ಗುಲ್ಬರ್ಗಾ

ಪುಟ ಪುಟದಲ್ಲೂ ಅಚ್ಚರಿ...! ಇದು ಜಿಲ್ಲಾ ಪಂಚಾಯ್ತಿ ಡೈರಿ

Published On :

ಕ.ಪ್ರ. ವಾರ್ತೆ  ಗುಲ್ಬರ್ಗ  ಫೆ.6
ಜಿಲ್ಲಾ ಪಂಚಾಯಿತಿ 2014ರ ಹೊಸ ವರ್ಷದ ನಿಮಿತ್ತ ಹೊರ ತಂದಿರುವ ಡೈರಿ ಅನೇಕ ಅಚ್ಚರಿಯ ಮಾಹಿತಿಗಳ ಆಗರವಾಗಿದೆ ಎಂದರೂ ತಪ್ಪಾಗದು.
ಈ ಡೈರಿಯಲ್ಲಿ ಮಾಹಿತಿಗಳು ಅದೆಷ್ಟು ತಾಜಾ ಎಂದರೆ ಕಳೆದ ವರ್ಷವೇ ಇಲ್ಲಿನ ಕೆಲವರು ನಿಗಮ- ಮಂಡಳಿ ಅಧಿಕಾರದಿಂದ ಕೆಳಗಿಳಿದಿದ್ದಾರೆ, ಸರ್ಕಾರಗಳೇ ಬದಲಾಗಿವೆ. ಆದರೂ ಬಿಜೆಪಿ ಸರ್ಕಾರದಲ್ಲಿ ನೇಮಕಗೊಂಡವರನ್ನೇ ನಿಗಮ- ಮಂಡಳಿಯ ಅಧ್ಯಕ್ಷರು ಎಂದು ತೋರಿಸಿ ಅವರ ಫೋನ್ ನಂಬರ್‌ಗಳ ಮಾಹಿತಿಯನ್ನು ಡೈರಿಯಲ್ಲಿ ಢಾಳವಾಗಿ ನೀಡಲಾಗಿದೆ.
ಹತ್ತು ಹಲವು ಯಡವಟ್ಟು: ಡಾ. ವಿಕ್ರಂ ಪಾಟೀಲ್ ಎಂಎಸ್‌ಐಎಲ್‌ಗೆ, ಅಮರನಾಥ ಪಾಟೀಲ್ ಎಚ್ಕೆಡಿಬಿಗೆ ಹಾಗೂ ಗಿರೀಶ ಮಟ್ಟಣ್ಣನವರ್ ಕಾಡಾಕ್ಕೆ ಅಧ್ಯಕ್ಷರು ಎಂದು ಅವರ ಸಂಪರ್ಕ ಸಂಖ್ಯೆಗಳನ್ನು ಡೈರಿಯಲ್ಲಿ ಮಾಹಿತಿಗಾಗಿ ನೀಡಲಾಗಿದೆ. ಅಷ್ಟೇ ಯಾಕೆ, ಈ ಡೈರಿಯಲ್ಲಿನ ಪತ್ರಿಕೆಗಳ ವರದಿಗಾರರ ಮಾಹಿತಿ, ಸಂಪರ್ಕ ಸಂಖ್ಯೆಗಳ ಪುಟದಲ್ಲಿಯೂ ಇಂತಹದ್ದೇ ಸಾಕಷ್ಟು ಯಡವಟ್ಟುಗಳು ಕಾಣಿಸಿಕೊಂಡಿವೆ.
ಉದಯ ಸುದ್ದಿವಾಹಿನಿ ವರದಿಗಾರ ಸುಭಾಸ ಪಾಠೋಳೆ ನಿಧನರಾಗಿ ವರ್ಷಗಳೇ ಉರುಳಿದ್ದರೂ ಅವರ ಮೊಬೈಲ್ ನಂಬರ್ ಪ್ರಕಟಣೆ ಮಾಡಲಾಗಿದೆ. ಇನ್ನು ಸ್ಥಳೀಯವಾಗಿ ಅನೇಕ ಪ್ರಮುಖ ಪತ್ರಿಕೆಗಳಲ್ಲಿನ ವರದಿಗಾರರ ಬದಲಾವಣೆಯಾಗಿ ವರ್ಷಗಳೇ ಕಳೆದರೂ ಹಳೆಯ ಮಾಹಿತಿಯನ್ನೇ ನೀಡಲಾಗಿದೆ.
ವರದಿಗಾರರ ವಿಚಾರದಲ್ಲಿ ವಾರ್ತಾ ಇಲಾಖೆಯೇ ಮಾಹಿತಿ ನವೀಕರಿಸುತ್ತಿರುತ್ತದೆ. ವಾರ್ತಾ ಇಲಾಖೆಗೆ ಸಂಪರ್ಕಿಸಿ ತಾಜಾ ಮಾಹಿತಿ ಪಡೆದು ಡೈರಿಯಲ್ಲಿ ನೀಡಿದ್ದರೆ ಈ ಪುಟ ಇದ್ದದ್ದಕ್ಕೂ ಸಾರ್ಥಕವಾಗುತ್ತಿತ್ತೇನೋ.. ಆದರೆ ಜಿಪಂ ಅಧಿಕಾರಿಗಳು ಡೈರಿ ಮುದ್ರಣವನ್ನೂ ಎಂದಿನಂತೆ ಸರ್ಕಾರಿ ಕೆಲಸ ಎಂಬಂತೆ ನೀರಸವಾಗಿ ಮಾಡಿದ್ದರಿಂದಲೇ ಇಂತಹ ಯವಟ್ಟುಗಳು ಡೈರಿಯ ಪುಟ ಪುಟಗಳಲ್ಲಿಯೂ ರಾಚುತ್ತಿವೆ.
ತಮ್ಮ ಇಲಾಖೆ ಮಾಹಿತಿಯನ್ನೂ ಪರಿಷ್ಕರಿಸಿಲ್ಲ: ಡೈರಿ ಮಾಹಿತಿ ಮೇಲ್ದರ್ಜೆಗೇರಿಸುವಾಗ ಜಿಪಂ ಅಧಿಕಾರಿಗಳು ಅದೆಷ್ಟು ಸುಸ್ತಾಗಿದ್ದರು ಎಂದರೆ- ತಮ್ಮದೇ ಇಲಾಖೆಯ ಅಧಿಕಾರಿಗಳ ಬದಲಾವಣೆಗಳಾದರೂ ಮಾಹಿತಿ ಮೇಲ್ದರ್ಜೆಗೇರಿಸಿ ನೀಡಿಲ್ಲ ಎಂಬುದು ಗಮನಾರ್ಹ.
ಇಲ್ಲಿನ ಉಪ ಕಾರ್ಯದರ್ಶಿ ವಸಂತ ಕುಲ್ಕರ್ಣಿ ವರ್ಗಗೊಂಡಿದ್ದು ಆ ಸ್ಥಾನದ ಕಾರ್ಯವನ್ನು ಪ್ರಭಾರ ಲೆಕ್ಕಾಧಿಕಾರಿ ಹೊನ್ನಲಿಂಗಪ್ಪ ಹೊತ್ತುಕೊಂಡಿದ್ದಾರೆ. ಆದರೆ ಇಂದಿಗೂ ಡೈರಿಯಲ್ಲಿ ವಸಂತ ಕುಲ್ಕರ್ಣಿ ಹೆಸರು ಅಚ್ಚಾಗಿದೆ. ಇದಲ್ಲದೆ ಯೋಜನಾಧಿಕಾರಿ ವಿರುಪಾಕ್ಷಪ್ಪ ಕಿರಣಗಿ ವಯೋನಿವೃತ್ತಿ ಹೊಂದಿ ಆ ಸ್ಥಾನ ಖಾಲಿ ಇದ್ದರೂ ಡೈರಿಯಲ್ಲಿ ವಿರುಪಾಕ್ಷಪ್ಪನವರನ್ನೇ ಯೋಜನಾಧಿಕಾರಿಗಳೆಂದು ತೋರಿಸಲಾಗಿದೆ.
ಇನ್ನು ತಾಲೂಕುವಾರು ಪಂಚಾಯ್ತಿ ಕಚೇರಿಗಳ ದೂರವಾಣಿ, ಅಧಿಕಾರಿಗಳ ಸಂಪರ್ಕ ಸಂಖ್ಯೆ, ವಿಳಾಸ, ಜಿಪಂ ಸದಸ್ಯರ ಮಾಹಿತಿ, ದೂರವಾಣಿ ಸಹಿತ ನೀಡಲಾಗಿದೆ. ಇವುಗಳಲ್ಲಿ ಅದೆಷ್ಟು ಮಾಹಿತಿಗಳು ಸರಿಯಾಗಿಯೋ ಎಂಬುದು ಕರೆ ಮಾಡಿದಾಗಲೇ ಗೊತ್ತಾಗಬೇಕು.
ಕೊಳಕು ಶೌಚಾಲಯ ಫೋಟೋ: 2014ರ ಮೊದಲ ಜಿಪಂ ಸಾಮಾನ್ಯ ಸಭೆಯಲ್ಲಿ ಈ ಅಚ್ಚರಿ ಮಾಹಿತಿಗಳ ಕಣಜವಾಗಿರುವ ಡೈರಿಯನ್ನು ಅಧ್ಯಕ್ಷ ರಮೇಶ ಮರಗೋಳ ಬಿಡುಗಡೆ ಮಾಡಿದರು. ಸದಸ್ಯರೆಲ್ಲರಿಗೂ ಡೈರಿ ಪ್ರತಿಗಳನ್ನು ಪಂಚಾಯತ್ ರಾಜ್ ಕಾನೂನು ಪುಸ್ತಕದ ಜೊತೆಗೆ ನೀಡಲಾಯ್ತು.
ಡೈರಿ ಹಿಂಬದಿ ರಕ್ಷಾಪುಟ ನಿರ್ಮಲ ಭಾರತ ಅಭಿಯಾನದ ಸಂಕೇತವಾಗಿ ಮಹಿಳೆ, ಮಗುವನ್ನು ಎತ್ತಿಕೊಂಡು ಶೌಚದ ಮುಂದೆ ನಿಂತಿರುವ ಫೋಟೋ ಬಳಸಲಾಗಿದೆ. ಇದು ಹೇಗಿದೆ ಎಂದರೆ ಅಲ್ಲಿ ಸ್ವಚ್ಛತೆಯೇ ಮರೀಚಿಕೆಯಾಗಿದೆ. ಇದರ ಬದಲು ಉತ್ತಮ ಫೋಟೋ ಬಳಸಿ ನಿರ್ಮಲ ಬಾರತ ಅಭಿಯಾನದ ಯೋಜನೆ, ರೂಪುರೇಷೆ, ಮಾಹಿತಿಗಳನ್ನು ನಮೂದಿಸಿದ್ದರೆ ಅರ್ಥಪೂರ್ಣವಾಗಿರುತ್ತಿತ್ತು. ಇಲ್ಲಿಯೂ ಜಿಪಂ ಆಡಳಿತ ವ್ಯವಸ್ಥೆ ಮುಗ್ಗರಿಸಿದ್ದು ಸ್ಪಷ್ಟ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.