ಗುಲ್ಬರ್ಗಾ

ನೆನೆಗುದಿಗೆ ಬಿದ್ದ ಹುಣಸಗಿ ಬಸ್ ನಿಲ್ದಾಣ ಕಾಮಗಾರಿ

Published On :

ಹುಣಸಗಿ: ಪಟ್ಟಣದ ಬಸ್ ನಿಲ್ದಾಣದ ಕಾಮಗಾರಿ ನಿಗದಿತ ಅವಧಿ ಮುಗಿದಿದ್ದರೂ ಇನ್ನೂ ಪೂರ್ಣಗೊಳ್ಳದಿರುವುದರಿಂದ ಪ್ರಯಾಣಿಕರು ಸೇರಿದಂತೆ ಎಲ್ಲರೂ ಗೋಳಾಡುವಂತಾಗಿದೆ. ಈ ಹಿಂದೆ ಸಚಿವರಾಗಿದ್ದ ನರಸಿಂಹನಾಯಕ(ರಾಜುಗೌಡ) ತಮ್ಮ ಅಧಿಕಾರಾವಧಿಯಲ್ಲಿ 1.25 ಕೋಟಿ ಅನುದಾನದಲ್ಲಿ ಈ ಬಸ್ ನಿಲ್ದಾಣವನ್ನು ಆಧುನಿಕ ಸೌಲಭ್ಯದ ಜೊತೆಗೆ ನಿರ್ಮಾಣ ಮಾಡಲು ಮಂಜೂರು ಮಾಡಿಸಿದ್ದರು.
ಆರಂಭದಲ್ಲಿ ಈ ಕಾಮಗಾರಿ ನಡೆಯುತ್ತಿರುವುದನ್ನು ನೋಡಿದಾಗ ಇನ್ನೇನು ಇನ್ನೂ ಕೆಲ ದಿನಗಳಲ್ಲಿಯೇ ಮುಗಿದು ಹೋಗಬಹುದೆಂದು ಜನರು ಭಾವಿಸಿದ್ದರು. ಆದರೆ ಏನಾಯಿತೋ ಏನೋ ಇದ್ದಕ್ಕಿದ್ದಂತೆ ಗ್ರಹಣ ಬಡಿದಂತಾಗಿದೆ. ಸಿಮೆಂಟ್ ಹಾಸು, ಪ್ರಯಾಣಿಕರಿಗಾಗಿ ದೊಡ್ಡ ಹಾಲ್ ಹಾಗೂ ಮಹಿಳಾ ಪ್ರಯಾಣಿಕರಿಗಾಗಿ ಪ್ರತ್ಯೇಕ ಕೋಣೆ, ಕ್ಯಾಂಟಿನ್, ನಿಯಂತ್ರಕರ ಕೋಣೆ ಸೇರಿದಂತೆ 8 ಮಳಿಗೆಗಳ ಈ ಸುಸಜ್ಜಿತ ಕಟ್ಟಡ ಪೂರ್ಣಗೊಳ್ಳದಿರುವುದು ಎಲ್ಲರಲ್ಲಿ ಭಾರೀ ಬೇಸರ, ಆಕ್ರೋಶ ಮೂಡಿಸಿದೆ.
ಅಧಿಕಾರಿಗಳ ವಿರುದ್ಧ ಕಿಡಿ: ನಿಯಂತ್ರಕರು ಕೋಣೆ ಇಲ್ಲದೇ ಕಬ್ಬಿಣದ ಶೆಡ್‌ನಲ್ಲಿ ಒದ್ದಾಡುತ್ತಲೇ ದಿನವಿಡೀ ಕಾರ್ಯ ನಿರ್ವಹಿಸುತ್ತಿದ್ದಾರೆ. ದೂರದ ಪುಣೆ, ಬೆಂಗಳೂರು, ವಾಸ್ಕೋ ಸೇರಿದಂತೆ ಅನೇಕ ಕಡೆ ನಿತ್ಯವೂ 152 ಬಸ್‌ಗಳು ಈ ನಿಲ್ದಾಣದ ಮೂಲಕ ಸಂಚರಿಸುತ್ತಿವೆ. ಹೀಗಾಗಿ ಇಲ್ಲಿ ಪ್ರಯಾಣಿಕರ ದಟ್ಟಣೆ ಜಾಸ್ತಿ. ಪ್ರಯಾಣಿಕರು ಕುಳಿತುಕೊಳ್ಳಲು ಕೂಡ ಸ್ಥಳ ಇಲ್ಲದಿರುವುದರಿಂದ ಎಲ್ಲರೂ ಸಿಡಿಮಿಡಿಗೊಳ್ಳುತ್ತಿದ್ದು, ಸಾರಿಗೆ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಕಿಡಿಕಾರುತ್ತಿದ್ದಾರೆ. ಅದರಲ್ಲೂ ಮಹಿಳಾ ಪ್ರಯಾಣಿಕರ ಪರಿಸ್ಥಿತಿಯಂತೂ ತೀವ್ರ ಶೋಚನೀಯವಾಗಿದೆ.
ಕೆಲಸಕ್ಕೆಂದು ನಿತ್ಯವೂ ಪ್ರಯಾಣಿಸುವ ನೌಕರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ವ್ಯಾಪಾರಸ್ಥರು, ಆಸ್ಪತ್ರೆಗೆ ತೆರಳುವವರು, ಹೀಗೆ ಎಲ್ಲರೂ ಬಂದು ಇಲ್ಲಿ ನಿಲ್ಲಲೇಬೇಕು. ಸರಿಯಾಗಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇಲ್ಲ ಎಂದು ವ್ಯಂಗವಾಡುತ್ತಾರೆ.
ಹೋರಾಟ ನಡೀಬೇಕಾ...?: ಈ ಕಾಮಗಾರಿ ಸ್ಥಿತಿ ನೋಡಿದರೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಇದ್ದಾರೋ, ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ. ಸಾರಿಗೆ ಸಂಸ್ಥೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಸಂಬಂಧಿಸಿದ ಗುತ್ತಿಗೆದಾರರಿಗೆ ಈ ಬಗ್ಗೆ ನೋಟಿಸ್ ನೀಡಿರುವುದಾಗಿ ಹೇಳಿ ಕೈ ತೊಳೆದುಕೊಳ್ಳುತ್ತಾರೆ.
ಹೀಗಾಗಿ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ. ಇನ್ನಾದರೂ ಜನಪ್ರತಿನಿಧಿಗಳಾಗಲಿ, ಸಂಸ್ಥೆಯ ಹಿರಿಯ ಅಧಿಕಾರಿಗಳಾಗಲಿ ತಕ್ಷಣ ಈ ಬಸ್ ನಿಲ್ದಾಣದ ಕಾಮಗಾರಿ ಪೂರ್ಣಗೊಳ್ಳುವಂತೆ ಮಾಡಲಿ. ಇಲ್ಲದಿದ್ದರೆ ಪ್ರಯಾಣಿಕರು, ಸಾರ್ವಜನಿಕರು ರೊಚ್ಚಿಗೆದ್ದು ಬೀದಿಗಿಳಿದು ಹೋರಾಟ ಮಾಡುವುದಂತೂ ಖಂಡಿತ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.