ಕೃಷ್ಣೆ ಕೃಪೆಗೆ ಕಾದುಕುಳಿತ ರೈತ
ಹಳ್ಳೇರಾವ್ ಕುಲಕರ್ಣಿ
ಕೆಂಭಾವಿ: ಮಹಾರಾಷ್ಟ್ರದಲ್ಲಿ ಭರ್ಜರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದ್ದು, ಆಲಮಟ್ಟಿ ಅಣೆಕಟ್ಟೆಗೆ ಲಕ್ಷಕ್ಕೂ ಹೆಚ್ಚು ಕ್ಯುಸೆಕ್ ನೀರು ಬರುತ್ತಿದೆ.
ನಾರಾಯಣಪುರ ಜಲಾಶಯಕ್ಕೆ ಶುಕ್ರವಾರ 30 ಸಾವಿರ ಕ್ಯುಸೆಕ್ ಒಳ ಹರಿವು ಇದೆ. ಕೆಲವೇ ದಿನಗಳಲ್ಲಿ ಜಲಾಶಯ ತುಂಬುವ ಆಶಾಭಾವನೆ ರೈತರಲ್ಲಿ ಮೂಡಿದೆ. ಹೊಸದಾಗಿ ನವೀಕರಣಗೊಂಡ ನಾರಾಯಣಪುರ ಎಡದಂಡೆ ನಾಲೆಗೆ ನೀರು ಹರಿಯುವುದನ್ನೇ ರೈತರು ಕಾದು ಕುಳಿತ್ತಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ದಿಟ್ಟ ನಿರ್ಧಾರದಿಂದ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ನಾರಾಯಣಪುರ ಎಡದಂಡೆ ನವೀಕರಣ ಕಾಮಗಾರಿ ಭಾಗಶಃ ಪೂರ್ಣಗೊಂಡಿದ್ದು, ಇದು ರೈತರಿಗೆ ಸಂತಸ ಇಮ್ಮಡಿಗೊಳಿಸಿದೆ.
ಅನೇಕ ವರ್ಷಗಳಿಂದ ಕಾಲುವೆ ಕೊನೆಯ ಭಾಗದ ರೈತರಿಗೆ ನೀರು ಸರಿಯಾಗಿ ತಲುಪದೆ ವೃಥಾ ಪೋಲಾಗುತ್ತಿತ್ತು. ಈ ಬಾರಿ ಎಲ್ಲ ಕಾಲುವೆಗಳು ನವೀಕರಣಗೊಂಡ ಹಿನ್ನೆಲೆಯಲ್ಲಿ ಪೋಲಾಗಲು ಅವಕಾಶವಿಲ್ಲ ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈಗಾಗಲೇ ಸಕಾಲಕ್ಕೆ ಮಳೆಯಾಗದೆ ಮುಂಗಾರು ಬೆಳೆಗಳನ್ನು ಕಳೆದುಕೊಂಡಿರುವ ರೈತ ಸಮುದಾಯ ಕೃಷ್ಣೆ ಕೃಪೆಯಿಂದ ಅಲ್ಪ ರೈತರಾದರೂ ಬೆಳೆಗಳನ್ನು ಬೆಳೆಯುತ್ತಾರೆ ಎಂಬ ಆಶಾಭಾವನೆ ಇದೆ. ಕೆಂಭಾವಿ ಸೇರಿದಂತೆ ಸುತ್ತಮುತ್ತಲಿನ ಅನೇಕ ಹಳ್ಳಿಗಳು ಈ ಕಾಲುವೆಯ ಉಪಯೋಗ ಪಡೆಯುತ್ತಿದ್ದು, ಪಟ್ಟಣದಿಂದ ಶಹಾಪುರ, ಮುಡಬೋಳ, ಇಂಡಿ, ಜೇವರ್ಗಿ ಶಾಖಾ ಕಾಲುವೆಗಳಾಗಿ ವಿಂಗಡನೆಯಾಗುತ್ತಿದೆ ಮತ್ತು ಇಲ್ಲಿಂದಲೇ ನೆರೆಯ ಬಿಜಾಪುರ ಜಿಲ್ಲೆಗೂ ಗುತ್ತಿಬಸವೇಶ್ವರ ಏತ ನೀರಾವರಿಯಿಂದ ನೀರೊದಗಿಸಿ ಕುಡಿವ ನೀರಿನ ಸಮಸ್ಯೆ ಹೋಗಲಾಡಿಸಲು ಪ್ರಯತ್ನಿಸಲಾಗುತ್ತಿದೆ. ಕಾಲುವೆ ನವೀಕರಣ ಕಾಮಗಾರಿ ಈಗಾಗಲೇ ಮುಗಿದಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಐಬಿಸಿ ಹಾಗೂ ಜೆಬಿಸಿ ಕಾಲುವೆಗಳ ಕಾಮಗಾರಿ ಇನ್ನೂ ಮುಗಿಯದೆ ಇರುವುದು ರೈತರನ್ನು ಚಿಂತೆಗೀಡು ಮಾಡಿದೆ.
ಪೂರ್ಣಗೊಂಡ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದೆ ಎಂದು ತಜ್ಞರು ಹಲವು ಬಾರಿ ಸರ್ಕಾರಕ್ಕೆ ತಿಳಿಸಿದ್ದರೂ ಏನು ಪ್ರಯೋಜನವಾಗಿಲ್ಲ. ನೀರು ಹರಿಸಿದಾಗಲೇ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಬಣ್ಣ ಬಯಲಾಗುವುದು.
ವಿರೂಪಾಕ್ಷಿ ಕರಡಕಲ್, ದಲಿತ ಮುಖಂಡ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

