ಸಭಿಕನ ಸವಾಲ್ಗೆ ಸೋನಿಯಾ ಗಲಿಬಿಲಿ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಫೆ.1
ಗುಲ್ಬರ್ಗದಲ್ಲಿ ಶನಿವಾರ ನಡೆದ ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ಬಹಿರಂಗ ಸಭೆಯಲ್ಲಿ ವಿಐಪಿ ಗ್ಯಾಲರಿಯಲ್ಲಿ ಕುಳಿತಿದ್ದ ಸಭಿಕನೊಬ್ಬ ಕರಪತ್ರ ಹಿಡಿದು ಜೋರಾಗಿ ಅರಚುತ್ತ ತಾನ್ನಿದ್ದಲಿಂದಲೇ ಸೋನಿಯಾಗೆ ಸವಾಲು ಹಾಕಿದ ಪ್ರಸಂಗ ಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣಕ್ಕೆ ಕಾರಣವಾಯ್ತು.
ಸೋನಿಯಾ ಗಾಂಧಿ ಮಾತಿಗೆ ಶುರು ಮಾಡುತ್ತಿದ್ದಂತೆಯೇ ಕುಳಿತಲ್ಲಿಂದ ಎದ್ದು ಜೇಬಲ್ಲಿದ್ದ ಕರಪತ್ರ ಕೈಯಲ್ಲಿ ಹಿಡಿದುಕೊಂಡು ಪ್ರದರ್ಶಿಸುತ್ತ, ಮುಂದೆ ಹೊರಟ ಗಡ್ಡಧಾರಿ ಸಭಿಕ, ಆತನ ಹಿಂದಿ ಮಾತುಗಳು, ಜೋರಾಗಿ ಘೋಷಣೆ ಕೂಗಿದ್ದು, ಎಲ್ಲವೂ 50 ಅಡಿ ದೂರದಲ್ಲೇ ವೇದಿಕೆಯಲ್ಲಿದ್ದ ಸೋನಿಯಾಗಾಂಧಿಯವರ ಗಮನ ಸೆಳೆಯಿತಾದರೂ ಅವರು ಮಾತು ಮುಂದುವರಿಸಿದರು.
ಏನಾಗುತ್ತಿದೆ ಎಂದು ಭದ್ರತೆಗಿದ್ದ ಪೊಲೀಸರು ಅರಿತುಕೊಳ್ಳುವಷ್ಟರಲ್ಲೇ, ಕರಪತ್ರದೊಂದಿಗೆ ಬುದುಂಗನೆ ಎದ್ದು ಹೊರಟಿದ್ದ ಸಭಿಕ ಸೋನಿಯಾ ಮೇಡಂ, ಜರಾ ದೇಖೋ, ಇಸ್ಪೆ ಲಿಖೆ ಕೆ ದೇವೋ ಮೆರೆ ಕೋ... ಎಂದು ವೇದಿಕೆಯತ್ತ ಧಾವಿಸಲಾರಂಭಿಸಿದಾಗ ಪೊಲೀಸರು ತಕ್ಷಣ ಕಾರ್ಯ ಪ್ರವೃತ್ತರಾಗಿ ಅವರ ಬಾಯಿ ಮುಚ್ಚಿಕೊಂಡು ಅಲ್ಲಿಂದ ಹೊರಟುಹೋದರು.
ಸದರಿ ಘಟನೆ ವೇದಿಕೆಯಲ್ಲಿದ್ದ ಸೋನಿಯಾ ಮೊದಲ್ಗೊಂಡು ಕೇಂದ್ರ, ರಾಜ್ಯ ಸಚಿವರು, ಸಿಎಂ ಸಿದ್ದರಾಮಯ್ಯ ಎಲ್ಲರನ್ನು ವಿಚಲಿತರನ್ನಾಗಿಸಿತ್ತು. ಘಟನೆಯ ಬಿಸಿ ತಡವಾಗಿ ಅರಿತಂತೆ ಕಂಡುಬಂದ ಪೊಲೀಸ್ ಅಧಿಕಾರಿಗಳು ಒಬ್ಬೊಬ್ಬರಾಗಿ ವಿಐಪಿ ಗ್ಯಾಲರಿಯಲ್ಲಿ ಜಮಾಯಿಸಿದರು. ಗುಪ್ತವಾರ್ತೆ ಎಸ್ಪಿ, ಅಧಿಕಾರಿಗಳು ಅಲ್ಲಿಗೆ ಬರುವಷ್ಟರಲ್ಲೇ ಸೋನಿಯಾ ಬೆಂಗಾವಲು ಪಡೆಯ ಕೆಲವರು ಅಲ್ಲಿಗೆ ಧಾವಿಸಿ ಏನಾಯ್ತು ಎಂಬ ವಿಷಯ ಅರಿಯುವ ಯತ್ನ ಮಾಡಿದ್ದು ಗಮನಾರ್ಹವಾಗಿತ್ತು.
ಬಿಗಿಭದ್ರತೆ ಅಲ್ಲಿ ಇದ್ದರೂ ಸಹ, ಕರಪತ್ರದೊಂದಿಗೆ ಅದೂ ವಿಐಪಿ ಗ್ಯಾಲರಿಯಲ್ಲಿ ಅದ್ಹೇಗೆ ಸವಾಲ್ ಸಭಿಕ ನುಸುಳಿದ ಎಂಬುದೇ ವಿಚಿತ್ರವಾಗಿತ್ತು. ಹೆಜ್ಜೆಹೆಜ್ಜೆಗೂ ಪೊಲೀಸರು ಬಿಗಿ ಪಹರೆ ಕಾಯುತ್ತಿರುವಾಗಲೇ ಸಭಿಕ ಕರಪತ್ರದ ಸವಾಲ್ ಎಸೆದದ್ದು ಅಲ್ಲಿನ ಭದ್ರತಾ ಲೋಪಕ್ಕೆ ಕನ್ನಡಿ ಹಿಡಿದಿತ್ತು
ಬಂದೋಬಸ್ತ್: ಸೋನಿಯಾ ಸಮಾರಂಭವೇ ಹಾಗೆ, ಭದ್ರತೆ ಕಾರಣಕ್ಕಾಗಿ ಬಿಗಿಪಹರೆ ಹಾಕಲಾಗುತ್ತದೆ. ಗುಲ್ಬರ್ಗದಲ್ಲೂ ಹೀಗೆಯೇ ಆಯ್ತು. ಸೋನಿಯಾಗಾಂಧಿ 11ಕ್ಕೆ ಬರುತ್ತಾರೆಂದು ಜನರನ್ನು ಬೆ.10ರಿಂದಲೇ ಮೈದಾನಕ್ಕೆ ಆಹ್ವಾನಿಸಲಾಗಿತ್ತು. ಅದಾಗಲೇ 11 ಗಂಟೆಯಷ್ಟೊತ್ತಿಗೆ ಸಹಸ್ರಾರು ಜನ ಸೇರಿದ್ದರು. ಸೋನಿಯಾ ಆಗಮನ ವಿಳಂಬವಾಗುತ್ತ 1 ಗಂಟೆಯಾದಾಗ ಜನರ ಸಹನೆ ಮೀರಿತ್ತು. ಕುಳತಲ್ಲಿಂದಲೇ ಕುರ್ಚಿ ಎಸೆಯುತ್ತ, ಒಬ್ಬರ ಮೇಲೋಬ್ಬರು ಬೀಳುತ್ತ ಗಲಾಟೆ ಶುರುವಾದವು. ಸಂಘಟಕರು ಕಿರಿಕಿರಿ ನಿಯಂತ್ರಿಸಲು ನಡೆಸಿದ ಹರಸಾಹಸ ಕೆಲಸಕ್ಕೆ ಬರಲಿಲ್ಲ. ಕೊನೆಗೂ 1.30ಕ್ಕೆ ಸೋನಿಯಾ ಮೈದಾನದಲ್ಲಿ ಕಂಡಾಗ ಜನ ಶಾಂತರಾದರೆನ್ನಿ.
ಸಚಿವರು, ಶಾಸಕರ ದಂಡು: ರಾಜ್ಯ ಸರ್ಕಾರದ ಬಹುತೇಕ ಸಚಿವರು, ಕಾಂಗ್ರೆಸ್ ಶಾಸಕರು, ಪಕ್ಷದ ಪ್ರಮುಖರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು ವಿಶೇಷವಾಗಿತ್ತು. ಕಾಂಗ್ರೆಸ್ ಪಕ್ಷದ ರಾಜ್ಯ ಸಂಘಟನೆಯಲ್ಲಿರುವ ಸರ್ವರನ್ನು ಗುಲ್ಬರ್ಗ ಸಮಾರಂಭ ಸೆಳೆದಿತ್ತು.
ಧೂಳು.. ಗೋಳು...
ಸೋನಿಯಾ ಗಾಂಧಿ ಸಭೆಗೆ ಸಹಸ್ರಾರು ಜನ ಸೇರಿದ್ದರು. ಎನ್ವಿ ಕಾಲೇಜು ಮೈದಾನದಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿತ್ತು. ಸಕಲ ಸೌಕರ್ಯ ಕಲ್ಪಿಸಿದ್ದರೂ ಜನ ಒಬ್ಬರ ಮೇಲೋಬ್ಬರು ಬೀಳುವ ಮೂಲಕ ಸಭಾಂಗಣದ 2 ಮೂಲೆಗಳಲ್ಲಿ ಸಮಾರಂಭ ಮುಗಿಯುವರೆಗೂ ಗೊಂದಲ ಇರುವಂತೆ ನೋಡಿಕೊಂಡರು. ಸಚಿವ ಶರಣಪ್ರಕಾಶ ಜನರ ಈ ವರ್ತನೆಗೆ ಬೇಸತ್ತು ಮೈಕಲ್ಲೇ ಪಕ್ಕದ ರೋಟರಿ ಮೈದಾನದಲ್ಲಿ ಎಲ್ಸಿಡಿ ಟೀವಿ ಪರದೆ ಹಾಕಿ ಇಲ್ಲಿನ ಸಮಾರಂಭದ ನೇರ ಪ್ರಸಾರ ವ್ಯವಸ್ಥೆ ಮಾಡಲಾಗಿದೆ. ಅತ್ತ ಹೋಗಿರಿ, ಗಲಾಟೆಗೆ ಅವಕಾಶ ಬೇಡ... ಎಂದು ಮಾಡಿದ್ದ ಮನವಿಗೂ ಜನರಿಂದ ಸ್ಪಂದನೆ ದೊರಕಿದ್ದು ಅಷ್ಟಕ್ಕಷ್ಟೆ. ಕೊನೆಗೆ ಏನಾಯ್ತು ಗೊತ್ತೆ, ಸೋನಿಯಾ ಮಾತುಗಳನ್ನಾಡುತ್ತಿರುವಾಗಲೇ ಜನ ಹೋ... ಎಂದು ಕಿರುಚುತ್ತ ತಾವು ಕುಳಿತಲ್ಲಿಂದ ಎದ್ದು ನಿಲ್ಲುವ ಯತ್ನ ಮಾಡಿತು. ಸಾವಿರಾರು ಜನ ಏಕಕಾಲಕ್ಕೇದ್ದು ನಿಲ್ಲಲು ಹೋದಾಗ ಮೈದಾನದಲ್ಲಿ ಹಾಕಲಾಗಿದ್ದ ಶಾಮಿಯಾನ ತುಂಬೆಲ್ಲ ಧೂಳು ಆವರಿಸಿತು. ಇದರಿಂದ ಸೋನಿಯಾ ಹಾಗೂ ಗಣ್ಯರಿದ್ದ ವೇದಿಕೆಯವರೆಗೂ ಧೂಳು ಪಸರಿಸಿತು!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

