ಭೀಮೆಯ ಒಡಲಲ್ಲಿ ಸಡಗರದ ಸಂಕ್ರಾಂತಿ
ಯಾದಗಿರಿ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಅಬ್ಬೆತುಮಕೂರಿನ ಸಿದ್ದಸಂಸ್ಥಾನ ಮಠದ ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮಿ ನೇತೃತ್ವದಲ್ಲಿ ಅಸಂಖ್ಯಾತ ಭಕ್ತರ ಮಧ್ಯೆ ಭೀಮೆಯ ಒಡಲಲ್ಲಿ ಸಡಗರದ ಸಂಕ್ರಾಂತಿ ಆಚರಿಸಲಾಯಿತು.
ಮಂಗಳವಾರದಂದು ಮಕರ ಸಂಕ್ರಮಣ ನಿಮಿತ್ತ ಭೀಮಾ ನದಿ ತಟದ ಮೇಲೆ ಹಮ್ಮಿಕೊಂಡಿದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ರೈತರು ತಾವು ಉತ್ತಿ ಬಿತ್ತಿದ ಬೀಜ ಮೊಳಕೆ ಒಡೆದು ಬೆಳೆಯಾಗಿ ಬೆಳೆದು ನಿಂತಾಗ ಬರುವ ಈ ಸಂಕ್ರಾಂತಿ ಹಬ್ಬ ಸುಗ್ಗಿಯ ಹಿಗ್ಗನ್ನು ತರುತ್ತದೆ ಎಂದು ನುಡಿದರು.
ಒಕ್ಕಲಿಗನ ಅಕ್ಕರೆಯ ಎಳ್ಳು ಅಮವಾಸ್ಯೆಯ ನಂತರ ಬರುವ ಸಂಕ್ರಾಂತಿ ರೈತ ಜನಾಂಗಕ್ಕೆ ಖುಷಿಯನ್ನು ನೀಡುವ ಹಬ್ಬವಾಗಿದೆ. ತಾನು ಬೆವರು ಸುರಿಸಿ ಬೆಳೆದ ಬೆಳೆ ಉತ್ತಮ ಫಸಲಾಗಿ ನಿಂತದನ್ನು ಕಂಡು ಸಂಭ್ರಮ ಪಡುತ್ತಾನೆ. ಭೂ ತಾಯಿ ತನ್ನ ಮಗ ಒಕ್ಕಲಿಗನನ್ನು ಕಕ್ಕುಲತೆಯಿಂದ ಒಳ್ಳೆಯ ಫಸಲನ್ನು ನೀಡಿದರೆ. ರೈತ ಹಿಗ್ಗಿನಿಂದ ಜೀವನ ಸಾಗಿಸುತ್ತಾನೆ ಎಂದು ನುಡಿದರು.
ಸಮೃದ್ಧಿ, ನೆಮ್ಮದಿ: ಸಂಕ್ರಾಂತಿ ಸಮಸ್ತ ಜನತೆಗೆ ಶಾಂತಿ, ಸಹನೆ, ನೆಮ್ಮದಿ ಹಾಗೂ ಸಮೃದ್ಧಿಯನ್ನು ನೀಡಲಿ ಎಂದು ಹಾರೈಸಿದ ಶ್ರೀಗಳು ಭಕ್ತಿ ಭಾವದಿಂದ ಕೈಗೊಂಡ ಎಲ್ಲಾ ಕಾರ್ಯಗಳು ಶಿವನ ಒಲುಮೆಗೆ ಕಾರಣವಾಗುತ್ತವೆ ಎಂದರು.
ಹಲಗೆ, ಡೊಳ್ಳು, ಬಾಜಾ ಭಜಂತ್ರಿ ಹಾಗೂ ಸುಮಂಗಲಿಯರ ಕಳಸ ಮತ್ತು ಸಹಸ್ರಾರು ಭಕ್ತರ ಮಧ್ಯೆ ಶ್ರೀಗಳ ನೇತೃತ್ವದಲ್ಲಿ ಅಬ್ಬೆತುಮಕೂರಿನ ಶ್ರೀ ಮಠದಿಂದ ಭೀಮಾನದಿವರೆಗೆ ಅದ್ಧೂರಿ ಪಲ್ಲಕ್ಕಿ ಉತ್ಸವ ನಡೆಯಿತು. ನೆರೆದ ಸಹಸ್ರಾರು ಭಕ್ತರು ಭೀಮಾನದಿಯಲ್ಲಿ ಪುಣ್ಯ ಸ್ನಾನ ಮಾಡಿದರು. ಶ್ರೀಗಳು ದೋಣಿಯಲ್ಲಿ ನದಿಯ ಆ ದಂಡೆಗೆ ತೆರಳಿ ಸಂಕ್ರಮಣದ ಪುಣ್ಯ ಸ್ನಾನ ಮಾಡಿ ಮರಳಿ, ಈ ದಂಡೆಗೆ ಆಗಮಿಸಿ ಗಂಗಾ ಮಾತೆಗೆ ವಿಶೇಷ ಪೂಜೆ ನೆರವೇರಿಸಿ ನೆರೆದ ಭಕ್ತರಿಗೆ ದರ್ಶನ ನೀಡಿದರು.
ಸವಿತಿನಿಸು: ನಂತರ ಭಕ್ತರು ಸಜ್ಜಿ ರೊಟ್ಟಿ, ಶೇಂಗಾ ಹೋಳಿಗೆ, ಎಣ್ಣೆ ಬದನೆಕಾಯಿ, ಪುಂಡಿ ಪಲ್ಯೆ, ಭರತಾ-ಭಜಿ ಸೇರಿದಂತೆ ವಿವಿಧ ಬಗೆಯ ಸವಿತಿನಿಸುಗಳನ್ನು ಸವಿದು ಸಂಭ್ರಮಪಟ್ಟರು.
ಈ ಸಂದರ್ಭದಲ್ಲಿ ಚನ್ನಪ್ಪಗೌಡ ಮೋಸಂಬಿ, ಡಾ. ಸುಭಾಶ್ಚಂದ್ರ ಕೌಲಗಿ, ವಿಶ್ವನಾಥ ಸಿರವಾರ, ವಿಶ್ವನಾಥ ರೆಡ್ಡಿ, ಅಬ್ಬೆತುಮಕೂರ, ರಮೇಶ ದೊಡ್ಮನಿ, ಅಂಬಣ್ಣಗೌಡ ಅನಸೂಗೂರ್, ಬಸವರಾಜ ರಾಜಾಪುರ, ಎಸ್.ಎನ್. ಮಿಂಚ್ನಾಳ, ವೀರಣ್ಣ ಪ್ಯಾರಸಾಬಾದಿ, ಸಿದ್ದಣಗೌಡ ಬಬಲಾದಿ, ಸಿದ್ದು ಪಾಟೀಲ್, ಅಮೀನ ರಡ್ಡಿ ಬಿಳ್ಹಾರ, ವೆಂಕಟರೆಡ್ಡಿ ಮಾಲಿಪಾಟೀಲ್, ಸಿದ್ದಣಗೌಡ ಗೊನಾಲ ಸೇರಿದಂತೆ ಅನೇಕ ಭಕ್ತರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

