ಗುಲ್ಬರ್ಗಾ

ಪತ್ರಿಕೋದ್ಯಮಿ ದಿ. ಕಾಗಲ್ಕರ್ ಆದರ್ಶ ಸದಾ ಹಸಿರು

Published On :

ಕ.ಪ್ರ. ವಾರ್ತೆ   ಗುಲ್ಬರ್ಗ   ಮಾ.20
ಇಲ್ಲಿನ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ವಿ.ಎನ್. ಕಾಗಲ್ಕರ್ ಪುರಸ್ಕಾರ ಪ್ರದಾನ ಗುರುವಾರ ಪತ್ರಕರ್ತರ ಭವನದಲ್ಲಿ ನಡೆಯಿತು. ಸರಳ ಸಮಾರಂಭದಲ್ಲಿ ಕೇಂದ್ರೀಯ ವಿವಿ ಪ್ರಭಾರಿ ಕುಲಪತಿ ಡಾ. ಎಂ.ಎನ್. ಸುಧೀಂದ್ರರಾವ್ ಅವರು ಪತ್ರಕರ್ತ ಶ್ರೀನಿವಾಸ ಸಿರನೂರಕರ್ ಅವರಿಗೆ ಪುರಸ್ಕಾರ ಪ್ರದಾನ ಮಾಡಿದರು.
2013ರ ವರ್ಷಾರ್ಧದಲ್ಲೇ ಪುರಸ್ಕಾರ ಘೋಷಣೆಯಾಗಿತ್ತು. ಜುಲೈ ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಸಂಘ ತನ್ನ ಇತರೆ ಪುರಸ್ಕಾರಗಳ ಜೊತೆಗೇ ಇದನ್ನು ಪ್ರದಾನ ಮಾಡುವುದಿತ್ತು. ಆ ಸಂದರ್ಭದಲ್ಲಿ ಪುರಸ್ಕಾರ ಸ್ವೀಕಾರಕ್ಕೆ ಪ್ರಶಸ್ತಿ ಪುರಸ್ಕೃತರು ಲಭ್ಯವಿರಲಿಲ್ಲ. ಅಂದು ಮುಂದೂಡಲ್ಪಟ್ಟಂತಹ ಈ ಭಾಗದ ಪತ್ರಿಕಾ ರಂಗದ ಪ್ರತಿಷ್ಠಿತ ಪುರಸ್ಕಾರ 9 ತಿಂಗಳ ನಂತರ ಪ್ರದಾನ ಮಾಡಲ್ಪಟ್ಟಿತು.
ಮೇರು ವ್ಯಕ್ತಿತ್ವ ಹೊಂದಿದ್ದ ಕಾಗಲ್ಕರ್: ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಶ್ರೀನಿವಾಸ ಸಿರನೂರಕರ್, ಮೆಟ್ರಿಕ್ ಸಹ ಓದದ ವೆಂಕಟರಾವ್ ಕಾಗಲ್ಕರ್ ಅವರು ತಮ್ಮ ಅಗಾಧ ಆಂಗ್ಲ ಬಾಷಾ ಜ್ಞಾನದೊಂದಿಗೆ ರಾಷ್ಟ್ರೀಯ ಮಟ್ಟದ ಹಿಂದು ಪತ್ರಿಕೆಯಲ್ಲಿ 4 ದಶಕಗಳ ಕಾಲ ಅರೆಕಾಲಿಕ ವರದಿಗಾರರಾಗಿ ಸೇವೆ ಸಲ್ಲಿಸುತ್ತಲೇ ಹಿಂದುಳಿದ ಗುಲ್ಬರ್ಗ, ಹೈ- ಕ ನೆಲದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ ಪರಿ ಅನನ್ಯವಾಗಿತ್ತು. ಅವರ ಸರಳತನ, ವೃತ್ತಿಪರತೆ, ಜನರ ಸಂಕಷ್ಟಗಳಿಗೆ ಮಿಡಿಯುವ ಹೃದಯದಿಂದಾಗಿ ವೆಂಕಟರಾವ್ ಕಾಗಲ್ಕರ್ ಅದ್ಹೇಗೆ ಪತ್ರಿಕೋದ್ಯಮದಲ್ಲಿ ಬಲು ಎತ್ತರಕ್ಕೆ ಬೆಳೆದು ನಿಂತರು ಎಂಬುದನ್ನು ವಿವರಿಸಿದರು.
ಸರಳತೆಯಲ್ಲೇ ಸಾಧನೆ ಅರಳುತ್ತದೆ ಎಂಬ ಮಾತಿಗೆ ವೆಂಕಟರಾವ ಕಾಗಲ್ಕರ್ ಕನ್ನಡಿ ಎಂದು ಮಾತನಾಡಿದ ಹಿರಿಯರಾದ ಕೇಂದ್ರೀಯ ವಿವಿ ಉಪ ಕುಲಪತಿ(ಪ್ರಭಾರಿ) ಡಾ. ಸುಧೀಂದ್ರರಾವ್, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಉಪಾಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ, ಕಾನಿಪಸಂ ಸ್ಥಳೀಯ ಘಟಕಾಧ್ಯಕ್ಷ ಬಾಬೂರಾವ ಯಡ್ರಾಮಿ ಕಾಗಲ್ಕರ್ ಅವರ ಆದರ್ಶಗಳು ಸದಾ ಹಸಿರು ಎಂದರು.
ಕಾಗಲ್ಕರ್ ಪ್ರಶಸ್ತಿ 5 ಸಾವಿರ ನಗದು, ಸನ್ಮಾನ ಪತ್ರ ಹೊಂದಿದೆ. ಸಮಾರಂಭದಲ್ಲಿ ಶ್ರೀನಿವಾಸ ಸಿರನೂಕರ್, ಧರ್ಮಪತ್ನಿ ರೇಖಾ ಸಿರನೂರಕರ್ ಇಬ್ಬರನ್ನೂ ಶಾಲು ಹೊದಿಸಿ ಗೌರವಿಸಲಾಯ್ತು. ಕಾನಿಪಸಂ ಕಾರ್ಯದರ್ಶಿ ಸಿದ್ದಣ್ಣ ಮಾಲಗಾರ್ ನಿರೂಪಿಸಿದರೆ, ದೇವೇಂದ್ರ ಆವಂಟಿ ವಂದಿಸಿದರು.
ರಾಜ್ಯ ಮಟ್ಟದಲ್ಲಿ ನಡೆಯಲಿ...: ಸಮಾರಂಭದಲ್ಲಿ ಮಾತನಾಡಿದ ಕಾನಿಪಸಂ ಅಧ್ಯಕ್ಷ ಬಾಬೂರಾವ ಯಡ್ರಾಮಿ ಕಾಗಲ್ಕರ್ ಅಪ್ರತಿಮ ಪ್ರತಿಭೆಯ ಪತ್ರಕರ್ತರು. ಅವರ ಸವಿ ನೆನಪಿಗಾಗಿ ರಾಜ್ಯ ಮಟ್ಟದಲ್ಲಿ ಕಾನಿಪಸಂ ಈ ಪುರಸ್ಕಾರ ನೀಡುವಂತಾಗಬೇಕು ಎಂದರಲ್ಲದೆ ಸಮಾರಂಭದಲ್ಲಿ ಹಾಜರಿದ್ದ ಬಿ.ವಿ. ಮಲ್ಲಿಕಾರ್ಜುನಯ್ಯ ಅವರನ್ನು ಉದ್ದೇಶಿಸಿ ತಮ್ಮ ಬೇಡಿಕೆ ಮಂಡಿಸಿದರು. ಹೈ- ಕ ಭಾಗದ ಧೀಮಂತ ಪತ್ರಕರ್ತ ಕಾಗಲ್ಕರ್ ಅವರ ಹೆಸರಲ್ಲಿ ರಾಜ್ಯದ ಪತ್ರಿಕಾ ರಂಗದ ಸಾಧಕರನ್ನು ಗುರುತಿಸುವ ಕೆಲಸವಾದಲ್ಲಿ ಹೈ-ಕ ಭಾಗಕ್ಕೆ, ಇಲ್ಲಿ ಅರಳಿರುವ ಜಾಣತನದ, ವೃತ್ತಿ ಕೌಶಲ್ಯದಿಂದ ಕೂಡಿದಂತಹ ಪತ್ರಿಕೋದ್ಯಮಕ್ಕೆ ಗೌರವಿಸಿದಂತಾಗುತ್ತದೆ ಎಂದು ಯಡ್ರಾಮಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.