ಗುಲ್ಬರ್ಗಾ

ಮಗಳ ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ

Published On :

ಗುಲ್ಬರ್ಗ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಾಲ್ಕೂವರೆ ವರ್ಷದ ಮಗಳಿಗೆ ರಿವಾಲ್ವರ್‌ನಿಂದ ಗುಂಡು ಹಾರಿಸಿ ಕೊಂದ ತಾಯಿ ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುಲ್ಬರ್ಗದ ಚಾಚಾ ಬಡಾವಣೆಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.
ತಾಯಿ ಆಫ್ರೀನಾ ರಿವಾಲ್ವರ್‌ನಿಂದ ಮೊದಲು ತನ್ನ ಕರುಳ ಕುಡಿ ಹೂಮಾಳನ್ನು ಗುಂಡು ಹೊಡೆದು ಸಾಯಿಸಿದ್ದಾಳೆ. ನಂತರ ತಾನೂ ಅದೇ ರಿವಾಲ್ವರ್‌ನಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟಿರುವ ಆಫ್ರೀನಾ (27) ಸೇಡಂ ತಾಲೂಕಿನ ಜಿಪಂ ಮಾಜಿ ಸದಸ್ಯ ಹಾಗೂ ಜೆಡಿಎಸ್ ರಾಜ್ಯ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಮುಕ್ರಂಖಾನ್ ಅವರ ಚೊಚ್ಚಲ ಪುತ್ರಿ. ಕಳೆದ 6 ವರ್ಷಗಳ ಹಿಂದೆ ಆಫ್ರೀನಾ ಬೆಂಗಳೂರಿನ ನಿವಾಸಿ ಸಾಫ್ಟ್‌ವೇರ್ ಎಂಜಿನಿಯರ್ ಸಾದತ್ ಉಲ್ ಖಾನ್ ಅವರೊಂದಿಗೆ ವಿವಾಹವಾಗಿದ್ದಳು.
ಇತ್ತೀಚೆಗಷ್ಟೆ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ಇದು ವಿವಾಹ ವಿಚ್ಚೇದನದವರೆಗೂ ಹೋಗಿತ್ತು. ಮಗಳು ಹುಮಾಳನ್ನು ತನಗೆ ಒಪ್ಪಿಸುವಂತೆ ಪತಿ ಕಿರಿಕಿರಿ ಮಾಡುತ್ತಿದ್ದ. ಇದೇ ಅಂಶ ಆಫ್ರೀನಾಳನ್ನು ನೋಯಿಸಿತ್ತು. ಹೀಗಾಗಿ ತೀವ್ರ ಮನನೊಂದಿದ್ದ ಆಫ್ರೀನಾ ಕಳೆದ 8 ತಿಂಗಳಿಂದ ತಂದೆಯ ಮನೆಯಲ್ಲೇ ಇದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಎಲ್ಲರೂ ಮನೆಯಲ್ಲಿರುವಾಗಲೇ ರಾತ್ರಿ 8.30ರ ಸುಮಾರಿಗೆ ಆಫ್ರೀನಾ ಕೋಣೆಯಲ್ಲಿ ಮಗಳೊಂದಿಗೆ ಹೋಗಿದ್ದಾಳೆ. ತಂದೆಯ ಬಳಿಯಿದ್ದ ಪರವಾನಗಿ ರಿವಾಲ್ವರ್‌ನಿಂದ ಮೊದಲು ಮಗಳನ್ನು ಕೊಂದಿದ್ದಾಳೆ. ನಂತರ ತಕ್ಷಣ ತಾನೂ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾಳೆ. ಮನೆಯಲ್ಲಿ ತಂದೆ ಮುಕ್ರಂಖಾನ್ ಹಾಗೂ ಕುಟುಂಬ ಸದಸ್ಯರೆಲ್ಲರೂ ಇದ್ದರು. ಕೋಣೆಯಲ್ಲಿನ ಪಟಾಕಿ ಸಿಡಿದಂಥ ಸದ್ದಿಗೆ ಬೆಚ್ಚಿಬಿದ್ದ ಕುಟುಂಬ ಸದಸ್ಯರು ಏನಾಯ್ತು ಎಂದು ಅರಿಯುವಷ್ಟರಲ್ಲೇ ಆಫ್ರೀನಾ ಹಾಗೂ ಆಕೆಯ ಪುತ್ರಿ ಹೂಮಾಳ ಪ್ರಾಣಪಕ್ಷಿ ಹಾರಿಹೋಗಿತ್ತು.
ಸುದ್ದಿ ತಿಳಿದ ತಕ್ಷಣ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಾಶೀನಾಥ ತಳಕೇರಿ, ಎಎಸ್ಪಿ ಸಂತೋಷ ಬಾಬು ಹಾಗೂ ಇನ್ನೂ ಕೆಲವರು ಪೊಲೀಸ್ ಅಧಿಕಾರಿಗಳು ಚಾಚಾ ಬಡಾವಣೆಯ ಘಟನೆ ನಡೆದ ಮನೆಗೆ ದೌಡಾಯಿಸಿದ್ದಾರೆ. ತಕ್ಷಣ ಆಫ್ರೀನಾ ಹಾಗೂ ಹೂಮಾರ ಶವ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ಇಡೀ ಚಾಚಾ ಬಡಾವಣೆಯ ಜನರನ್ನು ತಲ್ಲಣಗೊಳಿಸಿದೆ.

ಹೀರಾಪುರ: 6 ಕಂಪ್ಯೂಟರ್ ಕಳವು
ಗುಲ್ಬರ್ಗ: ನಗರದ ಹೊರವಲಯದಲ್ಲಿರುವ ಹೀರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ 6 ಕಂಪ್ಯೂಟರ್ ಕಳವಾಗಿವೆ ಎಂದು ಶಾಲೆಯ ಮುಖ್ಯಶಿಕ್ಷಕಿ ಶೋಭಾ ಗ್ರಾಮೀಣ ಠಾಣೆಗೆ ದೂರು ಸಲ್ಲಿಸಿದ್ದಾರೆ. ಶಾಲೆ ಎಂದಿನಂತೆ ತೆರೆದಾಗ ಸಿಪಾಯಿ ಕಂಪ್ಯೂಟರ್ ಕೋಣೆ ಕಸಗುಡಿಸಲು ಹೋದಾಗ ಅಲ್ಲಿ ಕಂಪ್ಯೂಟರ್‌ಗಳು ಇಲ್ಲದ್ದನ್ನು ಕಂಡು ವಿಷಯ ತಿಳಿಸಿದ್ದಾನೆ. ಇದರಿಂದ ದಿಗಿಲುಗೊಂಡ ಮುಕ್ಯೋಪಾಧ್ಯಾಯರು ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ಕೋಣೆಗಳ ಗೇಟ್‌ಗೆ ಬೀಗ ಹಾಕಲಾಗಿತ್ತು. ಮುಖ್ಯದ್ವಾರಕ್ಕೂ ಬೀಗ ಹಾಕಿ ಹೋಗಲಾಗಿತ್ತು. ಕೋಣೆಗಳ ಬೀಗ ಮುರಿದು ಈ ಕಳವು ಮಾಡಲಾಗಿದೆ. ಸಹ ಶಿಕ್ಷಕ ಚಂದ್ರಶೇಖರ ಡಾಂಗೆ ಅವರು ಕೋಣೆಗಳ ಬೀಗ ಮುರಿದ ಸಂಗತಿ ತಿಳಿಸಿದ್ದಾರೆ. ನಾವೂ ಹೋಗಿ ನೋಡಲಾಗಿ ಬೀಗ ಮುರಿದದ್ದು ಅಲ್ಲಿ ಕಂಡಿದೆ ಎಂದು ಮುಖ್ಯಗುರು ವಿವರಿಸಿದ್ದಾರೆ. ಶಾಲೆಯ ಮುಖ್ಯಗುರು ಶೋಭಾ ಇವರು ಸಲ್ಲಿಸಿರುವ ದೂರನ್ನಾಧರಿಸಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಾರಸುದಾರರಿಲ್ಲದ ಮಾಲು ಜಪ್ತಿ; ಕಳ್ಳಿಯ ಬಂಧನ
ಗುಲ್ಬರ್ಗ: ಇಲ್ಲಿನ ಚೌಕ್ ಠಾಣೆ ಪೊಲೀಸರು ಗಸ್ತಿನಲ್ಲಿದ್ದಾಗ ಬೆಳೆಗಳಿಗೆ ಕ್ರಿಮಿನಾಷಕ ಔಷಧ ಸಿಂಪಡಿಸುವ ಕಂಚಿನ ಪೈಪುಗಳು, ಆಟೋ ಫಿಸ್ಟ್‌ನ್ ಕಳವು ಮಾಡಿಕೊಂಡು ಹೊರಟಿದ್ದ ಕಳ್ಳಿಯನ್ನು ಬಂಧಿಸಿದ್ದಾರೆ.
ಚೌಕ್ ಠಾಣೆ ಪಿಐ ಕಲ್ಯಾಣಿ ಹೊಸಮನಿ ಮತ್ತು ಸಿಬ್ಬಂದಿ ಕೂಡಿ ಬಜಾರ್, ಕಿರಾಣಾ ಬಜಾರ್, ಹುಮನಾಬಾದ್ ಬೇಸ್, ಬಂಬೂ ಬಜಾರ್ ಮಾರ್ಗವಾಗಿ ಎಂಎಟಿ ಕ್ರಾಸ್ ಹತ್ತಿರ ಹೋದಾಗ ಒಬ್ಬಳು ಪೊಲೀಸ್ ಜೀಪ್ ಕಂಡು ಚೀಲ ಹಿಡಿದುಕೊಂಡು ಓಡುವ ಪ್ರಯತ್ನದಲ್ಲಿದ್ದಾಗ ಪೊಲೀಸರು ಅವಳನ್ನು ಬೆನ್ನಟ್ಟಿ ನಿಲ್ಲಿಸಿದ್ದಾರೆ.
ಸಂಶಯ ಬಂದು ಸದರಿಯವಳಿಗೆ ಸಿಬ್ಬಂದಿ ಸಹಾಯದಿಂದ ಹಿಡಿದು ಅವಳ ಹೆಸರು ವಿಚಾರಿಸಲಾಗಿ ಮಾಂಗರವಾಡಿಯ ಶಬೀನಾ ಗಂಡ ಮಹಾಂತೇಶ ಕಾಳೆ ಎಂದು ತಿಳಿದು ಬಂದಿದೆ. ಅವಳ ಬಳಿಯಲ್ಲಿನ ಚೀಲ ಪರಿಶೀಲಿಸಲಾಗಿ, ಚೀಲದಲ್ಲಿದ್ದ ವಸ್ತುಗಳನ್ನು ತಪಾಸಣೆ ಮಾಡಿ ಜಪ್ತಿ ಮಾಡಿಕೊಳ್ಳಲಾಗಿದೆ. ಸುಮಾರು 23 ಸಾವಿರ ಮೌಲ್ಯದ ಮಾಲು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಚೌಕ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ದಾಯಾದಿ ಕಲಹ ಕೊಲೆಯಲ್ಲಿ ಅಂತ್ಯ: ಹೊಲ- ಗದ್ದೆಯಲ್ಲಿನ ಬಾವಿಯಿಂದ ನೀರು ಬಿಡುವ ವಿಚಾರದಲ್ಲಿ ಸಹೋದರರ ಮಧ್ಯೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ದಾರುಣ ಘಟನೆ ಆಳಂದ ತಾಲೂಕಿನ ನಿಂಬರ್ಗಾದಲ್ಲಿ ಸಂಭವಿಸಿದೆ. ಈ ದುರಂತದ ಬೆಳವಣಿಗೆಯಲ್ಲಿ ಶಿವಪ್ಪ ನಿಂಗಶೆಟ್ಟಿ ಸಾವನ್ನಪ್ಪಿದ್ದಾನೆ. ರಾಜಶೇಖರ ನಿಂಗಶೆಟ್ಟಿ ಈತ ಕಲ್ಲಿನಿಂದ ಜಜ್ಜಿ ಸಹೋದರ ನಿಂಗಪ್ಪನನ್ನು ಕೊಲೆ ಮಾಡಿದ್ದಾನೆಂದು ನಿಂಬರ್ಗಾದ ವಿಜಯಕುಮಾರ ನಿಂಗಶೆಟ್ಟಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾನೆ.

ಅಫಜಲ್ಪುರ; ಬೈಕ್ ಕಳವು
ಅಫಜಲ್ಪುರ: ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಕಳವದಾ ಘಟನೆ ಅಫಜಲ್ಪುರ ಪಟ್ಟಣದಲ್ಲಿ ನಡೆದಿದೆ. ಶರಣಪ್ಪ ಪಾಟೀಲ ಇವರಿಗೆ ಸೇರಿದ್ದ ಬೈಕ್ ಮನೆಯ ಮುಂದೆ ನಿಲ್ಲಿಸಲಾಗಿತ್ತು ಎಂದು ಮಾಲೀಕ ಅಫಜಲ್ಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜೂಜಾಟ ನಿರತರ ಸೆರೆ
ಗುಲ್ಬರ್ಗ: ನಗರದ ಸಿದ್ದಿಪಾಶ ದರ್ಗಾ ಹತ್ತಿರ ಖಾಲಿ ಜಾಗದಲ್ಲಿ ಲೈಟ್ ಕಂಬದ ಬೆಳಕಿನಲ್ಲಿ ಇಸ್ಪೀಟ್ ಆಡುತ್ತಿರುವ ಖಚಿತ ಮಾಹಿತಿ ಮೇರೆದೆ ಪಿಎಸ್‌ಐ ಮುರಳಿ, ಸಿಬ್ಬಂದಿ ದಾಳಿ ನಡೆಸಿ ಐದಾರು ಜನರ ಪೈಕಿ ಇಬ್ಬರನ್ನು ಮಾತ್ರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಾಳಿ ಮಾಡಿದಾಗ ಅವರಲ್ಲಿ ಮೂರು ಜನರು ಓಡಿ ಹೋಗಿದ್ದು ನಾಗೇಂದ್ರ ಮರ್ಲಿಂಗಪ್ಪ ರಾಜನಾಳ, ಮಲ್ಲಪ್ಪ ಗೋಪಣ್ಣಾ ಸುರಪುರ ಎಂಬುವವರನ್ನು ದಸ್ತಗೀರ ಮಾಡಲಾಗಿದೆ. ಒಟ್ಟು 21,470 ಮತ್ತು ಇಸ್ಪೀಟ್‌ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮದ್ಯ ಮಾರಾಟ, ವ್ಯಕ್ತಿಯ ಬಂಧನ
ಚಿಂಚೋಳಿ: ತಾಲೂಕಿನ ರಟಕಲ ಠಾಣೆ ವ್ಯಾಪ್ತಿಯ ಮೋಘಾ ತಾಂಡಾದಲ್ಲಿ ಅನಧಿಕೃತವಾಗಿ ಸಾರಾಯಿ ಮಾರಾಟ ಮಾಡುತ್ತಿರುವ ಮಾಹಿತಿ ಮೇರೆಗೆ ಮೋಘಾ ತಾಂಡಕ್ಕೆ ಸಿಬ್ಬಂದಿ ಪಂಚರೊಂದಿಗೆ ದಾಳಿ ಮಾಡಿ ರಾಮಶೆಟ್ಟಿ ರಾಮಜಿ ರಾಠೋಡ ಎಂಬಾತನನ್ನು ವಶಕ್ಕೆ ತೆಗೆದುಕೊಂಡು ಅವನಿಂದ 10,400 ಮೌಲ್ಯದ ಮದ್ಯದ ಬಾಟಲ್‌ಗಳು ಹಾಗೂ ನಗದು 1,100 ವಶಪಡಿಸಿಕೊಂಡಿದ್ದಾರೆ. ಸದರಿಯವನ ವಿರುದ್ಧ ರಟಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಡುಹಗಲೇ ಮನೆಯಲ್ಲಿ ಕಳವು
ಗುಲ್ಬರ್ಗ: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ನೋಡಿಕೊಂಡು ಕಳ್ಳರು ಇಲ್ಲಿನ ಪಂಚಮುಖಿ ಬಡಾವಣೆಯ ಅಣ್ಣಾರಾವ ಸಾಗರೆ ಇವರ ಮನೆ ಹೊಕ್ಕು ಕಳವು ಮಾಡಿದ್ದಾರೆ. ಪತ್ನಿ ನಿರ್ಮಲಾ ಶಿಕ್ಷಕಿಯಾಗಿದ್ದು ಶಾಲೆಗೆ ಹೋಗಿದ್ದರು. ಮಕ್ಕಳು ಕಾಲೇಜಿಗೆ ಹೋಗಿದ್ದರು. ಅಣ್ಣಾರಾವ ಸೂಪರ್ ಮಾರ್ಕೆಟ್‌ಗೆ ಬಂದಿದ್ದಾರೆ. ಕೆಲಸ ಮುಗಿಸಿಕೊಂಡು ಮರಳಿ ಮನೆಗೆ ಹೋದಾಗ ಬಾಗಿಲು ಚಿಲಕ ಮುರಿದದ್ದು ಹಾಗೂ ಕಳವಾಗಿರುವ ಸಂಗತಿ ಗಮನಕ್ಕೆ ಬಂದಿದೆ. ಅಲ್ಮೆರಾ ಮುರಿದು ಅರ್ಧ ತೊಲೆಯ 4 ಸುತ್ತುಂಗರ ಒಟ್ಟು 2 ತೊಲೆ, 19 ಸಾವಿರ ನಗದು ಹಣ, 2 ಸಾವಿರ ಮೌಲ್ಯದ ಬೆಳ್ಳಿ ಸಮೆ, 5 ತೊಲೆ ಬೆಳ್ಳಿ ಮೂರ್ತಿ, 2 ತೊಲೆ ಬೆಳ್ಳಿ ಆರತಿ ಹೀಗೆ ಒಟ್ಟು 83,800 ಬೆಲೆ ಬಾಳುವ ಸಾಮಾನುಗಳನ್ನು ದೋಚಿ ಪರಾರಿಯಾಗಿದ್ದಾರೆಂದು ದೂರು ಸಲ್ಲಿಸಿದ್ದಾರೆ.

ವಾಡಿ; 6.50 ಲಕ್ಷ ಹಣ ಸುಲಿಗೆ
ಗುಲ್ಬರ್ಗ: ಟಿಪ್ಪರ್ ವ್ಯಾಪಾರದ 6.50 ಲಕ್ಷ ಹಣವನ್ನು ಬೈಕ್ ಮೇಲೆ ಬಂದ ದುಷ್ಕರ್ಮಿಗಳು ಕಸಿದು ಪರಾರಿಯಾದ ಘಟನೆ ವಾಡಿಯಲ್ಲಿ ಸಂಭವಿಸಿದೆ.
ಟಿಪ್ಪರ ವ್ಯಾಪಾರದ ವಿಷಯವಾಗಿ ಮೊಹ್ಮದ್ ಇಸ್ಮಾಯಿಲ್ ಹಸನಸಾಬ್ ಹೊಸೂರ್ ಎಂಬುವವರು ಹಣವನ್ನು ಗುಲ್ಬರ್ಗದಲ್ಲಿದ್ದ ಮಾಲೀಕರಿಗೆ ಕೊಡಬೇಕಾಗಿತ್ತು. ಹಣದೊಂದಿಗೆ ಹೊರಟಾಗ ಬಸವೇಶ್ವರ ಚೌಕ್‌ನಲ್ಲಿ ಇಬ್ಬರು ಯುವಕರು ಬೈಕ್‌ನಲ್ಲಿ ಬಂದು ಹಣದ ಚೀಲ ಕಸಿಯಲು ಯತ್ನಿಸಿದ್ದಾರೆ. ಆಗ ಮೊಹ್ಮದ್ ಪ್ರತಿಭಟಿಸಿದಾಗ ಹಲ್ಲೆಗೈದು ಚೀಲ ಕಸಿದು ಪರಾರಿಯಾಗಿದ್ದಾರೆ.
ರೇಲ್ವೆ ಸ್ಟೇಷನ್ ಕಡೆಗೆ ಯುವಕರು ಓಡಿ ಹೋಗಿದ್ದಾರೆ. ಮಹಾರಾಷ್ಟ್ರ ಪಾಸಿಂಗ್ ಕೆಂಪು ಬಣ್ಣದ ಬೈಕ್‌ನಲ್ಲಿ ಬಂದಿದ್ದರು. ಮತ್ತೆ ಅವರನ್ನು ನೋಡಿದರೆ ಗುರುತಿಸುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಹ್ಮದ್ ಇಸ್ಮಾಯಿಲ್ ಹೇಳಿದ್ದಾರೆ. ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.