ಹೆಚ್ಚಿದ ಕಳ್ಳರ ಹಾವಳಿ; ಬೆಚ್ಚಿದ ಜನತೆ
ಕ.ಪ್ರ. ವಾರ್ತೆ ಗುಲ್ಬರ್ಗ ಮಾ.12
ಗುಲ್ಬರ್ಗ ನಗರದಲ್ಲಿ ಕಳ್ಳರ ಹಾವಳಿ ಶುರುವಾಗಿದೆ. ಅದರಲ್ಲೂ ಬೀಗ ಹಾಕಿರುವ ಮನೆಗಳಿಗೆ ಸಂಚು ಹಾಕಿ ಕನ್ನ ಹಾಕುತ್ತಿರುವ ಖದೀಮರು ಲಕ್ಷಾಂತರ ರುಪಾಯಿ ನಗನಾಣ್ಯ ಕದ್ದು ಪರಾರಿಯಾಗುತ್ತಿದ್ದಾರೆ. ನಗರದಲ್ಲಿನ ರಾತ್ರಿಗಸ್ತು ಅಷ್ಟಾಗಿ ಕಾಣಿಸುತ್ತಿಲ್ಲ. ಹೀಗಾಗಿ ಕಳ್ಳರಿಗೆ ಬೀಗದ ಮನೆಗಳು ಆಹಾರವಾಗುತ್ತಿವೆ. ಅಷ್ಟೇ ಯಾಕೆ, ಹಗಲು ಹೊತ್ತಲ್ಲೂ ಬೀಗ ಹಾಕಿದ ಮನೆಗಳಿಗೆ ಕಳ್ಳರು ನುಗ್ಗಿ ದಾಂಧಲೆ ಮಾಡುತ್ತಿರುವ ಪ್ರಕರಣಗಳು ನಗರದಲ್ಲಿ ಕಾಣಿಸಿಕೊಳ್ಳುತ್ತಿವೆ.
ಗುಲ್ಬರ್ಗ ನಗರದಲ್ಲಿ ಅಶೋಕ ನಗರ ಹಾಗೂ ವಿಶ್ವವಿದ್ಯಾಲಯ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿರುವ 2 ಕಳವಿನ ಪ್ರಕರಣಗಳಲ್ಲಿ ಹಾಡುಹಗಲೇ ಒಂದು ಮನೆಗೆ ಕನ್ನ ಹಾಕಿರುವ ಕಳ್ಳರು ರು. 1.82 ಲಕ್ಷ ದೋಚಿದ್ದರೆ, ಇನ್ನೊಂದರಲ್ಲಿ ರಾತ್ರಿ ಕನ್ನ ಹಾಕಿ 1.75 ಲಕ್ಷ ರುಪಾಯಿ ಕದ್ದಿದ್ದಾರೆ.
ಹಾಡುಹಗಲೇ ಬೀಗ ಮುರಿದು ಕಳವು: ಇಲ್ಲಿನ ಅಹ್ಮದ್ ರಜಾ ಕಾಲೋನಿ ಮಜ್ಜೀದ್ ಎದುರು ಇರುವ ಮಜರ್ ಅಹ್ಮದ್ ಸುಂಡಕೆ ಇವರ ಮನೆ ಹಾಡುಹಗಲೇ ಕಳವಾಗಿದೆ. ಇವರ ಮನೆಯ ಬೀಗ ಮುರಿದು ಕಳ್ಳರು 1.82 ಲಕ್ಷ ರು. ಮೌಲ್ಯದ ಚಿನ್ನಾಭರಣ ಅಪಹರಿಸಿ ಪರಾರಿಯಾಗಿದ್ದಾರೆ. ಮನೆಗೆ ಬೀಗ ಹಾಕಿ, ಕಾಲೇಜಿಗೆ, ಸಂಬಂಧಿಗಳ ಮನೆಗೆ ಹೋಗಿದ್ದೇ ಮುಳುವಾಗಿದೆ. ಅಲ್ಪ ಅವಧಿಯಲ್ಲೇ ಕಳ್ಳರು ತಮ್ಮ ಕೈಚಳಕ ಪ್ರದರ್ಶಿಸಿದ್ದಾರೆ.
ಮಜರ್ ಅಹ್ಮದ್ ಕಾಲೇಜಿಗೆ, ಅವರ ಪತ್ನಿ ಸಂಬಂಧಿಕರ ಮನೆಗೆ ಹೋಗಿದ್ದ ಅಲ್ಪ ಅವಧಿಯಲ್ಲೇ ಈ ಕಳವಿನ ಘಟನೆ ನಡೆದಿದೆ. ಪತಿ- ಪತ್ನಿ ಇಬ್ಬರೂ, ಮನೆಗೆ ಮರಳಿದಾಗ ಕೀಲಿ ಮುರಿದದ್ದು ಕಂಡು ಬಂತು. ಬಂಗಾರದ ಆಭರಣ, ಮೌಲ್ಯದ ವಸ್ತುಗಳು ಸೇರಿದಂತೆ 1.82 ಲಕ್ಷ ರು ಮೌಲ್ಯದ ಕಳ್ಳತನವಾಗಿದೆ ಎಂದು ಮಜರ್ ಅಹ್ಮದ್ ದೂರು ಸಲ್ಲಿಸಿದ್ದಾರೆ. ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಂತಾ ಕಾಲೋನಿಯಲ್ಲಿ ಬೀಗ ಮುರಿದು ಕಳವು: ಅಶೋಕ ನಗರ ಠಾಣೆ ವ್ಯಾಪ್ತಿಯಲ್ಲಿರುವ ಕಾಂತಾ ಕಾಲೋನಿಯ ಪ್ರದೀಪ ತಂದೆ ಬಂಡೆಪ್ಪ ನಿಂಬೂರಕರ್ ಮನೆಯಲ್ಲಿ ಕಳುವಾಗಿದೆ. ಇವರು ಹಾರಕೂಡ ಜಾತ್ರೆ ನಿಮಿತ್ತ ಊರಿಗೆ ಹೋಗಿದ್ದರು. ಮಾ. 1ರಿಂದಲೇ ಊರಲಿಲ್ಲರಿಲ್ಲ. ಮನೆಗೆ ಬೀಗ ಹಾಕಿ ಹೋಗಲಾಗಿತ್ತು. ಮಾ. 12ಕ್ಕೆ ಮರಳಿ ಬಂದಾಗ ಬೀಗ ಮುರಿದು ಕಳವು ಮಾಡಿರುವುದು ಗಮನಕ್ಕೆ ಬಂದಿದೆ ಎಂದು ಪ್ರದೀಪ ಅಶೋಕ ನಗರ ಠಾಣೆಗೆ ನೀಡಿರುವ ದೂರಿನಲ್ಲಿ ಹೇಳಿದ್ದಾರೆ. ಹಾರಕೂಡ ಗ್ರಾಮದಿಂದ ಗುಲ್ಬರ್ಗಕ್ಕೆ ಬಂದು, ನನ್ನ ಮನೆಯಲ್ಲಿ ಬಂದು ನೋಡಿದಾಗ, ಮನೆಯ ಬಾಗಿಲಿನ ಕೊಂಡಿ ಮುರಿದಿದ್ದು, ಒಳಗೆ ಎರಡು ಅಲಮಾರುಗಳು ತೆರೆದಿದ್ದು, ಅಲಮಾರದಲ್ಲಿ ಎಲ್ಲ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಲಮಾರದಲ್ಲಿ ಇಟ್ಟಿದ್ದ 1.75 ಲಕ್ಷ ರುಪಾಯಿ ಮೌಲ್ಯದ ಬಂಗಾರ, ಬೆಳ್ಳಿಯ ಆಭರಣಗಳನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ ಎಂದು ಪ್ರದೀಪ ದೂರಿನಲ್ಲಿ ಹೇಳಿದ್ದಾರೆ.
ಶ್ವಾನದಳದಿಂದ ತಪಾಸಣೆ: ಇವೆರಡೂ ಕಳವಿನ ಪ್ರಕರಣಗಳಲ್ಲಿ ನಗರ ಪೊಲೀಸರು ಶ್ವಾನದಳದಿಂದ ತಪಾಸಣೆ ಮಾಡಿದ್ದಾರೆ. ಬೆರಳಚ್ಚು ತಜ್ಞರಿಂದಲೂ ಪರಿಶೀಲನೆ ನಡೆಸಲಾಗಿದೆ. ಖದೀಮರ ಸುಳಿವು ದೊರಕಿಲ್ಲ. ನಗರದಲ್ಲಿ ರಾತ್ರಿ ಹಾಗೂ ಹಗಲು ಗಸ್ತು ಇನ್ನೂ ಚುರುಕಾಗಬೇಕು ಎಂಬುದಕ್ಕೆ ಈಚೆಗೆ ಹೆಚ್ಚುತ್ತಿರುವ ಇಂತಹ ಕಳವಿನ ಪ್ರಕರಣಗಳೇ ಸಾಕ್ಷಿಯಾಗಿವೆ. ನಗರದಲ್ಲಿ ಗಸ್ತು ವಾಹನಗಳ ಸೌಕರ್ಯವಿದ್ದರೂ, ಅವುಗಳು ಬಡಾವಣೆಗಳಲ್ಲಿ ಸುತ್ತುವುದಕ್ಕಿಂತ ಹೆಚ್ಚಾಗಿ ರಸ್ತೆಗಳ ಅಕ್ಕಪಕ್ಕವೇ ಠಳಾಯಿಸುವುದರಿಂದ ಬಡಾವಣೆಗಳಲ್ಲಿ, ಅದರಲ್ಲೂ ಬೀಗ ಹಾಕಲ್ಪಟ್ಟಿರುವಂತಹ ಮನೆಗಳಲ್ಲಿ ಕಳ್ಳರು ತಮ್ಮ ಕೈಚಳಕ ಪ್ರದರ್ಶನ ಮುಂದುವರಿಸಿದ್ದಾರೆ.
ಇನ್ನಾದರೂ ನಗರ ಪೊಲೀಸರು ತಮ್ಮ ಹಗಲು- ರಾತ್ರಿ ಗಸ್ತು ಚುರುಕು ಮಾಡುವರೆ ಗಸ್ತು ವಾಹನಗಳನ್ನು ಬಡಾವಣೆಗಳಿಗೂ ಸುತ್ತಾಡಲು ನಿರ್ದೇಶನ ನೀಡಲಾಗುವುದೇ. ಈ ಮೂಲಕವಾದರೂ ನಗರದಲ್ಲಿ ಕಳ್ಳತನಗಳಿಗೆ ಪೂರ್ಣವಿರಾಮ ಬೀಳುವುದೇ ಎಂಬುದೇ ಜನತೆಯ ಪ್ರಶ್ನೆ.
ಕೊಲೆ ಪ್ರಕರಣ: ಹೊಲದ ವಿಚಾರದಲ್ಲಿ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಸೇಡಂ ತಾಲೂಕಿನ ಮುದೋಳದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಹಣಮಂತ ಎಂಬುವವರು ಕೊಲೆಯಾಗಿದ್ದಾರೆ. ವೆಂಕಟಪ್ಪ ಎಂಬಾತ ಇವರಿಗೆ ಕಾಲಿನಿಂದ ನಾಜೂಕಾದ ಜಾಗದಲ್ಲಿ ಹೊಡೆತ ನೀಡಿದ್ದರಿಂದ ಸ್ಥಳದಲ್ಲೇ ಹಣಮಂತ ಸಾವನ್ನಪ್ಪಿದ್ದಾರೆ ಎಂದು ಅವರ ಪತ್ನಿ ಲಕ್ಷ್ಮೀ ದೂರಿನಲ್ಲಿ ಹೇಳಿದ್ದಾರೆ. ಹೊಲ ಕಡತಿ ಹಾಕುವ ವಿಚಾರದಲ್ಲಿ ಇವರ ನಡುವೆ ಜಗಳ ಉಂಟಾಗಿತ್ತು ಎಂದು ಹೇಳಲಾಗಿದೆ. ಮುಧೋಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೀಮೆಎಣ್ಣೆ ಆಸೆ ತೋರಿಸಿ ಅತ್ಯಾಚಾರಕ್ಕೆ ಯತ್ನ: ಸೀಮೆಎಣ್ಣೆ ಕೊಡುವುದಾಗಿ ಆಸೆ ತೋರಿಸಿ, ಅತ್ಯಾಚಾರ ಮಾಡಲು ಯತ್ನಿಸಿರುವ ಪ್ರಕರಣ ಆಳಂದ ತಾಲೂಕಿನ ನಿಂಬರ್ಗಾ ಠಾಣೆ ವ್ಯಾಪ್ತಿಯ ಮಾಡಿಯಾಳದಲ್ಲಿ ಮಾ. 11ರಂದು ಸಂಭವಿಸಿದೆ. ಈ ಗ್ರಾಮದ 42 ವರ್ಷದ ಮಹಿಳೆಗೆ ಅದೇ ಗ್ರಾಮದ ಹಣಮಂತ ಪುರಲೆ ಎಂಬುವವರು ಸೀಮೆಎಣ್ಣೆ ಕೊಡುವ ಆಮೀಷ ತೋರಿಸಿ, ತನ್ನ ಸಂಗಡ ಸಹಕರಿಸುವಂತೆ ಆಗ್ರಹಿಸಿದ್ದಾರೆ. ಇದಕ್ಕೆ ಸುತರಾಂ ಒಪ್ಪದ ಮಹಿರೆ ಕೂಗಾಡಿದ್ದಾರೆ. ಸದ್ದು ಕೇಳಿ ನೆರೆಹೊರೆಯವರು ತಕ್ಷಣ ನೆರವಿಗೆ ಧಾವಿಸಿದ್ದಾರೆ. ಈ ಹಂತದಲ್ಲಿ ಹಣಮಂತ ಓಡಿ ಹೋಗಿದ್ದಾನೆ. ಶಶಿಕಲಾ ಕಲ್ಯಾಣ ಕೋಗನೂರ್ ಎನ್ನುವವರು ಸಲ್ಲಿಸಿರುವ ದೂರಿನ ಮೇರೆಗೆ ನಿಂಬರ್ಗಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದ್ವಿಚಕ್ರ ವಾಹನ ಕಳವು: ಸೈಯದ್ ಮುಜಿಬ್ ಉಲ್ಲಾ ಖಾದರಿ ತಂದೆ ಸೈಯದ್ ಅಮೀದ್ ಉಲ್ಲಾ ಖಾದರಿ ಇವರಿಗೆ ಸೇರಿರುವ ಬೈಕ್ ಕಳವಾಗಿದೆ. ಅತ್ತರ ಕಾಂಪೌಂಡ್ ಗಾಜಿಪುರದ ನಿವಾಸಿಗಳಾದ ಇವರು ತಮ್ಮ ಬೈಕನ್ನು ಕೇಂದ್ರ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದರು. ಆಟೋಸ್ಟ್ಯಾಂಡ್ನ ಫುಟ್ಪಾತ್ನಲ್ಲಿ ಬೈಕ್ ನಿಲ್ಲಿಸಲಾಗಿತ್ತು. ಕಳ್ಳರು ಅಲ್ಲಿಂದಲೇ ಬೈಕ್ ಕಳವು ಮಾಡಿದ್ದಾರೆ ಎಂದು ಅವರು ದೂರು ಸಲ್ಲಿಸಿದ್ದು, ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮ ಮರಳು ಸಾಗಾಣಿಕೆ: ಫರತಾಬಾದ್ ಠಾಣೆ ವ್ಯಾಪ್ತಿಯಲ್ಲಿ ಬರುವ ಹಸನಾಪುರ ಭೀಮಾ ತೀರದಲ್ಲಿ ಸಾಗಿದ್ದ ಅಕ್ರಮ ಮರಳುಗಾರಿಕೆಯ ಸ್ಥಳದ ಮೇಲೆ ಪೊಲೀಸರು ದಾಳಿ ಮಾಡಿ ಅಲ್ಲಿ ಬಳಸಲಾಗಿದ್ದ ಯಂತ್ರೋಪಕರಣಗಳನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಚಲ್ಲಯ್ಯ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆತ ರಾತ್ರಿ ಇಡೀ 60 ಸಾವಿರ ರುಪಾಯಿ ಮೌಲ್ಯದ ಮರಳನ್ನು ಅಕ್ರಮವಾಗಿ ಸಾಗಿಸಿದ್ದನ್ನು ಒಪ್ಪಿಕೊಂಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

