ಖುಲಾಸೆಗೊಂಡ ಕ್ರಿಮಿನಲ್ ಕಡತಗಳತ್ತ ಕ್ಷಕಿರಣ
ಗುಲ್ಬರ್ಗ: ತನಿಖೆ ಹಾಗೂ ಅಭಿಯೋಜನ(ಪ್ರಾಸಿಕ್ಯೂಷನ್) ದಲ್ಲಿನ ಅಲಕ್ಷ್ಯತನ ಅನೇಕ ಬಾರಿ ನಿರ್ದೋಷಿಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರೆ, ಅಪರಾಧಿಗಳು ನಿರ್ದೋಷಿಗಳೆಂದು ಬಿಡುಗಡೆ ಭಾಗ್ಯ ಕರುಣಿಸುವಂತಹ ಎಡವಟ್ಟುಗಳಿಗೆ ಕಾರಣವಾಗುತ್ತಿದೆ ಎಂದು ಕಳವಳ ಹೊರಹಾಕಿರುವ ಸರ್ವೋಚ್ಚ ನ್ಯಾಯಾಲಯ ಕ್ರಿಮಿನಲ್ಗಳು ಖುಲಾಸೆಗೊಂಡಿರುವ ಎಲ್ಲ ಪ್ರಕರಣಗಳ ಪರಿಶೀಲನೆ ನಡೆಯಬೇಕು, ಅದಕ್ಕಾಗಿ ಹಿರಿಯ ಅಧಿಕಾರಿಗಳನ್ನೊಂಡ(ಪೊಲೀಸ್- ಅಭಿಯೋಜನೆ ಇಲಾಖೆ) ಸ್ಥಾಯಿ ಸಮಿತಿ ರಚಿಸುವಂತೆ ರಾಜ್ಯಗಳ ಗೃಹ ಸಚಿವಾಲಯಗಳಿಗೆ ತಾಕೀತು ಮಾಡಿ ಮಹತ್ವದ ತೀರ್ಪು ನೀಡಿದೆ.
ಗುಜರಾತ್ನ ಅಹ್ಮದಾಬಾದ್ ನಗರದಲ್ಲಿ 2008ರಲ್ಲಿ ನಡೆದ ಗೋಮ್ಟಿ ಎಂಬ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ- ಕೊಲೆ ಪ್ರಕರಣ(ಕ್ರಿಮಿನಲ್ ಅಪೀಲ್ 1485/2008)ವಿದು. ಆರೋಪಿ ವಿರುದ್ಧ ಆರೋಪ ಸಾಬೀತುಪಡಿಸುವಲ್ಲಿ ತನಿಖೆ- ಪ್ರಾಸಿಕ್ಯೂಷನ್ ಸಂಪೂರ್ಣ ಮುಗ್ಗರಿಸಿವೆ ಎಂದು 2014ರ ಜ.7ರಂದು ನೀಡಿರುವ ತೀರ್ಪಿನಲ್ಲಿ ಬೇಸರ ಹೊರಹಾಕಿರುವ ಸುಪ್ರೀಂ ಕೋರ್ಟ್, ತನಿಖೆ- ಅಭಿಯೋಜನೆ ಏಜೆನ್ಸಿಗಳಿಂದಾಗುವ ಅಲಕ್ಷ್ಯತನ- ತಪ್ಪುಗಳಿಂದ ಕ್ರಿಮಿನಲ್ಗಳಿಗೆ ಬಿಡುಗಡೆ ಭಾಗ್ಯ ದೊರೆತಲ್ಲಿ ಅದಕ್ಕಿಂತ ಅಧ್ವಾನ ಇನ್ನೊಂದಿಲ್ಲ ಎಂದಿದೆ.
ಗೃಹ ಇಲಾಖೆ ಕಾರ್ಯದರ್ಶಿಗಳಿಗೆ ರವಾನೆ: ತನಿಖೆ ಹಾಗೂ ಅಭಿಯೋಜನೆ ಹಂತದಲ್ಲಿನ ಲೋಪಗಳಿಂದ ಕ್ರಿಮಿನಲ್ಗಳು ಅದ್ಹೇಗೆ ಖುಲಾಸೆಗೊಂಡು ನಿರ್ಭೀತರಾಗಿ ಓಡಾಡಿಕೊಂಡಿದ್ದಾರೆ ಎಂಬಂಶಗಳ ಸುತ್ತ ಬೆಳಕು ಚೆಲ್ಲುವ ಈ ಮಹತ್ವದ ತೀರ್ಪು ಎಲ್ಲ ರಾಜ್ಯಗಳು- ಕೇಂದ್ರಾಡಳಿತ ಪ್ರದೇಶಗಳಲ್ಲಿನ ಗೃಹ ಇಲಾಖೆ ಕಾರ್ಯದರ್ಶಿಗಳಿಗೆ ರವಾನೆಯಾಗಿದೆ. ಎಲ್ಲರು 6 ತಿಂಗಳಲ್ಲಿ ಸ್ಥಾಯಿ ಸಮಿತಿ ರಚಿಸಿ ಖುಲಾಸೆ ಕಡತಗಳ ಪರಿಶೀಲನೆಗೆ ಮುಂದಾಗಬೇಕು, ತೀರ್ಪಿನನ್ವಯ ಕೈಗೊಂಡ ಕ್ರಮಗಳ ಅನುಪಾಲನಾ ವರದಿ ನಿರ್ವಹಿಸಬೇಕು ಎಂದು ನ್ಯಾಯಮೂರ್ತಿ ಸಿ.ಕೆ. ಪ್ರಸಾದ್ ಹಾಗೂ ಜಗದೀಶ ಸಿಂಗ್ ಖೇಹರ್ ಸೂಚಿಸಿದ್ದಾರೆ.
ಪಾತಕಿ ಮುನ್ನಾ ಖುಲಾಸೆ ಕಡತ ಪರಿಶೀಲನೆಯಾದೀತೆ: ಗುಲ್ಬರ್ಗದಲ್ಲಿ ಜ.8ರಂದು ಶೂಟೌಟ್ನಲ್ಲಿ ಸಾವನ್ನಪ್ಪಿರುವ ಭೂಗತ ಪಾತಕಿ ಮುನ್ನಾ ಮುಂಬೈನಿಂದ ಗಡಿಪಾರಾಗಿ(1989ರಲ್ಲಿ) ಗುಲ್ಬರ್ಗಕ್ಕೆ ಬಂದಾತ ಗುಲ್ಬರ್ಗ ನಗರದಲ್ಲಿ 5, ರಾಯಚೂರಲ್ಲಿ 2 ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ.
ಗುಲ್ಬರ್ಗದಲ್ಲಿ ಮುನ್ನಾನ ಮೇಲಿದ್ದ ಕೊಲೆ, ಕೊಲೆ ಯತ್ನ, ದರೋಡೆಯಂತಹ 5 ಕ್ರಿಮಿನಲ್ ಪ್ರಕರಣಗಳ ಪೈಕಿ ನಾಲ್ಕರಲ್ಲಿ ಖುಲಾಸೆಯಾದರೆ ರಾಯಚೂರು ವ್ಯಾಪ್ತಿಯಲ್ಲಿನ 2 ಕೊಲೆ ಪ್ರಕರಣಗಳ ಪೈಕಿ ಖಲೀಲ್ ಖಾನ್ ಕೊಲೆ ಪ್ರಕರಣದಲ್ಲಂತೂ ಮುನ್ನಾ ಮತ್ತವರ 7 ಸಹಚರರೆಲ್ಲರೂ ಖುಲಾಸೆಗೊಂಡಿದ್ದರೆ ಜಾಲಹಳ್ಳಿ ಠಾಣಾ ವ್ಯಾಪ್ತಿಯ ಜೋಡಿ ಕೊಲೆ ಪ್ರಕತರಣದಲ್ಲಿ ಈತನ ವಿರುದ್ಧ ಆರೋಪ ಪಟ್ಟಿ ದಾಖಲಿಸಲಾಗಿತ್ತು, ಪ್ರಕರಣ ಕೋರ್ಟ್ನಲ್ಲಿ ವಿಚಾರಣಾ ಹಂತದಲ್ಲಿತ್ತು.
ಉಭಯ ಜಿಲ್ಲೆಗಳಲ್ಲಿ ಪಾತಕಿ ಮುನ್ನಾ ವಿರುದ್ಧ 7 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದರೂ ಅವುಗಳ ಪೈಕಿ 5 ರಲ್ಲಿ ಅದಾಗಲೇ ವಿಚಾರಣೆ ಎದುರಿಸಿ ಆತ ಖುಲಾಸೆಯಾಗಿದ್ದ. ಸುಪ್ರೀಂ ತೀರ್ಪಿನಂತೆ ಈ ಪಾತಕಿಯ ಖುಲಾಸೆ ವೃತ್ತಾಂತ ಮರುಪರೀಶೀಲನೆಗೆ ಅತ್ಯಂತ ಯೋಗ್ಯ ಕಡತ. ಪಾತಕಿ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಖಟ್ಲೆಗಳಲ್ಲಿ ಸಿಂಹಪಾಲು ಖಟ್ಲೆಗಳು ಆತನನ್ನು ಶಿಕ್ಷೆಗೆ ಒಳಪಡಿಸಲೇ ಇಲ್ಲ ಎಂಬುದು ಸೋಜಿಗದ ಸಂಗತಿ.
ಸುಪ್ರೀಂ ಖಡಕ್ ಸೂಚನೆ
ಗುಜರಾತ್ನ ಅಹ್ಮದಾಬಾದ್ ನಗರದ ಬಾಲಕಿ ಗೋಮ್ಟಿ ಅತ್ಯಾಚಾರ ಪ್ರಕರಣದಲ್ಲಿ ಸುಪ್ರೀಂ ನ್ಯಾಯಧೀಶರು ಈ ಕೆಳಗಿನ ಮಹತ್ವದ ಸಂಗತಿಗಳ ಮೇಲೆ ಬೆಳಕು ಚೆಲ್ಲಿದ್ದಾರೆ.
ಪ್ರತಿಯೊಂದು ಖುಲಾಸೆ ಪ್ರಕರಣ 2 ವಿಧದಲ್ಲಿ ಅರ್ಥೈಸಬೇಕಾಗಿದೆ. ನ್ಯಾಯದಾನ ನೀಡುವಲ್ಲಿ ಅನುಸರಿಸಲಾಗುತ್ತಿರುವ ಪದ್ಧತಿಯ ವೈಫಲ್ಯ ಎನ್ನಬಹುದು ಅಥವಾ ನಿರ್ದೋಷಿಯೊಬ್ಬನನ್ನು ತಪ್ಪಾಗಿ ವಿಚಾರಣೆಗೊಳಪಡಿಸಿದ ಪ್ರಸಂಗ ಎನ್ನಬಹುದು. ಅದಕ್ಕೆ ಪ್ರತಿಯೊಂದು ರಾಜ್ಯ ತನಿಖೆ- ಅಭಿಯೋಜನೆಯಲ್ಲಿ ಯಾವುದೇ ಅಪಸವ್ಯಗಳು ಆಗದಂತೆ ಪಕ್ಕಾ ವ್ಯವಸ್ಥೆಯೊಂದನ್ನು ರೂಪಿಸಿ ಅದರಡಿಯಲ್ಲಿ ನಿರ್ದೋಷಿಗಳು ತೊಂದರೆ ಅನುಭವಿಸದಂತೆ, ದೋಷಿಗಳು ಬಿಡುಗಡೆಯಾಗದಂತೆ ಬಿಗಿ ನೀತಿ ಅನುಸರಿಸಲೇಬೇಕು.
ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಕ್ರಿಮಿನಲ್ ಖಟ್ಲೆಗಳಲ್ಲಿ ಖುಲಾಸೆ(ಅಕ್ವಿಟಲ್)ಗೊಂಡ ಪ್ರಕರಣಗಳ ಪರಿಶೀಲನೆ ನಡೆಯಲಿ, ಅದಕ್ಕಾಗಿ ಪೊಲೀಸ್, ಅಭಿಯೋಜನೆ ಇಲಾಖೆಯ ಹಿರಿಯ, ಅನುಭವಿ ಅಧಿಕಾರಿಗಳನ್ನೊಳಗೊಂಡ ಸ್ಥಾಯಿ ಸಮಿತಿ ರಚನೆಯಾಗಲಿ.
ಹಿರಿಯ ಅಧಿಕಾರಿಗಳ ಸಮಿತಿ ಪ್ರಕರಣಗಳ ಖುಲಾಸೆ ಸಂದರ್ಭದಲ್ಲಿ ಏನೆಲ್ಲಾ ದೋಷಗಳಾಗಿವೆ. ಅವುಗಳನ್ನು ಮಾಡಿದವರು ಯಾರು ಎಲ್ಲಿ ತನಿಖೆ- ಅಭಿಯೋಜನೆ ಹಂತದಲ್ಲಿ ಎಡವಲಾಗಿದೆ ಎಂಬುದನ್ನು ವಿಶ್ಲೇಷಣೆ ಮಾಡಿ ಕಾರಣ ದಾಖಲಿಸಲಿ. ಪ್ರತಿ ರಾಜ್ಯದ ಗೃಹ ಸಚಿವಾಲಯ ತನಿಖೆ, ಅಭಿಯೋಜನೆ ಅಧಿಕಾರಿಗಳಿಗೆ ಈ ಬಗ್ಗೆ ಸೂಕ್ತ ತಬೇತಿ ನೀಡಲಿ.
ಖುಲಾಸೆ ಪ್ರಕರಣಗಳಲ್ಲಿ ಪ್ರಮುಖ 10 ದೋಷಗಳನ್ನು ಪಟ್ಟಿ ಮಾಡಲ್ಪಡಲಿ, ಅವುಗಳನ್ನು ಸಮಿತಿ ಪರಿಶೀಲನೆ ಮಾಡಲಿ, ವೈಜ್ಞಾನಿಕ ಉಪಕರಣಗಳು, ಕೋರ್ಟ್ ತೀರ್ಪುಗಳನ್ನಾಧರಿಸಿ ಸಮಿತಿ ತನ್ನ ಪರಿಶೀಲನೆಗೆ ಕಾಲಕಾಲಕ್ಕೆ ಹೊಸ ರೂಪ ನೀಡಲಿ.
ಪರಿಶೀಲನೆ ಕಾಲದಲ್ಲಿ ತನಿಖೆ, ಅಭಿಯೋಜನೆ ಅಧಿಕಾರಿಗಳ ಹಂತದಲ್ಲೇ ದೋಷಗಳು ಕಂಡಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹೊಣೆಯಾಗಿಸಿ ಅತಂಹವರ ವಿರುದ್ಧ ಇಲಾಖಾ ವಿಚಾರಣೆ, ಶಿಸ್ತು ಕ್ರಮಗಳು ಜರುಗಿಸಬೇಕು. ಕ್ರಿಮಿನಲ್ ಪ್ರಕರಣಗಳ ಖುಲಾಸೆಯಲ್ಲಿ ಸಂಬಂಧಿತ ತನಿಖೆ- ಅಭಿಯೋಜನೆ ಅಧಿಕಾರಿ ಹೊಣೆಗಾರನಾಗುತ್ತಾನೆ, ಆತನ ಹೊಣೆ, ಆಗದಿರುವ ತಪ್ಪು ಎಲ್ಲ ಕರಾರುವಾಕ್ಕಾಗಿ ಗುರುತಿಸಿ, ದಾಖಲೆ ಸಿದ್ಧಪಡಿಸಬೇಕು.
ದೋಷಗಳು ಉದ್ದೇಶಪೂರ್ವಕ ಮಾಡಿದ್ದೆ ಅಥವಾ ವಿಷಯದ ಪರಿಜ್ಞಾನವಿಲ್ಲದೆ ಆಗಿರುವ ತಪ್ಪುಗಳೇ ಎಂಬುದು ನಿರ್ಧರಿಸಬೇಕು. ದೋಷಗಳ ಗಂಭೀರತೆಯನ್ನಾಧರಿಸಿ ಸಂಬಂಧಪಟ್ಟಂತಹ ತನಿಖಾಧಿಕಾರಿಗಳನ್ನು ಪ್ರಕರಣದಿಂದ ವಾಪಸ್ ಕರೆಯಿಸಿಕೊಳ್ಳಬೇಕು.
ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

