ಗುಲ್ಬರ್ಗಾ

ಜೈಲಿಗೂ, ವಸತಿ ನಿಲಯಕ್ಕೂ ವ್ಯತ್ಯಾಸವಿಲ್ಲವೇ?

Published On :

ಅಫಜಲ್ಪುರ: ತಾಲೂಕಿನ ದೇಸಾಯಿ ಕಲ್ಲೂರ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಸುಮಾರು ನಾಲ್ಕು ದಿನಗಳಿಂದ ವಿದ್ಯಾರ್ಥಿಗಳಿಗೆ ಊಟ ನೀಡಿಲ್ಲ, ಕುಡಿಯಲು ನೀರಿಲ್ಲ. ನಾಲ್ಕು ತಿಂಗಳಿನಿಂದ ಸಾಬೂನು, ಎಣ್ಣೆ ನೀಡಿಲ್ಲ. ಸೂಕ್ತ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಕಂಗಾಲಾದಂತಾಗಿದೆ ಎಂದು ಜೈ ಕರವೇ ತಾಲೂಕು ಅಧ್ಯಕ್ಷ ಸುರೇಶ ಅವಟೆ ಆಕ್ರೋಶ ವ್ಯಕ್ತಪಡಿಸಿದರು.
ಅವರು ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯ ಮುಂಭಾಗದಲ್ಲಿ ವಸತಿ ನಿಲಯದ ಮಕ್ಕಳೊಂದಿಗೆ ಪ್ರತಿಭಟನೆಯನ್ನು ನಡೆಸಿ, ಮಾತನಾಡಿ, ವಸತಿ ನಿಲಯದಲ್ಲಿ ಸಧ್ಯದ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ವಸತಿ ನಿಲಯದ ನಿಲಯ ಪಾಲಕರು ಒಂದೂವರೆ ತಿಂಗಳಿನಿಂದ ನಿಲಯಕ್ಕೆ ಹೋಗಿರುವುದಿಲ್ಲ. ವಿದ್ಯಾರ್ಥಿಗಳ ಕುಂದು ಕೊರತೆಯ ಕುರಿತು ವಿಚಾರಿಸಿಲ್ಲ. ವಸತಿ ನಿಲಯದಲ್ಲಿ ಒಂದು ಕಟ್ಟು ಅಕ್ಕಿ ಬಿಟ್ಟರೆ ಬೇರೆನು ಇಲ್ಲ. ಕುಡಿಯುವ ನೀರಿನಲ್ಲಿ ಹುಳಗಳಾಗಿದ್ದು, ಆ ನೀರನ್ನೆ ಕುಡಿದು ವಿದ್ಯಾರ್ಥಿಗಳು ಇರಬೇಕಾದ ಅನಿವಾರ್ಯತೆ ಇಲ್ಲಿದೆ. ಈ ಕುರಿತು ವಸತಿ ಪಾಲಕರಿಗೆ ಕೇಳಿದರೆ ಗದರಿಸುತ್ತಾರೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೊಡಿಕೊಳ್ಳುತ್ತಾರೆ.
ಜವಾಬ್ದಾರಿ ಇಲ್ಲದ ಅಧಿಕಾರಿಗಳು: ಈ ಕುರಿತು ಮಕ್ಕಳೊಂದಿಗೆ ಸಮಾಜ ಕಲ್ಯಾಣ ಇಲಾಖೆಯ ಮುಂದೆ ಪ್ರತಿಭಟನೆಯನ್ನು ನಡೆಸುತ್ತಿರುವಾಗ ಕಚೇರಿಯಲ್ಲಿ ಅಧಿಕಾರಿಗಳಾಗಲಿ, ವ್ಯವಸ್ಥಾಪಕರಾಗಲಿ ಇರಲಿಲ್ಲ. ವ್ಯವಸ್ಥಾಪಕ ಎಲ್.ಬಿ. ಕುಲಕರ್ಣಿ ಸಹಿ ಮಾಡಿ ಕಚೇರಿಯನ್ನು ಬಿಟ್ಟು ಹೋಗಿರುವುದು ಖಂಡನಿಯವಾಗಿದೆ. ಇಲಾಖೆ ಅಧಿಕಾರಿ ಶ್ರೀಮಂತ ಕೋಟ್ರೆ ಬಾರದೇ ಇರುವುದು ಕೂಡ ಇಲಾಖೆಯ ಲೋಪದೋಷವನ್ನು ಎತ್ತಿ ತೋರುತ್ತವೆ. ಹೀಗಾಗಿ ಕೂಡಲೇ ದೇಸಾಯಿ ಕಲ್ಲೂರ ವಸತಿ ನಿಲಯದಲ್ಲಿರುವ ತೊಂದರೆಗಳನ್ನು ಬಗೆಹರಿಸಬೇಕು ಮತ್ತು ಮಕ್ಕಳಿಗೆ ಸರಿಯಾದ ಪೌಷ್ಟಿಕ ಆಹಾರ ಮತ್ತು ಮೂಲ ಸೌಕರ್ಯಗಳನ್ನು ಒದಗಿಸಬೇಕು. ಇಲ್ಲವಾದರೆ ಬೀದಿಗಿಳಿದು ಹೋರಾಟ ರೂಪಿಸಬೇಕಾಗುತ್ತದೆ ಎಂದು ಅವರು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಪಿ. ನಂದಗಿರಿ ಅವರಿಗೆ ಮನವಿ ಸಲ್ಲಿಸಿದರು.
ಭರವಸೆ: ಮನವಿಗೆ ಸ್ಪಂದಿಸಿದ ಕಾರ್ಯನಿರ್ವಾಹಕ ಅಧಿಕಾರಿ ನಂದಗಿರಿ ಅವರು ಇನ್ನೆರಡು ದಿನಗಳಲ್ಲಿ ವಸತಿ ನಿಲಯದಲ್ಲಿ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸುವ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಜೈ ಕರವೇ ಉಪಾಧ್ಯಕ್ಷ ಮಹಾಂತೇಶ ಗುಣಾರಿ, ರವಿಕಿರಣ ಬೆಟ್ಟಜೇವರ್ಗಿ, ಶರಣು ತಾವರಖೇಡ, ಹಣಮಂತ ಮ್ಯಾಳೇಸಿ, ಸಂತೋಷ ಅಂದೊಡಗಿ, ಯಲ್ಲಪ್ಪ ಗ್ಯಾನಾಗೋಳ, ಖಾಜಪ್ಪ ದೊಡ್ಮನಿ, ಚನ್ನಬಸು ದೊಡ್ಮನಿ, ಇಲಾಖೆ ಅಧಿಕಾರಿಗಳಾದ ಸತೀಶ ದಳಪತಿ, ಮಂಜುಳಾ ಬನ್ನಿಕಟ್ಟಿ, ಸುರೇಶ ವಗದಗರ್ ನಿಲಯ ಪಾಲಕಿ ಬಾಳವ್ವ ಪೂಜಾರಿ ಸೇರಿದಂತೆ ವಸತಿ ನಿಲಯದ ವಿದ್ಯಾರ್ಥಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.