ಗುಲ್ಬರ್ಗಾ

ಕಟ್ಟಡವಿಲ್ಲದೆ ಅನಾಥವಾದ ಅಂಗನವಾಡಿ ಕೇಂದ್ರಗಳು

Published On :

ಯಾದಗಿರಿ: ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡಗಳಿಲ್ಲದೆ ಅನಾಥಸ್ಥಿತಿಯಲ್ಲಿವೆ. ಅನೇಕ ಕಡೆ ದೇವಸ್ಥಾನ, ಸಮುದಾಯ ಭವನ, ಪಂಚಾಯಿತಿ ಕಟ್ಟೆ,  ಶಾಲೆಯ ಯಾವುದೋ ಒಂದು ಕೊಠಡಿಯಲ್ಲಿಯೇ ನಡೆಸಬೇಕಾಗಿದೆ.
ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ವಿವಿಧ ರೀತಿಯ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಸ್ವಂತ ಕಟ್ಟಡಗಳಿಲ್ಲದೆ ನರಳುತ್ತಿವೆ. ಇನ್ನೂ ಅನೇಕ ಕೇಂದ್ರಗಳಲ್ಲಿ ಕಲಿಕೆಯ ವಾತಾವರಣವೇ ಇಲ್ಲದಂತಾಗಿದೆ.
ಜಿಲ್ಲೆಯ ಒಟ್ಟು 1300 ಅಂಗನವಾಡಿ ಕೇಂದ್ರಗಳಲ್ಲಿ 884 ಕೇಂದ್ರಗಳು ಮಾತ್ರ ಸ್ವಂತ ಕಟ್ಟಡ ಹೊಂದಿವೆ. 205 ಬಾಡಿಗೆ ಕೋಣೆಗಳನ್ನು ಹೊಂದಿದ್ದು, ಉಳಿದವು ದೇವಸ್ಥಾನ, ಗ್ರಾಮದ ಸಮದಾಯ ಭವನ ಗ್ರಾಮದ ಯಾವುದೇ ಗಿಡದ ನೆರಳಿನಲ್ಲಿ ನಡೆಯುತ್ತಿವೆ.
ನಿವೇಶನಗಳ ಕೊರತೆ: ಜಿಲ್ಲೆಯಲ್ಲಿ ಅನೇಕ ಕಡೆಗಳಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಿವೇಶನಗಳೂ ಕೊರತೆ ಎದ್ದು ಕಾಣುತ್ತಿದೆ. ಗ್ರಾಮಗಳಲ್ಲಿ ಸರ್ಕಾರಿ ಜಾಗ ಸಿಗುವುದು ಬಹಳಷ್ಟು ಕಷ್ಟವಾಗುತ್ತಿದೆ. ಜಾಗ ಸಿಕ್ಕರೂ ಕಟ್ಟಡ ನಿರ್ಮಿಸುವಷ್ಟರಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಇನ್ನೂ ಕೆಲವೆಡೆ ಜಾಗವೇ ಸಿಗದಿದ್ದರಿಂದ ಕಟ್ಟಡ ಬಾಡಿಗೆಗೆ ಪಡೆದು ನಡೆಸಲಾಗತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಹಾಯಕ ಉಪನಿರ್ದೇಶಕ ಎಸ್.ಟಿ. ತಳವಾರ ಹೇಳುತ್ತಾರೆ.
ಸಿಬ್ಬಂದಿ ಕೊರತೆ: ಅಂಗನವಾಡಿ ಕೇಂದ್ರಗಳನ್ನು ನಿರ್ವಹಣೆ ಮಾಡಲು ಸರ್ಕಾರ ಅನೇಕ ಸೌಲತ್ತುಗಳನ್ನು ನೀಡಿದರೂ ಸಿಬ್ಬಂದಿ ಕೊರತೆಯಿಂದ ಅನೇಕ ಕೇಂದ್ರಗಳು ಮುಚ್ಚಿಹೋಗುತ್ತಿವೆ. ಆಂಧ್ರದ ಗಡಿಭಾಗದಲ್ಲಿ ಗುರುಮಠಕಲ್, ಶಹಾಪುರಗಳಲ್ಲಿ ಸಿಬ್ಬಂದಿ ಕೊರತೆ ಇದೆ. 20ರಿಂದ 30 ಮಕ್ಕಳಿದ್ದರೂ ಒಬ್ಬರೇ ಸಹಾಯಕರು ಕೇಂದ್ರವನ್ನು ನಡೆಸಿಕೊಂಡು ಹೋಗಬೇಕಾಗಿದೆ. ಆದ್ದರಿಂದ ಸಹಾಯಕರಿಗೆ ನಿರ್ವಹಣೆ ಮಾಡಲು ಬಹಳ ಕಷ್ಟ ಪಡುವಂತಾಗಿದೆ.
ಜಿಲ್ಲೆಯ ಅಂಗನವಾಡಿ ಕಟ್ಟಡಗಳ ಕಾಮಗಾರಿಗಳು ಬಾಕಿ ಉಳಿದ್ದು, ಇಂದು- ನಾಳೆ ಕಾಮಗಾರಿ ಮುಗಿಯುತ್ತವೆ ಎನ್ನುವ ಹಂತದಲ್ಲಿವೆ. ಇನ್ನೂ ಕೆಲವು ಬುನಾದಿ ಕಾರ್ಯ ನಡೆಯುತ್ತಲಿದೆ. ಅನೇಕ ಕಡೆಗಳಲ್ಲಿ ಜಾಗದ ಬಗ್ಗೆ ತಕರಾರು ಎದ್ದು ಕೆಲಸಗಳು ಸ್ಥಗಿತ ಗೊಂಡಿವೆ.
ಎಲ್ಲೆಲ್ಲಿ ಏನೇನು?
ಒಟ್ಟು ಅಂಗನವಾಡಿ ಕೇಂದ್ರಗಳು 1300
ಸ್ವಂತ ಕಟ್ಟಡ ಕೇಂದ್ರಗಳು 884
ಬಾಡಿಗೆ ಕಟ್ಟಡ ಕೇಂದ್ರಗಳು 205
ಸಮುದಾಯ ಭವನದಲ್ಲಿ 42
ದೇವಸ್ಥಾನದಲ್ಲಿ 25
ಶಾಲೆಯ ಕಟ್ಟಡಗಳಲ್ಲಿ ನಡೆಯುವ ಕೇಂದ್ರಗಳು 53
ಪಂಚಾಯಿತಿ ಕಟ್ಟ್ಟೆಗಳಲ್ಲಿ 18


-ಮಂಜುನಾಥ ಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.