ಗುಲ್ಬರ್ಗಾ

32 ಗ್ರಾಮಗಳಿಗೆ ಮೂಲ ಸೌಲಭ್ಯಕ್ಕೆ ಪ್ರಾಮಾಣಿಕ ಯತ್ನ

Published On :

ಕ.ಪ್ರ. ವಾರ್ತೆ, ಚಿಂಚೋಳಿ, ಜ.7
ಸೇಡಂ ವಿಧಾನಸಭಾ ಮತಕ್ಷೇತ್ರಕ್ಕೆ ಒಳಪಟ್ಟಿರುವ ಚಿಂಚೋಳಿ ತಾಲೂಕಿನ 32 ಗ್ರಾಮಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಉನ್ನತ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.
ತಾಲೂಕಿನ ಯಾಕಾಪುರ ಗ್ರಾಮದಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ ಅನುದಾನದ 15 ಲಕ್ಷ ವೆಚ್ಚದ ರಾಷ್ಟ್ರೀಯ ಕುಡಿಯುವ ನೀರು ಸರಬರಾಜು ಯೋಜನೆ ಅಡಿಯಲ್ಲಿ ಮಂಜೂರಾಗಿರುವ ನೀರಿನ ಟ್ಯಾಂಕ್, 5 ಲಕ್ಷ ವೆಚ್ಚದ ಸಮುದಾಯ ಭವನ ಹಾಗೂ 3.50 ಲಕ್ಷ ವೆಚ್ಚದ ಸಿಮೆಂಟ್ ಕಾಮಗಾರಿಗಳ ಅಡಿಗಲ್ಲು ಸಮಾರಂಭ ನೇರವೇರಿಸಿ ಅವರು ಮಾತನಾಡಿದರು.
ವಿವಿಧ ಅಭಿವೃದ್ಧಿ ಕಾಮಗಾರಿ: ಕಳೆದ 2008ರ ವಿಧಾನಸಭಾ ಚುನಾವಣೆಯಲ್ಲಿ ಚಿಂಚೋಳಿ ತಾಲೂಕಿನ 32 ಗ್ರಾಮಗಳು ಸೇಡಂ ಮತಕ್ಷೇತ್ರಕ್ಕೆ ಒಳಪಟ್ಟಿದ್ದು, ಕಳೆದ 5 ವರ್ಷಗಳಲ್ಲಿ ಈ ಭಾಗದಲ್ಲಿ ಚಿಂಚೋಳಿ- ಸೇಡಂ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ 33 ಕೋಟಿ, ಸುವರ್ಣ ಗ್ರಾಮ ಯೋಜನೆ, ಸಮುದಾಯ ಭವನ, ಸಿಮೆಂಟ್ ರಸ್ತೆ ಶಾಲಾ ಕೋಣೆಗಳ ನಿರ್ಮಾಣ ಸೇರಿದಂತೆ 32 ಗ್ರಾಮಗಳಿಗೆ ಸರ್ಕಾರದ ವಿವಿಧ ಯೋಜನೆ ಅಡಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.
ತಾಲೂಕಿನ 7 ಗ್ರಾಮ ಪಂಚಾಯಿತಿ, 2 ಜಿಪಂ, 4 ತಾಪಂ ಮತಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿಪಡಿಸಲಾಗಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.
ಹಲವು ಕಾಮಗಾರಿ ಮಂಜೂರು: ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಸಂಜೀವನ್ ಯಾಕಾಪುರ ಮಾತನಾಡಿ, ಯಾಕಾಪುರ, ರಾಮತೀರ್ಥ ಗ್ರಾಮಗಳಲ್ಲಿ ಜಿಪಂ ಅನುದಾನದಿಂದ ಕುಡಿವ ನೀರು, ಸಿಮೆಂಟ್ ರಸ್ತೆ ಹಾಗೂ ಸಮುದಾಯ ಭವನ ನಿರ್ಮಾಣಕ್ಕಾಗಿ ಅನುದಾನ ಮಂಜೂರುಗೊಳಿಸಲಾಗಿದೆ. ಸಚಿವರು ಹಿಂದುಳಿದ ಭಾಗದ ಅಭಿವೃದ್ಧಿಗೆ ಹಾಗೂ ಜನರಿಗೆ ಇನ್ನೂ ಹೆಚ್ಚಿನ ಮೂಲ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ಹೇಳಿದರು.
ಸುಲೇಪೇಟ ಗ್ರಾಪಂ ಅಧ್ಯಕ್ಷೆ ಕವಿತಾ ಬೆಳ್ಳಿಚುಕ್ಕಿ, ಬಸವರಾಜ ಸಜ್ಜನಶೆಟ್ಟಿ, ಬಸವರಾಜ ಬೀರಾದಾರ, ಜಿಪಂ ಎಇಇ ರೇವಣಸಿದ್ದಪ್ಪ ಹಾಗರಗಿ, ಸುಭಾಶ ನಿಷ್ಟಿ, ಮಲ್ಲಪ್ಪ ಪೂಜಾರಿ, ಗ್ರಾಪಂ ಸದಸ್ಯ ಶಾಮರಾವ ಯಾಕಾಪೂರ, ಹಣಮಂತ ಯಾಕಾಪುರ, ತಾಪಂ ಸದಸ್ಯ ಬಸಯ್ಯಸ್ವಾಮಿ ಕೆರೋಳಿ, ಜಹೀರ ಪಟೇಲ್ ಇನ್ನಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.