ಗುಲ್ಬರ್ಗಾ

ಭೋವಿ ಒಳ ಪಂಗಡಗಳು ಎಸ್ಸಿ ಪಟ್ಟಿಗೆ; ಅನುಮೋದನೆ

Published On :

ಕ.ಪ್ರ. ವಾರ್ತೆ   ಗುಲ್ಬರ್ಗ   ಜ.13
ಶರಣ ಸಿದ್ಧರಾಮರೇಶ್ವರರ ಆದರ್ಶ ತತ್ವಗಳನ್ನು ಮೈಗೂಡಿಸಿಕೊಂಡು ಆರೋಗ್ಯವಂತ ಉತ್ತಮ ಸಮಾಜ ಕಟ್ಟುವಲ್ಲಿ ನಾವೆಲ್ಲಾ ಗಮನಹರಿಸಬೇಕು. ಎಲ್ಲ ಬಸವಾದಿ ಶರಣರು ಇಡೀ ಮಾನವ ಕುಲದ ಉದ್ಧಾರಕ್ಕೆ ದುಡಿದಿದ್ದಾರೆ ಹೊರತು ಯಾವುದೇ ಧರ್ಮ, ಜಾತಿಗೆ ಸೀಮಿತವಲ್ಲ ಎಂಬ ಕಟುಸತ್ಯವನ್ನು ಅರಿಯಬೇಕು. ಅವರನ್ನು ಸಮಾಜಕ್ಕೆ ನೀಡಿರುವ ಕೊಡುಗೆ ಮತ್ತು ಕಾಯಕಗಳಿಂದ ಗುರುತಿಸಬೇಕಾಗಿದೆ. ಆದರೆ ಇಂದು ಶರಣರ ಜಯಂತಿ ಕೇವಲ ಅವರ ಸಮುದಾಯಕ್ಕೆ ಮೀಸಲಾಗಿರಿಸಿದ್ದು ದುರಾದೃಷ್ಟಕರ ಎಂದು ರೇಲ್ವೆ ಖಾತೆ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆ ವಿಷಾದಿಸಿದರು.
ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಉತ್ಸವ ಸಮಿತಿಯ ಸಂಯುಕ್ತಾಶ್ರಯದಲ್ಲಿ ಜರುಗಿದ  ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತತ್ವಾದರ್ಶ ಸರ್ವಕಾಲಕ್ಕೂ ಪ್ರಸ್ತುತ: ವಚನಕಾರ ಶಿವಯೋಗಿ ಸಿದ್ಧರಾಮೇಶ್ವರರು ಮಹಾಸಂತ. ಸಮಾನತೆಯ ಹರಿಕಾರ ಮತ್ತು ಕರ್ಮಯೋಗಿ. ಕಾಯಕವೇ ಕೈಲಾಸ ಎಂಬ ತತ್ವದಲ್ಲಿ ನಂಬಿಕೆಯುಳ್ಳವರಾಗಿದ್ದರು ಎಂದರಲ್ಲದೆ ಅವರ ತತ್ವ- ಆದರ್ಶಗಳು ಸರ್ವಕಾಲಕ್ಕೂ ಪ್ರಸ್ತುತ ಎಂದರು.
12ನೇ ಶತಮಾನದಲ್ಲಿ ಜಾತಿ ಪದ್ಧತಿ ವಿರುದ್ಧ ದೊಡ್ಡ ಚಳವಳಿಯನ್ನೇ ಮಾಡಿದ ಬಸವಣ್ಣನವರು, ಸೊಲ್ಲಾಪುರದಲ್ಲಿನ ಶಿವಯೋಗಿ ಸಿದ್ದರಾಮೇಶ್ವರರ ಸಾಮಾಜಿಕ ಕಳಕಳಿಯನ್ನು ಮೆಚ್ಚಿ ಅವರನ್ನು ಸೊಲ್ಲಾಪುರದಿಂದ ಬಸವಕಲ್ಯಾಣದ ಅನುಭವ ಮಂಟಪಕ್ಕೆ ಕರೆತಂದರು. ಅನುಭವ ಮಂಟಪದಲ್ಲಿ ಬಸವಣ್ಣನವರೊಂದಿಗೆ ಸೇರಿದ ಸಿದ್ದರಾಮೇಶ್ವರರು ಸಮಾಜ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡಿದರು. ಯಾವುದೇ ವ್ಯಕ್ತಿ ಅಭಿವೃದ್ಧಿ ಸಾಧಿಸಬೇಕಾದರೆ ಅದು ಕರ್ಮದಿಂದಲೆ ಎಂಬುದನ್ನು ಸಿದ್ದರಾಮೇಶ್ವರರು ತಿಳಿಸಿಕೊಟ್ಟಿದ್ದರು. ಅಲ್ಲದೆ ಪ್ರಪಂಚದ ಏಳ್ಗೆ ಮತ್ತು ಸದ್ಭಾವನೆಯನ್ನು ಪ್ರತಿಪಾದಿಸಿದರು ಎಂದು ಸಚಿವರು ಹೇಳಿದರು.
ಎಸ್ಸಿಗೆ ಭೋವಿ ಸಮಾನಾಂತರ ಜನಾಂಗ: ಕಳೆದ ಎರಡ್ಮೂರು ದಶಕದ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ ಭೋವಿ ಜನಾಂಗಕ್ಕೆ ಸಮನಾಂತರವಾಗಿರುವ ವಡ್ಡ, ಓಡಿ, ವಡ್ಡಾ, ಕಲವಡ್ಡ, ಮಣ್ಣವಡ್ಡ ಸಮುದಾಯನ್ನು ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿಸಲು ಇತ್ತೀಚೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಸಾಮಾಜಿಕ ಕ್ರಾಂತಿ: ಉಪನ್ಯಾಸಕರಾಗಿ ಆಗಮಿಸಿದ ಗುವಿವಿ ನಿವೃತ್ತ ಉಪನ್ಯಾಸಕ ಪ್ರೊ. ಕಾಶಿನಾಥ ಅಂಬಲಗಿ, 12ನೇ ಶತಮಾನದಲ್ಲಿ ಶರಣರು ಆಧ್ಯಾತ್ಮಿಕ ಚಿಂತನೆ ಮಾಡುತ್ತಿದ್ದರು. ಅಸ್ಪೃಶ್ಯತೆಯ ವಿರುದ್ಧದ ಅಂದಿನ ಹೋರಾಟ ದೊಡ್ಡ ಚಳವಳಿಯಾಗಿ ಮಾರ್ಪಟ್ಟಿತ್ತು. ಸೂಳೆ ಸಂಕವ್ವ, ದನಗಾಹಿ ರಾಮಣ್ಣ ಸಹ ತಮ್ಮ ಕಾವ್ಯ ರಚನೆ ಮತ್ತು ವಚನ ಬರೆಯಲು ಅವಕಾಶ ನೀಡಿದನ್ನು ಶರಣರ ಸಾಮಾಜಿಕ ಬದ್ಧತೆಯನ್ನು ತೋರಿಸುತ್ತದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಎಂಎಲ್ಸಿ ಅಲ್ಲಂಪ್ರಭು ಪಾಟೀಲ್, ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಪಂ ಮುಕಾನಿ ಅಧಿಕಾರಿ ಟಿಎಚ್ಎಂ ಕುಮಾರ, ಪ್ರಭಾರಿ ಸಹಾಯಕ ಆಯುಕ್ತ ಭೀಮಾಶಂಕರ ತೆಗೆಳ್ಳಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಅಮಿತ್ ಸಿಂಗ್, ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ, ಹೈ-ಕ ಭೋವಿ ಸಮಾಜ ಸಂಘದ ಅಧ್ಯಕ್ಷ ತಿಪ್ಪಣ್ಣ ಬಿ. ಒಡೆಯರ್, ಮುಖಂಡರಾದ ಭಾಗಣ್ಣಗೌಡ ಸಂಕನೂರ ಮತ್ತು ಆಲಂ ಖಾನ ಇದ್ದರು.
ಜಿಲ್ಲಾಧಿಕಾರಿ ಡಾ. ಎನ್.ವಿ. ಪ್ರಸಾದ ಸ್ವಾಗತಿಸಿದರು. ಜಿಲ್ಲಾ ಭೋವಿ ಸೇವಾ ಸಂಘದ ಅಧ್ಯಕ್ಷ ಸುಭಾಷ ಪವಾರ ವಂದಿಸಿದರು. ಭಾರತಿ ಸಾಲಿಮಠ ನಿರೂಪಿಸಿದರು. ಇದಕ್ಕೂ ಮುನ್ನ ಕು.ಮಾಲಾಶ್ರೀ ಕಣವಿ ಮತ್ತು ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು.
ಭಾವಚಿತ್ರ ಮೆರವಣಿಗೆ: ಜಯಂತಿ ಅಂಗವಾಗಿ ಸಮಾರಂಭದ ನಂತರ ಡಾ.ಎಸ್.ಎಂ.ಪಂಡಿತ ರಂಗಮಂದಿರದಿಂದ ಜಗತ್ ವೃತ್ತ, ಗೋವಾ ಹೋಟೆಲ್, ವಿನೋಭಾ ಭಾವೆ ಚೌಕ್ ಮಾರ್ಗವಾಗಿ ಬ್ರಹ್ಮಪೂರದಲ್ಲಿರುವ ಶಿವದಾಸ ಮಹಾರಾಜರ ಮಠದವರೆಗೆ ಕಲಾತಂಡದೊಂದಿಗೆ ಶಿವಯೋಗಿ ಸಿದ್ಧರಾಮೇಶ್ವರ ಭಾವಚಿತ್ರ ಮೆರವಣಿಗೆ ಜರುಗಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.