ಸಿದ್ದು ಸರ್ಕಾರದ ವಿರುದ್ಧ ಐಎಲ್‌ಎ ವಾಗ್ದಾಳಿ
ಕ.ಪ್ರ. ವಾರ್ತೆ ಗುಲ್ಬರ್ಗ ಮಾ.6
ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ವಿ.ರಶ್ಮಿ ಅವರಿಗೆ ದೀರ್ಘ ರಜೆಯ ಮೇಲೆ ತೆರಳುವಂತೆ ಆದೇಶಿಸಿರುವ ಸರ್ಕಾರದ ನಿಲುವನ್ನು ಇಂಡಿಯನ್ ಲಾಯರ್ಸ್ ಅಸೋಸಿಯೇಷನ್(ಐಎಲ್‌ಎ) ಹೈ- ಕ ಘಟಕ ಬಲವಾಗಿ ಖಂಡಿಸಿದೆ.
ಪ್ರಾಮಾಣಿಕ ಅಧಿಕಾರಿಗಳ ವಿರುದ್ಧ ಸರ್ಕಾರ ತಾಳುವ ಇಂತಹ ನಿಲುವುಗಳಿಂದಾಗಿ ಸರ್ಕಾರದ ಮೇಲಿನ ಜನಸಾಮಾನ್ಯರ ವಿಶ್ವಾಸ ಉಳಿಯದು ಎಂದು ಸಂಘಟನೆಯ ಅಧ್ಯಕ್ಷ ಶಿವಕುಮಾರ ಮಾಲೀಪಾಟೀಲ್ ಹಾಗೂ ಪಿ.ವಿಲಾಸಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಇದೇ ಪ್ರಕರಣವನ್ನು ಮುಂದಿಟ್ಟುಕೊಂಡು ಹಾಗೂ ಭಾಷಾ ಅಲ್ಪಸಂಖ್ಯಾತರ ಕಾಲೇಜುಗಳಲ್ಲಿನ ಸೀಟು ಮಾರಾಟದ ಹಗರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸ್ಥಳೀಯ ಅಖಿಲ ಬಾರತೀಯ ವಿದ್ಯಾರ್ಥಿ ಪರಿಷತ್ತು ನಗರದಲ್ಲಿ ಪ್ರತಿಭಟನೆ ನಡೆಸಿ ಸಾರ್ಕರದ ಗಮನ ಸೆಳೆದಿದೆ.
ಪ್ರಾಮಾಣಿಕರೇ ಬೇಡವೇ?: ಪ್ರಾಮಾಣಿಕ ಅಧಿಕಾರಿಗಳ ವಿರುದ್ಧ ಸರ್ಕಾರವೇ ಖುದ್ದು ಈ ರೀತಿ ಸೇಡಿನ ಕ್ರಮಕ್ಕೆ, ವರ್ಗಾವಣೆಗೆ, ರಜೆ ಹೋಗುವಂತೆ ಮಾಡುವ ಸಂದರ್ಭ ಬಂದಿರುವುದನ್ನು ಕಂಡ ಅಚ್ಚರಿಯಾಗುತ್ತಿದೆ. ಖಾಸಗಿಯವರ ಲಾಬಿಗೆ ಮಣಿಯದೆ ಸರ್ಕಾರ ವೈದ್ಯಕೀಯ ಸೀಟುಗಳ ಹಂಚಿಕೆಯಲ್ಲಿ ಕಟ್ಟುನಿಟ್ಟಾಗಿ ಕೆಲಸ ಮಾಡಲಿದೆ ಎಂದು ಜನತೆ ನಿರೀಕ್ಷಿಸಿದ್ದರು. ಆದರೆ ಸಿದ್ದು ಸರ್ಕಾರದಲ್ಲಿ ಇಂತಹ ಬೆಳವಣಿಗೆಗಳು ನಡೆದದ್ದು ದುರಂತವಲ್ಲದೆ ಮತ್ತೇನು ಎಂದು ಪ್ರಶ್ನಿಸಿರುವ ಸಂಘದ ಅಧ್ಯಕ್ಷರು, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವವರಿಗೆ ಸರ್ಕಾರ ಬೆಂಬಲವಾಗಿ ನಿಲ್ಲಬೇಕೆಂಬುದು ಜನರ ಅಪೇಕ್ಷೆ. ಆದರೆ ತಮ್ಮ ಸರ್ಕಾರ ಜನಾಪೇಕ್ಷೆಯ ವಿರುದ್ಧವಾಗಿ ನಿಲುವು ತಳೆದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಖಾಸಗಿ ಆಡಳಿತ ಮಂಡಳಿಗಳವರು ತಮ್ಮ ಕೆಲಸಕ್ಕೆ ಅಡ್ಡಿ ಮಾಡುವ ಅಧಿಕಾರಿಯನ್ನೇ ಅಲ್ಲಿಂದ ಓಡಿಸುವ ಕೆಲಸಕ್ಕೆ ಮುಂದಾಗುತ್ತಾರೆ. ಅದಕ್ಕೆ ಸರ್ಕಾರವೂ ಬೆಂಬಲವಾಗಿ ನಿಲ್ಲುತ್ತದೆ ಎಂಬುದು ದುರಂತ. ತಕ್ಷಣ ರಶ್ಮಿ ಅವರ ರಜೆ ರದ್ದುಪಡಿಸಬೇಕು. ಅವರನ್ನು ಮರಳಿ ವೈದ್ಯಕೀಯ ಶಿಕ್ಷಣ ಇಲಾಖೆಗೇ ಕರೆತರಬೇಕು ಎಂದು ಒತ್ತಾಯಿಸಿರುವ ಪತ್ರವನ್ನು ಸಿಎಂ ಸಿದ್ದರಾಮಯ್ಯ ಅವರಿಗೂ ರವಾನಿಸಿದ್ದಾರೆ.
ಎಬಿವಿಪಿ ಖಂಡನೆ
ರಾಜ್ಯದ ಅನೇಕ ಧಾರ್ಮಿಕ ಅಲ್ಪಸಂಖ್ಯಾತ ಕಾಲೇಜಿನವರು ನಿಯಮಾನುಸಾರ ನೀಡಲಾಗಿದ್ದ ಸೀಟುಗಳನ್ನು ಮಾರಿಕೊಂಡಿದ್ದಾರೆ. ಇದು ತನಿಖೆಯಿಂದಲೂ ಬಯಲಾಗಿದೆ. ತಕ್ಷಣ ಇಂತಹ ಕಾಲೇಜುಗಳ ಆಡಳಿತ ಮಂಡಳಿಗಳ ವಿರುದ್ಧ ಅಗತ್ಯ ಕ್ರಮ ಜರುಗಿಸಬೇಕೆಂದು ಎಬಿವಿಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ಧರಣಿ ನಡೆಸಿದರು.
ಎಂಸಿಐ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಆಯೋಗ ಷರತ್ತುಗಳನ್ನು ವಿಧಿಸಿತ್ತು. ಷರತ್ತುಗಳ ಪ್ರಕಾರ ಸ್ಥಳೀಯವಾಗಿ ಭಾಷಾ ಅಲ್ಪಸಂಖ್ಯಾತ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ಜನಾಂಗದ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ನಿರ್ದಿಷ್ಟ ಸೀಟುಗಳನ್ನು ಮೀಸಲಿಡಲಾಗಿದೆ. ಇಂತಹ ಮೀಸಲು ಸೀಟುಗಳನ್ನು ಅನ್ಯರಿಗೆ ನೀಡಬಾರದು. ಇಂತಹ ಸಂಸ್ಥೆಗಳವರಿಗೆ ಶಿಕ್ಷೆ ಕೊಡಲೇಬೇಕು ಎಂದು ಎಬಿವಿಪಿ ಆಗ್ರಹಿಸಿತು.
ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ರಶ್ಮಿ ಅವರಿಗೆ ರಜೆಯ ಮೇಲೆ ಕಳುಹಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿ ನಡೆಸಿದ ಧರಣಿಯಲ್ಲಿ ಭಾಗಣ್ಣ, ಸುನೀಲ ಪ್ರಸಾದ, ಅರುಣ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

