ಇಂದು ಪುಸ್ತಕ- ಸ್ಟೇಷನರಿ ಮಳಿಗೆ ಅರ್ಧದಿನ ಬಂದ್
ಗುಲ್ಬರ್ಗ: ವ್ಯಾಟ್ ಹಾಗೂ ವಾಣಿಜ್ಯ ತೆರಿಗೆ ಇಲ್ಲದೆ ಖಾಸಗಿ ಶಿಕ್ಷಣ ಸಂಸ್ಥೆಗಳ ಅಂಗಳದಲ್ಲಿ ಪುಸ್ತಕ ಮಳಿಗೆಗಳು ಹಾಗೂ ಸ್ಟೇಷನರಿ ವಸ್ತುಗಳ ಮಾರಾಟ ಎಗ್ಗಿಲ್ಲದೆ ಸಾಗಿದೆ ಎಂದು ಆರೋಪಿಸಿರುವ ಜಿಲ್ಲಾ ಸ್ಟೇಷನರಿ ಹಾಗೂ ಪುಸ್ತಕ ಮಳಿಗೆಗಳ ಸಂಘದವರು ಸರ್ಕಾರಕ್ಕೆ ಇದರಿಂದ ಲಕ್ಷಾಂತರ ರುಪಾಯಿ ತೆರಿಗೆ ನಷ್ಟವಾಗುತ್ತಿದೆ ಎಂದು ದೂರಿದ್ದಾರೆ. ಈ ರೀತಿ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ವಂಚನೆ ಮಾಡಿದ್ದಲ್ಲದೆ ಹೊರಗಡೆಯ ಪುಸ್ತಕ, ಸ್ಟೇಷನರಿ ವರ್ತಕರ ವಹಿವಾಟಿಗೆ ಪೆಟ್ಟು ನೀಡಿರುವ ಇಂತಹ ಖಾಸಗಿ ಶಿಕ್ಷಣ ಸಂಸ್ಥೆಗಳ ಮಳಿಗೆಗಳ ವಿರುದ್ಧ ತೆರಿಗೆ ವಂಚನೆಯ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬೇಕು, ಬಿಂದಾಸಾಗಿ ವ್ಯವಹಾರ ಮಾಡುತ್ತಿರುವ ಖಾಸಗಿ ಪುಸ್ತಕ ಮಳಿಗೆಗಳು ತಮ್ಮ ಸಂಸ್ಥೆ ಲೇಬಲ್ಗಳನ್ನು ಮುದ್ರಿಸಿ ವಿದ್ಯಾರ್ಥಿಗಳಿಗೆ ಬಹಿರಂಗವಾಗಿಯೇ ಪುಸ್ತಕಗಳನ್ನು, ಇತರೆ ಸ್ಟೇಷನರಿಗಳನ್ನೆಲ್ಲ ಮಾರುತ್ತಿವೆ. ಇದು ಖಂಡನೀಯ ಎಂದು ಸಂಘದ ಅಧ್ಯಕ್ಷ ಎಸ್.ಎ. ಪಾಟೀಲ್ ಹಾಗೂ ಇತರೆ ಪಾದಾಧಿಕಾರಿಗಳು ದೂರಿದ್ದಾರೆ.
ಮಳಿಗೆಗಳು ಸುಂಕ ಭರಿಸಿ: ಖಾಸಗಿ ಶಿಕ್ಷಣ ಸಂಸ್ಥೆಗಳ ಅಂಗಳದಲ್ಲಿ ಈ ರೀತಿ ಮಾರಾಟ ಸಾಗಿರುವುದರಿಂದ ಸರ್ಕಾರಕ್ಕೆ ಬಹು ದೊಡ್ಡ ನಷ್ಟವಾಗುತ್ತಿದೆ. ಖಾಸಗಿ ಪುಸ್ತಕ ಮಳಿಗೆಗಳು ಸುಂಕ ಭರಿಸಬೇಕು. ಭರಿಸದೆ ಹೋದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯವರು ಇಂತಹ ಪ್ರಕರಣಗಳ ವಿರುದ್ಧ ಕ್ರಮಕ್ಕೆ ಮುಂದಾಗಬೇಕೆಂದು ಜಿಲ್ಲಾ ಸ್ಟೇಷನರಿ ಪುಸ್ತಕ ವ್ಯಾಪಾರಿಗಳು ಮಾ.13ರ ಗುರುವಾರ ಮಧ್ಯಾಹ್ನ 12.30 ರವರೆಗೆ ಅಂಗಡಿಗಳನ್ನು ಮುಚ್ಚಿ ಸೂಪರ್ ಮಾರ್ಕೆಟ್ನಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿ ತಮ್ಮ ಗೋಳನ್ನು ಜಿಲ್ಲಾಡಳಿತದ ಗಮನಕ್ಕೆ ತರಲು ಮುಂದಾಗಿದ್ದಾರೆ. ಕಳೆದ 20 ವರ್ಷಗಳಿಂದ ವ್ಯವಹಾರ ಮಾಡುತ್ತಾ ಬಂದಿದ್ದೇವೆ. ಎಂದಿಗೂ ತೆರಿಗೆ ವಂಚಿಸಿಲ್ಲ, ನಮಗೂ ವ್ಯಾಪಾರದಲ್ಲಿ ಲಕ್ಷಾಂತರ ರು ನಷ್ಟವಾಗುತ್ತದೆ. ಆದರೂ ನಾವು ವ್ಯಾಟ್ ಮತ್ತು ವಾಣಿಜ್ಯ ತೆರಿಗೆ ಭರಿಸುತ್ತಾ ಬಂದಿದ್ದೇವೆ. ಸರ್ಕಾರದಿಂದ ಬಂದಂತಹ ಪುಸ್ತಕಗಳನ್ನು ಬಿಟ್ಟು ನೋಟ್ಬುಕ್ ಹಾಗೂ ಸ್ಟೇಷನರಿ ವಸ್ತುಗಳ ಮೇಲೆ ಸುಂಕ ಭರಿಸಬೇಕೆಂದು ಅಧ್ಯಕ್ಷ ಎನ್.ಎ. ಪಾಟೀಲ್ ಹೇಳಿದರು. ಕಾರ್ಯದರ್ಶಿ ಬಾಲಕೃಷ್ಣ ಪವಾರ, ಖಜಾಂಚಿ ಪ್ರಕಾಶ ದಾದಾಪುರ, ರೇವಣಸಿದ್ದಪ್ಪ, ಬಾಲಕೃಷ್ಣ ಪವಾರ್ ಉಪಸ್ಥಿತರಿದ್ದರು.
ಬಿಎಸ್ಪಿ ಕಚೇರಿ ಉದ್ಘಾಟನೆ
ಗುಲ್ಬರ್ಗ: ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾದೇವ ಧನ್ನಿ ಅವರು ಪಕ್ಷದ ಜಿಲ್ಲಾ ನೂತನ ಕಚೇರಿಯನ್ನು ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಹಣಮಂತ ಬೋಧನಕರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶಿವಲಿಂಗಪ್ಪ ಕಿನ್ನೂರ, ಖುರ್ಷಿದ್ ಹುಸೇನ್, ಕೆ.ಬಿ ವಾಸು ಉಪಸ್ಥಿತರಿದ್ದರು. ಜಿಲ್ಲಾ ಸಂಯೋಜಕ ಅಂಬಾರಾಯ್ ಎಸ್.ಬೆಳಮಗಿ, ಉಪಾಧ್ಯಕ್ಷ ಮತಿನ ಪಟೇಲ, ಹುಚ್ಚಪ್ಪ ವಠಾರ, ಖಜಾಂಚಿ ಬಸಪ್ಪ ಕಾಳೂರೆ, ಮಹಾದೇವಿ ಭೀಮಪುರೆ ಸೇರಿದಂತೆ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಇಂದು ಕಾಂಗ್ರೆಸ್ ಪೂರ್ವಭಾವಿ ಸಭೆ
ಅಫಜಲ್ಪುರ: ಲೋಕಸಭಾ ಚುನಾವಣೆಯ ನಿಮಿತ್ತ ಪಟ್ಟಣದ ಅಂಬೂರೆ ಕಲ್ಯಾಣ ಮಂಟಪದಲ್ಲಿ ಮಾ.13 ರಂದು ಕಾರ್ಯಕರ್ತರ ಪೂರ್ವಭಾವಿ ಸಭೆ ನಡೆಸಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ರೇವೂರ ತಿಳಿಸಿದರು. ಸಭೆಯಲ್ಲಿ ಶಾಸಕ ಮಾಲಿಕಯ್ಯ ಗುತ್ತೇದಾರ ಹಾಗೂ ಜಿಲ್ಲಾ ಕಾಂಗ್ರೆಸ್ ಮುಖಂಡರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದ್ದಾರೆ.
ಪದಾಧಿಕಾರಿಗಳ ಆಯ್ಕೆ
ಚಿತ್ತಾಪುರ: ತಾಲೂಕಿನ ಡೋಣ್ಣೂರ ಗ್ರಾಮದ ನೀರು ಬಳಕೆದಾರರ ಸಹಕಾರ ಸಂಘದ ಚುನಾವಣೆಯಲ್ಲಿ ಪದಾಧಿಕಾರಿಗಳ ಅಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿ ಸುರೇಶ ವರ್ಮಾ ತಿಳಿಸಿದ್ದಾರೆ. ಅಧ್ಯಕ್ಷರಾಗಿ ಸಿದ್ದಲಿಂಗಪ್ಪ ಅಣ್ಣಾರಾವ ಹಾವಪನೂರ, ಉಪಾಧ್ಯಕ್ಷರಾಗಿ ಸಂಗಣ್ಣ ನಾಗೇಂದ್ರಪ್ಪ ದೊಡ್ಮನಿ, ನಿರ್ದೇಶಕರಾಗಿ ಶಾಮರಾವ ಕುಂಬಾರ, ಚನ್ನಪ್ಪ ಹದನೂರ, ಬಸವರಾಜ ಭಂಕಲಗಿ, ಸಂಗಯ್ಯ ಚೆಂಗಟಾ, ಅಣ್ಣಿಪ್ಪ ಸಿರನೂರ, ನಬೀಸಾಬ ಕಾಳಗಿ, ಅಣ್ಣಿಮ್ಮ ಚನ್ನಬಸಪ್ಪ ಬಿರೇದಾರ, ಜಗದೇವಿ ನಾಗೇಂದ್ರಪ್ಪ ಅಯ್ಕೆಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

