ಗಿರಿ ಜಿಲ್ಲೆಯಲ್ಲಿ ಟ್ರಾಫಿಕ್ ಕಿರಿಕಿರಿ
ಮಂಜುನಾಥ ಸ್ವಾಮಿ
ಯಾದಗಿರಿ: ಜಿಲ್ಲಾ ಕೇಂದ್ರವಾಗಿ ನಾಲ್ಕು ವರ್ಷ ಕಳೆದರೂ ಯಾದಗಿರಿಯಲ್ಲಿ ಟ್ರಾಫಿಕ್ ಪೊಲೀಸ್ ಠಾಣೆಯಿಲ್ಲ. ಇದರಿಂದ ಹೆಚ್ಚುತ್ತಿರುವ ವಾಹನಗಳ ನಿರ್ವಹಣೆಯಿಲ್ಲದೆ ನಗರದಲ್ಲಿ ಸಂಚಾರ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ನಗರದ ಶಾಸ್ತ್ರಿ ವೃತ್ತ, ಸುಭಾಷ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಿ ವರ್ಷಗಳೇ ಕಳೆದಿವೆ. ಆದರೆ ಇದನ್ನು ನಿಭಾಯಿಸಬೇಕಾದ ಸಂಚಾರಿ ಪೊಲೀಸರೇ ಇಲ್ಲದಿರುವುದು ಜಿಲ್ಲಾಡಳಿತದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. ಅಲ್ಲದೆ ಆಗೊಮ್ಮೆ, ಈಗೊಮ್ಮೆ ಪೊಲೀಸ್ ಸಿಬ್ಬಂದಿ ಸಂಚಾರಿ ನಿರ್ವಹಣೆ ಮಾಡುತ್ತಾರಾದರೂ ಪರಿಣಾಮಕಾರಿಯಾಗಿಲ್ಲ. ಹೀಗಾಗಿ ಸಂಚಾರಿ ನಿಯಮ ಪಾಲನೆ ಎಂದರೇನು ಎನ್ನುವಂತಾಗಿದೆ.
ಸಾರ್ವಜನಿಕರು ರಸ್ತೆ ಸಂಚಾರ ನಿಯಮ ಪಾಲಿಸದ ಕಾರಣ ಅಧಿಕ ಅಪಘಾತಗಳು ಸಂಭವಿಸುತ್ತಿದ್ದು, ವಾಹನ ಚಾಲಕರು, ಪಾದಚಾರಿಗಳು ಭೀತಿಯಲ್ಲಿ ಸಂಚರಿಸುವಂತಾಗಿದೆ. ಬೈಕ್ ಮೇಲೆ ಮೂರ್ನಾಲ್ಕು ಜನ ಕುಳಿತು ಯರ್ರಾಬಿರ್ರಿ ಚಲಾಯಿಸಿದರೂ ಯಾರೂ ಕೇಳೋರಿಲ್ಲ. ಆಟೋರಿಕ್ಷಾ ಮತ್ತಿತರರ ವಾಹನಗಳನ್ನು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.
ವೃತ್ತಗಳಲ್ಲಿ ತೊಂದರೆ: ಸುಭಾಷ್ ಚೌರ್ ಜನದಟ್ಟಣೆಯಿಂದ ಕೂಡಿರುತ್ತದೆ. ಇಲ್ಲಿ ಮೂರು ರಸ್ತೆಗಳು ಕೂಡಿದ್ದು, ವಾಡಿ- ಚಿತ್ತಾಪುರ, ಶಹಾಪುರ- ಸುರಪುರ, ಹೈದರಾಬಾದ್ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಅಲ್ಲದೇ ಬಸ್ ನಿಲ್ದಾಣವಿದೆ. ಹೀಗಾಗಿ ಬೇರೆಡೆಗೆ ತೆರಳುವ ನಾನಾ ಕಡೆಯಿಂದ ಪ್ರಯಾಣಿಕರು ಆಗಮಿಸುತ್ತಾರೆ. ವಾಹನ ಮತ್ತು ಜನದಟ್ಟನೆಯಿಂದ ಜನರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ಅಲ್ಲದೇ ನಾಲ್ಕು ರಸ್ತೆ ಕೂಡುವ ಶಾಸ್ತ್ರಿ ವೃತ್ತವೂ ಜನಜಂಗುಳಿಯಿಂದ ಕೂಡಿರುತ್ತದೆ. ಇಲ್ಲಿ ಜನಸಂಚಾರ ಹೆಚ್ಚಾಗಿದ್ದು, ಇಲ್ಲಿಂದ ಹೈದ್ರಾಬಾದ್ ರಸ್ತೆ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಮತ್ತು ಗಾಂಧಿ ವೃತ್ತಕ್ಕೆ ತೆರಳಲಾಗುತ್ತದೆ. ಗಾಂಧಿವೃತ್ತ ರಸ್ತೆಯಲ್ಲಿ ಜಿಲ್ಲಾ ನ್ಯಾಯಲಯ, ಜಿಲ್ಲಾಧಿಕಾರಿಗಳ ಮತ್ತು ಜೆಸ್ಕಾಂ ಕಚೇರಿಗಳಿವೆ. ಸರ್ಕಾರಿ ಕೆಲಸದ ನಿಮಿತ್ತ ನಾನಾ ಕಡೆಯಿಂದ ಜನ ನಿತ್ಯ ಬರುತ್ತಾರೆ. ಇವರಿಗೂ ಟ್ರಾಫಿಕ್ ಬಿಸಿ ತಟ್ಟದಿರದು.
ಟ್ರಾಫಿಕ್ ಠಾಣೆ ಸ್ಥಾಪಿಸಿ
ಜಿಲ್ಲಾ ಕೇಂದ್ರದಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ಸ್ಥಾಪಿಸಬೇಕು. ತೀವ್ರ ಜನದಟ್ಟಣೆ ಇರುವ ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಬೇಕು. ಸಮರ್ಪಕವಾಗಿ ಕಾರ್ಯ ನಿರ್ವವಹಿಸುವಂತೆ ನೋಡಿಕೊಳ್ಳಬೇಕು. ಜನ ಮತ್ತು ವಾಹನ ದಟ್ಟಣೆಗಳ ನಿರ್ವಹಣೆಗಾಗಿ ಅಲ್ಲಲ್ಲಿ ಸಿಬ್ಬಂದಿ ನಿಯೋಜನೆ ಮಾಡಬೇಕೆಂಬುದು ನಾಗರಿಕರ ಒತ್ತಾಸೆಯಾಗಿದೆ.
ಮಹಿಳಾ ಠಾಣೆಯೂ ಇಲ್ಲ
ರಾಜ್ಯದ ಹತ್ತು ಜಿಲ್ಲಾ ಕೇಂದ್ರಗಳಲ್ಲಿ ಮಹಿಳಾ ಪೊಲೀಸ್ ಠಾಣೆಗಳನ್ನು ಆರಂಭಿಸಲಾಗುವುದು ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ರಾಜ್ಯದ ವಿಧಾನಮಂಡಲದಲ್ಲಿ ತಿಳಿಸಿದಾಗ ಯಾದಗಿರಿಗೂ ಒಂದು ಮಹಿಳಾ ಪೊಲೀಸ್ ಠಾಣೆ ಬರಬಹುದು ಎಂಬ ನೀರಿಕ್ಷೆಯಲ್ಲಿದ್ದ ಜನತೆಗೆ ಮತ್ತೆ ನಿರಾಸೆಯಾಗುವ ಸಾಧ್ಯತೆಗಳು ದಟ್ಟವಾಗಿವೆ. ನಗರದಲ್ಲಿ ಮಹಿಳಾ ಪೊಲೀಸ್ ಠಾಣೆ ಆರಂಭಿಸುವಂತೆ ಬಹಳಷ್ಟು ಜನರ ಆಶಯವಾಗಿತ್ತು. ಆದರೆ ಗಿರಿಗಳ ನಗರದಲ್ಲಿ ಮಹಿಳಾ ಠಾಣೆ ಇನ್ನೂ ಮರಿಚಿಕೆಯಾಗಿದೆ. ಇಲ್ಲಿ ಮಹಿಳಾ ಠಾಣೆ ಆಗುವುದರಿಂದ ಮಹಿಳೆಯರ ದೂರು ನೀಡಲು ಠಾಣೆಗೆ ಖುದ್ದಾಗಿ ಹೋಗಬಹುದು. ಮಹಿಳೆಯರ ಮೇಲಿನ ಕಿರುಕಳದಂತಹ ಘಟನೆಗಳಿಗೆ ಕಡಿವಾಣ ಹಾಕಲು ಮಹಿಳಾ ಠಾಣೆ ಅವಶ್ಯವಾಗಿತ್ತು ಎಂಬುದು ಜನರ ಆಶಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

