ಗುಲ್ಬರ್ಗಾ

ದಲಿತ ದೇವಿಂದ್ರಪ್ಪ ಕೊಲೆ ಖಂಡಿಸಿ ಪಾದಯಾತ್ರೆ

Published On :

ಶಹಾಪುರ: ತಾಲೂಕು ಮಾದಿಗ ದಂಡೋರಾ ಮತ್ತು ರಿಜರ್ವೇಷನ್ ಹೋರಾಟ ಸಮಿತಿವತಿಯಿಂದ ದಲಿತ ದೇವಿಂದ್ರಪ್ಪ ಕೊಲೆ ಖಂಡಿಸಿ ಸೋಮವಾರ ಕನ್ಯಾಕೋಳೂರದಿಂದ ಯಾದಗಿರಿ ಜಿಲ್ಲಾಧಿಕಾರಿ ಕಚೇರಿವರೆಗೆ ಹಮ್ಮಿಕೊಂಡ ಪಾದಯಾತ್ರೆಗೆ ಮುಖಂಡ ಮಾಪಣ್ಣ ಹದನೂರ ಚಾಲನೆ ನೀಡಿದರು.
  ಕನ್ಯಾಕೋಳೂರ ಗ್ರಾಮದಿಂದ ಆರಂಭಗೊಂಡ ಪಾದಯಾತ್ರೆ ಪಟ್ಟಣದ ಬಸವೇಶ್ವರ ವೃತ್ತಕ್ಕೆ ಆಗಮಿಸಿ, ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಕೆಲ ಕ್ಷಣ ರಸ್ತೆ ತಡೆದು ದೌರ್ಜನ್ಯ ವಿರುದ್ಧ ಘೋಷಣೆ ಕೂಗಿದರು.
ಮೊದಲೇ ಸಂಚು: ಈ ಸಂದರ್ಭದಲ್ಲಿ ಮಾತನಾಡಿದ ಮಾಪಣ್ಣ ಹದನೂರ, ಸಮಾಜದಲ್ಲಿನ ಮೌಢ್ಯತೆ, ಅಂಧಕಾರದ ವಿರುದ್ಧ ಹೋರಾಟ ನಡೆಸಿದ ದಲಿತ ಮುಖಂಡನನ್ನು ಮುಗಿಸಲು ಗ್ರಾಮದ ಸವರ್ಣಿಯರು ಮೊದಲೇ ಸಂಚು ರೂಪಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
  ಕಾರಣ ಸರ್ಕಾರ ಈ ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸಿ, ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರುಪಡಿಸಬೇಕೆಂದು ಆಗ್ರಹಿಸಿದರು. ಅಲ್ಲದೆ ಮೃತ ಕುಟುಂಬಕ್ಕೆ 25 ಲಕ್ಷ ಪರಿಹಾರ, ಸರ್ಕಾರಿ ನೌಕರಿ, ಉಪಜೀವನಕ್ಕೆ ಐದು ಎಕರೆ ಜಮೀನು ಸೇರಿದಂತೆ ನಿವೇಶನ ಒದಗಿಸಬೇಕೆಂದು ಒತ್ತಾಯಿಸಿದರು.
ಸೂಕ್ತ ರಕ್ಷಣೆ ಒದಗಿಸಿ: ಅದೇ ರೀತಿ ಘಟನೆಯಲ್ಲಿ ಗಾಯಗೊಂಡವರಿಗೆ ತಲಾ ಐದು ಲಕ್ಷ ರೂ. ನೀಡಬೇಕು. ಗ್ರಾಮದ ದಲಿತರಿಗೆ ಪೊಲೀಸರಿಂದ ಸೂಕ್ತ ರಕ್ಷಣೆ ಒದಗಿಸಬೇಕು ಮತ್ತು ಜಿಲ್ಲಾದ್ಯಂತ ಹೊಲೆ ಮಾದಿಗರ ವಿರುದ್ಧ ನಿರಂತರವಾಗಿ ನಡೆಯುವ ದೌರ್ಜನ್ಯ ತಡೆಗಟ್ಟಲು ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು.
  ಜಿಲ್ಲಾ ಅಧ್ಯಕ್ಷ ಬಸವರಾಜ ಮೇತ್ರೆ ನಾಯ್ಕಲ್, ತಾಲೂಕು ಅಧ್ಯಕ್ಷ ಸಿದ್ದಪ್ಪ ದೇವರಗೋನಾಲ್, ಪ್ರಧಾನ ಕಾರ್ಯದರ್ಶಿ ಮಲ್ಲಣ್ಣ ಜಾಂಡೆ, ಭೀಮಣ್ಣ ಕಡೇಮನೆ, ಶಾಂತು ಕಟ್ಟಿಮನಿ, ಬಸವರಾಜ ಪೂಜಾರಿ, ಹಯ್ಯಾಳಪ್ಪ ದೊಡ್ಮನಿ, ಸೋಪಣ್ಣ ದರಿಯಾಪುರ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾದಯಾತ್ರೆ ಪಾಲ್ಗೊಂಡಿದ್ದರು.
ಯಾತ್ರೆ ಮಂಗಳವಾರ ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ತಲುಪಿ ನಾನಾ ಬೇಡಿಕೆ ಕುರಿತ ಮನವಿ ಪತ್ರ ಸಲ್ಲಿಸಲಿದೆ.
ದೇವಿಂದ್ರಪ್ಪ ಹತ್ಯೆಗೆ ಪೂರ್ವಯೋಜಿತ ಸಂಚು
ಶಹಾಪುರ: ಕನ್ಯಕೋಳೂರ ಗುಂಪು ಘರ್ಷಣೆ ನೆಪ ಮಾತ್ರ. ದಲಿತ ಮುಖಂಡ ದೇವಿಂದ್ರಪ್ಪ ದಳಪತಿ ಹತ್ಯೆ ಮಾಡಲು ಪೂರ್ವ ನಿಯೋಜಿತ ಸಂಚು ರೂಪಿಸಲಾಗಿತ್ತೆಂದು ದಸಂಸ ರಾಜ್ಯ ಸಂಚಾಲಕ ಮಾನಳ್ಳಿ ಶಂಕರ ಆರೋಪಿಸಿದ್ದಾರೆ.
  ತಾಲೂಕಿನ ಕನ್ಯಾಕೋಳೂರಿಗೆ ಭೇಟಿ ನೀಡಿ ಮೃತ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ನಂತರ ಮಾತನಾಡಿ, ದಳಪತಿ ಹತ್ಯೆಯು ಪೊಲೀಸರ ಸಮ್ಮುಖದಲ್ಲಿ ನಡೆದಿದೆ. ಕೊನೆ ಪಕ್ಷ ಠಾಣೆಯಲ್ಲಿ ಮೃತ ದೇವಿಂದ್ರಪ್ಪನ ಪತ್ನಿ ಬಸಲಿಂಗಮ್ಮನಿಂದಲೂ ದೂರು ದಾಖಲಿಸಿಕೊಳ್ಳದೆ, ತನಿಖೆಯನ್ನು ದಾರಿ ತಪ್ಪಿಸುವ ಸಂಚು ಅಡಗಿದೆ. ನಿಜವಾದ ಕೊಲೆಗಡುಕ ಯಾರು ಎಂಬುದನ್ನು ಪತ್ನಿ ಹೇಳುತ್ತಿದ್ದರು ಪೊಲೀಸರು ಮೌನವಹಿಸಿದ್ದಾರೆಂದು ದೂರಿದರು. ಇತರ ಶೋಷಿತರ ಪರ ಮತ್ತು ಹಿಂದುಳಿದ ಜನತೆಯ ನಾಯಕರೆಂದು ಹೇಳಿಕೊಳ್ಳುವ ಸಿಎಂ ಅವರ ಆಡಳಿತದಲ್ಲಿ ದಲಿತರ ಹತ್ಯೆ ನಡೆದಿರುವಾಗ ಸಾಮಾಜಿಕ ನ್ಯಾಯ ಎಲ್ಲಿದೆ. ಕೆ.ಕೆ. ಜಾರ್ಚ್ ಅಸಮರ್ಥರಾಗಿದ್ದಾರೆ. ಸದನದಲ್ಲಿ ದಲಿತರ ಹತ್ಯೆಯ ಬಗ್ಗೆ ಚರ್ಚಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.