ಸೆಮಿಸ್ಟರ್ ವಿರೋಧಿಸಿ ವಿದ್ಯಾರ್ಥಿಗಳ ರ್ಯಾಲಿ
ಕ.ಪ್ರ. ವಾರ್ತೆ ಗುಲ್ಬರ್ಗ ಜ.8
ಐಟಿಐ ತರಬೇತಿಯಲ್ಲಿ ಸದ್ಯದ ತರಬೇತಿ ಹಾಗೂ ಪರೀಕ್ಷಾ ಪದ್ಧತಿ ಕೈಬಿಟ್ಟು ಸೆಮಿಸ್ಟರ್ ಪದ್ಧತಿಯಲ್ಲಿ ಐಟಿಐ ಶಿಕ್ಷಣ ನೀಡುವ ವ್ಯವಸ್ಥೆ ಜಾರಿಗೆ ತಂದಿರುವ ನವದೆಹಲಿಯಲ್ಲಿರುವ ಉದ್ಯೋಗ ಮತ್ತು ತರಬೇತಿ ನಿರ್ದೇಶನಾಲಯದ ಕ್ರಮವನ್ನು ತೀವ್ರವಾಗಿ ವಿರೋಧಿಸಿ ನಗರದಲ್ಲಿ ಐಟಿಐ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಬುಧವಾರ ಬೀದಿಗಿಳಿದಿದ್ದಾರೆ.
ತಮ್ಮ ತರಗತಿಗಳನ್ನು ಬಹಿಷ್ಕರಿಸಿ ಹೋರಾಟ ನಡೆಸಿದ ವಿದ್ಯಾರ್ಥಿಗಳು ಏಕಾಏಕಿ ಸೆಮಿಸ್ಟರ್ ಜಾರಿ ಬೇಡ, ಈ ಕುರಿತಂತೆ ಅಧ್ಯಯನ, ಚರ್ಚೆಗಳು ನಡೆಯಬೇಕು. ಯಾರಿಗೂ ಗೊತ್ತಾಗದಂತೆ ಇಂತಹ ಅವೈಜ್ಞಾನಿಕ ಪದ್ಧತಿ ಜಾರಿಗೆ ತರುತ್ತಿರುವುದು ಖಂಡನೀಯ ಕ್ರಮ ಎಂದು ಡಿಜಿಇಟಿ ಕ್ರಮವನ್ನು ಖಂಡಿಸಿದರು.
ಆದೇಶ ಹಿಂಪಡೆಯುವವರಿಗೆ ಹೋರಾಟ ನಿಲ್ಲದು: ಐಟಿಐ ಕಾಲೇಜುಗಳಲ್ಲಿಯೂ ಈ ಹೊಸ ಪದ್ಧತಿ ಬಗ್ಗೆ ಸಾಕಷ್ಟು ಮಾಹಿತಿ ಇಲ್ಲ. ಐಟಿಐ ಆಡಳಿತವೇ ಗೊಂದಲದಲ್ಲಿರುವಾಗ ಯಾಕೆ ಇಂತಹ ಸೆಮಿಸ್ಟರ್ ಪದ್ಧತಿ ಜಾರಿಗೆ ತರಬೇಕು, ಡಿಜಿಇಟಿ ಆದೇಶದಂತೆ ರಾಜ್ಯದಲ್ಲಿರುವ ಉದ್ಯೋಗ ಮತ್ತು ತರಬೇತಿ ನಿರ್ದೇಶನಾಲಯದವರು ಸೆಮಿಸ್ಟರ್ ಪದ್ಧತಿ ಜಾರಿಗೆ ತಂದು ಆದೇಶ ಹೊರಡಿಸಿದ್ದಾರೆ. ಈ ಆದೇಶ ಮರಳಿ ಪಡೆಯುವವರೆಗೂ ತಮ್ಮ ಹೋರಾಟ ನಿಲ್ಲದು ಎಂದು ವಿದ್ಯಾರ್ಥಿಗಳು ಮೆರವಣಿಗೆಯುದ್ದಕ್ಕೂ ಘೋಷಣೆ ಕೂಗಿಜದರು.
ಎಐಡಿವೈಒ ಸಂಘಟನೆಯ ನೇತೃತ್ವದಲ್ಲಿ ಈ ಹೋರಾಟ ಸಂಘಟಿಸಲಾಗಿತ್ತು. ಸರ್ದಾರ್ ಪಟೇಲ್ ವೃತ್ತದ ಮೂಲಕ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಬಂದು ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿ ಅವರ ಮುಖಾಂತರ ಡಿಜಿಇಟಿಗೆ ಮನವಿ ಪತ್ರ ಸಲ್ಲಿಸಿದರು.
ಹೋರಾಟಕ್ಕೆ ಕ್ಯಾರೆ ಎನ್ನುತ್ತಿಲ್ಲ: ಸೆಮಿಸ್ಟರ್ ವಿರೋಧಿಸಿ ಕಳೆದ ಮೂರು ವಾರಗಳಿಂದ ವಿದ್ಯಾರ್ಥಿಗಳ ಹೋರಾಟ ಸಾಗಿದ್ದರೂ ಯಾರೂ ಕ್ಯಾರೆ ಎನ್ನುತ್ತಿಲ್ಲ ಎಂದು ಬೇಸರಿಸಿದ ವಿದ್ಯಾರ್ಥಿಗಳು, ರಾಜ್ಯದಲ್ಲಿರುವ ತರಬೇತಿ ನಿರ್ದೇಶನಾಲಯದವರು ಡಿಜಿಇಟಿಗೆ ಇಲ್ಲಿನ ಹೋರಾಟಗಳ ತೀವ್ರತೆ, ವಿದ್ಯಾರ್ಥಿಗಳ ಅಭಿಪ್ರಾಯ ಗಮನಕ್ಕೆ ತರುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದೂರಿದರು.
ಈಗಂತೂ ತರಗತಿ ಬಹಿಷ್ಕರಿಸಿ ಹೋರಾಟ ನಡೆಸಲಾಗಿದೆ. ಬರುವ ದಿನಗಳಲ್ಲಿ ಹೊರಾಟಕ್ಕೆ ಹಲವು ಹೊಸರೂಪ ನೀಡಲಾಗುತ್ತದೆ. ಸೆಮಿಸ್ಟರ್ ಆದೇಶ ವಾಪಸ್ ಆಗುವವರೆಗೂ ಹೋರಾಟ ನಡೆಸಲಾಗುತ್ತದೆ ಎಂದು ವಿದ್ಯಾರ್ಥಿಗಳು ಮನವಿಯಲ್ಲಿ ತಿಳಿಸಿದ್ದಾರೆ.
ಸೆಮಿಸ್ಟರ್ ಪದ್ಧತಿಗೆ ವಿರೋಧವೇಕೆ?: 1950ರ ದಶಕದಲ್ಲಿ ಆರಂಭವಾಗಿರುವ ಐಟಿಐಗಳಲ್ಲಿ ತರಬೇತಿಗೆ ಹೆಚ್ಚಿನ ಮಹತ್ವವಿದೆ. ಸೆಮಿಸ್ಟರ್ನಿಂದಾಗಿ ತರಬೇತಿ ಸಮಯ ಕಡಿತವಾಗುವ ಆತಂಕವಿದೆ. ಪರೀಕ್ಷೆ ಮತ್ತು ಅಂಕಕ್ಕೆ ಇದರಡಿಯಲ್ಲಿ ಮಹತ್ವ ದೊರಕುತ್ತದೆ. 2013ರ ಸೆಪ್ಟೆಂಬರ್ವರೆಗೂ ಡಿಜಿಇಟಿನಿಂದ ಸೆಮಿಸ್ಟರ್ ವಿಚಾರದಲ್ಲಿ ಕಾಲೇಜುಗಳಿಗೆ ಸ್ಪಷ್ಟ ಮಾಹಿತಿ ಬಂದಿರಲಿಲ್ಲ. 2 ವರ್ಷಗಳ ಹಿಂದೆಯೇ ಸೆಮಿಸ್ಟರ್ ಪದ್ಧತಿ ಬಗ್ಗೆ ಚರ್ಚೆಯಾಗಿತ್ತು.
ಈ ಪದ್ಧತಿಯಡಿಯಲ್ಲಿ ತರಬೇತಾದವರಿಗೆ ಉದ್ಯಮದಲ್ಲಿ ಮಹತ್ವ ದೊರಕುವುದೋ, ಇಲ್ಲವೋ ಎಂಬ ಆತಂಕವೂ ಇತ್ತು. ಇಂತಹ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಸೆಮಿಸ್ಟರ್ ವಿರೋಧಿಸಲಾಗುತ್ತದೆ ಎಂದು ವಿದ್ಯಾರ್ಥಿಗಳು ಡಿಜಿಇಟಿಗೆ ರವಾನಿಸಿರುವ ಮನವಿ ಪತ್ರದಲ್ಲಿ ನಮೂದಿಸಿದ್ದಾರೆ.
ಬೇಡಿಕೆಗಳು: ಹೊಸತಾಗಿ ಜಾರಿಗೊಳಿಸಿರುವ ಸೆಮಿಸ್ಟರ್ ಪದ್ಧತಿ ಕೈಬಿಡಬೇಕು, ಯಥಾವತ್ತಾಗಿ ಹಳೆಯ ಅಧ್ಯಯನ, ತರಬೇತಿ, ಪರೀಕ್ಷಾ ಪದ್ಧತಿ ಜಾರಿಗೆ ತರಬೇಕು. ಮುಂದಿನ ದಿನಗಳಲ್ಲಿ ಯಾವುದೇ ವಿಧದಲ್ಲಿ ಪಠ್ಯಕ್ರಮ ಬದಲಾವಣೆಗೂ ಮುನ್ನ ಸಾಕಷ್ಟು ಸಮಯಕಾವಕಾಶ ನೀಡಬೇಕು. ತಜ್ಞರ ಅಭಿಪ್ರಾಯ ಸಂಗ್ರಹಸಿ, ವಿದ್ಯಾರ್ಥಿಗಳ ಅಭಿಮತ ಕಲೆಹಾಕಿಯೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಎಐಡಿವೈಒ ಜಿಲ್ಲಾ ಉಪಾಧ್ಯಕ್ಷ ಮಹೇಶ ಹಾಗೂ ಗೆಳೆಯರು ಈ ಹೋರಾಟದ ಮುಂಚೂಣಿಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

