ವಾಡಿ-ಗದಗ ಯೋಗಾಯೋಗ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಫೆ.27
ಗುಲ್ಬರ್ಗ: ಸ್ವಾತಂತ್ರ್ಯ ಬಂದು ಆರೂವರೆ ದಶಕ ಉರುಳಿದರೂ ಉತ್ತರ ಕರ್ನಾಟಕದ ಪ್ರಮುಖ ಪ್ರಾಂತ್ಯಗಳಾದ ಹೈದ್ರಾಬಾದ್ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ 12ಕ್ಕೂ ಹೆಚ್ಚು ಜಿಲ್ಲೆಗಳ ಮಧ್ಯೆ ರೈಲು ಸಂಪರ್ಕವೇ ಇರಲಿಲ್ಲ ಎಂದರೆ ಅಚ್ಚರಿ ಪಡಬೇಡಿ.
ಇದು ಕಟು ವಾಸ್ತವ, ಹೈ- ಕ ಅದೆಷ್ಟು ಹಿಂದುಳಿದಿದೆ, ಪ್ರಾದೇಶಿಕ ಅಸಮಾನತೆ ಉ- ಕ ಸೀಮೆಯನ್ನು ಹೇಗೆ ಅಟಕಾಯಿಸಿಕೊಂಡು ಸತಾಯಿಸುತ್ತಿದೆ ಎನ್ನಲು ಇದಕ್ಕಿಂತ ಬೇರೆ ಕನ್ನಡಿ ಅನಗತ್ಯ.
104 ವರ್ಷಗಳ ಕನಸು: 1910ರಲ್ಲೇ ಬ್ರಿಟಿಷ ಸರ್ಕಾರದ ಪರವಾಗಿ ಸಿಟಿ ವಾಕರ್ ಉ- ಕ ಪ್ರಾಂತದ ಪ್ರಮುಖ ಸೀಮೆಗಳನ್ನು ರೈಲು ಸಂಪರ್ಕದಲ್ಲಿ ಬೆಸೆಯುವ ಮಹತ್ವ ಅರಿತಿದ್ದಲ್ಲದೆ ಅದಕ್ಕಾಗಿ ವಾಡಿ- ಗದಗ 251 ಕಿಮೀ ಮಾರ್ಗ ಸಮೀಕ್ಷಿಸಿ 1. 87 ಕೋಟಿ ರು ಅಂದಾಜು ಪ್ರಸ್ತಾವನೆ ಸಿದ್ಧಪಡಿಸಿದ್ದರು. ಏನಕೇನ ಕಾರಣಗಳಿಂದಾಗಿ ಹೈ- ಕ ದಲ್ಲಿದ್ದ ನಿಜಾಂ ಅರಸರ ಆಡಲಿತ ಈ ಪ್ರಸ್ತಾವನೆಗೆ ಹಸಿರು ನಿಶಾನೆ ತೋರಿಸಲಿಲ್ಲ.
ಅಂದಿನಿಂದ ಇಂದಿನವರೆಗೂ ಧೂಳು ತಿನ್ನುತ್ತಿದ್ದ ಈ ಮಾರ್ಗ ಪ್ರಸ್ತಾವನೆಗೆ ಇದೀಗ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಮರುಜೀವ ನೀಡಿದ್ದಾರೆ, ಇದರೊಂದಿಗೆ ಉ- ಕ ಮಂದಿಯ ಶತಮಾನದ ಕನಸು ನನಸಾದಂತಾಗಿದೆ.
ಈ ಮಹತ್ವಾಕಾಂಕ್ಷಿ ರೇಲು ಮಾರ್ಗ ಕಾಮಗಾರಿಗೆ ಫೆ. 28ರಂದು ವಾಡಿಯಲ್ಲಿ ನಡೆಯಲಿರುವ ಅಧಿಕೃತ ಸಮಾರಂಭದಲ್ಲಿ ಅಡಿಗಲ್ಲು ಹಾಕಲಾಗುತ್ತಿದೆ.
1,922 ಕೋಟಿ ಯೋಜನೆ: ವಾಡಿ- ಗದಗ ಮಧ್ಯೆ 252 ಕಿ.ಮೀ. ಹೊಸ ಮಾರ್ಗ ನಿರ್ಮಾಣದ ಈ ಯೋಜನೆಯ ವೆಚ್ಚ ರು. 1, 922 ಕೋಟಿ 1910ರಲ್ಲಿ ಬಿಟಿಷ್ ಅಧಿಕಾರಿ ಸಿಟಿ ವಾಕರ್ ಈ ಯೋಜನೆಯ ಸಮೀಕ್ಷೆ ಮಾಡಿ ಅಂದಾಜು ವೆಚ್ಚ 1. 87 ಕೋಟಿ ರು ಪ್ರಸ್ತಾವನೆ ನಿಜಾಂ ಸರ್ಕಾರಕ್ಕೆ ಸಲ್ಲಿಸಿದ್ದ. 104 ವರ್ಷಗಳ ಹಿಂದಿನ 1. 87 ಕೋಟಿ ರು ವೆಚ್ಚದ ಯೋಜನೆಯ ಇಂದಿನ ವೆಚ್ಚ ರು. 1, 922 ಕೋಟಿ. ರಾಜ್ಯ ಹಾಗೂ ಕೇಂದ್ರ ಸರ್ಕಾರದ 50: 50 ಪಾಲುದಾರಿಕೆ ಯೋಜನೆ ಇದಾಗಿದೆ. ಯೋಜನೆಯ ಒಟ್ಟು ವೆಚ್ಚದಲ್ಲಿ ಕೇಂದ್ರ- ರಾಜ್ಯಗಳ ಪಾಲು ಸಮಪಾಲು ಆಗಿರಲಿದೆ. ಆದರೆ ಕರ್ನಾಟಕ ರಾಜ್ಯ ಸರ್ಕಾರ ಸದರಿ ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಉಚಿತವಾಗಿ ಒದಗಿಸಬೇಕು.
ಸಿಎಂ ಸಿದ್ದರಾಮಯ್ಯ ಪ್ರವಾಸ
ಮುಖ್ಯಮಂತ್ರಿ ಸಿದ್ದರಾಮಯ್ಯ ಫೆ. 28ರಂದು ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ಚಿತ್ತಾಪುರ ತಾಲೂಕಿನ ವಾಡಿ ಎಸಿಸಿ. ಸಿಮೆಂಟ್ ಕಾರ್ಖಾನೆಯ ಹೆಲಿಪ್ಯಾಡ್ಗೆ ಆಗಮಿಸುವರು. ಬೆಳಗಿನ 11ಗಂಟೆಗೆ ವಾಡಿ ರೈಲು ನಿಲ್ದಾಣದಲ್ಲಿ ವಾಡಿ-ಗದಗ ಹೊಸ ರೈಲ್ವೆಮಾರ್ಗದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವರು. ಮಧ್ಯಾಹ್ನ 12 ಗಂಟೆಗೆ ಹೆಲಿಕಾಪ್ಟರ್ ಮೂಲಕ ವಾಡಿಯಿಂದ ಕೊಪ್ಪಳ ಜಿಲ್ಲೆಯ ಯಲಬುರ್ಗಾಕ್ಕೆ ಪ್ರಯಾಣಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

