ಗುಲ್ಬರ್ಗಾ

ಊರಿಗೊಂದೇ ಶೌಚಾಲಯ ತಪ್ಪದ ಗ್ರಾಮಸ್ಥರ ಪರದಾಟ

Published On :

ಕನ್ನಡಪ್ರಭ ವಾರ್ತೆ  ಯಾದಗಿರಿ  ಜೂ.2
ಸರ್ಕಾರ ಎಲ್ಲ ಗ್ರಾಮಗಳನ್ನು ಬಯಲು ಶೌಚದಿಂದ ಮುಕ್ತಗೊಳಿಸಲು ನಿರ್ಮಲ ಭಾರತ ಯೋಜನೆ ಯೇನು ಜಾರಿಗೆ ತಂದಿದೆ. ಇದಕ್ಕಾಗಿ ಸಾಕಷ್ಟು ಹಣವನ್ನೂ ಬಿಡುಗಡೆ ಮಾಡಿದೆ. ಆದರೂ ಯಾದಗಿರಿ ಜಿಲ್ಲೆಯಲ್ಲಿ ಬಹುತೇಕ ಕಡೆ ಜನರು ಬಯಲು ಶೌಚಕ್ಕೆ ಜನರು ಮೋರೆ ಹೋಗುತ್ತಿರುವುದು ತಪ್ಪಿಲ್ಲ.
  ಶಹಾಪುರ ತಾಲೂಕಿನ ಹಯ್ಯಾಳ (ಬಿ) ಗ್ರಾಮದಲ್ಲಿ ಇಲ್ಲಿಯವರೆಗೂ ಯಾವುದೇ ಯೋಜನೆ ಅಡಿಯಲ್ಲಿ ಒಂದೇ ಒಂದು ಶೌಚಾಲಯವೂ ನಿರ್ಮಾಣವಾಗಿಲ್ಲ. ಹೋಬಳಿ ಕೇಂದ್ರವಾಗಿರುವ ಈ ಗ್ರಾಮದಲ್ಲಿ ಸುಮಾರು ಎರಡು ಸಾವಿರಕ್ಕಿಂತ ಅಧಿಕ ಮನೆಗಳಿವೆ. ಸುಮಾರು ಆರು ಸಾವಿರಕ್ಕಿಂತ ಅಧಿಕ ಜನಸಂಖ್ಯೆ ಇದೆ. ಇದರಲ್ಲಿ ಬೆರಳೆಣಿಕೆಯಷ್ಟು ಮನೆಗಳಲ್ಲಿ ಶೌಚಾಲಯಗಳಿವೆ. ಆದರೆ, ಇಲ್ಲಿಯವರೆಗೂ ಸಾರ್ವಜನಿಕ ಶೌಚಾಲಯಗಳಾಗಲಿ, ನಿರ್ಮಲ ಭಾರತ ಯೋಜನೆ ಅಡಿಯಲ್ಲಿ ಶೌಚಾಲಯಗಳು ನಿರ್ಮಾಣವಾಗಿಲ್ಲ.
ಊರಿಗೆ ಒಂದೇ ಶೌಚಾಲಯ: ಸುಮಾರು ಆರು ಸಾವಿರಕ್ಕಿಂತ ಅಧಿಕ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಕನಿಷ್ಠವೆಂದರೂ 3 ಸಾವಿರದಷ್ಟು ಮಹಿಳೆಯರಿದ್ದಾರೆ. ಇವರೆಲ್ಲರಿಗೂ ಹಳೆಯದಾದ ಒಂದೇ ಸಾರ್ವಜನಿಕ ಶೌಚಾಲಯವಿದೆ.
  ಮಹಿಳೆಯರು ಪ್ರತಿನಿತ್ಯ ಸರತಿ ಸಾಲಿನಲ್ಲಿ ನಿಲ್ಲುವ ಸ್ಥಿತಿ ಎದುರಾಗಿದೆ. ಸುಮಾರು ಒಂದು ಗಂಟೆಗೂ ಅಧಿಕ ಸಮಯವನ್ನು ಇರುವ ಏಕೈಕ ಶೌಚಾಲಯದ ಎದುರು ಕಳೆಯುವಂತಾಗಿದೆ.
  'ಊರಾಗ ಒಂದು ಶೌಚಾಲಯ ಇಲ್ಲಿರಿ.. ಊರು ಹೊರಗ ತಂಬಿಗೆ ಹಿಡ್ಕಂಡು ಹೋಗುಕ ನಾಚಿಕೆಯಾತದರಿ. ನಮ್ಮ ಮನಿಗೆ ಯಾರು ಬೀಗರು ನೆಂಟರು ಬರೋದಿಲ್ಲರಿ, ಶೌಚಕ್ಕೆ ಹೊಗಕ್ಕ ಶೌಚಾಲಯ ಇಲ್ಲಂತ ಯಾರು ಬರಂಗಿಲ್ಲಾರಿ ಸರ್... ಸರ್ಕಾರದವರು ಒಂದು ಶೌಚಾಲಯ ಕಟ್ಟಿಸಿಕೊಟ್ರ ಪುಣ್ಯ ಹತ್ತದರಿ' ಎಂದು ಗ್ರಾಮದ ದಾನಮ್ಮ ಹೇಳುತ್ತಾರೆ.
ಒತ್ತಾಯ: ಸರ್ಕಾರದ ಯೋಜನೆಗಳು ಯಶಸ್ವಿ ಆಗಬೇಕಾದರೆ ಅಧಿಕಾರಿ ವರ್ಗ ಜನರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಸಮರ್ಪಣಾ ಭಾವನೆಯಿಂದ ಕಾರ್ಯನಿರ್ವಹಿಸಬೇಕು. ಗ್ರಾಮದಲ್ಲಿ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಾರೆ.
ಗುರಿ ದೊಡ್ಡದು, ಸಾಧನೆ ಅತಿ ಸಣ್ಣದು...2013-14ನೇ ಸಾಲಿನಲ್ಲಿ ಶಹಾಪುರ ತಾಲ್ಲೂಕಿನಲ್ಲಿ 7,050 ಶೌಚಾಲಯಗಳ ನಿರ್ಮಾಣದ ಗುರಿ ಹೊಂದಲಾಗಿತ್ತು. ಅದರಲ್ಲಿ 282 ಬಿಪಿಎಲ್, 1304 ಎಪಿಎಲ್ ಕುಟುಂಬಗಳು ಸೇರಿದಂತೆ ಒಟ್ಟು 1,586 ಶೌಚಾಲಯಗಳನ್ನು ಮಾತ್ರ ನಿರ್ಮಿಸಲಾಗಿದೆ.
9,200 ಮಂಜೂರು: ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿ ಹೊಂದಿದ ಕುಟುಂಬಗಳು ಶೌಚಾಲಯ ನಿರ್ಮಿಸಿಕೊಳ್ಳಲು ಮುಂದೆ ಬಂದಲ್ಲಿ, ನಿರ್ಮಲ ಭಾರತ ಯೋಜನೆಯಡಿ ರೂ. 4,700 ಮತ್ತು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ರೂ. 4,500 ಹೀಗೆ ಒಟ್ಟು ರೂ. 9,200 ಮಂಜೂರು ಮಾಡಲಾಗುತ್ತದೆ.
  ಒಂದು ಶೌಚಾಲಯ ನಿರ್ಮಾಣ ಮಾಡಲು ಕನಿಷ್ಠ 18 ರಿಂದ20 ಸಾವಿರದವರೆಗೂ ಖರ್ಚಾಗುತ್ತದೆ. ಅದಕ್ಕಾಗಿ ಅನೇಕ ಗ್ರಾಮಸ್ಥರು ಹಣಕಾಸಿನ ಕೊರತೆ ಇರುವುದರಿಂದ ಶೌಚಾಲಯ ಕಟ್ಟಿಸಿಕೊಳ್ಳುಲು ಮುಂದಾಗುತ್ತಿಲ್ಲ.
  'ಜನರಲ್ಲಿ ಅರಿವಿನ ಕೊರತೆ ಇದೆ. ಸ್ವಯಂ ಸೇವಕರಿಂದ ಜಾಗೃತಿಯನ್ನು ಮೂಡಿಸುವ ಕಾರ್ಯ ಮಾಡುತ್ತಿದ್ದೇವೆ. ಈ ವರ್ಷ ಹಯ್ಯಾಳ ಗ್ರಾಮದಲ್ಲಿ 200 ಶೌಚಾಲಯ ನಿರ್ಮಾಣದ ಗುರಿ ಹೊಂದಲಾಗಿದೆ' ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹೇಳುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.