತಿದ್ದು ಫೆ.1ರ ಗುಲ್ಬರ್ಗ ಸೋನಿಯಾ ಸಮಾವೇಶ.
ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಅಭಿನಂದಿಸಲು ಸಂಘಟಿಸಲಾಗಿದ್ದ ಸಮಾವೇಶಕ್ಕೆ ಹೈ-ಕ 6 ಜಿಲ್ಲೆಗಳ ಮೂಲೆ ಮೂಲೆಯಿಂದ ಜನ ಸೇರುವಂತೆ ಪಕ್ಷ ವ್ಯವಸ್ಥೆ ಮಾಡಿತ್ತು. ವಾಹನ- ಖಾಸಗಿ ಬಸ್ಸುಗಳಲ್ಲಿ ಜನ ಬಂದು ಸೇರಿದ್ದು ನೋಡಿದವರೆಲ್ಲರೂ ಗುಲ್ಬರ್ಗ ಸಮಾವೇಶದಿಂದಲೇ ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆ ಮತಭೇಟೆಗೆ ಮುನ್ನುಡಿ ಬರೆಯಿತು ಎಂದರು.
ಲೋಕಸಭೆ 5 ಸ್ಥಾನಗಳ ಪ್ರದೇಶ: ಗುಲ್ಬರ್ಗ, ಬೀದರ್, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ವ್ಯಾಪ್ತಿಯ ಹೈ-ಕ 6 ಜಿಲ್ಲೆಗಳಲ್ಲಿ ಲೋಕಸಭೆಯ 5 ಸ್ಥಾನಗಳು ಹರಡಿವೆ. 2009ರ ಲೋಕಸಭೆಯಲ್ಲಿ ಈ ನೆಲ ಕೈಕೊಟ್ಟಿದ್ದರಿಂದಲೇ ಕಾಂಗ್ರೆಸ್ ಚಿತ್ತ ಇಲ್ಲೀಗ ಹಿಂದುಳಿದ ನೆಲದತ್ತ ಬಿದ್ದಿದ್ದು.
ಕಲಂ 371(ಜೆ) ಕೊಡುಗೆ ಪಡೆದುಕೊಂಡಿರುವ ಈ ಭಾಗದ ಜನತೆಯ ಬೆಂಬಲ ಕೇಳುವುದರಲ್ಲಿ ತಪ್ಪೇನು ಎಂದು ಕಾಂಗ್ರೆಸ್ ನಾಯಕರು ಕಲಂ ಫಲಾನುಭವಿ ಜಿಲ್ಲೆಗಳ ಜನರ ಬೆನ್ನು ಬಿದ್ದಂತಿದೆ. ಸೋನಿಯಾ ಗಾಂಧಿ ಸಹ ತಮ್ಮ ಮಾತುಗಳಲ್ಲಿ ಕಲಂ 371 ಬೇಡಿಕೆ ಈಡೇರಿಸುವ ಮೂಲಕ ನುಡಿದಂತೆ ನಡೆದ ಕಾಂಗ್ರೆಸ್ ಪಕ್ಷದ ಕೈಹಿಡಿಯಿರಿ ಎಂದು ಜನತೆಗೆ ಹೇಳಿದ ಮಾತುಗಳು ಇಡೀ ಸಮಾವೇಶದ ಒಳಮರ್ಮಕ್ಕೆ ಕನ್ನಡಿ.
ಗುಲ್ಬರ್ಗ (ಮೀ) ಕಣದಿಂದ ಮಲ್ಲಿಕಾರ್ಜುನ ಖರ್ಗೆ, ಬೀದರ್ನಿಂದ ಧರಂಸಿಂಗ್ ಮೊದಲ್ಗೊಂಡು ಪಕ್ಷದ ಘಟಾನುಘಟಿಗಳು ಕಣಕ್ಕಿಳಿಯಲಿರುವ ಹೈ-ಕ ನೆಲ ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆಯ ತಾಣ. ಹೀಗಾಗಿ ಕಲಂ ಅಸ್ತ್ರ ಕೈಯಲ್ಲಿರುವಾಗ ಅದರ ಲಾಭ ಲೋಕಸಭೆಯಲ್ಲಿಯೂ ಯಾಕೆ ಹೊಂದಬಾರದು ಎಂದು ಕೈಪಾಳಯದಲ್ಲಿಂದು ಬಿರುಸಿನ ಚಟುವಟಿಕೆಗಳು ಸಾಗಿರುವುದು ಗುಲ್ಬರ್ಗ ಸಮಾವೇಶ, ಅದನ್ನು ಆಯೋಜಿಸಿದ್ದ ರೀತಿಗಳಿಂದ ಬಹಿರಂಗವಾದಂತಾಗಿದೆ.
ಅತೃಪ್ತಿ- ಅಸಮಾಧಾನದ ಅಲೆ: ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಹೈ-ಕ ಭಾಗದ 6 ಜಿಲ್ಲೆಗಳಿಂದ 25ರಷ್ಟು ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡರೂ ಇಲ್ಲಿನವರಿಗೆ ಸಂಪುಟದಲ್ಲಿ ಪ್ರಾಶಸ್ತ್ಯ ನೀಡಲಾಗಿಲ್ಲ, ಖಾತೆಗಳ ಹಂಚಿಕೆಯಲ್ಲಿಯೂ ಹೈ-ಕ ನೆಲದ ಸಚಿವರಿಗೆ ಕಡೆಗಣಿಸಲಾಗಿದೆ ಎಂಬ ಅಸಮಾಧಾನ ಹೈ-ಕ ಶಾಸಕರಲ್ಲಿ, ಜನರಲ್ಲಿದೆ.
ಇವೆಲ್ಲದರ ಜೊತೆಗೆ ಸಂಪುಟ ವಿಸ್ತರಣೆಯಲ್ಲಿಯೂ ಸರಿಯಾದ ಪ್ರಾತಿನಿಧ್ಯ ದೊರಕಿಲ್ಲ ಎಂದು ಈ ಭಾಗದ ಹಿರಿಯ ನಾಯಕರು ಹಲವರು ಭಿನ್ನರಾಗ ಹಾಡುತ್ತಿರುವುದರಿಂದಲೂ ಸೋನಿಯಾ ಗುಲ್ಬರ್ಗ ಭೇಟಿ ಪಕ್ಷದಲ್ಲಿ ಹಲವು ಚರ್ಚೆಗಳಿಗೆ ಕಾರಣವಾಗಿತ್ತು.
ಯಾವುದೇ ಕಿರಿಕ್ ಆಗಲಿಲ್ಲ: ಅತೃಪ್ತ ಶಾಸಕರು ಹೈಕಮಾಂಡ್ ಭೇಟಿ ಮಾಡುವುದಾಗಿ ಹೇಳಿದ್ದರಾದರೂ ಕೊನೆ ಗಳಿಗೆಯಲ್ಲಿ ಅದು ಸಾಧ್ಯವಾಗಲಿಲ್ಲ. ಹೀಗಾಗಿ ದೆಹಲಿಗೆ ಹೋಗಿಯೇ ತಮ್ಮ ನೋವು- ಅಸಮಾಧಾನವನ್ನು ಹೇಳಲು ನಿರ್ಣಯಿಸಿ ಭಿನ್ನ ಶಾಸಕರು ಗುಲ್ಬರ್ಗ ಸಮಾವೇಶದಲ್ಲಿ ಯಾವುದೇ ಕಿರಿಕ್ ಆಗಲಿಲ್ಲ ಎನ್ನಲಾಗಿದೆ.
ಮಂತ್ರಿಗಿರಿ ದೊರಕದೆ ಅಸಮಾಧಾನಿಯಾಗಿರುವ ಮಾಲೀಕಯ್ಯಾ ಗುತ್ತೇದಾರ್ ಈ ವಿಚಾರದಲ್ಲಿ ಹೈಕಮಾಂಡ್ಗೆ ಪತ್ರ ಬರೆದವರು. ಆದರೆ ಗುಲ್ಬರ್ಗ ಸಮಾರಂಭದಲ್ಲಿ ಇವರು ತಮ್ಮ ಅಸಮಾಧಾನದ ಯಾವ ಸಂಗತಿಗಳನ್ನು ಪ್ರಸ್ತಾಪಿಸದೆ ಸೋನಿಯಾ ಆಗಮನದ ಪೂರ್ವದಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ್ದು ಗಮನಾರ್ಹವಾಗಿತ್ತು.
ಬಿಜೆಪಿಯ ಮೋದಿ ಅಲೆಗೆ ಹೈ-ಕ ಭಾಗದಲ್ಲಂತೂ ಕಾಂಗ್ರೆಸ್ ಕಲಂ 371(ಜೆ) ಅಸ್ತ್ರವಾಗಿ ಬಳಸುವುದು ಸಮಾವೇಶದಿಂದ ದಿಟವಾಗಿದೆ. ಬರುವ ಲೋಕಸಭೆಯಲ್ಲಿ ಕಲಂ ಅಸ್ತ್ರ ಕಾಂಗ್ರೆಸ್ಗೆ ಗೆಲವಿನ ಊರುಗೋಲಾಗುವುದೆ ಎಂಬುದನ್ನು ಕಾದುನೋಡಬೇಕಷ್ಟೆ.
-ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

