ಕಾಣದ ಕಡಲಿಗೆ ಜಾರಿದ ಹಾಡು ಹಕ್ಕಿಗೆ ನಮನ
ಗುಲ್ಬರ್ಗ; ಅಲ್ಲಿ ನೆರೆದವರ ಕಣ್ಣಂಚು ಒದ್ದೆ ಮಾಡಿದ ಭಾವುಕ ಕ್ಷಣವದು. ಶನಿವಾರ ಇಳಿಹೊತ್ತಿನಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಕಚೇರಿ- 1 ಮತ್ತು 2ರ ವತಿಯಿಂದ ಕನ್ನಡ ಕ್ರಿಯಾ ಸಮಿತಿ ಈಶಾನ್ಯ ವಲಯದ ಆಶ್ರಯದಲ್ಲಿ ಸಮಾನ ಮನಸ್ಕರೆಲ್ಲ ಒಂದೆಡೆ ಸೇರಿ ಇಹಲೋಕ ತ್ಯಜಿಸಿದ್ದ ಜಿಎಸ್‌ಎಸ್ ಅವರಿಗೆ ಗೀತ ನಮನ ಸಲ್ಲಿಸಲಾಯ್ತು.
ಕಾಣದ ಕಡಲಿಗೆ ಜಾರಿಗೆ ಹಾಡು ಹಕ್ಕಿಗೊಂಚೂರು ನುಡಿ ಮತ್ತು ಅವರದೇ ಕವಿತೆಯ ಗೀತ ನಮನ ಸಲ್ಲಿಸಿದ ಆರ್ದ್ರ ಘಳಿಗೆ ಅದಾಗಿತ್ತು. ಕನ್ನಡ ಸಾಹಿತ್ಯ ಲೋಕ ಮತ್ತು ಸಮಸ್ತ ಕನ್ನಡಿಗರು ಸಂಕಟಪಟ್ಟುಕೊಳ್ಳುವಂಥ ವಿಷಯವೊಂದು ಕಿವಿಗೆ ಅಪ್ಪಳಿಸಿದಂತೆ ಸಾಹಿತ್ಯ ಲೋಕದ ದಿಗ್ಗಜ ಅದರಲ್ಲೂ ಶಿವಮೊಗ್ಗದ ಮತ್ತೊಂದು ಮೊಗ್ಗು ಕಳಚಿತು ಎಂದು ಬಸವರಾಜ ಜಾನಕಟ್ಟಿ ಭಾವುಕವಾಗಿ ನುಡಿದರು.
ವೆಂಕಟೇಶ ಜನಾದ್ರಿ ನುಡಿ ನಮನ ಸಲ್ಲಿಸುತ್ತ ಹಣತೆ ಕವಿಯೆಂದೇ ಹೆಸರಾದ ನಮ್ಮೊಳಗಿನ ಮನುಷ್ಯನನ್ನು ನಮಗೆ ತೋರಿಸಿದ ಕವಿ, ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರು ಬಯಲಲ್ಲಿ ಬಯಲಾಗಿದ್ದು ಸಾರಸ್ವತ ಲೋಕಕ್ಕೆ ಬಹುದೊಡ್ಡ ನಷ್ಟ. ನಮ್ಮ ಸಂಸ್ಥೆ ಮತ್ತು ಸಮಸ್ತ ಸಿಬ್ಬಂದಿಯವರಂತೂ ಈ ಹಣತೆಯ ಕವಿಯನ್ನು ಮರೆಯಲ್ಹೇಗೆ ಸಾಧ್ಯ. ಕನ್ನಡದ ಮನಸ್ಸುಗಳು ಹೀಗೆ ಒಂದೆಡೆ ಸೇರಿ ಅಗಲಿದ ಚೇತನಕ್ಕೆ ಒಂಚೂರು ನಮನ ಸಲ್ಲಿಸಿದಲ್ಲಿ ಆ ಜೀವ ಸಂತೃಪ್ತಿಗೊಳ್ಳುತ್ತದೆ ಎಂದರು.
ಚನ್ನವೀರಪ್ಪ ಹೂಗಾರ ಅವರು ಜಿಎಸ್‌ಎಸ್ ಅವರು ಗುಲ್ಬರ್ಗಕ್ಕೆ ಆಗಮಿಸಿದಾಗಿನ ಕ್ಷಣದ ಅನುಭವ ಹಂಚಿಕೊಂಡರು. ಅಧ್ಯಕ್ಷತೆ ವಹಿಸಿದ್ದ ರಹೆಮಾನ್ ಮಸ್ಕಿ ಅವರು ಡಿಸೆಂಬರ್ ತಿಂಗಳವೇ ಆಘಾತಕರ ತಿಂಗಳಾಗಿರುವ ಕುರಿತು ಹೇಳುತ್ತಾ ಜಿಎಸ್‌ಎಸ್ ಅವರ ನಿಧನ ತಿಳಿದಾಕ್ಷಣ ದಿಗಿಲಾಯಿತು ಎಂದರು.
ಇದೇ ಸಂದರ್ಭದಲ್ಲಿ ಅಣ್ಣಾರಾವ್ ಲಾಲಿ 'ಎದೆ ತುಂಬಿ ಹಾಡಿದೆನು ಅಂದು ನಾನು...' ಎಂಬ ಕವಿತೆಯನ್ನು ಮತ್ತು ಸುಶೀಲಾ ಅವರು 'ಹಾಡು ಹಳೆಯದಾದರೇನು, ಭಾವ ನವನವೀನ...' ಎಂಬ ಕವಿತೆಗೆ ಧ್ವನಿಯಾದರು. ಹೀಗೆ, ಅಂದು ಸಂಸ್ಥೆ ತನ್ನೆಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯೊಂದಿಗೆ ಈ ಕವಿಗೊಂದಿಷ್ಟು ಭಾವ ನಮನಗಳನ್ನು ಈ ಅಕ್ಷರಗಳಲ್ಲಿ, ಅವರದೇ ಕವಿತೆಯ ಹಾಡಿನ ಮೂಲಕ ಸಲ್ಲಿಸಿ ಕವಿ ಮನ ತಣ್ಣಗಿರಲೆಂದು ಬಯಸಿತ್ತು.
ಸೋಮಶೇಖರ್ ಹಿರೇಮಠ ಸ್ವಾಗತಿಸಿದರು. ಗಣಪತಿ ಗೋಳಾ ವಂದಿಸಿದರು. ವೀರಭದ್ರಪ್ಪ ಅರಕೇರಿ ಕಾರ್ಯಕ್ರಮ ನಿರೂಪಿಸಿದರು. ಗುಲ್ಬರ್ಗ 1ರ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ವಿಠಲ್ ಭೀಮನ್, ಮಲ್ಲಿಕಾರ್ಜುನ ಡೆಂಗಿ, ರಘು ಜಾಯಿ, ಪ್ರಾಣೇಶ ಜೋಷಿ, ಮಲ್ಲಿಕಾರ್ಜುನ, ಚನ್ನಬಸಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

