ಗುಲ್ಬರ್ಗಾ

ಜಿಲ್ಲಾಭಿವೃದ್ಧಿಗೆ ಪ್ರವಾಸೋದ್ಯಮವೇ ಇಲ್ಲ!

Published On :

 ಮಂಜುನಾಥ ಸ್ವಾಮಿ
ಕ.ಪ್ರ. ವಾರ್ತೆ ್ಣ ಯಾದಗಿರಿ ್ಣ ಜು. 8
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯೇ ಇಲ್ಲ. ಹಾಗಂತ ಪ್ರವಾಸಿ ತಾಣಗಳೇ ಇಲ್ಲ ಎಂದಲ್ಲ. ಸಾಕಷ್ಟು ಪುರಾತನ, ಐತಿಹಾಸಿಕ, ಪ್ರೇಕ್ಷಣೀಯ ಪ್ರವಾಸಿ ತಾಣಗಳು ಜಿಲ್ಲೆಯಲ್ಲಿವೆ. ಆದರೂ ಪ್ರವಾಸಿ ಇಲಾಖೆ ಇಲ್ಲದಿರುವುದು ವಿಪರ್ಯಾಸ.
ಇತಿಹಾಸ ಗತವೈಭವ ಸಾರುವ ಅನೇಕ ಕುರುಹುಗಳು ಜಿಲ್ಲೆಯಲ್ಲಿವೆ. ಆದರಲ್ಲಿಯೂ ಜಿಲ್ಲಾ ಕೇಂದ್ರದಲ್ಲಿ ಪುರಾತನ ಐತಿಹಾಸಿಕ ಕೋಟೆ, ಪ್ರೇಕ್ಷಣೀಯ ಬೆಟ್ಟಗಳಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಹಲುವ ಆರಸೊತಿಗೆ ಆಳ್ವಿಕೆ ನಡೆಸಿದ ಕುರುಹುಗಳು ಸ್ಮಾರಕಗಳಾಗಿ ನಿಂತಿವೆ.
ಆಕರ್ಷಣೀಯ ತಾಣ ದಬದಬೆ: ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ದಬದಬೆ ನೆಚ್ಚಿನ ಪಿಕ್‌ನಿಕ್ ತಾಣ. ಜೋಗ ತಾಲೂಕಿನ ಗುರುಮಠಕಲ್ ಮತಕ್ಷೇತ್ರದಲ್ಲಿರುವ ಜಿಲ್ಲಾ ಕೇಂದ್ರದಿಂದ 40 ಕಿಮೀ ಅಂತರದಲ್ಲಿದೆ. ಉತ್ತಮ ರಸ್ತೆ ಸಂಪರ್ಕ ಮತ್ತು ಪ್ರಕೃತಿ ಉಳಿವಿಗಾಗಿ ಅಲ್ಲಲ್ಲಿ ನಾಮಫಲಕ ಹಾಕಿ ಜಾಗೃತಿ ಮೂಡಿಸಿದರೆ ಸುಂದರ ಪ್ರವಾಸಿ ತಾಣವಾಗಿ ಸೆಳೆಯುತ್ತದೆ.
ಐತಿಹಾಸಿಕ ಕೋಟೆ: ನಗರದ ಹೃದಯ ಭಾಗದಲ್ಲಿರುವ ಯಾದಗಿರಿ ಬೆಟ್ಟದಲ್ಲಿನ ಐತಿಹಾಸಿಕ ಕೋಟೆ, ಒಳಗಿರುವ ಗುಹೆ, ಮತ್ತು ತೋಪುಗಳು ಅರಸೊತ್ತಿಗೆಯ ಕುರುಹುಗಳನ್ನು ತಿಳಿಸುತ್ತವೆ. ಅಲ್ಲದೆ ಈ ಕೋಟೆಯನ್ನು ಅಭಿವೃದ್ಧಿ ಪಡಿಸಲು ಆಸಕ್ತಿ ಹೊಂದಿದ ಹಿಂದಿನ ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ ಭೇಟಿ ನೀಡಿ ವಿಶ್ವ ವಿಖ್ಯಾತ ಹಂಪಿ ಮಾದರಿಯಲ್ಲಿ ಆಕರ್ಷಕ ವಿದ್ಯುತ್ ದೀಪ ಅಳಡಿಸುವುದಾಗಿ ಹೇಳಿದ್ದರು. ಅದಲ್ಲದೇ ಕೋಟೆಯ ಜಿರ್ಣೋದ್ಧಾರಕ್ಕಾಗಿಯೇ 2 ಕೋಟಿ ಮೀಸಲಿಡಲಾಗಿತ್ತು. ಆದರೆ ಜಗದೀಶ್ ಅವರು ವರ್ಗಾವಣೆ ಆದ ನಂತರ ಎಲ್ಲ ಕೆಲಸಗಳು ಅಲ್ಲೇ ನಿಂತಿವೆ.
ಗವಿಸಿದ್ಧಲಿಂಗೇಶ್ವರ ದೇವಸ್ಥಾನ: ಚಿಂತನಹಳ್ಳಿ ಗ್ರಾಮದಲ್ಲಿ ಬರುವ ಬೆಟ್ಟಗುಡ್ಡಗಳ ಮಧ್ಯೆ ಗವಿಸಿದ್ಧಲಿಂಗೇಶ್ವರ ದೇವಸ್ಥಾನವಿದೆ. ಮೇಲಿಂದ ಬೀಳುವ ನೀರಿನ ಉಗಮ ವಿಸ್ಮಯಕಾರಿಯಾಗಿದೆ. ಎಲ್ಲಾ ಕಾಲದಲ್ಲೂ ನೀರು ಹರಿದು ಬರುವುದು ಅಚ್ಚರಿಯ ಸಂಗತಿಯಾಗಿದೆ. ದೇವಸ್ಥಾನ ಇರುವುದರಿಂದ ಮದುವೆ ಮುಂಜಿಗಳು ಸದಾ ಇಲ್ಲಿ ನಡೆಯುತ್ತಿರುತ್ತವೆ. ಇಲ್ಲಿ ಬಂದ ಭಕ್ತರು ಮಾತ್ರ ಎಂಥಾ ಸೌಂದರ್ಯ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವುದು ಸಾಮಾನ್ಯ.
ಹತ್ತಿಕುಣಿಯ ಜಲಾಶಯ: ಹತ್ತಿಕುಣಿ ಜಲಾಶಯ ಎಂದೇ ಕರೆಸಿಕೊಳ್ಳುವ ಈ ಸ್ಥಳ ಯಾದಗಿರಿಯಿಂದ ಕೇವಲ 12 ಕಿ.ಮೀ. ಅಂತರದಲ್ಲಿ ಬರುತ್ತದೆ. 1972ರ ದಶಕದಲ್ಲಿ ಕೇಂದ್ರ ಮಾಜಿ ಸಚಿವ ಮಲ್ಲಿಕಾರ್ಜುನ್ ಖರ್ಗೆಯವರು ಉದ್ಘಾಟಿಸಿದ್ದರು. ಹತ್ತಿಕುಣಿ ಕೆರೆಗೆ ಅಡ್ಡಲಾಗಿ ಕಟ್ಟಿರುವ ಈ ಜಲಾಶಯ ಸುತ್ತಮುತ್ತಲಿನ 2,145 ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುತ್ತದೆ. ಮೀನುಗಾರಿಕೆಗೂ ಅವಕಾಶವಿದೆ. ಮಳೆಗಾಲ ಬಂತೆಂದರೆ ಕಾಲೇಜು ವಿದ್ಯಾರ್ಥಿಗಳ ದಂಡೇ ನೆಲೆಸುತ್ತದೆ.
ಪ್ರಾಕೃತಿಕ ಬುದ್ಧ ಮಲಗಿದಂತೆ: ಜಿಲ್ಲೆಯ ಶಹಾಪುರ ತಾಲೂಕು ಕೇಂದ್ರದಲ್ಲಿಯೇ ಬರುವ ಈ ಸ್ಥಳ ಶ್ರೀರಂಗಪಟ್ಟಣ-ಗುಲ್ಬರ್ಗ ರಾಜ್ಯ ಹೆದ್ದಾರಿ 17ರಲ್ಲಿ ಬರುತ್ತದೆ. ಅಚ್ಚರಿಯೆಂದರೆ ಈ ಬೆಟ್ಟ ಬುದ್ಧ ಮಲಗಿದಂತೆ ಗೋಚರಿಸುತ್ತದೆ. ಪ್ರಾಕೃತಿಕ ವಿಸ್ಮಯವಾದ ಈ ಬೆಟ್ಟದ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡಿ ಬುದ್ಧ ವಿಹಾರ ನಿರ್ಮಿಸಲು ರೂಪುರೇಷೆ ಸಿದ್ಧಪಡಿಸಿದೆ. ಅದು ಕಾರ್ಯರೂಪಕ್ಕೆ ತರುವುದು ಮಂದಗತಿಯಲ್ಲಿ ಸಾಗುತ್ತಿದೆ.
ಭೋನಾಳ ಪಕ್ಷಿಧಾಮ: ರಂಗನತಿಟ್ಟು ಮಾದರಿಯಲ್ಲಿಯೇ ರಾಜ್ಯದ ಎರಡನೇ ರಂಗನಿತಿಟ್ಟು ಹೆಸರು ಪಡೆದ ಭೋನಾಳ ಪಕ್ಷಿಧಾಮದಲ್ಲಿ ಇನ್ನೂ ಕಾಮಗಾರಿಗಳು ನಡೆಯುತ್ತಿದೆ. ನಾನಾ ದೇಶಗಳಿಂದ ಪಕ್ಷಿಗಳು ಇಲ್ಲಿ ಬರುತ್ತವೆ.
ಸುರಪುರಕೋಟೆ, ವನದುರ್ಗ ಕೋಟೆ, ನಾರಾಯಣಪುರ ಡ್ಯಾಂ, ತಿಂಥಿಣಿ ಮೌನೇಶ್ವರ, ಛಾಯಾಭಗವತಿ ದೇವಸ್ಥಾನ, ಕೊಡೆಕಲ್ ಬಸವಣ್ಣ, ಭೀಮರಾಯ ಗುಡಿ ಸೇರಿದಂತೆ ಅನೇಕ ಪ್ರವಾಸಿ ತಾಣಗಳು ಜಿಲ್ಲೆಯಲ್ಲಿ ಇವೆ. ಅವುಗಳನ್ನು ಅಭಿವೃದ್ಧಿ ಪಡಿಸಿದರೆ ಸರ್ಕಾರಕ್ಕೆ ಆದಾಯದ ಜೊತೆಗೆ ಜಿಲ್ಲೆಯ ಜನರಿಗೆ ಒಂದು ಆಹ್ಲಾದಕರ ವಾತಾವರಣ ನಿರ್ಮಾಣ ಮಾಡಿದಂತೆ ಆಗುತ್ತದೆ.
ಖರ್ಚಾಗದ 1.70 ಕೋಟಿ: ಜಿಲ್ಲೆಯಾದ ನಂತರ ಇಲ್ಲಿನ ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ಹಾಗೂ ಕೋಟೆಗಳ ಜೀರ್ಣೋದ್ಧಾರಕ್ಕಾಗಿ ಬಂದಂತಹ 1.73 ಕೋಟಿ ಹಾಗೇಯೇ ಉಳಿದಿದೆ. ಪ್ರವಾಸೋದ್ಯಮ ಇಲಾಖೆ ಹಾಗೂ ಅದಕ್ಕೆ ಒಬ್ಬ ಉಪನಿರ್ದೇಶಕ ಬರುವವರೆಗೂ ಇಲಾಖೆಗೆ ಬಂದಿರುವ ಅನುದಾನ ಬಳಸಿಕೊಳ್ಳುವ ಹಾಗಿಲ್ಲ.
ಈಗಾಗಲೇ ಉಪನಿರ್ದೇಶಕ ಹುದ್ದೆಗೆ ಒಬ್ಬರ ಹೆಸರು ಸರ್ಕಾರಕ್ಕೆ ಶಿಫಾರಸು ಮಾಡಿದ್ದು, ಸರ್ಕಾರದಿಂದ ಒಪ್ಪಿಗೆ ಬಂದನಂತರ ಪ್ರವಾಸೋದ್ಯಮ ಇಲಾಖೆ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.