ದಂಡೋತಿಯಲ್ಲೊಂದು ಕಾಂಗ್ರೆಸ್ ವರ್ಕಿಂಗ್ ಕಮಿಟಿ
ಚಿತ್ತಾಪುರ: ಕಾಂಗ್ರೆಸ್ ಪಕ್ಷದ ಪಾಲಿಗೆ ಸಿಡಬ್ಲ್ಯೂಸಿ ಇರೋದು ದೆಹಲಿಯಲ್ಲಿ. ಆದರೆ ಗುಲ್ಬರ್ಗ ಜಿಲ್ಲೆಯ ದಂಡೋತಿಯಲ್ಲಿಯೂ ಕಾಂಗ್ರೆಸ್ ಪಕ್ಷದ ಸಿಡಬ್ಲ್ಯೂಸಿ ಇದೆ ಎಂದರೆ ಅಚ್ಚರಿ ಪಡದಿರಿ. ಇಲ್ಲಿನ ಕಾರ್ಯಕರ್ತರು ಸೇರಿಕೊಂಡು ರಚಿಸಿಕೊಂಡಿರುವ ಸಮಿತಿ ಇದಾಗಿದೆ.
ಇತ್ತೀಚಿನ ರಾಜಕೀಯದಲ್ಲಿ ರಾಜಕೀಯ ಪಕ್ಷಗಳ ನಾಯಕರು ತಮ್ಮ ವೈಯಕ್ತಿಕ ಹಿತಾಸಕ್ತಿಗೆ ತೋರುವ ಕಾಳಜಿಯನ್ನು ತಮ್ಮ ಏಳಿಗೆಗೆ ಕಾರಣವಾದ ಪಕ್ಷಕ್ಕೆ ತೋರುವಲ್ಲಿ ಹಿಂದೇಟು ಹಾಕುವುದೇ ಹೆಚ್ಚು. ಕೆಲವರಂತೂ ತಮ್ಮ ವೈಯಕ್ತಿಕ ಬೆಳೆ ಬೇಯಿಸಿಕೊಳ್ಳಲು ನಾಯಕರ ಸುತ್ತ ಸುತ್ತಿ ಕೆಲಸ ಮಾಡಿಕೊಳ್ಳುವರೇ ವಿನಾ ತಮ್ಮಿಂದ ಪಕ್ಷಕ್ಕೆ, ಕಾರ್ಯಕರ್ತರಿಗೆ ಎಳ್ಳಷ್ಟು ಸಹಾಯಮಾಡುವ ಗೋಜಿಗೆ ಹೋಗುವುದಿಲ್ಲ. ಹೋದರೆ ಎಲ್ಲಿ ನನ್ನ ಪಾಲು ಹೋಗುವುದು ಎಂದು ಯೋಚಿಸುವ ನಾಯಕರು ಅನೇಕ ಪಕ್ಷಗಳಲ್ಲಿ ಇದ್ದಾರೆ.
ಮೆಚ್ಚುಗೆಗೆ ಪಾತ್ರ: ಪ್ರತಿಯೊಂದು ಪಕ್ಷಕ್ಕೂ ತನ್ನದೇ ಆದ ಹೈಕಮಾಂಡ್ ಇರುತ್ತದೆ. ಇದು ಒಂದು ರೀತಿಯಲ್ಲಿ ಪಕ್ಷವನ್ನು ಸಂಘಟಿಸುವ ಹೊಣೆಯು ಇದರ ಮೇಲಿರುತ್ತದೆ. ಆದರೆ ಚಿತ್ತಾಪುರ ತಾಲೂಕಿನ ಗ್ರಾಪಂ ಕೇಂದ್ರ ಸ್ಥಾನವಾದ ದಂಡೋತಿಯಲ್ಲಿ ಇವೆಲ್ಲದಕ್ಕೂ ಅಪವಾದ ಎನ್ನುವಂತೆ ಕಾಂಗ್ರೆಸ್ ಪಕ್ಷವು ತನ್ನದೇ ಅದ ಸಿಡಬ್ಲ್ಯೂಸಿಡಿ(ಕಾಂಗ್ರೆಸ್ ವಕಿಂಗ್ ಕಮಿಟಿ ದಂಡೋಡಿ) ಸಮಿತಿಯನ್ನು ರಚಿಸಿಕೊಂಡು ಕಳೆದ 20 ವರ್ಷಗಳಿಂದ ಇಲ್ಲಿ ಪಕ್ಷ ಸಂಘಟನೆ ಕಾರ್ಯ ಮಾಡಿ ಮೆಚ್ಚುಗೆ ಗಳಿಸಿದೆ.
ನಿರ್ಧಾರಕ್ಕೆ ಎಲ್ಲರೂ ಬದ್ಧ: ಈ ಸಮಿತಿಯಲ್ಲಿ ವಿವಿಧ ಸಮಾಜದ ಹಿರಿಯರಲ್ಲಿ 12 ಜನ ಸದಸ್ಯರನ್ನಾಗಿ ನೇಮಿಸಲಾಗಿದೆ. ಇಲ್ಲಿ ಗ್ರಾಪಂ ಚುನಾವಣೆ, ತಾಪಂ, ಜಿಪಂ, ವಿಧಾನಸಭೆ, ಲೋಕಸಭೆ ಹೀಗೆ ಯಾವುದೇ ಚುನಾವಣೆ ಬರಲಿ ಇಲ್ಲಿಯ ಸಿಡಬ್ಲೂಸಿಡಿಯಲ್ಲಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ. ಹೀಗಾಗಿ ಕಳೆದ 20 ವರ್ಷಗಳಲ್ಲಿ ಯಾವುದೇ ಚುನಾವಣೆಗಳು ಜರುಗಲಿ ಇಲ್ಲಿ ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಜಯ ಕಟ್ಟಿಟ್ಟ ಬುತ್ತಿಯಂತಾಗಿದೆ.
ಕುಂದು ಕೊರತೆ ಸಭೆ: ಇಲ್ಲಿ ಸಿಡಬ್ಲೂಸಿಡಿ ಚುನಾವಣೆಗೆ ಮಾತ್ರ ಸೀಮಿತವಾಗಿರುವುದಿಲ್ಲ. ಈ ಸಮಿತಿಯು ಪ್ರತಿ ತಿಂಗಳು ತಪ್ಪದೇ ಕುಂದು ಕೊರತೆ ಸಭೆ ನಡೆಸುತ್ತದೆ. ಈ ಸಭೆಗೆ ಎಲ್ಲಾ ಚುನಾಯಿತ ಸದಸ್ಯರು ಭಾಗವಹಿಸುವುದು ಕಡ್ಡಾಯ. ಅಲ್ಲಿ ಪಕ್ಷದ ಕಾರ್ಯಕರ್ತರ ಕುಂದು ಕೊರತೆಗಳ ಚುನಾಯಿತ ಸದಸ್ಯರ ಸಮಕ್ಷಮ ಚರ್ಚಿಸಿ ಅವುಗಳನ್ನು ಸ್ಥಳದಲ್ಲಿ ಪರಿಹರಿಸುವ ಕೆಲಸವನ್ನು ಈ ಸಮಿತಿ ಮಾಡುತ್ತಿರುವುದರಿಂದ ಜನ ಮೆಚ್ಚುಗೆಗೆ ಪಾತ್ರವಾಗಿದೆ.
ಹೇಳಿಕೆ: ಪಕ್ಷದ ಮುಖಂಡ ಇಸಾಕ್ ಸೇಠ ಸೌದಾಗರ್ ಹೇಳುವಂತೆ, ಶಾಸಕರು, ಸಚಿವರುಗಳನ್ನು ಭೇಟಿಯಾಗಲು ಸಾಮಾನ್ಯ ಜನರಿಗೆ ಕಷ್ಟ ಸಾಧ್ಯ. ಪಕ್ಷದ ಮುಖಂಡರೆನಿಸಿಕೊಂಡವರು ನಾಯಕರ ಓಲೈಕೆ ಹಾಗೂ ವೈಯಕ್ತಿಕ ಕೆಲಸಗಳಿಗಾಗಿ ಓಡಾಡುವಾಗ ಜನಸಾಮಾನ್ಯರ ಸಮಸ್ಯೆಗಳನ್ನು, ಕಷ್ಟಗಳನ್ನು ಕೇಳುವವರಾರು. ಇಂತಹ ಅನೇಕ ಘಟನೆಗಳನ್ನು ಕಣ್ಣಾರೆ ಕಂಡ ನಮ್ಮ ಗ್ರಾಮದವರು ನಮ್ಮ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳಬೇಕು ಎಂದು ನಿರ್ಧರಿಸಿ ನಮ್ಮಲ್ಲಿ ಸಿಡಬ್ಲೂಸಿಡಿ ಸಮಿತಿಯನ್ನು ರಚಿಸಿಕೊಂಡು ಸಮಸ್ಯೆಗೆ ಪರಿಹಾರಗಳು ಹಾಗೂ ಪಕ್ಷದ ಸಂಘಟನೆ ಎರಡರಲ್ಲೂ ಯಶಸ್ವಿಯಾಗಿದ್ದೇವೆ ಎಂದು ಹೇಳುತ್ತಾರೆ.
ಗ್ರಾಮದವರ ಹೇಳಿಕೆ ಪ್ರಕಾರ ಪಕ್ಷ ಮುಖ್ಯವಲ್ಲ ಗ್ರಾಮದ ಅಭಿವೃದ್ಧಿ ಮುಖ್ಯ. ನಮ್ಮಲಿ ಇರುವ ಸಿಡಬ್ಲೂಸಿಡಿ ಯಿಂದ ನಮ್ಮ ಗ್ರಾಮದ ಅನೇಕ ಸಮಸ್ಯೆಗಳಿಗೆ ಸ್ಥಳದಲ್ಲಿ ಪರಿಹಾರ ಸಿಕ್ಕಿದೆ. ಗ್ರಾಮ ಆಭಿವೃದ್ಧಿಯಾಗಿದೆ. ಇದು ಒಳ್ಳೆಯ ಪ್ರಯೋಗ ಎನ್ನುತ್ತಾರೆ. ಗ್ರಾಮಸ್ಥ ಶಾಂತಪ್ಪ ಚಿಮ್ಮನ್ ಗ್ರಾಮದಲ್ಲಿರುವ ಪಕ್ಷ ಸಂಘಟನೆ ಹಾಗೂ ಗ್ರಾಮ ಸುಧಾರಣೆ ಆಗುವ ಅನುಕೂಲಗಳನ್ನು ಪ್ರತಿ ಗ್ರಾಮದಲ್ಲಿ ಅಳವಡಿಸಿಕೊಂಡಲ್ಲಿ ರಾಜಕೀಯ ಪಕ್ಷದವರ ಸುಳ್ಳು ಭರವಸೆ ಏನೂ ನಡೆಯದಂತೆ ಆಗುತ್ತದೆ. ಅಲ್ಲದೆ ಗ್ರಾಮ ಅಭಿವೃದ್ಧಿ ಮಾಡಿಕೊಂಡಂತೆ ಆಗುವುದಲ್ಲವೇ?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

