ಮೋದಿಗಿಂತ ಮುಂಚೆ ನಾವಿದ್ದೀವಿ..: ಖರ್ಗೆ, ಧರಂ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಫೆ.22
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಗಾಳಿ ಕರ್ನಾಟಕದಲ್ಲಿ, ಅದರಲ್ಲೂ ಹೈದ್ರಾಬಾದ್ ಕರ್ನಾಟಕದಲ್ಲಿ ಕೆಲಸಕ್ಕೆ ಬಾರದು. ಇಲ್ಲಿ ಮೋದಿಗಿಂತ ಮುಂಚೆ ನಾವಿದ್ದೀವಿ, ಮೋದಿ ಗಾಳಿ ತಡೆಯೋ ಹೆಬ್ಬಂಡೆಗಳಿರುವಾಗ ಯಾವ ಗಾಳಿಯೂ ಪರಿಣಾಮ ಬೀರದು ಎಂದು ಕಾಂಗ್ರೆಸ್ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್ ಹೇಳಿದ್ದಾರೆ.
ಗುಲ್ಬರ್ಗದಲ್ಲಿ ರೇಲ್ವೆ ಮೂಲ ಸೌಕರ್ಯ ಲೋಕಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ಬರು ನಾಯಕರು, ಮೋದಿ ಈಚೆಗೆ ಬಂದವರು. 1969ರಿಂದ ರಾಜಕೀಯದಲ್ಲಿ ನಾವಿದ್ದೇವೆ. ನಮಗಿಂತ ಮುಂಚೆಯೇ ಅನೇಕ ಮಹನೀಯರು ರಾಜ್ಯದಲ್ಲಿ ಕಾಂಗ್ರೆಸ್ ಕಟ್ಟಿದ್ದಾರೆ. ಇಂದಿರಾಗಾಂಧಿಯವರೂ ರಾಜ್ಯಕ್ಕೆ ಬಂದು ಜನಪರವಾಗಿ ಕೆಲಸ ಮಾಡಿದವರು. ಹೀಗಿರುವಾಗ ಮೊದಲಿನಿಂದಲೂ ಇರುವ ನಾವು ಹೆಚ್ಚೋ, ಈಚೆಗೆ ಬಂದ ಮೋದಿ ಹೆಚ್ಚೋ.. ಜನರೇ ನಿರ್ಧಾರ ಮಾಡ್ತಾರೆ ಎಂದರು ಖರ್ಗೆ.
ಕಲಂ 371 ಮಾಡಿದವು ಯಾರ್ರಿ: ಕಲಂ 371 (ಜೆ) ಜಾರಿಗೆ ತಂದವರು ಯಾರ್ರಿ, ನರೇಂದ್ರ ಮೋದಿ ಮಾಡ್ಯಾರೇನ್ರಿ. ಜನರ ಕೆಲಸ ಮಾಡೋರು ನಾವು, ಜನಾ ನಮಗೆ ಮತ ಹಾಕ್ತಾರೆ. ಮೋದಿ ಗಾಳಿ ಇಲ್ಲೆಲ್ಲಾ ಕೆಲಸಕ್ಕೆ ಬಾರದು. ಬರುವ ಚುನಾವಣೆಯಲ್ಲಿ ಜನತೆಯೇ ಇದನ್ನು ಸಾಬೀತು ಮಾಡುತ್ತಾರೆ ಎಂದವರು ಧರಂಸಿಂಗ್.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಧರಂಸಿಂಗ್, ಪತ್ರಿಕೆಯಲ್ಲಿ ಮೋದಿ ಗಾಳಿ ಕಾಣುತ್ತಿದೆ. ನಿಜವಾಗಿಯೂ ಜನಮನದಲ್ಲಿ ಅದಿಲ್ಲ, ಜನರ ಕೆಲಸ ಮಾಡಿದ ಕಾಂಗ್ರೆಸ್ ನಾಯಕರೇ ಜನರ ಮನದಲ್ಲಿದ್ದಾರೆ ಎಂದರು. ಪೇಪರ್ ಮಂದಿ ನೀವು. ನಮ್ಮ ಕೆಲಸದ ಬಗ್ಗೇನೂ ಬರೀಬೇಕು... ಎಂದು ಪತ್ರಿಕೆಯವರಿಗೆ ಧರಂ ಕಿವಿಮಾತು ಹೇಳಿದರು.
ಸಂವಿಧಾನದ ಕಲಂ 371 (ಜೆ) ಮಾಡಲಿಕ್ಕಿ ಎನ್ಡಿಎ ಸರ್ಕಾರ ಇದ್ದಾಗ ಯಾರೂ ಮನಸ್ಸು ಮಾಡಲಿಲ್ಲ. ಅಡ್ವಾಣಿಯವರೇ ಈ ಪ್ರಸ್ತಾವನೆ ತಿರಸ್ಕರಿಸಿದ್ದರು ಎಂಬುದು ರಟ್ಟಾದ ಗುಟ್ಟು. ಹಿಂದುಳಿದ ಭಾಗದ ಪ್ರಗತಿಗೆ ನೆರವು ನೀಡಲು ಹಿಂದೆ ಮುಂದೆ ನೋಡಿದವರಿಗೆ ಜನ ಗೆಲ್ಲಿಸುತ್ತಾರೆ ಅನ್ನೋದು ಸುಳ್ಳು. ಜನ ಜಾಣರಿದ್ದಾರೆ. ಎಲ್ಲವನ್ನೂ ಅಳೆದು ತೂಗಿ ಮತ ಹಾಕುತ್ತಾರೆ ಎಂದು ಧರಂಸಿಂಗ್ ಮಾರ್ಮಿಕವಾಗಿ ಹೇಳಿದರು.
ಜನಪರ ಕೆಲಸ ಮಾರೋರು ಕಾಂಗ್ರೆಸ್ಸಿಗರು: ಸಾರ್ವಜನಿಕ ಸಭೆಯಲ್ಲಿಯೂ ಧರಂಸಿಂಗ್ ಗುಲ್ಬರ್ಗಕ್ಕೆ ಫೆ. 28ರಂದು ನಮೋ ರ್ಯಾಲಿ ನಡೆಯುತ್ತಿರುವ ಬಗ್ಗೆ ವ್ಯಂಗ್ಯವಾಗಿ ಪ್ರಸ್ತಾಪಿಸಿದ್ದರಲ್ಲದೆ, ಮುಂದೆ ಬರೋರು ನಿಮ್ಮ ಪರವಾಗಿ ಏನೂ ಕೆಲಸ ಮಾಡಿಲ್ಲ, ಮಾಡೋದು ಇಲ್ಲ. ನೀವು ನಮ್ಮ ಜೊತೆಗೆ ಇರ್ರಿ. ಖರ್ಗೆಯವರು ನೋಡಿ, ನೀವು ಕೇಳರಿ, ಬಿಡ್ರಿ ಕೆಲ್ಸ ಮಾಡ್ತಿದ್ದಾರೆ. ನಾವು ನಿಮ್ಮ ಪರ ಕೆಲಸಕ್ಕೆ ಸದಾ ಸಿದ್ಧ. ನಮ್ಮನ್ನು ನೀವೆಲ್ಲರೂ ಬರುವ ದಿನಗಳಲ್ಲಿ ಬೆಂಬಲಿಸಿ ಎಂದು ಸೇರಿದ್ದ ಜನಸ್ತೋಮವನ್ನು ಉದ್ದೇಶಿಸಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

