ಗುಲ್ಬರ್ಗಾ

ವರ್ಷದ ನಂತರ ಕೂಡಿ ಬಂತು ಪಪಂ ಅಧಿಕಾರಕ್ಕೆ ಮುಹೂರ್ತ

Published On :

ಯಾದಗಿರಿ: ರಾಜ್ಯದ ನಗರ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಮಾ.7ಕ್ಕೆ ಒಂದು ವರ್ಷ ಪೂರ್ಣವಾಗುತ್ತದೆ. ವರ್ಷ ಕಳೆದರೂ ಅಧಿಕಾರದಿಂದ ವಂಚಿತರಾದ ಶಹಾಪುರದ ಪುರಸಭೆ ಹಾಗೂ ಗುರುಮಠಕಲ್‌ನ ಪಟ್ಟಣ ಪಂಚಾಯತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮಾ. 12ರಂದು ಚುನಾವಣೆ ನಡೆಸಲು ಜಿಲ್ಲಾಡಳಿತ ಅದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಒಂದು ವರ್ಷದಿಂದ ಅಧಿಕಾರಕ್ಕೆ ಕಾದು ಕುಳಿತ ಸದಸ್ಯರಿಗೆ ಇಂದು ಅಧಿಕಾರ ಕೈಗೆಟುಕುವ ಅವಕಾಶ ದೊರೆಯಲಿದೆ.
  ಚುನಾವಣೆ ಮುಗಿದು ವರ್ಷ ಕಳೆದಿದೆ ಎಂಬುದನ್ನು ಬಿಟ್ಟರೆ ಆಯ್ಕೆಯಾದವರಿಗೆ ಮಾತ್ರ ಅಧಿಕಾರ ಗಗನಕುಸುಮದಂತಾಗಿತ್ತು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಮೀಸಲಾತಿಯಲ್ಲಿ ಅನುಸರಿಸಿದ ಪದ್ಧತಿ ಸರಿ ಇಲ್ಲ ಎಂದು ಕೆಲವು ಸದಸ್ಯರು ನ್ಯಾಯಾಲಯದ ಮೊರೆ ಹೋಗಿದ್ದು ಇದಕ್ಕೆ ಪ್ರಮುಖ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ತಡೆಯಾಜ್ಞೆ ನೀಡಲಾಗಿತ್ತು.
  ನ್ಯಾಯಲಯದಲ್ಲಿ ಈ ಪ್ರಕರಣ ಸುಮಾರು ಆರು ತಿಂಗಳ ಕಾಲ ನಡೆದು, ಕೊನೆಗೂ ಕಳೆದ ಫೆಬ್ರವರಿ ತಿಂಗಳಿನಲ್ಲಿ ಇದಕ್ಕೆ ಮುಕ್ತಿ ದೊರೆಯಿತು. ರಾಜ್ಯ  ಹೈಕೋರ್ಟ್ ಈ ಬಗ್ಗೆ  ನೀಡಿದ ಮಹತ್ವದ ತೀರ್ಪಿನ ನಂತರ
ಎಲ್ಲ ಗೊಂದಲಗಳಿಗೆ ತೆರೆ ಬಿದ್ದಿದೆ. ಇದೀಗ ಚುನಾವಣೆಗೆ ದಿನಾಂಕವನ್ನು ನಿಗದಿ ಪಡಿಸಿ, ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿ ಚುನಾವಣೆ ನಡೆಸಲು ಜಿಲ್ಲಾಡಳಿತಕ್ಕೆ ಅದೇಶ ರವಾನಿಸಿದೆ.
ಗೊಂದಲದಲ್ಲಿ ಸದಸ್ಯರು: ಸುಮಾರು ಒಂದು ವರ್ಷದಿಂದ ಅಧಿಕಾರವಿಲ್ಲದೆ,  ಜಾತಕಪಕ್ಷಿಯಂತೆ ಕಾದು ಕುಳಿತಿದ್ದ ಸದಸ್ಯರಿಗೆ ನ್ಯಾಯಾಲಯದ ಅದೇಶ ನೆಮ್ಮದಿ ನೀಡಿದೆ. ಚುನಾವಣೆಯ ದಿನಾಂಕವೂ ನಿಗದಿಯಾದದ್ದು ಇವರಿಗೆ ಸಮಾಧಾನವನ್ನು ತಂದಿತ್ತು. ಅದರೆ ಬುಧವಾರ ಕೇಂದ್ರ ಚುನಾವಣಾ ಆಯೋಗವು ಲೋಕಾಸಭೆ ಚುನಾವಣೆಗೆ ದಿನಾಂಕವನ್ನು ಪ್ರಕಟಿಸಿದೆ.  ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಗೆ  ನೀತಿ ಸಂಹಿತೆ ಅಡ್ಡಿಯಾಗಬಹುದಾದ ಭೀತಿ ಇವರನ್ನು ಕಾಡುತ್ತಿದೆ.
ಆಯ್ಕೆಯಾದರೂ ಉಪಯೋಗವಿಲ್ಲ: ಇದೀಗ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆದರೂ ಆಯ್ಕೆಯಾದವರಿಗೆ ಉಪಯೋಗ ಇಲ್ಲವಾಗಿದೆ. 16ನೇ ಲೋಕಸಭೆ ಚುನಾವಣೆಯ ನೀತಿ ಸಂಹಿತೆ, ಫಲಿತಾಂಶ ಘೋಷಣೆಯಾಗಿ ನೂತನ ಸರಕಾರ ಅಸ್ತಿತ್ವಕ್ಕೆ  ಬರುವವರೆಗೂ ಜಾರಿಯಲ್ಲಿರುತ್ತದೆ.  ಹಾಗಾಗಿ ಇದೀಗ ಇವರು ಆಯ್ಕೆಯಾದರೂ ಅಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿ ಇರಲಿದೆ.
  ಇದೀಗ ಜಾರಿಯಲ್ಲಿರುವ ನೀತಿ ಸಂಹಿತೆ ಚುನಾವಣೆ ಮುಗಿಯುವವರೆಗೆ ಇವರು ಕೇವಲ ಹೆಸರಿಗೆ ಮಾತ್ರ ಅಧ್ಯಕ್ಷರು ಎಂದಾಗಲಿದೆ. ಇವರು ಯಾವುದೇ ಸಭೆಗಳನ್ನು ಕರೆಯುವ ಹಾಗೇ ಇಲ್ಲ. ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚೆ ಕೂಡ ನಡೆಸುವ ಹಾಗಿಲ್ಲ. ಹಾಗಾಗಿ ಇವರ ಕೈಗೆ ಅಧಿಕಾರ ಸಿಕ್ಕರೂ ಆಡಳಿತ ಯಂತ್ರವನ್ನು ಕೈಗೆತ್ತಿಕೊಳ್ಳಲು ಇನ್ನೂ ಎರಡು ತಿಂಗಳವರೆಗೆ ಕಾಯಬೇಕಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.