ಗುಲ್ಬರ್ಗಾ

ಹಾರಕೂಡ ಚೆನ್ನಬಸವ ಶಿವಯೋಗಿ ಜಾತ್ರೆ

Published On :

ಚಿಂಚೋಳಿ: ಪಟ್ಟಣದ ಆರಾಧ್ಯದೈವ, ಭಕ್ತರ ಹೃದಯ ಮಂದಿರದಲ್ಲಿ ನಡೆದಾಡುವ ದೇವರೆಂದು ಖ್ಯಾತಿ ಪಡೆದ ಲಿಂ. ಸದ್ಗುರು ಹಾರಕೂಡ ಚೆನ್ನಬಸವ ಶಿವಯೋಗಿಗಳವರ 63ನೇ ಜಾತ್ರಾಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ರಥೋತ್ಸವ, ಸಡಗರ, ಸಂಭ್ರಮದಿಂದ ಭಕ್ತ ಜನ ಸಾಗರದ ನಡುವೆ ನಡೆಯಿತು. ವರ್ಣರಂಜಿತವಾಗಿ ಅಲಂಕರಿಸಿದ ರಥವನ್ನು ಸಾವಿರಾರು ಭಕ್ತರು 'ಹಾರಕೂಡ ಚೆನ್ನಬಸವೇಶ್ವರ ಮಹಾರಾಜ ಕೀ ಜೈ' ಎಂಬ ಜಯ ಘೋಷಣೆಯೊಂದಿಗೆ ಭಕ್ತಿಪೂರ್ವಕವಾಗಿ ಎಳೆದು ತಮ್ಮ ಹರಕೆಯನ್ನು ಅರ್ಪಿಸಿದರು. ಪಟ್ಟಣದ ಹೊರವಲಯದ ಮುಲ್ಲಾಮಾರಿ ನದಿಯ ದಂಡೆಯ ಪಂಚಲಿಂಗೇಶ್ವರ ತೇರು ಮೈದಾನದಲ್ಲಿ ಸೋಮವಾರ ಸಂಜೆ ರಂಗು ರಂಗಿನ ಹೂವುಗಳಿಂದ ಅಲಂಕರಿಸಿದ ರಥವನ್ನು ಗುಲ್ಬರ್ಗ, ಸೇಡಂ, ಬಸವಕಲ್ಯಾಣ, ಹುಮನಾಬಾದ್, ಜಹೀರಾಬಾದ್, ಹೈದ್ರಾಬಾದ್, ತಾಂಡೂರ, ಬೀದರ್, ಚಿಟಗುಪ್ಪ, ಸಂಗಾರೆಡ್ಡಿ, ಮೇದಕ್ ಮುಂತಾದ ನಗರ ಪ್ರದೇಶಗಳಿಂದ ಆಗಮಿಸಿದ ಭಕ್ತರು ಎಳೆದು ತಮ್ಮ ಆರಾಧ್ಯದೈವನಿಗೆ ಗೌರವ ಭಕ್ತಿಪೂರ್ವಕ ನಮನ ಸಲ್ಲಿಸಿದರು. ಉತ್ತುತ್ತಿ, ಬಾಳೆಹಣ್ಣು, ನಾಣ್ಯಗಳು, ಹೂವುಗಳನ್ನು ತೇರಿನ ಮೇಲೆ ಎಸೆದು ಗೌರವ, ಭಕ್ತಿ ಸಲ್ಲಿಸಿದರು. ಹಾರಕೂಡ ಚಿಂಚೋಳಿ ಪೀಠಾಧಿಪತಿ ಚೆನ್ನವೀರ ಶಿವಾಚಾರ್ಯರು ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಸುಭಾಶ ಸೀಳಿನ್, ಅಜೀತ ಪಾಟೀಲ್, ಗೌತಮ್ ಪಾಟೀಲ ಇತರರು ರಥೋತ್ಸವದ ನೇತೃತ್ವ ವಹಿಸಿದರು. ಚಿಂಚೋಳಿ ಚಂದಾಪೂರ ಅವಳಿ ನಗರದ ಸೇರಿದಂತೆ ಸುತ್ತಲಿನ ಗ್ರಾಮಗಳ ಅನೇಕ ಜನಸಾಗರ ಜಾತ್ರೆಗೆ ಹರಿದು ಬಂದಿತು.

ಭಕ್ತರ ಜಯಘೋಷದೊಂದಿಗೆ ಭೋಜಲಿಂಗೇಶ್ವರ ರಥೋತ್ಸವ
ನಾಲವಾರ(ಶಹಾಬಾದ್): ಸಮೀಪದ ಸೂಗೂರು(ಎನ್) ಗ್ರಾಮದ ಭೋಜಲಿಂಗೇಶ್ವರ ರಥೋತ್ಸವ ಸಾವಿರಾರು ಭಕ್ತರ ಜಯಘೋಷದೊಂದಿಗೆ ಅದ್ಧೂರಿಯಾಗಿ ನಡೆಯಿತು. ಪೀಠಾಧಿಪತಿ ಹಿರಗಪ್ಪ ತಾತ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಭಕ್ತರು ರಥಕ್ಕೆ ಉತ್ತತ್ತಿ, ಬಾಳೆ ಹಣ್ಣು ಎಸೆದು ಕೃತಾರ್ಥರಾದರು. ಬೆಳಗ್ಗೆ ಭೋಜಲಿಂಗೇಶ್ವರ ಕತೃಗದ್ದುಗೆಗೆ ಅಭಿಷೇಕ, ಪೂಜೆ ನೇರವೇರಿತು. ಗುಂಟೂರು, ವಡ್ನಳ್ಳಿ, ನಾಲವಾರದ ಡೊಳ್ಳು ಕುಣಿತ, ತಮಟೆ, ಲಾಲಾ ಸೇಠ ಚವ್ಹಾಣ ಅವರಿಂದ ಮದ್ದು ಸುಡುವ ಕಾರ್ಯಕ್ರಮ ನಡೆಯಿತು. ಗ್ರಾಮದ ಮುಖಂಡರಾದ ಸಿದ್ದರಾಮರೆಡ್ಡಿ ಕುರಾಳ, ಶರಣಗೌಡ ಬೆನಕನಳ್ಳಿ, ಸಂಗಾರೆಡ್ಡಿ ಮಾಲಿಪಾಟೀಲ್, ಭೀಮರೆಡ್ಡಿ ಕುರಾಳ, ಮಹೇಶಗೌಡ, ವಿಶ್ವನಾಥ ರೆಡ್ಡಿ, ವೀರಣ್ಣಗೌಡ, ಸೋಮಣ್ಣಗೌಡ, ಸಿದ್ದಲಿಂಗರೆಡ್ಡಿ ಬಾಸರೆಡ್ಡಿ, ಮಹಿಪಾಲರೆಡ್ಡಿ ಕರಣಗಿ, ರಾಮರೆಡ್ಡಿ ಕೊಳ್ಳಿ, ರಾಜೇಂದ್ರ ನಾಯ್ಕೊಡಿ, ಶಂಕರಣ್ಣ ವಳಮಡಗಿ ಇತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.