ರೈತರಿಗೆ ರಾಜಶ್ರೀ ಸಿಮೆಂಟ್ ಕಂಪನಿ ವಂಚನೆ
ಕನ್ನಡಪ್ರಭ ವಾರ್ತೆ ಸೇಡಂ ಮಾ.19
ತಾಲೂಕಿನ ಮಳಖೇಡದ ಆದಿತ್ಯನಗರದಲ್ಲಿರುವ ಬಿರ್ಲಾ ಸಮೂಹದ ರಾಜಶ್ರೀ ಸಿಮೆಂಟ್ ಕಾರ್ಖಾನೆಯ ಆಡಳಿತ ಮಂಡಳಿಯು ಇಲ್ಲಿನ ರೈತರ ಜಮೀನುಗಳನ್ನು ಪಡೆದು ಸೂಕ್ತ ಬೆಲೆ ನೀಡದೆ ವಂಚಿಸಿದೆ ಎಂದು ಮಾಜಿ ಸಚಿವ ಎಸ್.ಕೆ. ಕಾಂತಾ ಆರೋಪಿಸಿದರು.
ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಕಂಪನಿ ಅಧಿಕಾರಿಗಳ ಹಾಗೂ ರೈತರ ನಡುವೆ ನಡೆದ ಸಭೆಯಲ್ಲಿ ಅವರು ಕಂಪನಿ ವಿರುದ್ಧ ಗುಡುಗಿದರು. ಕಂಪನಿ ಆಡಳಿತ ಮಂಡಳಿ ಕಾನೂನು ಉಲ್ಲಂಘಿಸುವುದಲ್ಲದೆ, ಮುಗ್ಧ ರೈತರನ್ನು ಮೋಸ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ತಾವು ಈ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು, ಮಾನ್ಯ ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರಿಗೆ ಅನ್ಯಾಯಕ್ಕೆ ಒಳಗಾದ ರೈತರಿಗೆ ಕಾನೂನು ರೀತ್ಯ ಸೂಕ್ತ ನ್ಯಾಯ ಒದಗಿಸಿ ಕ್ರಮ ಕೈಗೊಳ್ಳಬೇಕು ಎಂದರು.
ರೈತರಿಗೆ ಭದ್ರತೆ ಕಲ್ಪಿಸಬೇಕೆನ್ನುವ ನಿಟ್ಟಿನಲ್ಲಿ ಪತ್ರ ವ್ಯವಹಾರ ಮಾಡಿದಾಗ ಜಿಲ್ಲಾಧಿಕಾರಿಗಳಿಗೆ ಬಂದ ನಿರ್ದೇಶನದಂತೆ ರಾಜಶ್ರೀ ಕಂಪನಿಗೆ ಸ್ಪಷ್ಟೀಕರಣ ಕೇಳಿದ್ದು ಈವರೆಗೆ ಕಂಪನಿಯವರು ಉತ್ತರ ಕೊಡುವ ಸೌಜನ್ಯವನ್ನೂ ತೋರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾರತಮ್ಯ ನೀತಿ: ರೈತರ ಜಮೀನಿಗೆ ಸೂಕ್ತ ಬೆಲೆ ನೀಡದೆ 3.50 ಲಕ್ಷ ನೀಡಿ ಕೈತೊಳೆದುಕೊಂಡ ಕಂಪನಿಯು ಸರ್ಕಾರಿ ಜಮೀನುಗಳಿಗೆ ಮಾತ್ರ 8 ಲಕ್ಷ ನೀಡಿ ತಾರತಮ್ಯ ನೀತಿ ಅನುಸರಿಸಿದೆ. ಕಾರ್ಖಾನೆಗಳು ಸರ್ಕಾರಕ್ಕೆ ನೀಡಬೇಕಾದ ನೂರಾರು ಕೋಟಿ ನೀಡದೆ ಇತ್ತ ರೈತರ ಜೀವವನ್ನು ಹಿಂಡುತ್ತಿವೆ. ಕೂಡಲೇ ಇಂಥವರ ವಿರುದ್ಧ ಸರ್ಕಾರಿ ಅಧಿಕಾರಿಗಳು ದಿಟ್ಟತನದಿಂದ ವರ್ತಿಸಿ ಚಾಟಿ ಏಟು ನೀಡಬೇಕೆಂದು ಖಾರವಾಗಿ ನುಡಿದರು. ಅಲ್ಲದೆ, ರೈತರಿಗೆ ಸಹಕಾರಿಯಾಗಿ ನಿಲ್ಲಬೇಕೆಂದು ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ತಬ್ಬಿಬ್ಬಾದ ಕಂಪನಿ ಅಧಿಕಾರಿಗಳು ತಾವು ಯಾವುದೇ ಅನ್ಯಾಯ ಮಾಡಿಲ್ಲ. ಕಾನೂನಿನಡಿ ಕೆಲಸ ಮಾಡುತ್ತಿದ್ದೇವೆಂದು ಸಮಜಾಯಿಸಿ ನೀಡಿದರು.
ಧರಣಿ ಸತ್ಯಾಗ್ರಹ ಹಿಂದಕ್ಕೆ: ಸಹಾಯಕ ಆಯುಕ್ತ ಭೀಮಾಶಂಕರ ಮಾತನಾಡಿ, ಲೋಕಸಭಾ ಚುನಾವಣೆಯ ನಂತರ ದಾಖಲಾತಿಗಳನ್ನು ಪರಿಶೀಲಿಸಿ ರೈತರಿಗೆ ನ್ಯಾಯ ಒದಗಿಸುವುದಾಗಿ ರೈತರು, ಮುಖಂಡರಿಗೆ ಭರವಸೆ ನೀಡಿದರು. ಆಗ ರೈತರು ಧರಣಿ ಸತ್ಯಾಗ್ರಹವನ್ನು ಹಿಂಪಡೆದರು. ತಹಸೀಲ್ದಾರ್ ಪ್ರಕಾಶ ಕುದರಿ, ಪಿಎಸ್ಐ ಪರಶುರಾಮ ವನಂಜಕರ್ ಹಾಗೂ ಹಲವು ರೈತರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

