ಸಿಇಟಿ ಸೀಟು ಹಂಚಿಕೆ ಕಲಂ 371(ಜೆ) ಅನ್ವಯ: ಸಚಿವ
ಕ.ಪ್ರ. ವಾರ್ತೆ ಗುಲ್ಬರ್ಗ ಮಾ.2
ರಾಜ್ಯದ ಆರು ಮೆಡಿಕಲ್ ಕಾಲೇಜುಗಳಲ್ಲಿನ ಬೋಧಕ ಹುದ್ದೆ ಭರ್ತಿಯಲ್ಲಿ ಸಂವಿಧಾನದ ಕಲಂ 371(ಜೆ) ಮೀಸಲಾತಿ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ತಂದಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಇದೀಗ ಸಿಇಟಿ ಸೀಟು ಹಂಚಿಕೆಯಲ್ಲಿಯೂ ಮೀಸಲಾತಿ ಅನ್ವಯಿಸಲಾಗುತ್ತದೆ ಎಂದು ಘೋಷಿಸಿದ್ದಾರೆ.
ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಈಗಾಗಲೇ ಕೊಪ್ಪಳ ಹಾಗೂ ರಾಯಚೂರಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಶುರುವಾಗಿವೆ. ಇದಲ್ಲದೆ ರಾಜ್ಯದಲ್ಲಿರುವ ಎಲ್ಲ ಖಾಸಗಿ, ಡೀಮ್ಡ್ ವಿವಿಗಳು ಹೊಂದಿರುವ ವೈದ್ಯಕೀಯ ಕಾಲೇಜುಗಳು ಹಾಗೂ ಕಾಮೆಡ್- ಕೆ ಅಡಿಯಲ್ಲಿ ಬರುವ ವೈದ್ಯಕೀಯ ಕಾಲೇಜುಗಳೂ ಕಲಂ 371 (ಜೆ) ಆಧಾರದಲ್ಲೇ ಹೈ-ಕ ವಿದ್ಯಾರ್ಥಿಗಳಿಗೆ ಸೀಟು ನೀಡಬೇಕು. ಈ ವಿಚಾರವಾಗಿ ಸರ್ಕಾರ ಸೂಕ್ತ ನಿರ್ದೇಶನ ಪತ್ರವನ್ನು ಈಗಾಗಲೇ ರವಾನಿಸಿದೆ ಎಂದು ಸಚಿವರು ಹೇಳಿದ್ದಾರೆ.
ಮೀಸಲಾತಿ ನಿಯಮ ಪಾಲಿಸದಿದ್ರೆ ಕ್ರಮ: ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದುಳಿದವರಿಗೆ ವೈದ್ಯಕೀಯ, ಎಂಜಿನಿಯರಿಂಗ್ ಪ್ರವೇಶದಲ್ಲಿಯೂ ಮೀಸಲಾತಿ ಇರಲೇಬೇಕೆಂಬ ಉದ್ದೇಶದಿಂದಲೇ ಕಲಂ 371(ಜೆ) ಅಡಿಯಲ್ಲಿ ಮೀಸಲಾತಿ ನೀಡಲಾಗುತ್ತಿದೆ. ಹೀಗಾಗಿ ಯಾರೇ ಇರಲಿ ಈ ನಿಯಮವನ್ನು ಚಾಚೂ ತಪ್ಪದೇ ಪಾಲಿಸಬೇಕು. ಒಂದು ವೇಳೆ ಪಾಲಿಸದಿದ್ದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ಈಗಾಗಲೇ ರಾಜ್ಯದ 6 ಮೆಡಿಕಲ್ ಕಾಲೇಜುಗಳಲ್ಲಿರುವ 730 ಬೋಧಕ ಹುದ್ದೆಗಳ ನೇಮಕಾತಿಗೆ ಫೆ.24ರಿಂದ 3 ದಿನ ಸಂದರ್ಶನ ನಡೆಸಲಾಗಿತ್ತು. ಈ ನೇಮಕಾತಿಗಳಲ್ಲಿ ಕಲಂ 371(ಜೆ) ನಿಯಮಗಳನ್ನು ಕಟ್ಟುನಿಟ್ಟಾಗಿ, ಪಾರದರ್ಶಕವಾಗಿ ಪಾಲಿಸಲಾಗಿದೆ. ಹೈ-ಕ ಪ್ರತಿಭೆಗಳಿಗೆ ವೈದ್ಯಕೀಯ ಕಾಲೇಜುಗಳಲ್ಲಿ ಉದ್ಯೋಗ ದೊರಕುತ್ತದೆ. ಎಲ್ಲಿಯಾದರೂ ದೋಷಗಳು ಕಂಡಲ್ಲಿ, ಜನತೆ ಅದನ್ನು ಸರ್ಕಾರದ ಗಮನಕ್ಕೆ ತರಲಿ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಡಾ. ಪಾಟೀಲ್, ಇದೇ ಮೊದಲ ಬಾರಿಗೆ ಸಿಇಟಿ ಸೀಟು ಹಂಚಿಕೆಯಲ್ಲಿ ಕಲಂ 371(ಜೆ) ಜಾರಿ ಮಾಡಲಾಗುತ್ತಿದೆ. ಧನಾತ್ಮಕವಾಗಿ ಇಲಾಖೆ ಎಲ್ಲ ಹಂತದಲ್ಲಿ ಪಕ್ಕಾ ನಿಯಮ ಜಾರಿಗೆ ತಯಾರಿ ಮಾಡಿಕೊಳ್ಳುತ್ತಿದೆ. ಯಾವುದೇ ತೊಂದರೆಗಳು ಎದುರಾದಲ್ಲಿ ಮಕ್ಕಳ ಪಾಲಕರು ನೇರವಾಗಿ ಇಲಾಖೆಯ ಗಮನಕ್ಕೆ ತರಲಿ, ಸೂಕ್ತ ಪರಿಹಾರ ಹುಡುಕೋಣ ಎಂದರು.
ದಕ್ಕದ ಮೀಸಲಾತಿ: ಹೈ-ಕ ವ್ಯಾಪ್ತಿಯಲ್ಲಿ ಶೇ.75 ಹಾಗೂ ಹೈ-ಕ ಆರು ಜಿಲ್ಲೆ ಹೊರತುಪಡಿಸಿ ನಡೆಯುವ ಮೀಸಲಾತಿ, ವೃತ್ತಿ ಶಿಕ್ಷಣ ಪ್ರವೇಶ ಪ್ರಕ್ರಿಯೆಯಲ್ಲಿ ಶೇ.8ರಷ್ಟು ನೀಸಲಾತಿ ಹೈ- ಕ ಮಂದಿಗೆ ದೊರಕಬೇಕು. ಇದು ಕಲಂ 371 (ಜೆ) ಅಡಿಯಲ್ಲಿನ ನಿಯಮ. ಆದರೆ ಕೆಲವು ವೈದ್ಯಕೀಯ ಸಂಸ್ಥೆಗಳಲ್ಲಿನ ನೇಮಕಾತಿಯಲ್ಲಿ (ಹೈ-ಕ ಹೊರತು ಪಡಿಸಿ ಇರುವ ಸಂಸ್ಥೆಗಳು) ಈಗಾಗಲೇ ಕೆಲಸದಲ್ಲಿರುವ ಹೈ-ಕ ಮಂದಿಯ ತಲೆ ಎಣೆಕಿ ಮಾಡಲಾಗುತ್ತಿದೆ. ಈಗಾಗಲೇ ಹೈ-ಕ ಮಂದಿ ಇದ್ದಾರಲ್ಲ ಎಂದು ನ್ಯಾಯಸಮ್ಮತವಾಗಿ ದಕ್ಕಬೇಕಿರುವ ಶೇ.8ರಷ್ಟು ಮೀಸಲಾತಿ ದಕ್ಕದಂತಾಗಿದೆ ಎಂಬ ಸಂಗತಿ ಬಗ್ಗೆ ಸುದ್ದಿಗಾರರು ಸಚಿವರ ಗಮನ ಸೆಳೆದಾಗ, ಈ ವಿಚಾರವಾಗಿ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು.
ಎಲ್ಲ ಇಲಾಖೆಗಳಲ್ಲಿ ಮೀಸಲಾತಿ ನಿಯಮಗಳು ಜಾರಿಯಾಗಬೇಕೆಂದು ಡಿಪಿಎಆರ್ ಈಗಾಗಲೇ ಸೂಕ್ತ ಸೂಚನೆಗಳನ್ನು ರವಾನಿಸಿದೆ. ಆದಾಗ್ಯೂ ಕೆಲವು ಸಂಸ್ಥೆಗಳು, ಇಲಾಖೆಗಳಲ್ಲಿ ಈ ರೀತಿಯ ತೊಂದರೆಗಳು ಕಂಡಲ್ಲಿ ಅವುಗಳಿಗೆ ತಕ್ಷಣ ಪರಿಹಾರ ಹುಡುಕಲಾಗುತ್ತದೆ. ಯಾರೂ ಆತಂಕಕ್ಕೆ ಒಳಗಾಗಬಾರದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

