ಪ.ಪಂ. ಅವ್ಯವಹಾರ ತನಿಖೆಗೆ ಆಗ್ರಹಿಸಿ ದಲಿತ ಪ್ಯಾಂಥರ್ ಧರಣಿ
ಕ.ಪ್ರ. ವಾರ್ತೆ , ಮುದಗಲ್ , ಜ.31
ಸ್ಥಳೀಯ ಪಟ್ಟಣ ಪಂಚಾಯಿತಿಯಲ್ಲಿ ಪರಿಶಿಷ್ಟ ಜಾತಿ, ಪಂಗಡ ಜನಾಂಗಕ್ಕೆ ಮೀಸಲಿರಿಸಿದ ಅನುದಾನವನ್ನು ದುರ್ಬಳಕೆ ಮಾಡಿ ಅವ್ಯವಹಾರ ಎಸಗಿರುವುದನ್ನು ಸಮಗ್ರ ತನಿಖೆ ಮಾಡಬೇಕೆಂದು ಭಾರತೀಯ ದಲಿತ ಪ್ಯಾಂಥರ್ ಕಾರ್ಯಕರ್ತರು ಪಪಂ ಎದುರು ಧರಣಿ ನಡೆಸಿದರು.
ಸರ್ಕಾರದ ನಮ್ಮ ಮನೆ ಯೋಜನೆಯಡಿ ಮುಖ್ಯಾಧಿಕಾರಿಗಳು ದಾಖಲೆಗಳಿಲ್ಲದೆ ಹಾಗೂ ಕಟ್ಟಡ ಇಲ್ಲದೆ ಇರುವ ಅರ್ಜಿದಾರರಿಂದ 3 ಸಾವಿರವರೆಗೆ ಲಂಚ ಪಡೆದು ಚೆಕ್ ನೀಡಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡ ಜನಾಂಗದ ಶೇ. 22.75 ಯೋಜನೆಯಡಿ ಸಿಎಫ್ಎಲ್ ಬಲ್ಬ್ಗಳನ್ನು ನೀಡದೆ ಅನುದಾನ ದುರುಪಯೋಗ ಮಾಡಿದ್ದಾರೆ. ಎಸ್ಸಿ- ಎಸ್ಟಿಯವರ ವಾರ್ಡ್ಗಳಲ್ಲಿ ಬೀದಿದೀಪಗಳ ಅಳವಡಿಕೆಗೆ ಮಂಜೂರಾದ 2 ಲಕ್ಷ ಹಣ ಅವ್ಯವಹಾರ ನಡೆಸಿದ್ದಾರೆ ಎಂದು ದೂರಿದರು.
ತನಿಖೆಗೆ ಆಗ್ರಹ: ಪಟ್ಟಣ ಪಂಚಾಯಿತಿಯಿಂದ ಅಳವಡಿಸಿದ ಸೋಲಾರ್ ದೀಪಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು ತನಿಖೆ ನಡೆಸಬೇಕು. 2010- 11ನೇ ಸಾಲಿನ ಅನುದಾನ ಸಮರ್ಪಕವಾಗಿ ಬಳಕೆಯಾಗಿಲ್ಲ. ಪರಿಶಿಷ್ಟ ಜಾತಿ, ಪಂಗಡ ಜನಾಂಗದ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನ ದುರುಪಯೋಗವಾಗಿದ್ದು, ತನಿಖೆ ನಡೆಸಿದಲ್ಲಿ ಸಂಪೂರ್ಣ ಅವ್ಯವಹಾರ ಹೊರಬೀಳುತ್ತದೆ.
ವಾರ್ಡ್ ನಂ. 10ರಲ್ಲಿ 2010- 11ನೇ ಸಾಲಿನಲ್ಲಿ 22.75 ಯೋಜನೆಯಡಿ ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯ ನಿರ್ಮಾಣ ಮತ್ತು ಜಾಗ ಖರೀದಿಗೆ ಒಟ್ಟು 11.80 ಲಕ್ಷ ಬಿಡುಗಡೆ ಮಾಡಿತ್ತು. ಜಾಗ ಸಿಗದ ಕಾರಣ ಆ ಹಣವನ್ನು ಪಪಂ ಹಿಂಭಾಗದಲ್ಲಿ ಹೈಟೆಕ್ ರಂಗಮಂದಿರ ನಿರ್ಮಿಸಲು ಕ್ರೀಯಾಯೋಜನೆ ಮಾಡಲಾಗಿದೆ. ಅದರ ಕಡತಗಳು ಮಾಯವಾಗಿವೆ ಎಂದು ಆಪಾದಿಸಿದರು.
ಮುಖ್ಯಾಧಿಕಾರಿ ವಜಾಗೊಳಿಸಿ: ಪರಿಶಿಷ್ಟ ಜಾತಿ ವಾರ್ಡಿನಲ್ಲಿ ಚರಂಡಿ, ಸಮುದಾಯ ಭವನ, ಸೇರಿದಂತೆ 20 ಲಕ್ಷಕ್ಕೂ ಅಧಿಕ ವೆಚ್ಚದ ಕಾಮಗಾರಿಗೆ ಟೆಂಡರ್ ಕರೆಯದೆ ನಿರ್ಲಕ್ಷ್ಯ ವಹಿಸಲಾಗಿದೆ. ಪೌರ ಕಾರ್ಮಿಕರಿಗೆ ನಿವೇಶನ ಒದಗಿಲಸು 20 ಲಕ್ಷ ಮೀಸಲಿಟ್ಟಿದ್ದು ಈವರೆಗೂ ನೀಡಿಲ್ಲ. ವಾಣಿಜ್ಯ ಮಳಿಗೆಗಳ ಮರುಹರಾಜು ಮಾಡಿ ಅವ್ಯವಹಾರ ಎಸಗಿದ್ದಾರೆ ಎನ್ನುವ ಅನೇಕ ಅವ್ಯವಹಾರಗಳನ್ನು ತನಿಖೆ ಮಾಡಿ ತಪ್ಪಿತಸ್ಥ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ಅವರನ್ನು ಕೂಡಲೇ ಸೇವೆಯಿಂದ ವಜಾ ಮಾಡಬೇಕೆಂದು ಒತ್ತಾಯಿಸಿದರು.
ಬೇಡಿಕೆ - ನಮ್ಮ ಮನೆ ಯೋಜನೆಯಲ್ಲಿ ಆಯ್ಕೆಯಾದ 134 ಅರ್ಜಿದಾರರನ್ನು ರದ್ದು ಮಾಡಿದ್ದು ಕೂಡಲೇ ಅವುಗಳನ್ನು ಮಂಜೂರು ಮಾಡಬೇಕು. ವಾರ್ಡ್ 17ರಲ್ಲಿ ಸಿದ್ದಾರೂಢ ಮಠದ ಚಾವಣಿ ಎತ್ತರಿಸಬೇಕು. ಪೊಲೀಸ್ ಠಾಣೆ ಮುಂಭಾಗದ ಸರ್ಕಲ್ಗೆ ಡಾ. ಅಂಬೇಡ್ಕರ್ ವೃತ್ತವೆಂದು ಘೋಷಣೆ ಮಾಡಬೇಕು, ವಾರ್ಡ್ 4ರಲ್ಲಿ ಬುದ್ಧ ಭವನಕ್ಕೆ ನಿವೇಶನ ನೀಡಬೇಕು ಎನ್ನುವ 10 ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಬರೆದು, ಉಪ ತಹಸೀಲ್ದಾರ್ ಹುಲಗಯ್ಯನವರಿಗೆ ನೀಡಿದರು. ಧರಣಿಯಲ್ಲಿ ಪ್ಯಾಂಥರ್ ಅಧ್ಯಕ್ಷ ಕೃಷ್ಣ ಛಲವಾದಿ, ರಾಮು ಛಲವಾದಿ ನೇತೃತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

