ಬಿಜೆಪಿ ಅಭ್ಯರ್ಥಿಯೆಂದು ಎಲ್ಲೂ ಹೇಳಿಲ್ಲ: ನಾಯಕ್
ನಾಹುಣಸಗಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಭಾಜಪ ಪಕ್ಷದ ಅಭ್ಯರ್ಥಿ ಎಂದು ಎಲ್ಲಿಯೂ ಹೇಳಿಲ್ಲ. ಇದು ಕೇವಲ ಮಾಧ್ಯಮದವರ ಸೃಷ್ಟಿ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಶಿವನಗೌಡನಾಯಕ ಹೇಳಿದರು.
ಪಟ್ಟಣದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಈ ಮುನ್ನ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ನಂತರ ಪಕ್ಷ ತೊರೆದ ಜಿಲ್ಲೆಯ ಮಾಜಿ ಸಚಿವರೊಬ್ಬರು ಮತ್ತೆ ಬಿಜೆಪಿಗೆ ಸೇರಿ ಪಕ್ಷದ ಟಿಕೆಟಿಗೆ ಪ್ರಯತ್ನಿಸುತ್ತಿರುವುದು ನಿಜವೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವನಗೌಡ ನಾಯಕ್, ನೋಡ್ರೀ, ನನಗೆ ಈ ಬಗ್ಗೆ ಇದುವರೆಗೂ ಏನೂ ಗೊತ್ತಿಲ್ಲ ಎಂದು ಮುಗ್ಧತೆಯ ಧಾಟಿಯಲ್ಲಿ ಹೇಳಿದರು.
ಕಾಂಗ್ರೆಸ್ ಜನವಿರೋಧಿ ಕಾರ್ಯ: ಸದ್ಯ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರವು ಹಿಂದಿನ ಬಿಜೆಪಿ ಸರ್ಕಾರದ ಸಾಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಮೊಟಕುಗೊಳಿಸುವ ಜನವಿರೋಧಿ ಕಾರ್ಯ ಮಾಡುತ್ತಿದೆ ಎಂದು ಆರೋಪಿಸಿದರು. 42 ಹೊಸ ತಾಲೂಕು ರಚನೆಯ ಕಾರ್ಯವನ್ನು ಮುಂದುವರೆಸಿಕೊಂಡು ಹೋಗದಿರುವುದಕ್ಕೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ನೀವು ಲೋಕಸಭಾ ಚುನಾವಣೆಯ ಅಭ್ಯರ್ಥಿಯಲ್ಲ ಎಂದು ಹೇಳುತ್ತಲೇ ಎಲ್ಲೆಡೆ ವ್ಯಾಪಕ ಸಂಚಾರ ಏಕೆ ಮಾಡುತ್ತಿರುವುದು ಎಂಬ ಸುದ್ದಿಗಾರರ ಪ್ರಶ್ನೆಗೆ ಶಿವನಗೌಡನಾಯಕ, ಪಕ್ಷದ ಸಂಘಟನೆಗಾಗಿಯೇ ಇದೀಗ ಚುರುಕಿನ ಸಂಚಾರ ಮಾಡುತ್ತಿದ್ದೇನೆ ವಿನಃ ಸ್ವಾರ್ಥಕ್ಕಾಗಿ ಅಲ್ಲ. ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಅವರ ಗೆಲುವಿಗಾಗಿ ಶಕ್ತಿ ಮೀರಿ ದುಡಿಯುತ್ತೇನೆ ಎಂದು ಉತ್ತರಿಸಿದರು.
ಶೀಘ್ರ ಹಾಟ್ನ್ಯೂಸ್: ಮಾತಿನ ಕೊನೆಯಲ್ಲಿ ಇನ್ನೂ ಸ್ವಲ್ಪ ದಿನಗಳಲ್ಲಿಯೆ ನಿಮಗಾಗಿ ಭಾರಿ ಹಾಟ್ನ್ಯೂಸ್ ನೀಡುತ್ತೇನೆ ಎಂದು ನಗು ನಗುತ್ತಲೆ ನುಡಿಯುತ್ತ ಥಟ್ ಅಂತ ಕಾರು ಹತ್ತಿ ಪ್ರಯಾಣ ಮುಂದುವರೆಸಿದರು. ರಾಯಚೂರು ಗ್ರಾಮಾಂತರ ಶಾಸಕ ತಿಪ್ಪರಾಜ್ ಹವಾಲ್ದಾರ್, ಮುಖಂಡ ಚಂದ್ರಶೇಖರಗೌಡ ಮಾಗನೂರ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

