ಗುಲ್ಬರ್ಗಾ

ಹಾರಿಬಲ್ ಹಾಸ್ಟೆಲ್

Published On :

-ಮಂಜುನಾಥ ಸ್ವಾಮಿ
ಯಾದಗಿರಿ: ಸರ್ಕಾರ ಸ್ಥಾಪಿಸಿರುವ ಹಾಸ್ಟೆಲ್‌ಗಳ ಸ್ಥಿತಿ ಹೇಗಿರುತ್ತದೆ ಎಂಬುದನ್ನು ನೋಡಲು ನಗರದ ಎಸ್ಸಿ ಮತ್ತು ಎಸ್ಟಿ ವರ್ಗಗಳ ಕಾಲೇಜು ವಸತಿ ನಿಲಯಕ್ಕೆ ಭೇಟಿ ನೀಡಬೇಕು.
  ಕಾಲೇಜು ವಸತಿ ನಿಲಯದಲ್ಲಿ ಪಿಯುಸಿ, ಬಿಎ,  ಬಿಇಡಿ ಡಿಪ್ಲೊಮಾ ಓದುವ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವಾಸವಾಗಿದ್ದಾರೆ. ಆದರೆ ಅವರಿಗೆ ಕನಿಷ್ಠ ಮೂಲ ಸೌಕರ್ಯಗಳೇ ಇಲ್ಲ.
 ಸ್ನಾನಕ್ಕೆ 6 ಕೋಣೆಗಳಿದ್ದರೂ ಯಾವುದೂ ಚಾಲ್ತಿಯಲ್ಲಿಲ್ಲ. ಅವುಗಳನ್ನು ಮುಚ್ಚಲಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ವಸತಿ ನಿಲಯದ ಹೊರಗಡೆ ಇರುವ ನಲ್ಲಿಯಲ್ಲಿಯೇ ತಮ್ಮ ಸ್ನಾನ ಮಾಡಬೇಕಾಗಿದೆ.
  ಇನ್ನೂ ವಿದ್ಯಾರ್ಥಿಗಳಿಗೆ ಬಟ್ಟೆಗಳನ್ನಿಡಲು ರ್ಯಾಕ್ ಇಲ್ಲ. ತುಕ್ಕು ಹಿಡಿದಿರುವ ಕಬ್ಬಿಣದ ಪೆಟ್ಟಿಗೆಗಳಲ್ಲಿ ಬಟ್ಟೆಗಳನ್ನು ಇಡಬೇಕಾಗಿದೆ. ಬಿರುಕು ಬಿಟ್ಟ ಕಾಂಕ್ರಿಟ್ ಸ್ಲಾಬ್‌ಗಳಿಂದಲೂ ತೊಂದರೆಯಾಗುತ್ತಿದೆ. ಇದು ಅಲ್ಲಿನ ವಿದ್ಯಾರ್ಥಿಗಳು ಹೇಳುವ ವಸತಿ ನಿಲಯದ ಒಳಗಿನ ಸ್ಥಿತಿಯಾದರೆ, ವಸತಿ ನಿಲಯದ ಹೊರಚಿತ್ರಣ ಇನ್ನೂ ಭಯಾನಕ ವಾಗಿದೆ. ವಸತಿ ನಿಲಯದ ಹೊಸ್ತಿಲಲ್ಲೇ ಕಸದ ರಾಶಿ. ಹಂದಿ, ನಾಯಿಗಳ ಹಿಂಡು, ವಸತಿ ನಿಲಯದ ಎದುರಿಗೆ ನಿಂತರೇ ನಿಲ್ಲುತ್ತವೆ. ದಿನನಿತ್ಯ ದುರ್ನಾತ ಅನುಭವಿಸುವ ಸಂಕಟ ವಿದ್ಯಾರ್ಥಿಗಳದ್ದಾಗಿದೆ.
ಪಕ್ಕದಲ್ಲೇ ಚರಂಡಿ: ಹಾಸ್ಟೆಲ್‌ನ ಸುತ್ತು ಸೂಕ್ತ ಚರಂಡಿ ವ್ಯವಸ್ಥೆ ಇರದ ಕಾರಣ ಇಲ್ಲಿ ಬಳಸಿದ ನೀರೆಲ್ಲ ಹಾಸ್ಟೆಲ್ ಸುತ್ತ ಜಮಾಯಿಸಿ ಒಡಾಡಲು ಆಗಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಡುಗೆ ಮನೆಯ ಸುತ್ತಲು ತೆರದ ಚರಂಡಿ ನೀರು ಹರಿಯುವುದರಿಂದ ಗಬ್ಬು ವಾಸನೆ ಹರಡುತ್ತಿದೆ. ಅದಲ್ಲದೆ ಸೊಳ್ಳೆಗಳು, ನೊಣಗಳ ಕಾಟ ಹೆಚ್ಚಾಗಿದೆ.
 ಹಾಸ್ಟೆಲ್‌ಗೆ ಅಂಟಿಕೊಂಡೇ ಹಿಂಭಾಗದಲ್ಲಿ ವಿದ್ಯುತ್ ತಂತಿ ಪರಿವರ್ತಕವಿದ್ದು, ವಿದ್ಯಾರ್ಥಿಗಳು ತಮ್ಮ ಒಗೆದ ಬಟ್ಟೆಯನ್ನು ಹೊರಹಾಕಲು ಹೋದಾಗ ಗಾಳಿಗೆ ಹಾರಿ ತಂತಿಗಳ ಮೇಲೆ ಬೀಳುತ್ತಿವೆ. ಇದರಿಂದ ಭಯವಾಗುತ್ತಿದೆ ಎಂಬುದು ವಿದ್ಯಾರ್ಥಿಗಳ ಗೋಳು.

 ಬಾತ್‌ರೂಂಗಳಲ್ಲಿ ಅನಗತ್ಯ ವಸ್ತು
ವಸತಿ ನಿಲಯದಲ್ಲಿ 6 ಶೌಚಾಲಯಗಳಿವೆ. ಆದರೆ ಎಲ್ಲ ಶೌಚಾಲಯಗಳಿಗೂ ಬೀಗ ಹಾಕಲಾಗಿದೆ. ಕೆಲವು ಬಾತ್ ರೂಂಗಳಲ್ಲಿ ಅನಗತ್ಯ ವಸ್ತುಗಳನ್ನು ತುಂಬಿಸಿಲಾಗಿದೆ. ಇದರಿಂದ ವಿದ್ಯಾರ್ಥಿಗಳು ಚೆಂಬು ತೆಗೆದುಕೊಂಡು ಬಯಲಿಗೆ ಹೋಗಬೇಕಾದ ಪರಿಸ್ಥಿತಿ ಇದೆ. ಒಟ್ಟು 14 ಜನ ಸಿಬ್ಬಂದಿಯಿದ್ದರೂ ಹಾಸ್ಟೆಲ್ ಸ್ವಚ್ಛತೆಯಿಲ್ಲ.  ಗೋಡೆಗಳ ಮೇಲೆ ಗುಟ್ಕಾ ತಿಂದು ಉಗುಳಿರುತ್ತಾರೆ. ವಿದ್ಯಾರ್ಥಿಗಳು ಗೋಡೆಯ ಮೇಲೆಲ್ಲಾ ಬರೆದು ಹಾಳುಮಾಡುತ್ತಿದ್ದಾರೆ. ಹಾಸ್ಟೆಲ್‌ನಲ್ಲಿ ಮಲಗಲು ಹಾಸಿಗೆಗಳು ಇಲ್ಲದ ಕಾರಣ ತುಕ್ಕು ಹಿಡಿದ ಮಂಚಗಳ ಮೇಲೆ ಹಾಸಿಗೆಯಿಲ್ಲದೆ ಮಲಗುತ್ತಿದ್ದೇವೆ ಎನ್ನುತ್ತಾರೆ ವಿದ್ಯಾರ್ಥಿಗಳು.

 ಅವ್ಯಾಹತ ಧೂಳು
ಅಡುಗೆ ಕೋಣೆಯ ಸುತ್ತಮುತ್ತ ನೋಡಿದರೆ ಎಲ್ಲೆಂದರಲ್ಲಿ ಧೂಳು. ಅಡುಗೆ ಮಾಡುವ ಕಟ್ಟೆ, ಚಪಾತಿ ಮಾಡುವ ಕಲ್ಲು ಧೂಳು ತಿನ್ನುತ್ತಿವೆ.  ಅಡುಗೆ ಮನೆಯ ಉಪಯೋಗಿಸುವ ಗ್ಯಾಸ್ ಸಿಲಿಂಡರ್‌ಗಳಿಗೆ ಸೂಕ್ತ ಭದ್ರತೆ ಇಲ್ಲದಾಗಿದೆ. ಅವುಗಳ ಸುತ್ತ ತಂತಿಯ ಬೇಲಿ ನಿರ್ಮಿಸಬೇಕು. 10ರಿಂದ12 ಸಿಲಿಂಡರ್ ಒಟ್ಟಿಗೆ ಬಳಸುವುದರಿಂದ ಅವುಗಳಿಗೆ ಸುರಕ್ಷಿತ ಕ್ರಮ ಕೈಗೊಳ್ಳಬೇಕು. ಆದರೆ ಇಲ್ಲಿ ಯಾವುದೇ ಅಂತಹ ಸೌಲಭ್ಯಗಳಿಲ್ಲ.

ಅಯ್ಯೋ, ಗಲೀಜು
ಅಡುಗೆ ಮನೆ, ಪಾತ್ರೆ ಮತ್ತು ಕೈತೊಳೆಯುವ ರೂಂಲ್ಲಿ ವಿದ್ಯುತ್ ದೀಪವಿಲ್ಲ. ರಾತ್ರಿಯಾದರೆ ವಿದ್ಯಾರ್ಥಿಗಳು ಮೊಬೈಲ್ ಟಾರ್ಚ್ ಹಾಕಿಕೊಂಡು ಪ್ರವೇಶ ಮಾಡಬೇಕು. ಎಲ್ಲೆಂದರಲ್ಲಿ ಬಿಸಾಕಿದ ಆಹಾರ, ಎಲ್ಲ ರೂಮಿನ ಎದುರುಗಡೆ ಬಿಸಾಕಿದ ತಟ್ಟೆಗಳಿರುತ್ತವೆ. ಒಂದೊಂದು ಬುಟ್ಟಿಗಳಷ್ಟು ಅನ್ನ ಹಾಳು ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ತಮಗೆ ಅಗತ್ಯವಾದಷ್ಟು ಬಳಸಿಕೊಳ್ಳದೆ ಅನವಶ್ಯಾಕವಾಗಿ ಅತಿ ಹೆಚ್ಚು ಅನ್ನ ಬಳಸಿಕೊಳ್ಳುವುದರಿಂದ ಉಳಿದ ಅನ್ನವನ್ನು ಹಾಸ್ಟೆಲ್ ತಮ್ಮ ಕೋಣೆಯ ಮುಂದುಗಡೆ ಇಡುತ್ತಿದ್ದಾರೆ. ಇದ್ದರಿಂದ ಹಾಸ್ಟೆಲ್‌ನಲ್ಲಿ ಎಲ್ಲಿ ನೋಡಿದರೂ ತಟ್ಟೆಗಳು, ಸಾರು ತುಂಬಿದ ಬಕೆಟ್‌ಗಳನ್ನು ಕಾಣಬಹುದು.

ಕಳೆದ ತಿಂಗಳ ಜಿಪಂ ಅಧ್ಯಕ್ಷರು ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಹೋಗಿದ್ದಾರೆ. ಎಲ್ಲ ಸಮಸ್ಯೆಗಳನ್ನು ಒಂದೊಂದಾಗಿ ಬಗೆಹರಿಸಲಾಗುವುದು. ವಿದ್ಯಾರ್ಥಿಗಳು ಸಹ ಸ್ವಲ್ಪ ಸ್ವಚ್ಛತೆಯನ್ನು ಕಾಪಾಡಿಕೊಂಡು ಹೋಗಬೇಕು. ಅಗತ್ಯಕ್ಕಿಂತ ಅನ್ನ ಹೆಚ್ಚಾಗಿ ಬಳಸಿಕೊಂಡು ಉಳಿದಿದ್ದು ಬಿಸಾಕುವುದು ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಸಹ ವಸತಿ ನಿಲಯದ ಅಭಿವೃದ್ಧಿಗೆ ಸಹಕರಿಸಬೇಕು.
 ಶಿವರಾಜ, ಹಾಸ್ಟೆಲ್ ವಾರ್ಡ್‌ನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.