ಗುಲ್ಬರ್ಗಾ

ಕಲ್ಮೂಡ ನಿಸರ್ಗ ಮಡಿಲಲ್ಲಿ 'ಜ್ಞಾನಗಂಗೆ' ಕಲರವ!

Published On :

ಕ.ಪ್ರ.ವಾರ್ತೆ ,  ಕಲ್ಮೂಡ ,  ಜ. 24
ಗುಲ್ಬರ್ಗದಿಂದ 45 ಕಿ.ಮೀ. ದೂರದಲ್ಲಿರುವ ಗುಡ್ಡ- ಬೆಟ್ಟ, ಹಸಿರು ವನಸಿರಿಗೆ ಹೆಸರಾಗಿರುವ ಗುರುದೇವತ್ತ ದಿಗಂಬರ ಮಾಣಿಕೇಶ್ವರ ಪ್ರಭುಗಳ ಸನ್ನಿಧಾನ ಪರಸಗುಡ್ಡದಲ್ಲೀಗ ಗುಲ್ಬರ್ಗ ವಿವಿ ಜ್ಞಾನಗಂಗೆಯ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಕಲರವ ಕೇಳಿಬರುತ್ತಿದೆ.
ಮಾಣಿಕಪ್ರಭುಗಳು ನೆಲೆ ನಿಂತಿರುವುದರಿಂದ ನಿಸರ್ಗದ ಈ ವನಸಿರಿ ಧಾರ್ಮಿಕ ತಾಣವಾಗಿ ಪರಿವರ್ತಿತವಾಗಿದೆ. ಹೀಗಾಗಿ ನಿಸರ್ಗ ಹಾಗೂ ಧಾರ್ಮಿಕತೆಗಳೆರಡು ಮೇಳೈಸಿರುವ ಈ ಬೆಟ್ಟದ ತಾಣದಲ್ಲಿ ಕಳೆದ 3 ದಿನಗಳಿಂದ ತನ್ನ 60 ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗಾಗಿ ಜ್ಞಾನಗಂಗೆ ದೈಹಿಕ ಶಿಕ್ಷಣ ವಿಭಾಗ ನಾಯಕತ್ವ- ಮನೋಲ್ಲಾಸ ತರಬೇತಿ ಶಿಬಿರ ಆಯೋಜಿಸಲ್ಪಟ್ಟಿದೆ. ಶಾರೀರಿಕ ಶಿಕ್ಷಣ ವಿದ್ಯಾರ್ಥಿಗಳಲ್ಲಿ ಉತ್ತಮ ಗುರಿ ತಲುಪಲು ಪೂರಕವಾಗಿರುವಂತಹ ಆಟ, ಮನೋರಂಜನೆ, ಸಾಹಸ, ತರಹೇವಾರಿ ವಿಷಯಗಳ ಪರಿಜ್ಞಾನ ನೀಡುವುದೇ ನಾಯಕತ್ವ- ಮನೋಲ್ಲಾಸ ಶಿಬಿರದ ಉದ್ದೇಶ. ಓದಿಗಿಂತ ಭಿನ್ನವಾದಂತಹ ಚಟುವಟಿಕೆಗಳಲ್ಲಿ ವಿದ್ಯಾರ್ಥಿ ತೊಡಗಿರಬೇಕು, ಅದರಿಂದಾಗಿ ಆತನ ಬದುಕು ಹಸನಾಗಬೇಕು, ಅಂತಹ ವಿಶಿಷ್ಟ ಚಟುವಟಿಕೆಗಳನ್ನೆಲ್ಲ ನಡೆಸುವುದೇ ಶಿಬಿರ ಗುರಿ.
ಹೇಳಿ ಮಾಡಿಸಿದ ತಾಣ: ಕಲ್ಮೂಡ ಮನೋಲ್ಲಾಸ, ನಾಯಕತ್ವ ಶಿಬಿರಕ್ಕೆ ಹೇಳಿ ಮಾಡಿಸಿದ ತಾಣ. ನಿಸರ್ಗ ರಮ್ಯ ತಾಣವಾಗಿರುವ ಇಲ್ಲಿ ಎಲ್ಲವೂ ಪ್ರಕೃತಿ ಸಹಜವಾಗಿದೆ. ಇಲ್ಲಿರುವ ಪ್ರತಿಯೊಂದು ಕಲ್ಲು, ಮೆಟ್ಟಿಲುಗಳಲ್ಲಿಯೂ ಸಹಜತೆ ಹಾಗೇ ಕಾಪಾಡಲಾಗಿದೆ.
ಮಾಣಿಕಪ್ರಭುಗಳ ಆವಾಸದಿಂದಾಗಿ ಧಾರ್ಮಿಕತೆಯ ಪ್ರಭಾವಳಿ ಹೊದ್ದುಕೊಂಡಿರುವ ಇಲ್ಲಿ ವರ್ಷದುದ್ದಕ್ಕೂ ಜನ ಬಂದು ಹೋಗುತ್ತಾರೆ. ಇಲ್ಲಿಯೇ ಪ್ರತಿವರ್ಷ ಮನೋಲ್ಲಾಸ ಶಿಬಿರ ನಡೆಸುತ್ತಿರುವ ಜ್ಞಾನಗಂಗೆ ಈ ಚಟುವಟಿಕೆಯೊಂದಿಗೆ ದೈಹಿಕ ಶಿಕ್ಷಣ ವಿದ್ಯಾರ್ಥಿಗಳಲ್ಲಿ ಹೊಸತನ ತುಂಬುವ ಪ್ರಯತ್ನ ಮಾಡುತ್ತಿದೆ.
ಬೆಳಗ್ಗೆ 5.30 ಗಂಟೆಯಿಂದಲೇ ಶಿಬಿರದ ದಿನಚರಿ ಶುರುವಾಗುತ್ತದೆ. ಸ್ವಚ್ಛತೆ, ತಾವಿರುವ ಪರಿಸರದಲ್ಲಿನ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದು, ಸಂಪನ್ಮೂಲ ವ್ಯಕ್ತಿಗಳ ಮಾತು ಆಲಿಸಿ ಹೊಸ ವಿಚಾರಗಳನ್ನು ಗ್ರಹಿಸಿ ವಿದ್ಯಾರ್ಥಿಗಳು ಮಲಗುವಾಗ ರಾತ್ರಿ 10 ಗಂಟೆ.
ಜ.22ರಿಂದಲೇ ಆರಂಭವಾಗಿರುವ ಶಿಬಿರದಲ್ಲಿ ಈಗಾಗಲೇ ಸಂಪನ್ಮೂಲ ವ್ಯಕ್ತಿಗಳಾಗಿ ಗುಲ್ಬರ್ಗ ವಿವಿ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ. ಮೈಖಲ್, ಪ್ರೊ. ಕೆ. ಲಿಂಗಪ್ಪ, ಆರ್.ಕೆ. ಹುಡಗಿ, ಸುದಿನಾ ವಿಜಯಕುಮಾರ್, ಸಂಗಪ್ಪ ಹೊಸ್ಮನಿ, ಶಿವಶರಣಪ್ಪ ಮಂಠಾಳೆ, ಶಿವಲಿಂಗಪ್ಪ ಗೌಳಿ, ಅಮರೇಶ ಕೋರಿ, ಪತ್ರಕರ್ತ ದೇವೀಂದ್ರಪ್ಪ ಆವಂಟಿ ಸೇರಿದಂತೆ ಹಲವರು ವ್ಯಕ್ತಿತ್ವ ವಿಕಸನ, ಯುವಶಕ್ತಿ, ದೇಶದ ಅಭ್ಯುದಯ, ಕ್ರೀಡೆ, ಪತ್ರಿಕೋದ್ಯಮ, ಮಾನವ ಹಕ್ಕುಗಳ ರಕ್ಷಣೆ, ಯುವಕರಲ್ಲಿ ಕಾನೂನು ಅರಿವು, ಜಾನಪದ ಮತ್ತು ಮನೋರಂಜನೆ, ಬದಲಾಗುತ್ತಿರುವ ಸಮಾಜದಲ್ಲಿ ಯುವಕರ ಪಾತ್ರ... ಹೀಗೆ ಹತ್ತು ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲುತ್ತ ಶಿಬಿರಾರ್ಥಿಗಳಿಗೆ ಹೊಸ ಮಾಹಿತಿ ನೀಡಿದ್ದಾರೆ.
ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಅವರಿಗೂ ಶಿಬಿರದಲ್ಲಿ ಆಹ್ವಾನ ನೀಡಿ ವಿದ್ಯಾರ್ಥಿಗಳಿಗೆ ಬದುಕಲ್ಲಿ ತಿಳಿಹಾಸ್ಯವಿದ್ದರೆ ಅದೆಷ್ಟರ ಮಟ್ಟಿಗೆ ಮನೋಲ್ಲಾಸಕ್ಕೆ ಕಾರಣವಾಗುತ್ತದೆ ಎಂಬುದರ ಮಾಹಿತಿ ಸಹ ನೀಡುವಲ್ಲಿ ಸಂಘಟಕರು ಶ್ರಮಿಸಿದ್ದಾರೆ.
ಜ್ಞಾನಗಂಗೆಯ ಈ ಶಿಬಿರಕ್ಕೆ ಮಾಣಿಕಪ್ರಭು ಗುಡ್ಡದ ಗುಂಡಪ್ಪ ಮುಕರಂಬಿ ಸಕಲ ಸೌಕರ್ಯ ಕಲ್ಪಿಸಿಕೊಟ್ಟಿದ್ದಾರೆ. ಗುಲ್ಬರ್ಗ ವಿವಿ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರೂ ಆಗಿರುವ ಶಿಬಿರದ ಮುಖ್ಯಸ್ಥ ಡಾ. ಎಂ.ಎಸ್. ಪಾಸೋಡಿ ಅವರ ಉಸ್ತುವಾರಿಯಲ್ಲಿ ಸಾಗಿರುವ ಶಿಬಿರ ಜ.26ರಂದು ಸಮಾರೋಪಗೊಳ್ಳಲಿದೆ. ಡಾ. ಸಿ.ಆರ್. ಭೈರೆಡ್ಡಿ, ಡಾ. ಕಣ್ಣೂರ, ಎ.ಕೆ. ಶಕೀಲ್, ಡಾ. ಜಂಗೆ ಸಹಕರಿಸಿರುವ ಶಿಬಿರಕ್ಕೆ ರಾಮ ಎಸ್. ಬುಡಕಿ ನಿರ್ದೇಶಕರು. ದೈಹಿಕ ಶಿಕ್ಷಣ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳೂ ಸಹ ಈ ಶಿಬಿರದಲ್ಲಿ ಭಾಗವಹಿಸುತ್ತ ಶಿಬಿರಾರ್ಥಿಗಳಲ್ಲಿ ಸಾಹಸ, ಆಟೋಟಗಳ ಬಗ್ಗೆ ಹಾಗೂ ಇತರೆ ವಿಷಯಗಳ ಬಗ್ಗೆ ಆಸಕ್ತಿ ಕೆರಳುವಂತೆ ಮಾಡುವಲ್ಲಿ ಸಹಕರಿಸುತ್ತಿದ್ದಾರೆ.
ಗುಂಡಣ್ಣರ ಹಾಸ್ಯಕ್ಕೆ ಹೊಟ್ಟೆ ಹುಣ್ಣಾಗುವಂತೆ ನಕ್ಕರು: ಶುಕ್ರವಾರ ಕಲ್ಮೂಡ ಶಿಬಿರದಲ್ಲಿ ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಅವರಿಂದ 'ಹಾಸ್ಯ ರಸಾಯನ' ಕಾರ್ಯಕ್ರಮವಿತ್ತು. ದಿನದ ಬದುಕಲ್ಲಿನ ಆಗುಹೋಗುಗಳಿಗೇ ನವಿರಾದ ಹಾಸ್ಯ ಲೇಪನ ಮಾಡುತ್ತ ಗುಂಡಣ್ಣ ಸಾದರಪಡಿಸಿದ ಹಾಸ್ಯ ಕಾರ್ಯಕ್ರಮಕ್ಕೆ ಶಿಬಿರಾರ್ಥಿಗಳು ಹೊಟ್ಟೆಹುಣ್ಣಾಗುವಂತೆ ನಕ್ಕರು.
ಮೊಬೈಲ್‌ನಿಂದಾಗುವ ಹಾಸ್ಯ, ಭಾಷೆಯಿಂದ ಎದುರಾಗುವ ನಗುವಿನ ಪ್ರಸಂಗಗಳು, ಪತ್ರಿಕೆಗಳಿಂದ ಮೂಡಿ ಬರುವ ಹಾಸ್ಯ, ಹೀಗೆ ಹಲವು ಹಾಸ್ಯ ಸಂದರ್ಭಗಳನ್ನು ಗುಂಡಣ್ಣ ಮಕ್ಕಳ ಮುಂದೆ ಪ್ರಸ್ತಾಪಿಸಿದಾಗ ಸೇರಿದ್ದವರೆಲ್ಲರೂ ಬಿದ್ದುಬಿದ್ದು ನಕ್ಕರು. ಹಾಸ್ಯದ ಜೊತೆಗೆ ಬದುಕಿನಲ್ಲಿ ಅಳವಡಿಸಿಕೊಳ್ಳಬಹುದಾದಂತಹ ಸಹನೆ, ತಾಳ್ಮೆ, ಮಾನವೀಯತ ಮೌಲ್ಯಗಳು, ಕರುಣೆ, ಅನುಕಂಪದಂತಹ ನೈತಿಕ ವಿಚಾರಗಳನ್ನೆಲ್ಲ ಪ್ರಸ್ತಾಪಿಸಿದ ಗುಂಡಣ್ಣ ಶಿಬಿರಾರ್ಥಿಗಳಿಗೆ ಶುಭ ಕೋರಿದರು.
ವಿವೇಕಾನಂದರ ವಿಚಾರಗಳ ಬಗ್ಗೆ ಸಂಸ್ಕೃತ ವಿಭಾಗದ ಡೀನ್ ಡಾ. ಮೈಖಲ್ ಹೇಳುತ್ತ ಪ್ರೀತಿ ಇಲ್ಲದ ಬದುಕು ಬದುಕಲ್ಲ, ಎಲ್ಲರ ಕಷ್ಟಗಳಿಗೆ ನೆರವು ನೀಡದವರು ಇದ್ದು ಸತ್ತಂತೆ ಎಂದು ವಿವೇಕಾನಂದರು 8 ದಶಕಗಳ ಹಿಂದೆ ಹೇಳಿದ್ದ ಮಾತುಗಳನ್ನು ಮೆಲಕು ಹಾಕುತ್ತ ಯುವಕರು ವಿವೇಕರ ಆದರ್ಶಗಳನ್ನು ಮೈಗೂಡಿಸಿಕೊಂಡು ಬದುಕಲ್ಲಿ ಅನುಕರಣೆ ಮಾಡುವಂತೆ ಕಿವಿಮಾತು ಹೇಳಿದರು.
ನಾಯಕತ್ವ ಹಾಗೂ ಮನೋಲ್ಲಾಸ ತರಬೇತಿ ಶಿಬಿರದಿಂದ ದೈಹಿಕ ಶಿಕ್ಷಣ ವಿದ್ಯಾರ್ಥಿಗಳ ವ್ಯಕ್ತಿತ್ವ ಸರ್ವತೋಮುಖವಾಗಿ ರೂಪುಗೊಳ್ಳಲು ಅನುಕೂಲವಾಗುತ್ತದೆ. ಮೊದಲೆಲ್ಲಾ 7 ದಿನಗಳ ಅವಧಿಯ ಶಿಬಿರ ನಡೆಸಲಾಗುತ್ತಿತ್ತು. ಇದೀಗ 5 ದಿನಗಳ ಶಿಬಿರ ನಡೆಸಲಾಗುತ್ತಿದೆ. ಕಳೆದ 15 ವರ್ಷದಿಂದ ಕಲ್ಮೂಡದ ಪರಸಗುಡ್ಡವೇ ಶಿಬಿರದ ಸ್ಥಳವಾಗಿದೆ. ಇಲ್ಲಿನ ನಿಸರ್ಗ ರಮಣೀಯತೆ, ಧಾರ್ಮಿಕತೆ ಶಿಬಿರಾರ್ಥಿಗಳಿಗೆ, ಅವರ ಓದಿನಲ್ಲಿ, ಆಟೋಟಗಳಲ್ಲಿ ಹಾಗೂ ಮುಂದಿನ ಬದುಕಲ್ಲಿ ಪ್ರೇರಕ ಶಕ್ತಿಯಾಗುತ್ತಿದೆ.
ಟಿ ಡಾ. ಎಂ.ಎಸ್. ಪಾಸೋಡಿ, ಪ್ರಾಚಾರ್ಯರು, ಗುಲ್ಬರ್ಗ ವಿವಿ ದೈಹಿಕ ಶಿಕ್ಷಣ ಮಹಾವಿದ್ಯಾಲಯ.
ರಸ್ತೆ ಸಂಪರ್ಕ ಸರಿಯಾಗಿಲ್ಲ
ಕಮಲಾಪುರದಿಂದ 9 ಕಿ.ಮೀ. ಅಂತರದಲ್ಲಿದೆ ಕಲ್ಮೂಡ ಪರಸಗುಡ್ಡ. ಅಲ್ಲಲ್ಲಿ ರಸ್ತೆ ಹರಿದು ಹೋಗಿದೆ. ಈ ನಿಸರ್ಗ ರಮಣೀಯ ಪರಿಸರಕ್ಕೆ ಬಂದು ಹೋಗಲು ಸೂಕ್ತ ರಸ್ತೆ ಸೌಕರ್ಯ ಆದಲ್ಲಿ ಹೆಚ್ಚಿನ ಅನುಕೂಲವಾಗುತ್ತದೆ ಎಂಬುದು ಇಲ್ಲಿ ಬಂದು ಹೋಗುವ ಎಲ್ಲರ ಅಭಿಮತ. ಶಾಲಾ ಮಕ್ಕಳು, ಕಾಲೇಜು ಪಿಕ್‌ನಿಕ್ ತಂಡಗಳು ಆಗಾಗ ಇಲ್ಲಿಗೆ ಬಂದು ಹೋಗುತ್ತವೆ. ಹೀಗಾಗಿ ಜಿಲ್ಲಾಡಳಿತ ಇಲ್ಲಿಗೆ ಉತ್ತಮ ರಸ್ತೆ ಸೌಕರ್ಯ ಕಲ್ಪಿಸುವುದು ಅಗತ್ಯ.
ಶಿಬಿರದ ಆಕರ್ಷಣೆಗಳು
1.  ನಾಯಕತ್ವ ಗುಣ ವರ್ಧನೆ- ಉತ್ತಮ ವ್ಯಕ್ತಿತ್ವ ರೂಪಿಸಿವುದು.
2.  ಪ್ರಕೃತಿ ದರ್ಶನ, ಸಂಪನ್ಮೂಲ ಅಧ್ಯಯನ, ಪರಿಸರ ಸಂರಕ್ಷಣೆ.
3.  ಸಾಹಸ ಕ್ರೀಡೆಗಳು.
4.  ಕಲಾತ್ಮಕತೆ ಬೆಳೆಸುವುದು.
5.  ಹಾಸ್ಯ ಪ್ರವೃತ್ತಿ ಬೆಳೆಸುವುದು.
6.  ರಚನಾತ್ಮಕ ಹಾಗೂ ಸ್ಪಂದನೀಯ ಆಟೋಟಗಳು.
7.  ಶಿಬಿರಾಗ್ನಿಯ ಚಟುವಟಿಕೆಗಳು.
8.  ನೃತ್ಯ, ಹಾಡು, ನಾಟಕ, ಜನಪದ ಕುಣಿತ, ಚರ್ಚಾಕೂಟಗಳು.
9.  ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ತರಬೇತಿ.
10.  ಮನೋರಂಜನಾ ಕ್ರೀಡೆಗಳು.


-ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.