ಗುಲ್ಬರ್ಗ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ
ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಮಾ.19
ಆಳಂದ ತಾಲೂಕಿನ ಕೊಡ್ಲಹಂಹರ್ಗಾ ಮೂಲದ, ಪ್ರಗತಿಪರ ರೈತ ಕುಟುಂಬದ ಅರುಣಕುಮಾರ್ ಪಾಟೀಲ್ ಹೋರಾಟಗಾರರಾಗಿ ಗುಲ್ಬರ್ಗ ಜಿಲ್ಲೆ, ನಗರದಲ್ಲಿ ಜನಜನಿತ ಹೆಸರು. ಕರ್ನಾಟಕ ರಕ್ಷಣಾ ವೇದಿಕೆಯೊಂದಿಗೆ 1990ರ ದಶಕದಲ್ಲೇ ತಮ್ಮ ಹೋರಾಟಗಳಿಗೆ ಮುನ್ನುಡಿ ಬರೆದ ಅರುಣ, ಅಂದಿನಿಂದ ಇಂದು ಖರ್ಗೆ ಸಮ್ಮುಖದಲ್ಲಿ ಕಾಂಗ್ರೆಸ್ ಕೈ ಹಿಡಿಯುವವರೆಗೂ ಮಾಡಿದ ಹೋರಾಟಗಳಿಗೆ ಲೆಕ್ಕವಿಲ್ಲ.
ಕರವೇನಿಂದ ಹೊರಬಂದು ಜೈಕರ್ನಾಟಕ ರಕ್ಷಣಾ ವೇದಿಕೆ ಸ್ಥಾಪಿಸಿದ ಅರುಣ ನಂತರ ರಾಜಕೀಯದತ್ತ ವಾಲಿದರಲ್ಲದೆ ಮಾಜಿ ಸಿಎಂ ಕುಮಾರಸ್ವಾಮಿ ಸೆಳೆತದಿಂದ ಜೆಡಿಎಸ್ ಸೇರಿದರು. ಅಲ್ಲಿಂದ ಬಿಜೆಪಿಯತ್ತ ವಾಲಿದ್ದರು. ಸಂಘಟನೆ, ಪಕ್ಷಗಳ ನಡುವೆ ಅತ್ತಿತ್ತ ಹೆಜ್ಜೆ ಹಾಕಿಕೊಂಡಿದ್ದ ಅರುಣ ಈಚೆಗಿನ 1 ವರ್ಷದಿಂದ ಮೌನವಾಗಿದ್ದರು.
ಸಂಘಟನೆ: ಇದೀಗ ಲೋಕಸಭೆ ಚುನಾವಣೆಯಲ್ಲಿ ಕೈ ಹಿಡಿಯುವ ಮೂಲಕ ಪಕ್ಷ ಸಂಘಟನೆಯಲ್ಲದೈ ಖರ್ಗೆಯವರ ಅಭಿವೃದ್ಧಿ ಕೆಲಸಗಳಿಗೆ ಜನಮನದವರೆಗೂ ತಲುಪಿಸುವ ಸಂಕಲ್ಪ ಮಾಡಿದಂತಿದೆ. ರೇಲ್ವೆ ಮೂಲ ಸೌಕರ್ಯಕ್ಕಾಗಿ ಅರುಣ ಮಾಡದ ಹೋರಾಟಗಳಿಲ್ಲ. ಜೇವರ್ಗಿ ರಸ್ತೆ ಕೇಳ ಸೇತುವೆಯ ಅಗಲೀಕರಣದಿಂದ ಹಿಡಿದು ವಿಭಾಗೀಯ ಕಚೇರಿ ಗುಲ್ಬರ್ಗದಲ್ಲಿ ಆಗಬೇಕು ಎಂದವರು ಅರುಣ. ಅದಕ್ಕಾಗಿ ಯುವಕರನ್ನು ಜೊತೆಗೂ ಡಿಸಿಕೊಂಡು ಅನೇಕ ಹೋರಾಟ ನಡೆಸಿದ್ದರು.
ಇದೀಗ ರೇಲ್ವೆ ಸಚಿವಗಿರಿ ದೊರೆತ ನಂತರ ಖರ್ಗೆಯವರಂತೂ ಇಲ್ಲಿನ ಜನಮನದ ಆಶಯದಂತೆ ವಿಭಾಗೀಯ ಕಚೇರಿಯಿಂದ ಹಿಡಿದು ಅನೇಕ ರೂಪಗಳಲ್ಲಿ ರೇಲ್ವೆ ಮೂಲ ಸೌಕರ್ಯಗಳ ಕೊಡುಗೆ ಗುಲ್ಬರ್ಗಕ್ಕೆ ನೀಡಿದ್ದಾರೆ. ಇದರಿಂದಲೇ ಅರುಣ ಪ್ರೇರಣೆಯಾಗಿ ಪ್ರಗತಿಗೆ ಬೆಂಬಲಿಸುವ ಪಣತೊಟ್ಟು ಕಾಂಗ್ರೆಸ್ ಸೇರಿದ್ದಾಗಿ ಹೇಳುತ್ತಾರೆ. ಪಕ್ಷಾಂತರದ ಈ ಸಂದರ್ಭದಲ್ಲಿ ಅರುಣ 'ಕನ್ನಡಪ್ರಭ' ಜೊತೆ ಮಾತನಾಡಿದರು.
1. ಕರವೇನಿಂದ ಶುರುವಾದ ಹೋರಾಟದ ಬದುಕು ಹಾಗೇ ದಶಕಗಳಿಂದ ಸಾಗಿತ್ತು. ನಗರ ಹಾಗೂ ಜಿಲ್ಲೆಯ ಜನರ ಬದುಕು ಹಸನಾಗಿಸುವ ಹಹತ್ತು ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಡೆಸಿರುವ ಹೋರಾಟಗಳಿಗೆ ಬೆಂಬಲ ದೊರಕಿತ್ತು. ಜನರ ಆಶೀರ್ವಾದದಿಂದ ಅನೇಕ ಹೋರಾಟಗಳು ಸಿಹಿಫಲ ನೀಡಿವೆ. ಜನಮನದಲ್ಲಿ ನನಗೆ ಸ್ಥಾನವಿದೆ. ಅದೇ ಧೈರ್ಯದಿಂದ ನಾನೀಗ ಹೋರಾಟದ ದಾರಿಯಲ್ಲಿನ ಹೆಜ್ಜೆಯೊಂದನ್ನು ಎತ್ತಿ ರಾಜಕೀಯದತ್ತ ಇಡಲು ಮುಂದಾಗಿರುವೆ.
2. ರಾಜಕೀಯ ಪಕ್ಷಗಳನ್ನು ಈ ಮುಂಚೆಯೇ ಸೇರಿದ್ದೇನೆ. ಜೆಡಿಎಸ್, ಬಿಜೆಪಿ ಸೇರಿದಂತೆ ಅನೇಕ ಪಕ್ಷಗಳಿಗೆ ಹೋಗಿ ಅಲ್ಲಿನ ನೀರಸ ವಾತಾವರಣದಿಂದ ಬೇಸತ್ತು ಹೊರಬಂದಿರುವೆ. ಇದೀಗ ಕಾಂಗ್ರೆಸ್ನಲ್ಲಿ ಸೇರ್ಪಡೆಯಾಗುತ್ತಿರುವೆ. ಸ್ಥಳೀಯವಾಗಿರುವ ಘಟಾನುಘಟಿ ನಾಯಕ ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್ರಿಂದ ಅನೇಕ ಪ್ರಗತಿ ಕೆಲಸಗಳು ಇಲ್ಲಿ ನಡೆದಿವೆ. ಜನತೆಯೂ ಇವರಿಬ್ಬರ ಕೆಲಸಗಳಿಗೆ ಬೆಂಬಲವಾಗಿದ್ದಾರೆ.
3. ಹೋರಾಟಗಾರನಿಗೆ ರಾಜಕೀಯ ಪಕ್ಷದ ಆಸರೆ ಅನಿವಾರ್ಯವೇನಲ್ಲ. ಆದರೆ ಹೋರಾಟದ ದಾರಿಯಲ್ಲಿ ರಾಜಕೀಯ ಪಕ್ಷದಲ್ಲಿದ್ದುಕೊಂಡು ಹೋರಾಟಕ್ಕೆ ನಿಂತಲ್ಲಿ ಇನ್ನೂ ಹೆಚ್ಚಿನ ಬಲ ಬರುವ ಅನಿಸಿಕೆ ನನ್ನದು. ಇಂತಹ ಅಭಿಪ್ರಾಯ, ಸದಾಶಯದೊಂದಿಗೆ ನಾನು ಕಾಂಗ್ರೆಸ್ ಸೇರುತ್ತಿರುವೆ. ಹಿರಿಯ ನಾಯಕರ ಮಾರ್ಗದರ್ಶನ, ಸಹಚಾರಿಗಳ ಬೆಂಬಲ ನನಗೆ ಬರುವ ದಿನಗಳಲ್ಲಿ ದೊರಕಲಿದೆ. ಆಳಂದ ಮೂಲವಾಗಿದ್ದರಿಂದ ಆಳಂದ ಸೇರಿದಂತೆ ಜಿಲ್ಲಾದ್ಯಂತ ಕೆಲಸ ಮಾಡುವೆ.
4. ಆಳಂದ ಮೂಲವಾಗಿದ್ದರಿಂದ ಸಹಜವಾಗಿಯೇ ಬರುವ ದಿನಗಳಲ್ಲಿ ಆಳಂದದಲ್ಲಿಯೂ ರಾಜಕೀಯವಾಗಿ ಬದುಕು ಕಟ್ಟಿಕೊಳ್ಳುವ ಆಸೆ ಇದೆ. ಇಲ್ಲವೆಂದು ಹೇಳಲಾರೆ. ಹಾಗಂತ ಪಕ್ಷಕ್ಕೆ ಬಂದ ಮರುಕ್ಷಣವೇ ನನಗೇ ಆದ್ಯತೆ ಕೊಡಿ ಎಂದು ಕೇಳುವವನಲ್ಲ. ಪಕ್ಷದ ಹಿರಿಯರು ಹೇಗೆ ಹೇಳುವರೋ ಹಾಗೆಯೇ ಸೂಚನೆಗಳನ್ನು ಪಾಲಿಸುವೆ.
5. ರೈತರು, ಸಾಮಾನ್ಯ ಜನರ ನೋವು- ಸಂಕಷ್ಟಗಳು ಹಲವು. ಅವುಗಳಿಗೆಲ್ಲಕ್ಕೂ ಬಲಿಷ್ಠ ರಾಜಕೀಯ ಪಕ್ಷದಲ್ಲಿದ್ದುಕೊಂಡು ಪರಿಹಾರ ನೀಡುವ ಬಯಕೆಯೂ ನನ್ನಲ್ಲಿದೆ. ಹಾಗಂತ ಹೋರಾಟದ ದಾರಿಯಲ್ಲೇ ಸಾಗಿದ್ದರೆ ಪರಿಹಾರ ದೊರಕುತ್ತಿತ್ತು. ಜೊತೆಗೇ ರಾಜಕೀಯ ಪಕ್ಷದ ಜೊತೆ ಹೆಜ್ಜೆ ಹಾಕುತ್ತಲಿದ್ದರೆ ಇನ್ನೂ ಸುಲಭದಲ್ಲಿ ಪರಿಹಾರ ಜನತೆಗೆ ದೊರಕುವ ಅನಿಸಿಕೆ ನನ್ನದು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

