ಗುಲ್ಬರ್ಗಾ

ನಕಲಿ ಬಿತ್ತನೆ ಬೀಜ ತಡೆಗಾಗಿ ಸೂಚನೆ

Published On :

ಕ.ಪ್ರ. ವಾರ್ತೆ  ಯಾದಗಿರಿ  ಜೂ. 17
ರೈತರಿಗೆ ಸೂಕ್ತ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಿಸಬೇಕು. ನಕಲಿ ಹತ್ತಿ ಬೀಜ ಮಾರಾಟ ಮಾಡುವುದರ ಮೇಲೆ ನೀಗಾ ಇಡಲು ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಸದಸ್ಯ ಹಣಮಂತ್ರಾಯ ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬಸಲಿಂಗವ್ವ ಮಲ್ಲಪ್ಪ ಮೇಟಿ ಅಧ್ಯಕ್ಷತೆಯಲ್ಲಿ ನಡೆದ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಕಳೆದ ಬಾರಿ ಹತ್ತಿ ಬಿತ್ತನೆ ಬೀಜಗಳು ನಕಲಿ ಮಾರಾಟ ಮಾಡುವ ಜಾಲ ಬೆಳಕಿಗೆ ಬಂದಿದ್ದು, ಈ ಬಾರಿ ಅದನ್ನು ಗಮನದಲಿಟ್ಟುಕೊಳ್ಳಬೇಕು. ಮತ್ತು ಎಲ್ಲಿಯಾದರೂ ನಕಲಿ ಬೀಜ ಮಾರಾಟ ಕಂಡು ಬಂದರೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಲಹೆ ನೀಡಿದರು.
ಇದ್ದಕ್ಕೆ ಉತ್ತರಿಸಿದ ಕೃಷಿ ಅಧಿಕಾರಿ, ನಕಲಿ ಬಿತ್ತನೆ ಬೀಜ ತಡೆಗೆ ಜಾಗೃತ ತಂಡ ರಚಿಸಲಾಗಿದೆ. ಆಯಾ ತಾಲೂಕು ಮಟ್ಟದಲ್ಲಿ ಒಂದೊಂದು ಜಾಗೃತ ತಂಡ ರಚಿಸಿಕೊಂಡು ಬಿತ್ತನೇ ಬೀಜಗಳ ಮೇಲೆ ನಿಗವಹಿಸಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ಬೀಜಗಳ ಸಂಗ್ರಹಣೆ ಇದೆ. ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಅಧಿಕಾರಿ ಸಭೆಗೆ ತಿಳಿಸಿದರು.
ಸದಸ್ಯರಿಗೆ ಗೊತ್ತಿರದೇ ಹಣ ಖರ್ಚು: ತೋಟಗಾರಿಕೆ ಇಲಾಖೆಯಲ್ಲಿ ಎನ್‌ಆರ್‌ಎಚ್‌ಎಂ ಅನುದಾನದಲ್ಲಿ ಸಾಕಷ್ಟು ಹಣ ಬಂದಿದ್ದು, ಅದನ್ನು ಸಂಪೂರ್ಣವಾಗಿ ಖರ್ಚು ಮಾಡಲಾಗಿದೆ. ಈ ಹಣದ ಮಾಹಿತಿಯೂ ಯಾರೊಬ್ಬ ಸದಸ್ಯರ ಗಮನಕ್ಕೆ ಬಾರದೇ ಖರ್ಚು ಮಾಡಿರುವುದನ್ನು ಕಂಡು ಸಮಿತಿ ಸದಸ್ಯ ಬಸವರಾಜ ಖಂಡ್ರೆ ಅವರು ತೋಟಗಾರಿಕೆ ಅಧಿಕಾರಿಯ ವಿರುದ್ಧ ಹರಿಹಾಯ್ದರು. ಇನ್ನು ಮುಂದು ಯಾವುದೇ ರೀತಿಯ ಹಣ ಖರ್ಚು ಅಥವಾ ರೈತರಿಗೆ ಯಾವುದೇ ರೀತಿಯ ಅನುಕೂಲವಾಗುವಂತಹ ಕೆಲಸಗಳನ್ನು ಮಾಡುವಾಗ ಆಯಾ ಕ್ಷೇತ್ರದ ಜಿಪಂ ಸದಸ್ಯರು ಅಥವಾ ಸ್ಥಾಯಿ ಸಮಿತಿ ತಿಳಿಸಬೇಕು ಎಂದು ಸೂಚಿಸಿದರು.
ತೋಟಗಾರಿಕೆ ಇಲಾಖೆಯ ಅಧಿಕಾರಿ ಸಭೆಗೆ ಯೋಜನೆ ಫಲಾನುಭವಿಗಳ ವಿವರವುಳ್ಳ ಪಟ್ಟಿಯೂ ತಂದಿರಲ್ಲಿಲ್ಲ. ಅಪೂರ್ಣ ಮಾಹಿತಿಯೊಂದಿಗೆ ಆಗಮಿಸಿದ್ದರಿಂದ ಯಾವುದೇ ಮಾಹಿತಿ ಕೇಳಿದರೂ ಸಹ ಆಮೇಲೆ ತರಿಸಿ ಕೊಡುತ್ತೇನೆ ಎಂದು ಹೇಳಿದರು. ಸುಮಾರು 96 ಲಕ್ಷ ವೆಚ್ಚದಲ್ಲಿ ಜಿಲ್ಲೆಯಲ್ಲಿ ಚೆಕ್ ಡ್ಯಾಂ ನಿರ್ಮಿಸಲಾಗಿದೆ. ಸುರಪುರ ಮತ್ತು ಶಹಾಪುರದಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಿಸಲು ಸೂಚಿಸಲಾಗಿದೆ ಎಂದು ಜಲಾನಯನ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಪಶು ವೈದ್ಯರು ಎಲ್ಲಿದ್ದಾರೆ...?: ಸಮಿತಿ ಸದಸ್ಯರಾದ ಹಣಮಂತ್ರಾಯ ಅವರು, ಚೆಕ್ ಡ್ಯಾಂ ಎಲ್ಲೆಲ್ಲಿ ನಿರ್ಮಾಣವಾಗುತ್ತಿವೆ ಎಂದು ಪರಿಶೀಲನೆ ಮಾಡಿದ್ದೀರಿ ಎಂದು ಅಧಿಕಾರಿಗಳನ್ನು ಕೇಳಿದಾಗ, ಇನ್ನೂ ಪರಿಶೀಲನೆ ಮಾಡಬೇಕು ಎಂದು ಹೇಳಿದರು. ಅದಕ್ಕೆ ಸುರಪುರ ತಾಲೂಕಿನಲ್ಲಿ ಬೇಡವಾದ ಕಡೆಯಲ್ಲೆಲ್ಲ ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗಿದೆ. ಇದನ್ನು ನೀವು ಗಮನಿಸದೇ ಇರುವುದರಿಂದ ಇಂತಹ ಲೋಪಗಳು ಆಗುತ್ತಿವೆ. ಎರಡು ದಿನಗಳಲ್ಲಿ ಎಲ್ಲಿಲ್ಲಿ ಎಷ್ಟು ಹಣ ಬಿಡುಗಡೆಯಾಗಿದೆ, ಎಲ್ಲೆಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಲಾಗಿದೆ ಎಂದು ತಾವು ಖುದ್ದಾಗಿ ಪರಿಶೀಲಿಸಿ ವರದಿ ನೀಡಬೇಕು ಎಂದು ಸೂಚಿಸಿದರು.
ಪಶು ಸಂಗೋಪನಾ ಇಲಾಖೆಯಲ್ಲಿ ಆಯಾ ತಾಲೂಕುಗಳಲ್ಲಿ ವೈದ್ಯರು ಗ್ರಾಮಕ್ಕೆ ಬರುವುದಿಲ್ಲ. ಇದರಿಂದ ರೈತರು ತಮ್ಮ ದನಕರುಗಳನ್ನು ಖಾಸಗಿ ವೈದ್ಯರ ಮಾರುಹೋಗಿದ್ದಾರೆ. ನೀವು ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು ಎಂದು ಅಧಿಕಾರಿ ವಿರುದ್ಧ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಮಾಹಿತಿಯೊಂದಿಗೆ ಬಾರದ ಅಧಿಕಾರಿಗಳು: ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಪಗ್ರತಿ ಪರಿಶೀಲನಾ ಸಭೆಯಲ್ಲಿ ಬರಿಗೈಯಲ್ಲಿ ಬಂದ ಅಧಿಕಾರಿಗಳು, ಯೋಜನೆ ಅನುಷ್ಠಾನ ಕುರಿತು ನೀಡಬೇಕಾದ ಮಾಹಿತಿ ಕೇಳಿ ಅವರ ಹತ್ತಿರ ಇರದಿದ್ದನ್ನು ಕಂಡು ಅಧಿಕಾರಿಗಳ ವಿರುದ್ಧ ಸದಸ್ಯರು ಗರಂ ಆಗಿದ್ದು ಕಂಡು ಬಂತು.
ಸಮಿತಿ ಸದಸ್ಯರು ಕೇಳಿದ ಎಲ್ಲ ಪ್ರಶ್ನೆಗಳಿಗೆ 'ಸರ್ ನಾನು ಸರಿಯಾದ ಮಾಹಿತಿ ತಂದಿಲ್ಲ. ಎಲ್ಲ ಮಾಹಿತಿಗಳೂ ಆಫೀಸ್‌ನಲ್ಲಿ ಇದೆ. ಇಲ್ಲಿ ನಾನು ಕೇವಲ ಅಂಕಿ-ಅಂಶಗಳನ್ನು ಮಾತ್ರ ತಂದಿದ್ದೇನೆ. ನಿಮಗೆ ಬೇಕಾದರೆ ನಾನು ನಾಳೆ ಎಲ್ಲ ಮಾಹಿತಿ ತಲುಪಿಸುತ್ತೇನೆ' ಎಂಬ ಹೇಳಿಕೆ ಸಾಮಾನ್ಯವಾಗಿತ್ತು.
ಮಾಹಿತಿ ಕೊಡುವುದೊಂದು ಹೇಳುವುದೊಂದು: ವಿವಿಧ ಇಲಾಖೆಯ ಅಧಿಕಾರಿಗಳೂ ಜಿಪಂ ಸಭೆಗೆ ಸರಿಯಾದ ಮಾಹಿತಿ ನೀಡಿಲ್ಲ. ಸಭೆಗೆ ಸಲ್ಲಿಸಿದ ಮಾಹಿತಿಯೇ ಬೇರೆಯಾಗಿತ್ತು. ಅಧಿಕಾರಿಗಳು ಹೇಳುವ ಮಾಹಿತಿಯೇ ಬೇರೆಯಾಗಿರುವುದನ್ನು ಕಂಡು ಸದಸ್ಯರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಜರುಗಿತು. ಹಿಂದಿನ ಸಭೆ ನಡಾವಳಿಗಳನ್ನು ಅನುಮೋದಿಸಲಾಯಿತು. ಜಿಪಂ ಉಪಾಧ್ಯಕ್ಷೆ ಮಲ್ಲಮ್ಮ ಬನಪ್ಪ, ಸದಸ್ಯರಾದ ಹನುಮವ್ವ, ಶರಣಮ್ಮ ಹವಲ್ದಾರ ಇದ್ದರು.


ಅಧಿಕಾರಿಗಳ ಗೈರು: ಸಾರ್ವಜನಿಕರ ಆಕ್ರೋಶ


ಜಿಲ್ಲೆಯ ಸಮಗ್ರ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಬೇಕಿದ್ದ ಈ ಸಭೆಯಲ್ಲಿ ಅಧಿಕಾರಿಗಳು ಸರಿಯಾದ ಸಮಯಕ್ಕೆ ಬಾರದಿರುವ ನಾಗರಿಕರ ಆಕ್ರೋಶಕ್ಕೂ ಕಾರಣವಾಯಿತು. ಸಮಯದ ಬಗ್ಗೆ ಪರಿಕಲ್ಪನೆ ಇಲ್ಲದ ಅಧಿಕಾರಿಗಳಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಸ್ಥಳದಲ್ಲಿದ್ದ ಸಾರ್ವಜನಿಕರಲ್ಲಿ ಚರ್ಚೆ ನಡೆಯಿತು. ಜಿಪಂ ಉಪಾಧ್ಯಕ್ಷೆ ಮಲ್ಲಮ್ಮ ಕಣೇಕಲ್ ಅಧ್ಯಕ್ಷತೆಯಲ್ಲಿ ನಡೆಯಬೇಕಿದ್ದ ಸಭೆಗೆ ಕೇವಲ ಬೆರಳೆಣಿಕೆಯಷ್ಟು ಅಧಿಕಾರಿಗಳು ಮಾತ್ರ ಹಾಜರಿದ್ದರು. ಇದರಿಂದ ಸಿಡಿಮಿಡಿಗೊಂಡ ಜಿಪಂ ಸದಸ್ಯ ದೇವರಾಜ ನಾಯಕ್, ಅಧಿಕಾರಿಗಳಿಗೆ ಸಭೆ ಇದೆ ಎಂದು ಮುಂಚಿತವಾಗಿಯೇ ಏಕೆ ತಿಳಿಸಲಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ಸಭೆ ಸುಮಾರು ಒಂದು ಗಂಟೆ ವಿಳಂಬವಾಗಿ ಆರಂಭವಾಯಿತು.


ಉಲ್ಲಂಘನೆ: ಮಳಿಗೆ ಮಾಲೀಕರಿಗೆ ನೋಟಿಸ್


ಶಹಾಪುರ ತಾಲೂಕಿನ ಬೀಜ, ಕೀಟನಾಶಕ ಹಾಗೂ ರಸಗೊಬ್ಬರ ಮಾರಾಟದ 25 ಮಳಿಗೆಗಳ ಮೇಲೆ ಕೃಷಿ ಇಲಾಖೆಯ ಜಿಲ್ಲಾ ಜಾಗೃತ ದಳದ ವತಿಯಿಂದ ದಿಢೀರ್ ದಾಳಿ ನಡೆಸಲಾಯಿತು. ತಂಡದ ಮುಖ್ಯಸ್ಥರು ಹಾಗೂ ಸಹಾಯಕ ಕೃಷಿ ನಿರ್ದೇಶಕರಾದ ಕಾಶಿನಾಥ ಹೈಬತ್ತಿ, ಸದಸ್ಯರಾದ ಕೃಷಿ ಅಧಿಕಾರಿ ಸುರೇಶ ಯಾದಗಿರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ದೇವೇಂದ್ರ ತಂಡವು ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿತು. ಕಾನೂನು ಉಲ್ಲಂಘನೆ ಮಾಡಿರುವ 25 ಮಳಿಗೆ ಮಾಲೀಕರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ. 7 ದಿನಗಳ ಒಳಗಾಗಿ ಸೂಕ್ತ ಸಮಜಾಯಿಷಿ ನೀಡದಿದ್ದಲ್ಲಿ ಅಂತಹ ಮಳಿಗೆಗಳ ಮಾರಾಟ ಪರವಾನಗಿಯನ್ನು ಅಮಾನತುಗೊಳಿಸಿ ಕ್ರಮ ಜರುಗಿಸಲಾಗುವುದೆಂದು ತಾಕೀತು ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.